
ಲೇಖಕರು: ಶ್ರೀ ಬಿ.ಎಲ್. ಸಂತೋಷ್, ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ, ಬಿಜೆಪಿ
“ಒಂದು ಸಂಸ್ಥೆಯು ಎಲ್ಲ ರೀತಿಯಲ್ಲಿ ವೈಭವೋಪೇತವಾಗಿ ರೂಪುಗೊಳ್ಳುವಲ್ಲಿ ಅದರ ಕಾರ್ಯಕರ್ತರ ಅಪಾರ ನಿಷ್ಠೆ ಮತ್ತು ಶ್ರದ್ಧೆ ಅಗತ್ಯವಾಗಿರುತ್ತದೆ. ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜೀವನ ಮತ್ತು ಅವರ ಸಾಂಸ್ಥಿಕ ದೃಷ್ಟಿಕೋನಕ್ಕೆ ಮಾರ್ಗದರ್ಶಿ ಮಂತ್ರವಾಗಿದೆ. ಪ್ರಧಾನಮಂತ್ರಿ ಶ್ರೀ ಮೋದಿಯವರು ಕಾರ್ಯಕರ್ತರನ್ನು ಎಂದಿಗೂ ಸಂಘಟನೆಯ ಕೇಂದ್ರ ಬಿಂದುವೆಂದು ಪರಿಗಣಿಸಿದ್ದಾರೆ. ಅವರನ್ನು ಪೋಷಿಸುವುದು, ಅವರಿಗೆ ತರಬೇತಿ ನೀಡುವುದು ಮತ್ತು ಅವರ ಸಬಲೀಕರಣ ಮೋದಿಯವರ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ. ಸಂಘಟನೆ ಎಂಬುದು ಕೇವಲ ಒಂದು ಚೌಕಟ್ಟಿಗೆ ಸೀಮಿತವಲ್ಲ, ಅದರ ನಿಜವಾದ ಶಕ್ತಿ ಕಾರ್ಯಕರ್ತರ ಸಾಮರ್ಥ್ಯ, ಶಿಸ್ತು ಮತ್ತು ಸಮರ್ಪಣೆಯಲ್ಲಿ ಅಡಗಿದೆ ಎಂದು ಅವರು ನಂಬುತ್ತಾರೆ.”
1970ರ ದಶಕದ ಆರಂಭದಲ್ಲಿ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ‘ಪ್ರಚಾರಕ’ (ಪೂರ್ಣ ಕಾಲಿಕ ಕಾರ್ಯಕರ್ತ) ಆಗಿದ್ದರು.
1977ರ ತುರ್ತು ಪರಿಸ್ಥಿತಿಯ ನಂತರ, ವಿಭಾಗ್ ಪ್ರಚಾರಕ ಪಾತ್ರದಲ್ಲಿ ಸಮರ್ಥ ಸಂಘಟಕರಾಗಿ ಅವರು ಹೊರಹೊಮ್ಮಿದಾಗ, ಕಾರ್ಯಕರ್ತರನ್ನು ಸಿದ್ಧಗೊಳಿಸುವುದು ಅವರ ಕಾರ್ಯ ಶೈಲಿಯ ಪ್ರಮುಖ ಧ್ಯೇಯವಾಗಿತ್ತು. 1980ರ ದಶಕದ ಆರಂಭದಲ್ಲಿ ಗುಜರಾತ್‌ನಲ್ಲಿ ಆರ್‌ಎಸ್‌ಎಸ್ ಬಹಳ ಸೀಮಿತ ಪ್ರಚಾರವನ್ನು ಹೊಂದಿತ್ತು. ಆ ದಿನಗಳಲ್ಲಿ ಒಂದು ತಾಲೂಕಿನಲ್ಲಿ ಒಂದೇ ಶಾಖಾ (ಶಾಖೆ) ಅನ್ನು ಸ್ಥಾಪಿಸುವುದು ಕೂಡಾ ಒಂದು ದೊಡ್ಡ ಸಾಧನೆ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಯುವಕರಾದ ಮೋದಿಯವರಿಗೆ ಬೇರೆಯದ್ದೇ ದೃಷ್ಟಿಕೋನವಿತ್ತು: “ಪ್ರತಿ ಹಳ್ಳಿಯಲ್ಲಿ ಒಂದು ಶಾಖೆ ಇರಬೇಕು” ಎಂದು ಅವರು ಹೇಳುತ್ತಿದ್ದರು. ಅವರು ಪ್ರತಿಯೊಂದು ಶಾಖೆಯನ್ನು ಸ್ಥಾಪಿಸುವ ಜವಾಬ್ದಾರಿಯನ್ನು ಒಬ್ಬೊಬ್ಬ ಕಾರ್ಯಕರ್ತರಿಗೆ ವಹಿಸುತ್ತಿದ್ದರು ಮತ್ತು ನಿಯಮಿತವಾಗಿ ಪ್ರಗತಿ ವರದಿಗಳನ್ನು ಪಡೆಯುತ್ತಿದ್ದರು – ಮುಖ್ಯ ಬೋಧಕರು ಯಾರು, ಯಾವ ಚಟುವಟಿಕೆಗಳನ್ನು ನಡೆಸಲಾಯಿತು, ಯಾರು ಗೈರುಹಾಜರಾಗಿದ್ದರು ಮತ್ತು ಏಕೆ – ಹೀಗೆ ಪ್ರತಿಯೊಂದು ವಿವರವನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಲಾಗುತ್ತಿತ್ತು.
1985ರಲ್ಲಿ, ಆರ್‌ಎಸ್‌ಎಸ್ 60 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, ಕರ್ಣಾವತಿಯಲ್ಲಿ (ಅಹಮದಾಬಾದ್) ಒಂದು ಬೃಹತ್ ಶಿಬಿರವನ್ನು ಆಯೋಜಿಸಲಾಯಿತು. ಶಿಬಿರದಲ್ಲಿ ಸುಮಾರು 5000 ಕಾರ್ಯಕರ್ತರು ಭಾಗವಹಿಸಿದ್ದರು. ಅದರ ಪೂರ್ವಭಾವಿಯಾಗಿ, ಮೋದಿಯವರು ಪ್ರತಿಯೊಂದು ಗ್ರಾಮಕ್ಕೂ ತೆರಳಿ ಯುವಕರನ್ನು ಭೇಟಿಯಾಗಿ ಸಮವಸ್ತ್ರಗಳನ್ನು ಖರೀದಿಸುವಂತೆ ಪ್ರೇರೇಪಿಸಿದರು. ಪರಿಣಾಮ, ನೂರಾರು ಹೊಸ ಯುವಕರು ಶಿಬಿರವನ್ನು ತಲುಪಿದ್ದಲ್ಲದೆ, ಸಂಘಟನೆಯೊಂದಿಗೆ ಶಾಶ್ವತವಾಗಿ ಸಂಬಂಧ ಬೆಳೆಸಿಕೊಂಡರು. ಇದು ಗುಜರಾತ್ ಘಟಕಕ್ಕೆ ಹೊಸ ಶಕ್ತಿಯನ್ನು ತುಂಬಿತು ಮತ್ತು ದೊಡ್ಡ ಪ್ರಮಾಣದಲ್ಲಿ ಕಾರ್ಯಕರ್ತರ ಸಂಘಟನೆಯ ಆರಂಭಕ್ಕೆ ನಾಂದಿ ಹಾಡಿತು.
ವ್ಯವಸ್ಥಿತವಾಗಿ ಮತ್ತು ಸಂಘಟಿತ ರೀತಿಯಲ್ಲಿ ಕೆಲಸ ಮಾಡಲು ಮೋದಿಯವರು ಕಾರ್ಯಕರ್ತರಿಗೆ ಕಲಿಸಿದರು. ಉದಾಹರಣೆಗೆ, 1980ರ ದಶಕದ ಆರಂಭದಲ್ಲಿ ರಾಜ್‌ಕೋಟ್‌ನ ಪಿ.ಡಿ. ಮಾಳವೀಯ ಕಾಲೇಜಿನಲ್ಲಿ ನಡೆದ ಆರ್‌ಎಸ್‌ಎಸ್ ತರಬೇತಿ ಶಿಬಿರದಲ್ಲಿ ಭಾಗವಹಿಸಿದವರು ಇಂದಿಗೂ ಆ ದಿನಗಳನ್ನು ಸ್ಮರಿಸುತ್ತಾರೆ. ಅಂದು ಸ್ಥಳೀಯರ ಮನದಲ್ಲಿ ಸಂಘಟನೆಯ ಕುರಿತಾದ ಅಭಿಪ್ರಾಯವನ್ನು ಅರಿತುಕೊಳ್ಳಲು ಮತ್ತು ಸಂಖ್ಯಾಶಾಸ್ತ್ರದ ವಿಧಾನ ಬಳಸಿ ಫಲಿತಾಂಶಗಳನ್ನು ಪ್ರಸ್ತುತಪಡಿಸಲು ಸಮೀಕ್ಷೆಯನ್ನು ನಡೆಸುವಂತೆ ಅವರಿಗೆ ವಹಿಸಲಾಗಿತ್ತು ಎಂಬುದನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಇದು ನವೀನ ಕಲಿಕಾ ಅಭ್ಯಾಸ ಮಾತ್ರವಲ್ಲದೆ ಸಂಘಟನೆಯನ್ನು ಬಲಪಡಿಸಲು ಆಧುನಿಕ ತಂತ್ರಗಳು ಮತ್ತು ವ್ಯವಸ್ಥಿತ ಚಿಂತನೆ ಅತ್ಯಗತ್ಯ ಎಂಬ ಸಂದೇಶವೂ ಆಗಿತ್ತು.
ತಮ್ಮ ನಡೆ ನುಡಿ ಮತ್ತು ಶಿಷ್ಟಾಚಾರದ ಜ್ವಲಂತ ಉದಾಹರಣೆಗಳೊಂದಿಗೆ ಕಾರ್ಯಕರ್ತರನ್ನು ಅವರು ಪ್ರೇರೇಪಿಸಿದರು. ಸಂಘಟಿತವಾಗಿರುವುದು, ಒಳಗೆ ಬರುವ ಮೊದಲು ಬಾಗಿಲು ತಟ್ಟುವುದು ಮತ್ತು ಕುಟುಂಬ ಸದಸ್ಯರ ಯೋಗಕ್ಷೇಮವನ್ನು ಆತ್ಮೀಯವಾಗಿ ವಿಚಾರಿಸುವುದು ಮುಂತಾದ ಸಣ್ಣ ಅಭ್ಯಾಸಗಳು ಅವರನ್ನು ಜವಾಬ್ದಾರಿಯುತ ಮತ್ತು ಗೌರವಾನ್ವಿತ ಕಾರ್ಯಕರ್ತರನ್ನಾಗಿ ಪರಿವರ್ತಿಸಿದವು. ಅವರ ತರಬೇತಿಯು ಕಾರ್ಯಕರ್ತರನ್ನು ಸಂಘಟನೆಯ ಸದಸ್ಯರಾಗಿ ಮಾತ್ರವಲ್ಲದೆ ಸಮಾಜದಲ್ಲಿ ಮಾದರಿ ಪ್ರತಿನಿಧಿಗಳಾಗಿಯೂ ರೂಪಿಸಿತು. ಕಠಿಣ ಸಮಯ ಮತ್ತು ದುರದೃಷ್ಟಕರ ಘಟನೆಗಳ ಸಂದರ್ಭಗಳಲ್ಲಿ ಮೋದಿಯವರು ಕಾರ್ಯಕರ್ತರು ಮತ್ತು ಅವರ ಕುಟುಂಬವರ್ಗಕ್ಕೆ ವೈಯಕ್ತಿಕ ನೈತಿಕ ಬೆಂಬಲವನ್ನು ನೀಡಿದ್ದರು – ಅನೇಕ ಕಾರ್ಯಕರ್ತರು ಇಂದಿಗೂ ಕೃತಜ್ಞತೆಯಿಂದ ಅದನ್ನು ನೆನಪಿಸಿಕೊಳ್ಳುತ್ತಾರೆ.
1987ರಲ್ಲಿ ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಘಟನಾ ಕಾರ್ಯದರ್ಶಿಯಾದಾಗ, ರಾಜಕೀಯ ಕ್ಷೇತ್ರದಲ್ಲಿ ಕೂಡಾ ಅದೇ ರೀತಿ ಕಾರ್ಯಕರ್ತರ ಸಂಘಟನೆಯನ್ನು ಅವರು ಮುಂದುವರೆಸಿದರು. 1980ರ ದಶಕದಲ್ಲಿ ಬಿಜೆಪಿಯ ‘ಸಂಘಟನಾ ಉತ್ಸವ’ದ ಮೂಲಕ, ಸಾವಿರಾರು ಹೊಸ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.
ಶಿಸ್ತು ಮತ್ತು ಜವಾಬ್ದಾರಿಯನ್ನು ಹೊರುವಂತಹ ಮೋದಿಯವರ ಕಾರ್ಯ ಶೈಲಿಯು ಮೂಲ ತಳದಿಯನ್ನು ರೂಪಿಸಿತು. ಈ ಮೌಲ್ಯಗಳು, ಸಮರ್ಪಣೆಯೊಂದಿಗೆ, ಬಲವಾದ ಸಂಘಟನೆಯ ಮೂಲಾಧಾರಗಳಾಗಿವೆ ಎಂದು ಅವರು ಕಾರ್ಯಕರ್ತರಿಗೆ ಕಲಿಸಿದರು. ಅವರು ಸಭೆಗಳಿಗೆ ಎಂದಿಗೂ ತಡವಾಗಿ ಬಂದವರಲ್ಲ, ಒಂದು ನಿಮಿಷವೂ ಸಹ ತಡವಾಗುತ್ತಿರಲಿಲ್ಲ, ಮತ್ತು ಬೇರೆ ಯಾರಾದರೂ ತಡವಾಗಿ ಬಂದರೆ, ಅವರನ್ನು ಹೊರಗೆ ಉಳಿಯುವಂತೆ ಆದರೆ ಭಾಗವಹಿಸುವಂತೆ ಮಾಡುತ್ತಿದ್ದರು.
ಸಾಮಾಜಿಕ ಸಮತೋಲನ ಮತ್ತು ಸಂಸ್ಥೆಯೊಳಗಿನ ಚುನಾವಣಾ ಕಾರ್ಯತಂತ್ರ ಎರಡಕ್ಕೂ ಮೋದಿಯವರು ಹೊಸ ರೂಪುರೇಷೆ ರಚಿಸಿದರು. ಪದಾಧಿಕಾರಿಗಳನ್ನು ಆಯ್ಕೆ ಮಾಡುವಾಗ, ಅವರು ಸಾಮಾಜಿಕ ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಂಡರು. 1987ರ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ, ಅವರ ‘ವಿನ್ ದಿ ಬೂತ್’ ತಂತ್ರದೊಂದಿಗೆ, ಕಾರ್ಯಕರ್ತರೆಲ್ಲರೂ, ತಳಮಟ್ಟದಿಂದಲೂ ಸಕ್ರಿಯವಾಗಿ ಮತ್ತು ಕೇಂದ್ರೀಕೃತ ವಿಧಾನದೊಂದಿಗೆ ಕೆಲಸ ಮಾಡಿದರು.
ಇಷ್ಟೇ ಅಲ್ಲದೆ, ತಮ್ಮ ವೈಯಕ್ತಿಕ ನಡೆ ನುಡಿಯ ಮೂಲಕ, ಮೋದಿಯವರು ಕಾರ್ಯಕರ್ತರಲ್ಲಿ ವಿಶ್ವಾಸ ಮತ್ತು ಸಾಮರ್ಥ್ಯವನ್ನು ತುಂಬಿದರು. ಅವರು ಮೊದಲ ಬಾರಿಗೆ ಪಕ್ಷಕ್ಕೆ ಸೇರುವವರನ್ನು ಗುರುತಿಸಿ ಅವರಿಗೆ ಧೈರ್ಯ ತುಂಬುತ್ತಿದ್ದರು ಮತ್ತು ಬೂತ್ ಮಟ್ಟದ ಸಂಘಟನೆ, ಸದಸ್ಯತ್ವ ವಿವರಗಳು ಹಾಗೂ ಸಾಮೂಹಿಕ ಪ್ರಯತ್ನದ ಮಹತ್ವವನ್ನು ವಿವರಿಸುತ್ತಿದ್ದರು. ಪರಿಣಾಮವಾಗಿ, ಕೆಲವೇ ತಿಂಗಳುಗಳಲ್ಲಿ, ಲಕ್ಷಾಂತರ ಹೊಸ ಸದಸ್ಯರ ಸೇರ್ಪಡೆಯಾಯಿತು ಮತ್ತು ಬಲವಾದ ಕಾರ್ಯಕರ್ತರ ಪಡೆಯನ್ನು ಸಿದ್ಧಗೊಳಿಸಲಾಯಿತು. ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿ, ಅವರು ‘ಟಿಫಿನ್ ಸಭೆಗಳನ್ನು’ ಸಹ ಪ್ರಾರಂಭಿಸಿದರು, ಈ ಮೂಲಕ ಕಾರ್ಯಕರ್ತರು ಮತ್ತು ಅವರ ಕುಟುಂಬಗಳು ಸಂಘಟನೆಯೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುವಂತಾಯಿತು.
ಕಾರ್ಯಕರ್ತರ ಸಂಘಟನೆಯಲ್ಲಿ, ಮೋದಿಯವರು ರಚನೆ ಮತ್ತು ಕಾರ್ಯತಂತ್ರಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ಕಾರ್ಯಕರ್ತರಿಗೆ ಸೂಕ್ಷ್ಮ ಮತ್ತು ದೂರದೃಷ್ಟಿವುಳ್ಳ ನಾಯಕರಾಗಲು ಕಲಿಸಿದರು. ಹಿರಿಯ ಕಾರ್ಯಕರ್ತರು ಕಿರಿಯರೊಂದಿಗೆ ಸಹಕರಿಸಲು ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಹೊಗಳಿಕೆಯ ಮತ್ತು ಟೀಕೆಗಳೆರಡಕ್ಕೂ ಸಮತೋಲಿತ ಪ್ರತಿಕ್ರಿಯೆಗಳು ಹಾಗೂ ಸಂಯಮ – ಇವು ಮೋದಿಯವರ ಕಾರ್ಯಕರ್ತರ ಸಂಘಟನಾ ತಂತ್ರದ ಅವಿಭಾಜ್ಯ ಅಂಗಗಳಾಗಿದ್ದವು.
ಮೋದಿಯವರ ದೃಷ್ಟಿಕೋನವು ಎಂದಿಗೂ ಸ್ಪಷ್ಟವಾಗಿದೆ: ಸಂಘಟನೆಯ ನಿಜವಾದ ಶಕ್ತಿ ಅದರ ಕಾರ್ಯಕರ್ತರಲ್ಲಿದೆ. ಶಿಸ್ತು, ಸಮರ್ಪಣೆ ಮತ್ತು ಸೇವಾ ಮನೋಭಾವದಿಂದ ತುಂಬಿರುವ ಕಾರ್ಯಕರ್ತರು, ಯಾವುದೇ ಸಂದರ್ಭದಲ್ಲೂ ರಾಷ್ಟ್ರೀಯ ಹಿತಾಸಕ್ತಿಯನ್ನು ಎಲ್ಲಕ್ಕಿಂತ ಮಿಗಿಲಾಗಿ ಉಳಿಸಿಕೊಳ್ಳುತ್ತಾರೆ. ಅದಕ್ಕಾಗಿಯೇ ಇಂದು ಸಂಸ್ಥೆ ಕೇವಲ ರಾಜಕೀಯ ಶಕ್ತಿ ಮಾತ್ರವಾಗಿರದೆ, ಒಂದು ರೋಮಾಂಚಕ ಸಂಸ್ಕಾರದ ಪ್ರಜ್ಞೆಯಾಗಿದೆ.
ಮೋದಿಯವರ ಕಾರ್ಯಕರ್ತರ ಸಂಘಟನಾ ಪ್ರಯಾಣವು ಮುಂಬರುವ ಪೀಳಿಗೆಗೆ ಚಿರಸ್ಥಾಯಿಯಾದ ಸಂದೇಶವನ್ನು ನೀಡುತ್ತದೆ: ಬೇರುಗಳನ್ನು ಪೋಷಿಸಿದರೆ ಮಾತ್ರ ,ರೆಂಬೆ ಕೊಂಬೆಗಳು ಸ್ವಾಭಾವಿಕವಾಗಿ ಚಿಗುರುತ್ತವೆ ಮತ್ತು ಮರವು ಯುಗಯುಗಾಂತರಗಳವರೆಗೆ ಬಲವಾಗಿ ನಿಲ್ಲುತ್ತದೆ.
ಲೇಖಕರು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ವ್ಯಕ್ತಪಡಿಸಿದ ಅಭಿಪ್ರಾಯಗಳು ವೈಯಕ್ತಿಕವಾಗಿವೆ.
*********