ಬೆಂಗಳೂರು: ಸಂಘ ಹೇಗೆ ಯೋಚಿಸುತ್ತದೆ, ಸಂಘದ ಸ್ವಯಂಸೇವಕ ಹೇಗೆ ಯೋಚಿಸುತ್ತಾನೆ ಎನ್ನುವುದನ್ನು ತಿಳಿಯಲು ಪೂರಕವಾಗಿರುವ ಪುಸ್ತಕ ಶಶಿಕಾಂತ ಚೌಥಾಯಿವಾಲೆ ಅವರ ‘My Journey as a Pracharak’. ಅದಾಗಲೇ ರಾಷ್ಟ್ರ ಭಕ್ತಿಯ ಬೀಜವನ್ನು ಹೊಂದಿದ್ದ ಪೂರ್ವಾಂಚಲದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ನೀರೆರೆದು ಪೋಷಿಸಿ ಸುಂದರವಾದ ಹೂವಾಗಿಸುವುದಲ್ಲಿ ಮಾಡಿದ ಪ್ರಯತ್ನಗಳನ್ನು ಪುಸ್ತಕ ಸೊಗಸಾಗಿ ತಿಳಿಸಿದೆ. ಈಶಾನ್ಯ ರಾಜ್ಯಗಳಲ್ಲಿ ಸಂಘಕಾರ್ಯದ ಕುರಿತು ಅಧ್ಯಯನದ ಆಸಕ್ತಿ ಇರುವವರಿಗೆ ಇದು ಅದ್ಭುತವಾದ ಪುಸ್ತಕ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ ಆರ್ ಹೇಳಿದರು.

ಮಂಥನ ಬೆಂಗಳೂರು ವತಿಯಿಂದ ಮಿಥಿಕ್ ಸೊಸೈಟಿಯಲ್ಲಿ ಆಯೋಜಿಸಲಾದ ಪ್ರಭಾತ್ ಪ್ರಕಾಶನ ಪ್ರಕಟಿಸಿರುವ ಜ್ಯೇಷ್ಠ ಪ್ರಚಾರಕ ಶಶಿಕಾಂತ ಚೌಥಾಯಿವಾಲೇ ಬರೆದ ‘ಮೈ ಜರ್ನಿ ಆ್ಯಸ್ ಎ ಪ್ರಚಾರಕ್’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ಸಂಘದಲ್ಲಿ ಸಮಾಜದ ಸೂಕ್ಷ್ಮತೆಯನ್ನು ಅರಿತು ಕೆಲಸ ಮಾಡುವ ಗುಣ ಇರುವುದರಿಂದ ಸಂಘಕಾರ್ಯ ಅತ್ಯಂತ ಆಳವಾಗಿ ಬೆಳೆದಿದೆ. ಈಶಾನ್ಯ ರಾಜ್ಯಗಳಲ್ಲಿ ಸಂಘಕಾರ್ಯದ ಕುರಿತು ಸೈದ್ಧಾಂತಿಕವಾಗಿ ನಮ್ಮನ್ನು ಒಪ್ಪದವರು, ತಟಸ್ಥ ಅಭಿಪ್ರಾಯವನ್ನು ಹೊಂದಿದವರು, ನಮ್ಮ ಸ್ವಯಂಸೇವಕರೇ ಬರೆದ ಪುಸ್ತಕಗಳ ಸಾರ ನಮ್ಮ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ. ಆದರೂ ಹಲವು ದಶಕಗಳಿಂದ ಈಶಾನ್ಯ ಭಾಗಗಳಲ್ಲಿ ಕಾರ್ಯನಿರ್ವಹಿಸಿದ ನಂತರವೂ ಸಂಘಕಾರ್ಯ ಈಶಾನ್ಯ ರಾಜ್ಯಗಳಲ್ಲಿ ಮುಂದುವರೆಸಬೇಕಿದೆ ಎಂಬುದನ್ನು ಪುಸ್ತಕ ವಿನೂತನವಾಗಿ ತಿಳಿಸಿಕೊಟ್ಟಿದೆ.

ನಮ್ಮ ಕೆಲಸವನ್ನು ನೋಡಿ ನಾವು ಕೆಲಸ ಮಾಡುವ ಸಮುದಾಯಗಳ ನಡುವೆ ನಮ್ಮ ಬಗ್ಗೆ ಒಳ್ಳೆಯವರು ಎಂಬ ಭಾವ ಬೆಳೆದರೆ ಸಾಲದು, ಅವರು ನಮ್ಮವರು ಎಂಬ ಆತ್ಮೀಯತೆ ಮೂಡಬೇಕು. ಹಾಗಾಗಿ ಅಲ್ಲಿನ ಸ್ಥಾನೀಯ ಭಾಷೆ, ಆಹಾರ ಮತ್ತು ರೀತಿ ನೀತಿಗಳನ್ನು ಅರಿತುಕೊಳ್ಳುವುದು ಮುಖ್ಯವಾಗುತ್ತದೆ. ಪ್ರಚಾರಕರುಗಳು ಅಂತಹ ಸವಾಲುಗಳಿಗೆ ಒಗ್ಗಿಕೊಂಡಿದ್ದಾರೆ. ಸಂಘದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿ ನಿಲಯಗಳಲ್ಲಿ ಬೆಳೆದ ವಿದ್ಯಾರ್ಥಿಗಳ ಅನುಭವ ಮತ್ತು ವನವಾಸಿ ಕಲ್ಯಾಣ ಆಶ್ರಮದಂತಹ ನಮ್ಮ ಅನೇಕ ಸಂಸ್ಥೆಗಳು ಈಗಿನ ಪೀಳಿಗೆ ಸ್ವತಃ ಮರೆತು ಹೋದ ತಮ್ಮ ಮೂಲ ಸಂಸ್ಕೃತಿಯನ್ನು, ಅಸ್ಮಿತೆಗಳನ್ನು ಉಳಿಸಿ ಬೆಳೆಸುವ ಪ್ರಯತ್ನಗಳು ಸಮಾಜದಲ್ಲಿನ ಸಂಘದ ಕುರಿತಾದ ತಪ್ಪುಕಲ್ಪನೆಗಳನ್ನು ದೂರಗೊಳಿಸಿವೆ ಎಂದರು.

ಶಶಿಕಾಂತ ಚೌಥಾಯಿವಾಲೇ ಅವರು ಸಾಕ್ಷೀಭೂತವಾಗಿ ಅನೇಕ ಪ್ರಚಾರಕರ ತಮ್ಮ ಪುಸ್ತಕದಲ್ಲಿ ವಿನೂತನವಾಗಿ ಬರೆದಿದ್ದಾರೆ. ಇದು ಪ್ರಚಾರಕರು ಮತ್ತು ಕಾರ್ಯಕರ್ತರು ಹೇಗಿರಬೇಕು ಎನ್ನುವುದನ್ನು ಸ್ವಾಧ್ಯಾಯ ಮಾಡುವುದಕ್ಕಾಗಿರುವ ಪುಸ್ತಕ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘಸಂಘಚಾಲಕರಾದ ಡಾ.ಮೋಹನ್ ಭಾಗವತ್ ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಂದು ಧ್ಯೇಯಕ್ಕಾಗಿ ದೃಢವಾಗಿ ಹೇಗೆ ನಿಲ್ಲಬೇಕು ಎಂಬುದನ್ನು ತಿಳಿಯುವುದಕ್ಕೆ ಯುವಕರು ಈ ಪುಸ್ತಕವನ್ನು ಓದಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪುಸ್ತಕದ ಲೇಖಕ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಸ್ಸಾಂ ನ ಪ್ರಚಾರಕ ಶಶಿಕಾಂತ ಚೌಥಾಯಿವಾಲೆ ಈ ಕೃತಿ ಸಂಘದ ಇತಿಹಾಸವಲ್ಲ, ನನ್ನ ಆತ್ಮಕಥೆಯೂ ಅಲ್ಲ ಬದಲಾಗಿ ಪ್ರಚಾರಕ್ ಆಗಿದ್ದ ಸಂದರ್ಭದಲ್ಲಿ ಸಂಘ ಕಾರ್ಯದ ಅನುಭವವನ್ನು ಒಳಗೊಂಡ ಪುಸ್ತಕವಾಗಿದೆ. ಈಶಾನ್ಯ ರಾಜ್ಯಗಳಲ್ಲಿ 1946ರಲ್ಲಿ ಸಂಘ ಕಾರ್ಯ ಶುರುವಾಯಿತು. ಆದರೆ 1948ರಲ್ಲಿ ಸಂಘದ ಮೇಲೆ ನಿರ್ಬಂಧ ಹೇರಿದ್ದರಿಂದ್ದ ಮೂರು ವರ್ಷಗಳ ನಂತರ ಮತ್ತೆ ಸಂಘಕಾರ್ಯ ಶುರುವಾಯಿತು. ಸಂಘದ ಕುರಿತು ಇದ್ದ ತಪ್ಪುಕಲ್ಪನೆಗಳನ್ನು ಎದುರಿಸಿದ ಸಂದರ್ಭವನ್ನು, ಅಸ್ಸಾಂ ನಲ್ಲಿದ್ದ ಅನೇಕ ಭಾಷಾ ಸಮಸ್ಯೆಗಳು, ಲಾಲ್ ಬಹುದ್ದೂರ್ ಶಾಸ್ತ್ರೀ ಅವರು ಪ್ರಧಾನಿ ಆಗಿದ್ದಾಗ ನಡೆದ ಭಾರತ ಪಾಕಿಸ್ತಾನ ಯುದ್ಧ, 1971ರ ಬಾಂಗ್ಲಾದೇಶ ಯುದ್ಧ, ಅಸ್ಸಾಂನಿಂದ ವಿದೇಶಿಗಳನ್ನು ಹೊರಹಾಕಲು ನಡೆದ ಆಂದೋಲನ ಮುಂತಾದ ಸಮಯದಲ್ಲಿ ಅದರಲ್ಲಿ ಸಂಘದ ಪಾತ್ರ, ಅಸ್ಸಾಂನಲ್ಲಿದ್ದ ಭಯೋತ್ಪಾದನೆಯಿಂದಾಗಿ ಆದ ಪ್ರಚಾರಕರ ಹತ್ಯೆಗಳನ್ನು ಈ ಪುಸ್ತಕದಲ್ಲಿ ತಳಿಸಿದ್ದಾರೆ ಎಂದರು.

ಚಿಂತಕ ವಿಜಯ್ ಚೌಥಾಯಿವಾಲೆ ಮಾತನಾಡಿ ಅಸ್ಸಾಂನಲ್ಲಿ ಸಂಘಕಾರ್ಯವನ್ನು ಬೆಳೆಸಿದ ಅನೇಕ ಪ್ರಚಾರಕರು ಮತ್ತು ಗ್ರಹಸ್ಥ ಕಾರ್ಯಕರ್ತರ ಕಿರು ಪರಿಚಯವನ್ನು ಈ ಕೃತಿ ಮಾಡಿಕೊಡುತ್ತದೆ. ಸರಳ ಭಾಷೆಯಲ್ಲಿ ಕಷ್ಟದ ದಿನಗಳಲ್ಲಿ ಸಂಘ ಬೆಳೆದು ಬಂದ ದಿನಗಳ ಅನುಭವವನ್ನು ಈ ಪುಸ್ತಕ ಒಳಗೊಂಡಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸುನಿಲ್ ದೇವ್ ಧರ್ ಆರ್ ಎಸ್ ಎಸ್ ಮತ್ತು ಪ್ರಚಾರಕ್ ವ್ಯವಸ್ಥೆಯ ಕುರಿತು ಗೊತ್ತಿಲ್ಲದೇ ಇರುವವರಿಗೆ ಅದರಲ್ಲೂ ತಪ್ಪು ಸುದ್ದಿಗಳನ್ನು ಹರಡುವವರಿಗೆ ಸಂಘದ ಕುರಿತು ಸ್ಪಷ್ಟತೆ ದೊರೆಯುವುದಕ್ಕೆ ಸಹಕಾರಿ. ಆರ್ ಎಸ್ ಎಸ್ ಮತ್ತು ಸಾವರ್ಕರ್ ಅವರ ಹೆಸರನ್ನು ಹಾಳು ಮಾಡುವುದಕ್ಕಾಗಿ ಗಾಂಧಿ ಹತ್ಯೆಯ ಆರೋಪವನ್ನು ಮಾಡಲಾಯಿತು. ಅದು ಉಳಿದ ರಾಜ್ಯಗಳ ಕಾರ್ಯಕರ್ತರಂತೆ ಈಶಾನ್ಯ ರಾಜ್ಯಗಳ ಸಂಘಕಾರ್ಯಕ್ಕೂ ದಶಕಗಳ ಕಾಲ ಅತ್ಯಂತ ಕಷ್ಟಕರ ಸಂಗತಿಯಾಗಿತ್ತು. ಇಂತಹ ಸಂದರ್ಭದ ಜೊತೆಗೆ ಹಲವು ಪ್ರಾಕೃತಿಕ ಸವಾಲುಗಳನ್ನು ಎದುರಿಸಿ ಶಶಿಕಾಂತ ಚೌಥಾಯಿವಾಲೇ ಅವರು ಸಂಘದ ಕಾರ್ಯವನ್ನು ಬೆಳೆಸಿದ ರೀತಿ, ಕಾರ್ಯಕರ್ತರನ್ನು ಜೋಡಿಸಿದ ಪರಿ ಅನನ್ಯವಾದದ್ದು ಎಂದರು.

ಭಯೋತ್ಪಾದಕರು ಪ್ರತಿ ವರ್ಷ ಅನೇಕ ಪ್ರಚಾರಕರನ್ನು ಹತ್ಯೆ ಮಾಡಿದರು. ಮುರುಳೀಕೃಷ್ಣ ಎಂಬ ವಿಭಾಗ ಪ್ರಚಾರಕರನ್ನು ಸೆರೆ ಹಿಡಿದು ಪ್ರಾಣ ಉಳಿಸಿಕೊಳ್ಳಲು ರಾಜ್ಯ ಬಿಟ್ಟು ಹೋಗು ಎಂದು ಹೇಳಿದರೂ ಅದಕ್ಕೊಪ್ಪದೇ ಪ್ರಾಂತ ಪ್ರಚಾರಕರು ಮಾತ್ರ ನನ್ನ ಜವಾಬ್ದಾರಿಯನ್ನು ಬದಲಾಯಿಸಬಹುದು, ಒಂದು ಉಗ್ರಸಂಘಟನೆಯಲ್ಲ ಎಂದು ಉತ್ತರಿಸಿದರು. ಅದರ ಪರಿಣಾಮ ಅವರನ್ನು ಹತ್ಯೆ ಮಾಡಲಾಯಿತು. ಇಂತಹ ಯಾವುದೇ ಪರಿಸ್ಥಿತಿ ಎದುರಾದರೂ ಸಂಘದ ಕಾರ್ಯವನ್ನು ಮಾಡಲೇಬೇಕು ಎಂದು ನಿಶ್ಚಯಿಸಿದ ಪ್ರಚಾರಕರ ಕುರಿತು ಒಳಗೊಂಡ ಪುಸ್ತಕ ಇದಾಗಿದೆ ಎಂದು ಹೇಳಿದರು‌.

ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಜಗತ್ತಿನ ಹಿಂದುಗಳ ಆಶಾಕಿರಣ. ವಿಶ್ವದಾದ್ಯಂತ ಯಾವುದೇ ಹಿಂದುವಿಗೆ ತೊಂದರೆಗೀಡಾದ ಸಂದರ್ಭದಲ್ಲಿ ವಿಶ್ವದ ಹಿಂದುಗಳು ಒಗ್ಗೂಡಿಸುವುದರಲ್ಲಿ ಸಂಘ ಮಹತ್ವದ ಪಾತ್ರ ವಹಿಸುತ್ತದೆ. ಅಂತಹ ಸಂಘಕಾರ್ಯಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಿದ ಈಶಾನ್ಯ ರಾಜ್ಯಗಳ ಅನೇಕ ಕಾರ್ಯಕರ್ತರ ಕುರಿತು ತಿಳಿಯುವುದಕ್ಕಾಗಿ ಈ ಕೃತಿಯನ್ನು ಓದಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ‌ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ಸುರೇಶ್ ಭಯ್ಯಾಜಿ ಜೋಶಿ, ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್, ಮಿಥಿಕ್ ಸೊಸೈಟಿಯ ಅಧ್ಯಕ್ಷ ವಿ.ನಾಗರಾಜ, ಪುಸ್ತಕದ ಅನುವಾದಕ ಶಿವಶಂಕರ್ ಮಜುಂದಾರ್, ಪ್ರಕಾಶಕ ಪ್ರಭಾತ್ ಕುಮಾರ್ ಸೇರಿದಂತೆ ಅನೇಕ ಚಿಂತಕರು, ಪ್ರಾಧ್ಯಾಪಕರು, ಲೇಖಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.