
ಆನ್ಲೈನ್ ಗೇಮ್ಸ್ ಗಳಿಂದ ಅದೆಷ್ಟೋ ಕುಟುಂಬಗಳು ಸರ್ವನಾಶವಾಗಿವೆ. ವಿದ್ಯಾರ್ಥಿಗಳೆಷ್ಟೋ ಆನ್ಲೈನ್ ಗೀಳಿಗೆ ಬಿದ್ದು ಆರ್ಥಿಕವಾಗಿ ಮಾತ್ರವಲ್ಲ ವಿದ್ಯಾಭ್ಯಾಸದಲ್ಲಿ ಕೂಡ ತೀವ್ರ ಹಾನಿಗೊಳಗಾಗಿದ್ದಾರೆ. ಈ ದಿಶೆಯಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಆನ್ಲೈನ್ ಗೇಮಿಂಗ್ ಬ್ಯಾನ್ ಮಾಡಲು ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸುತ್ತಾ ಬಂದಿತ್ತು. ಅಲ್ಲದೆ ಗ್ರಾಹಕ ಪಂಚಾಯತ್ ಕರ್ನಾಟಕದಲ್ಲೂ ಶಾಲಾ ಕಾಲೇಜುಗಳಲ್ಲಿ ಆನ್ಲೈನ್ ಗೇಮಿಂಗ್ ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡಿತ್ತು.
ಈಗ ಕೇಂದ್ರ ಸರ್ಕಾರ ಆನ್ಲೈನ್ ಗೇಮಿಂಗ್ ಬ್ಯಾನ್ ಮಾಡಿದ್ದು ಅತ್ಯುತ್ತಮ ದಿಟ್ಟ ನಿರ್ಧಾರ ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಕರ್ನಾಟಕ ಪ್ರಾಂತ ಅಧ್ಯಕ್ಷ ನರಸಿಂಹ ನಕ್ಷತ್ರೀಯವರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ನಿರ್ಧಾರಗಳಿಂದ ಸಮಾಜದಲ್ಲಿ ಬದಲಾವಣೆಗಳನ್ನು ತರಲು ಸಾಧ್ಯ. ಇದು ನಿರಂತರವಾಗಿ ಸಾಗಲು ಸಮಾಜದ ಜನತೆಯೂ ಗ್ರಾಹಕ ಪಂಚಾಯತಿಯೊಂದಿಗೆ ಜೋಡಿಸಿಕೊಳ್ಳುವುದು ಅವಶ್ಯಕ. ನಮ್ಮ ಗ್ರಾಹಕ ಚಳುವಳಿಗೆ ಈ ಮೂಲಕ ಜನತೆಯಲ್ಲಿ ಕೋರುವುದೇನೆಂದರೆ ಗ್ರಾಹಕ ಪಂಚಾಯತ್ ನ ಸದಸ್ಯರಾಗಿ ಸಮಾಜದಲ್ಲಿ ಸೂಕ್ತ ಗ್ರಾಹಕ ಹಿತ ನಿರ್ಣಯಗಳಲ್ಲಿ ಸಹಭಾಗಿಗಳಾಗಿ ಎಂದು ಪ್ರಾಂತ ಕಾರ್ಯದರ್ಶಿಗಳಾದ ಶ್ರೀಮತಿ ಗಾಯತ್ರಿ ನಾಡಿಗ್ ಅವರು ತಿಳಿಸಿದ್ದಾರೆ.