ಲೇಖನ: ನಾರಾಯಣ ಶೇವಿರೆ

ನೂರೆನ್ನುವುದು ಸಂಭ್ರಮದ ಸಂಖ್ಯೆ. ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ತೆಗೆದುಕೊಂಡಾಗ, ಮಹತ್ತ್ವದ ಪುಸ್ತಕವೊಂದು ನೂರು ಮುದ್ರಣಗಳನ್ನು ಕಂಡಾಗ, ವ್ಯಕ್ತಿಯೊಬ್ಬ ನೂರಕ್ಕೆ ಕಾಲಿಟ್ಟಾಗ, ಸಂಸ್ಥೆಯೊಂದು ನೂರು ವರ್ಷಗಳನ್ನು ಪೂರೈಸಿದಾಗ.. ಹೀಗೆ ವಿಭಿನ್ನ ಸಂದರ್ಭಗಳಲ್ಲಿ ನೂರು ಉಂಟುಮಾಡುವುದು ಸಂಭ್ರಮವನ್ನೇ.

ಕಹಿ ಘಟನೆಗಳಿಗೆ ಸಂಬಂಧಿಸಿದ ನೂರು ಸಂಭ್ರಮವನ್ನು ತರದಿದ್ದರೂ ಎಚ್ಚರಿಕೆಯ ಭಾವವನ್ನು ಇಲ್ಲವೇ ಅವಲೋಕನದ ಆಲೋಚನೆಯನ್ನು ಉದ್ದೀಪಿಸುವುದು ಆಗುತ್ತದೆ.

ಅವಲೋಕನಗೈಯಲು ನೂರೇ ಆಗಬೇಕೆಂದಿಲ್ಲ ಅಥವಾ ಕಹಿ ಅನುಭವಗಳನ್ನೇ ಉಂಡಿರಬೇಕೆಂದೂ ಇಲ್ಲ.

ಸಂಭ್ರಮಕ್ಕೂ ನೂರು ಒಂದು ಆಧಾರಬಿಂದು. ಅವಲೋಕನಕ್ಕೂ ನೂರು ಒಂದು ಆಧಾರಬಿಂದು.

ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಅನೇಕರ ಜನ್ಮಶತಮಾನೋತ್ಸವವನ್ನು ನಮ್ಮೀ ನಾಡು ಆಚರಿಸಿ ಸಂಭ್ರಮಿಸಿದೆ. ಸಾಹಿತಿಗಳು, ಚಿಂತಕರು, ಸಮಾಜಸೇವಕರು, ಉದ್ಯಮಿಗಳು ಇತ್ಯಾದಿ ವಿಭಿನ್ನ ಕ್ಷೇತ್ರಗಳಲ್ಲಿಯ ಸಾಧಕರ ಜನ್ಮಶತಾಬ್ದಿಯನ್ನೂ ನಾಡು ಸಂಭ್ರಮಿಸಿದೆ. ಇಲ್ಲಿಯ ವಿಭಿನ್ನ ಕ್ಷೇತ್ರಗಳಲ್ಲಿಯ ಅಭ್ಯುದಯದಲ್ಲಿ ಪ್ರಮುಖ ಪಾತ್ರವಹಿಸಿದ ಸಂಘಸಂಸ್ಥೆಗಳ ಶತಮಾನವನ್ನೂ ನಾಡು ಸಂಭ್ರಮಿಸಿದೆ. ಜತೆಗೆ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದಂಥ ನೋವಿನ ಘಟನೆಗಳೂ ನೂರು ಪೂರೈಸಿ ದ್ವೇಷರಹಿತವಾಗಿ ಅವಲೋಕಿಸಿದ ಸಂದರ್ಭವನ್ನೂ ನಾಡು ಕಂಡಿದೆ.

ಅವಲೋಕಿಸಲು ನೂರೇ ಆಗಬೇಕೆಂದಿಲ್ಲ ಎಂಬುದು ಸರಿಯೇ. ಆದರೆ ಅದೊಂದು ಸೂಕ್ತ ಘಟ್ಟ. ಅದನ್ನು ನಿರ್ಲಕ್ಷಿಸಬೇಕಿಲ್ಲ.

ಹಾಗೆಯೇ ಅವಲೋಕಿಸಲು ನೋವಿನ ನೆನಪೇ ಕಾಡಬೇಕಿಲ್ಲ. ಸಂಭ್ರಮದ ನೆನಪೂ ಅವಲೋಕನದ ಸಂದರ್ಭವಾಗಬಲ್ಲುದು. ನೂರರ ಸಂದರ್ಭವನ್ನು ಸಂಭ್ರಮಕ್ಕಷ್ಟೆ ಮಿತಗೊಳಿಸಬೇಕಾಗಿಯೂ ಇಲ್ಲ.

ಹಿಂದುವಿನ ಜೀವನ

ಅವಲೋಕನವು ಹಿಂದುಗಳ ಒಂದು ಸ್ವಭಾವವೇ ಆಗಿದೆ. ಹಿಂದೂ ಎನ್ನುವ ಪದದಲ್ಲಿಯೇ ಈ ಅವಲೋಕನದ ವಿವರವು ನಮಗೆ ಲಭಿಸುತ್ತದೆ.

ಹಿಂದೂ ಎಂಬ ಪ್ರಾಕೃತ ಪದದ ಮೂಲವು ಸಂಸ್ಕೃತದ ಸಿಂಧು ಎಂಬ ಪದವಷ್ಟೆ. ಸಿಂಧೂ ಪದವು ಸಮುದ್ರ, ಸರಿಯಾದುದು, ಚೆನ್ನಾಗಿರುವುದು, ಕಲ್ಮಶವಿಲ್ಲದಿರುವುದು, ಕೆಡದೇ ಇರುವುದು ಇತ್ಯಾದಿ ಅರ್ಥಗಳನ್ನು ಒಳಗೊಂಡಿದೆ. ಸಿಂಧೂ ಪದವನ್ನು ಅಸಿಂಧು ಎಂಬ ಅದರ ವಿರುದ್ಧಪದದಿಂದ ನೋಡಿದರೆ ಸಮುದ್ರವೊಂದನ್ನು ಬಿಟ್ಟು ಉಳಿದೆಲ್ಲ ಅರ್ಥಗಳೂ ಸ್ಪಷ್ಟವಾಗುತ್ತವೆ. ಅಸಿಂಧುವೆಂದರೆ ಸರಿಯಲ್ಲದ್ದು, ಕೆಟ್ಟುಹೋದುದು, ಚೆನ್ನಾಗಿಲ್ಲದಿರುವುದು ಎಂದೇ ತಾನೇ! ಸರಿಯಾದುದು, ಚೆನ್ನಾದುದು ಇತ್ಯಾದಿ ಸಿಂಧುವಿನ ಅರ್ಥಗಳಿಗೆ ಸಮುದ್ರವು ತನ್ನ ಸ್ವಭಾವದಲ್ಲಿಯೇ ಪುಷ್ಟಿತುಂಬುವಂತಿದೆ. ಸಮುದ್ರದಲ್ಲಿರುವುದು ನೀರು ಮತ್ತದು ಉಪ್ಪುನೀರು. ಸುದೀರ್ಘಾವಧಿ ಅಡುಗೆಗೆಂದು ಬಳಸುವುದಕ್ಕಾಗಿ ಮಾವು, ಹಲಸು ಇತ್ಯಾದಿಗಳನ್ನು ಉಪ್ಪುನೀರಿನಲ್ಲಿಡುವ ಕ್ರಮವಿದೆ. ಉಪ್ಪುನೀರಿಗೆ ಈ ವಸ್ತುಗಳನ್ನು ಕೆಡದಂತೆ ಕಾಪಿಟ್ಟುಕೊಳ್ಳುವ ಗುಣವಿದೆ. ಈ ಉಪ್ಪುನೀರು ಕಣ್ಣಿಗೆ ಕಾಣದಷ್ಟು ವಿಸ್ತಾರದಲ್ಲಿ ಹಬ್ಬಿಕೊಂಡು ಸಮುದ್ರವಾಗಿದೆ. ಆಷ್ಟು ವಿಸ್ತಾರದಲ್ಲಿ ಹರಡಿದ ನೀರಿಗೆ ಸಹಜವಾಗಿಯೇ ತೀರದಲ್ಲಿ ತೆರೆಯೆಳುವ ಗುಣವೂ ಬಂದಿರುತ್ತದೆ. ತೆರೆಗಿರುವ ಗುಣಗಳಲ್ಲೊಂದು ಶೋಧಿಸುವುದು. ಸಮುದ್ರದ ಈ ಗುಣವು ತನ್ನೊಳಗೆ ಸುವಸ್ತುಗಳನ್ನು ಮಾತ್ರ ಇಟ್ಟುಕೊಂಡು ಉಳಿದವನ್ನು ಹೊರಗೆಸೆದುಬಿಡುವಂತೆ ಮಾಡುತ್ತದೆ. ಕೊಳಚೆ, ಕಸಕಡ್ಡಿ, ಶವ ಇತ್ಯಾದಿ ಎಲ್ಲವನ್ನೂ ತನ್ನ ಜತೆಗೆ ಒಯ್ದು ತರುವ ಎಲ್ಲಾ ನದಿಗಳನ್ನು ಯಾವುದೇ ತಕರಾರಿಲ್ಲದೆ, ಮಗುವನ್ನು ಅದರೆಲ್ಲ ಗಲೀಜುಗಳೊಂದಿಗೆ ಸ್ವೀಕರಿಸುವ ಅಮ್ಮನಂತೆ ಸಮುದ್ರವು ಸ್ವೀಕರಿಸುತ್ತದೆ. ಗಲೀಜೆಲ್ಲವನ್ನೂ ತೊಳೆದು ಮಗುವನ್ನು ಸ್ವಚ್ಛಗೊಳಿಸುವ ಅಮ್ಮನಂತೆ ಸಮುದ್ರವೂ ತನ್ನ ಶೋಧಪ್ರಕ್ರಿಯೆಯ ಮೂಲಕ ಕಸಕಡ್ಡಿ ಶವ ಇತ್ಯಾದಿ ಎಲ್ಲ ದುರ್ವಸ್ತುಗಳನ್ನೂ ಗುಡಿಸಿ ಒರೆಸಿ ಹಾಕುತ್ತದೆ.

ಇದೀಗ ಅಲ್ಪಸ್ವಲ್ಪ ಮಸುಕಾದಂತೆ ಕಂಡರೂ, ಸಮುದ್ರದ ಈ ಸ್ವಭಾವವು ಹಿಂದೂ ಸಮಾಜದಲ್ಲಿಯೂ ಲಾಗಾಯ್ತಿನಿಂದ ಇದೆ. ತಮ್ಮ ಬಳಿಯಲ್ಲಿಯೇ ಮಲಗಿಸಿಕೊಳ್ಳುವ ಮೊಮ್ಮಕ್ಕಳಿಗೆ ಅಜ್ಜ-ಅಜ್ಜಿಯರು ‘ಇಂದೇನೇನೆಲ್ಲ ಮಾಡಿದೆ ಎಂದು ನೆನಪಿಸಿಕೊಳ್ಳಿ. ಅದರಲ್ಲಿ ಒಳ್ಳೆಯದನ್ನಷ್ಟೆ ನಾಳೆಯೂ ಮಾಡುವೆ ಹಾಗೂ ಕೆಟ್ಟದನ್ನು ಇಂದೇ ಕೈಬಿಡುವೆ ಎಂದು ಸಂಕಲ್ಪಮಾಡಿ ಮಲಗಿ ಎಂದು ಹೇಳುವ ಕ್ರಮ ಪ್ರತಿ ಹಿಂದುವಿನ ಮನೆಯಲ್ಲಿತ್ತು.

ಹಿಂದೂ ಸಮಾಜ ತನ್ನ ಹೆಸರಿಗೆ ಪೂರಕವಾಗಿ ಬದುಕುತ್ತಿದ್ದ ಪರಿ ಇದು.

ನಿಜಕ್ಕಾದರೆ ತನ್ನನ್ನು ಹೀಗೆ ಅವಲೋಕನಕ್ಕೊಡ್ಡಿಕೊಳ್ಳದ ಸಮಾಜವು ಹಿಂದೂ ಸಮಾಜವೆನಿಸದು.

ಮೂಲಗಾಮಿ ಯೋಚನೆ

1925ರ ವಿಜಯದಶಮಿಯ ದಿನದಂದು ಪ್ರಾರಂಭವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಗೊಂಡುದು ಹಿಂದೂಸಮಾಜದ ಸಂಘಟನೆಯ ಲಕ್ಷ್ಯವನ್ನಿರಿಸಿ.

ಸಮಾಜ ಅಸಂಘಟಿತವಾಗಿತ್ತು ಎಂಬ ಕಾರಣಕ್ಕಾಗಿ ಈ ಲಕ್ಷ್ಯ. ಸಮಾಜದಲ್ಲಿ, ಸಮಾಜವು ಪ್ರತಿನಿಧಿಸುತ್ತಿದ್ದ ರಾಷ್ಟ್ರದಲ್ಲಿ ಸವಾಲುಗಳು ನೂರಾರಿದ್ದುವು. ಮುಖ್ಯವಾಗಿ ಪರಕೀಯರ ಕೈಯಲ್ಲಿತ್ತು ದೇಶ. ಅದಕ್ಕಾಗಿ ಹೋರಾಟ ಸಾಗಿತ್ತು. ಸಂಘಸ್ಥಾಪಕ ಡಾ. ಕೇಶವ ಬಲಿರಾಂ ಹೆಡಗೇವಾರ್ ಅವರು ವೈದ್ಯಕೀಯ ವಿದ್ಯೆಯ ನಂತರದ ತಮ್ಮ ಬದುಕನ್ನು ರಾಷ್ಟ್ರದ ಈಯೆಲ್ಲ ಸವಾಲುಗಳನ್ನು ಎದುರಿಸುವುದಕ್ಕಾಗಿಯೇ ಮೀಸಲಿಟ್ಟರು. ಬಾಲ್ಯದಿಂದಲೂ ಅವರು ವಿದ್ಯಾಭ್ಯಾಸದ ಜತೆಜತೆಗೇ ರಾಷ್ಟ್ರದ ಈ ಕಾರ್ಯವನ್ನು ಮಾಡುತ್ತಲೇ ಇದ್ದರು. ವಿದ್ಯಾಭ್ಯಾಸದ ನಂತರ ಅವರಿಗೆ ಇದನ್ನು ಬಿಟ್ಟು ಅನ್ಯ ಲಕ್ಷ್ಯಗಳು ಉಳಿಯಲಿಲ್ಲ.

ರಾಷ್ಟ್ರವು ಅಸ್ವತಂತ್ರವಿದ್ದಾಗ ರಾಷ್ಟ್ರದ ಕುರಿತು ತೊಡಗುವವರಿಗೆ ಸ್ವಾತಂತ್ರ್ಯವೊಂದೇ ಲಕ್ಷ್ಯವಾಗುವುದು ಸಹಜ. ಆಗ ಉಳಿದ ಸವಾಲುಗಳನ್ನು ಎದುರಿಸುವ ಮುನ್ನ ಮುಖ್ಯ ಸವಾಲಿನಿಂದ ರಾಷ್ಟ್ರವನ್ನು ಮುಕ್ತಗೊಳಿಸೋಣ ಎಂಬ ಆಗ್ರಹ ಹುಟ್ಟಿಕೊಳ್ಳುತ್ತದೆ. ನಂತರದಲ್ಲಿ ಡಾಕ್ಟರ್‌ಜೀ ಎಂದೇ ಖ್ಯಾತರಾದ ಹೆಡಗೇವಾರರು ಕೂಡಾ ತಮ್ಮ ಬದುಕನ್ನು ತೊಡಗಿಸಿಕೊಂಡದ್ದು ಆಂಗ್ಲಮುಕ್ತ ಭಾರತಕ್ಕಾಗಿ.

ನಂತರ, ಗಾಂಧೀಜಿಯವರ ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡು, ಹಳ್ಳಿಹಳ್ಳಿಗಳಲ್ಲಿ ನಡೆದ ತಮ್ಮ ಕಠೋರ ಭಾಷಣಗಳ ನಡುವೆಯೂ ಮಧ್ಯಪ್ರಾಂತದಲ್ಲಿ ಈ ಚಳವಳಿಯನ್ನು ಅಹಿಂಸಾತ್ಮಕವಾಗಿಯೇ ಮುನ್ನಡೆಸಿ ಯಶಃಪ್ರದಗೊಳಿಸಿದ ಡಾಕ್ಟರ್‌ಜೀ, ತಮ್ಮೀ ಭಾಷಣಗಳಲ್ಲಿಯ ವಿಚಾರದ ತೀವ್ರತೆಗಾಗಿ ಆಂಗ್ಲ ನ್ಯಾಯಾಲಯದ ತೀರ್ಪಿನಂತೆ ಒಂದು ವರ್ಷ ಕಾಲ ಸಶ್ರಮ ಸೆರೆಮನೆವಾಸವನ್ನು ಅನುಭವಿಸಬೇಕಾಯಿತು. ಯೋಚಿಸಲೂ ಸಮಯವಿಲ್ಲವೆಂಬಂತೆ ನಿರಂತರ ತಮ್ಮನ್ನು ಸ್ವಾತಂತ್ರ್ಯಯಜ್ಞದಲ್ಲಿ ತೊಡಗಿಸಿಕೊಂಡಿದ್ದ ಡಾಕ್ಟರ್‌ಜೀಯವರಿಗೆ ಕಠಿಣ ಶ್ರಮದ ಕೆಲಸದ ನಡುವೆಯೂ ಯೋಚಿಸಲು ಒಂದಿಷ್ಟು ಸಮಯ ಲಭಿಸಿತು. ತಮ್ಮ ಅದುವರೆಗಿನ ಬದುಕಿನ ಲಕ್ಷ್ಯವನ್ನು ನಿಕಷಕ್ಕೊಡ್ಡಿದರು. ರಾಷ್ಟ್ರದ ಬದುಕಿನ ಕುರಿತಾಗಿಯೂ ಯೋಚಿಸಿದರು.

ಒಂದೆಡೆ ಸುಮ್ಮನೆ ಕುಳಿತು ಯೋಚಿಸಿದರೆ, ಯೋಚನೆ ಆಳಕ್ಕಿಳಿದರೆ ಅದು ಮೂಲಗಾಮಿಯಾಗುತ್ತದೆ. ಮರ್ಮವನ್ನೇ ಭೇದಿಸುತ್ತದೆ. ರೂಪದ ನೋಟದ ಬದಲು ಸ್ವರೂಪದ ದರ್ಶನವಾಗುತ್ತದೆ. ಸ್ವಾತಂತ್ರ್ಯ ಹೋರಾಟ ಮಾಡಬೇಕು ಸರಿ, ಅದನ್ನು ಮಾಡಬೇಕಾದ ಪ್ರಸಂಗ ಬಂತು ಯಾಕೆ, ಸ್ವಾತಂತ್ರ್ಯ ಹೋಯಿತು ಹೇಗೆ ಇತ್ಯಾದಿ ಮೂಲಗಾಮಿ ಪ್ರಶ್ನೆಗಳ ತೆರೆಗಳೆದ್ದವು ಅವರ ಮನದಲ್ಲಿ. ಸ್ವಾತಂತ್ರ್ಯ ಹೋರಾಟವಂತೂ ನಡೆಯಲೇ ಬೇಕು. ಜತೆಜತೆಗೇ, ಬಂದೇ ಬರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಕುರಿತು ಕೂಡಾ ಯೋಚನೆ ಸಾಗಬೇಕು.

ಪಾರಸ್ಪರಿಕತೆಯಿಂದ ರಾಷ್ಟ್ರ

‘ಸ್ವಾತಂತ್ರ್ಯವನ್ನು ನಾಳೆಯೇ ತಂದುಕೊಡಬಲ್ಲೆ. ಅದನ್ನು ಉಳಿಸಿಕೊಳ್ಳಬಲ್ಲ ಸಾಮರ್ಥ್ಯ ಇದೆಯೇ’ ಎಂದು ಸ್ವಾಮಿ ವಿವೇಕಾನಂದರು ಕೇಳಿದ್ದರು. ಸ್ವಾಮೀಜಿಯವರ ಈ ಪ್ರಶ್ನೆಯಂಥದೇ ಸವಾಲು ಡಾಕ್ಟರ್‌ಜೀಯವರನ್ನೂ ಕಾಡಿತ್ತು. ಈ ಪ್ರಶ್ನೆಯ ಇನ್ನೊಂದು ಮುಖದಲ್ಲಿ ಇರುವುದು ‘ಸ್ವಾತಂತ್ರ್ಯ ಹೋಯಿತು ಹೇಗೆ’ ಎಂಬ ಪ್ರಶ್ನೆ. ಸಮಾಜ ಅಸಂಘಟಿತವಾಗಿದ್ದುದರಿಂದಲೇ ತಾನೇ ಅದು ಹೋದುದು! ಸಂಘಟಿತ ಸಮಾಜವನ್ನು ಯಾರೂ ಗುಲಾಮಿಯಾಗಿಸಲು ಸಾಧ್ಯವಿಲ್ಲ. ಅದರೆಡೆಗೆ ಕೆಟ್ಟ ಕಣ್ಣಿನಿಂದ ನೋಡಲೂ ಸಾಧ್ಯವಿಲ್ಲ.

ಅದಕ್ಕಾಗಿ ಸಮಾಜ ಸಂಘಟಿತವಾಗಬೇಕು!

ಇಲ್ಲ. ಪರಕೀಯರು ಕೆಟ್ಟ ಕಣ್ಣಿನಿಂದ ನೋಡುತ್ತಾರೋ ಬಿಡುತ್ತಾರೋ, ಅಸ್ವಾತಂತ್ರ್ಯದ ಸನ್ನಿವೇಶ ಒದಗುತ್ತದೋ ಬಿಡುತ್ತದೋ; ಸಮಾಜವು ತನ್ನ ಪಾಡಿಗೆ ಸಂಘಟಿತವಾಗಿರಬೇಕಾದುದು ಅವಶ್ಯ. ಅದು ಸಹಜಸ್ಥಿತಿ.

ಏಕತೆಯು ಸಹಜಸ್ಥಿತಿ. ಅನೈಕ್ಯವು ಅನಾರೋಗ್ಯಕರ ಸ್ಥಿತಿ.

ಶರೀರದ ಅವಯವಗಳು ಪಾರಸ್ಪರಿಕವಾಗಿ ಇರುವುದು ಸಹಜಸ್ಥಿತಿ. ಅವು ಒಂದಕ್ಕೊಂದು ಕೂಡಿಬರುವುದಿಲ್ಲ, ಪರಸ್ಪರ ಸಹಕರಿಸುವುದಿಲ್ಲ ಎಂದಾದರೆ ಆ ಶರೀರ ಬಿದ್ದುಹೋಗುವುದೇ ಸೈ.

ಸಮಾಜಶರೀರದಲ್ಲಿ ಪ್ರತಿಯೊಬ್ಬರದೂ ಅದರ ಅವಯವದ ಪಾತ್ರವೇ. ಪಾರಸ್ಪರಿಕರಾಗಿರುವುದಿಲ್ಲ ಎಂದು ಹೇಳುವ ಅಧಿಕಾರವೇ ಇಲ್ಲದಿರುವ ಪಾತ್ರವದು. ತಮ್ಮೀ ಪಾತ್ರವನ್ನು ಪೂರೈಸದ ಅವಯವಸ್ವರೂಪೀ ಪ್ರಜೆಗಳಿಂದ ರಾಷ್ಟ್ರವು ದುರ್ಬಲವೂ ಆಗುತ್ತದೆ, ಗುಲಾಮವೂ ಆಗುತ್ತದೆ.

ಸಮಾಜವು ಸಂಘಟಿತವಾಗುವುದೆಂದರೆ ಸಮಾಜದ ಪ್ರತಿಯೊಬ್ಬನೂ ತಾನು ರಾಷ್ಟ್ರಶರೀರದ ಅವಯವಸ್ವರೂಪಿಯೆಂಬ ಸತ್ಯವನ್ನು ಮನಗಂಡು ಆ ದಿಶೆಯಲ್ಲಿ ತೊಡಗುವುದು.

ರಾಷ್ಟ್ರಕ್ಕೊದಗಿದ ಗುಲಾಮತನದ ಕಾರಣವನ್ನು ಆಂಗ್ಲರು ಮತ್ತಿತರ ಪರಕೀಯರಲ್ಲಿ ಕಾಣದೆ ಹಿಂದೂಸಮಾಜದ ಅಸಂಘಟಿತ ಸ್ಥಿತಿಯಲ್ಲಿ ಕಂಡದ್ದು ಡಾಕ್ಟರ್‌ಜೀ ನೀಡಿದ ಒಳನೋಟ.

ರಾಷ್ಟ್ರಾಂಗಭೂತಾ

ಸ್ವಯಂಸೇವಕರು ನಿತ್ಯವೂ ಶಾಖೆಯಲ್ಲಿ ಹೇಳುವ ಸಂಘದ ಪ್ರಾರ್ಥನೆಯಲ್ಲಿ ಅವಯವಸ್ವರೂಪೀ ಪರಿಚಯದ ವಿವರವಿದೆ. ‘ವಯಂ ಹಿಂದುರಾಷ್ಟ್ರಾಂಗಭೂತಾ’ ಎಂಬ ಉಲ್ಲೇಖದ ಈ ವಿವರದಲ್ಲಿ ನಾವು ನಮ್ಮ ಪರಿಚಯವನ್ನು ಮಾಡಿಕೊಳ್ಳುವುದೇ ರಾಷ್ಟ್ರದ ಅವಯವಗಳೆಂದು. ಇಡಿಯ ಸಮಾಜದ ಸಂಘಟನೆ ಮಾಡಹೊರಟಿದೆ ಸಂಘ. ಹಾಗಾಗಿ ಇಲ್ಲಿ ಯಾರನ್ನೂ ಬಿಡುವ ಇಲ್ಲವೇ ಹೊರಗಿಡುವ ಪ್ರಶ್ನೆಯಾಗಲೀ ಆಯ್ಕೆಯಾಗಲೀ ಇಲ್ಲ. ಅಂದರೆ, ಸಂಘದ ಪ್ರಾರ್ಥನೆಯ ನೆಲೆಯಲ್ಲಿ ಕೂಡಾ ಎಲ್ಲರೂ ರಾಷ್ಟ್ರದ ಅವಯವಗಳೆಂಬುದೇ ಶಾಶ್ವತವಾದ ಸತ್ಯ.

ಅವಯವವು ತನ್ನಷ್ಟಕ್ಕೆ ತಾನೇ ಸ್ವತಂತ್ರವಲ್ಲ. ಶರೀರಸಂಬಂಧಿಯಾಗಿ ಅದರ ಸ್ವಾತಂತ್ರ್ಯವನ್ನು ವಿವರಿಸಬಹುದು. ರಾಷ್ಟ್ರೀಯರ ಸ್ವಾತಂತ್ರ್ಯವು ರಾಷ್ಟ್ರದ ಅಗತ್ಯ – ಅನಿವಾರ್ಯತೆಗಳ ಮೇಲೆ ನಿಂತಿದೆ. ಹಾಗೇ ರಾಷ್ಟ್ರದ ಸ್ವಾತಂತ್ರ್ಯವು ಅದರ ಅವಯವಸ್ವರೂಪೀ ಸಮಾಜದ ಮೇಲೆ ನಿಹಿತವಾಗಿದೆ. ಹಾಗಾಗಿ ಅವಯವದ ಮೇಲಿರುವ ಜವಾಬ್ದಾರಿ, ನಿರೀಕ್ಷೆ, ಕರ್ತವ್ಯಗಳು ಅಗಾಧ.

ಅವಯವ ಚೆನ್ನಾಗಿದ್ದಷ್ಟೂ ಗಟ್ಟಿಮುಟ್ಟಾಗಿದ್ದಷ್ಟೂ ಆರೋಗ್ಯವಾಗಿದ್ದಷ್ಟೂ ರಾಷ್ಟ್ರವು ಉತ್ತಮಸ್ಥಿತಿಯನ್ನು ಹೊಂದಿರಬಲ್ಲದು. ಈ ಸ್ಥಿತಿಗೆ ರಾಷ್ಟ್ರವನ್ನು ಒಯ್ಯುವಲ್ಲಿ ಅವಯವದ ಸ್ಥಿತಿ ಸಮ್ಯಕ್ ಇರಬೇಕಾದುದು ಅವಶ್ಯ.

ಅಂದರೆ; ಯಾವುದೇ ಅಪೇಕ್ಷೆ ಆಗ್ರಹಗಳಿಲ್ಲದೆ ಸಮಾಜದ ನಡೆ-ನುಡಿ ಚೆನ್ನಾಗಿರಬೇಕಾದುದು ಅವಶ್ಯವೇ. ರಾಷ್ಟ್ರಸಂಬಂಧಿತವಾಗಿಯಂತೂ ಅದು ಅತೀವ ಅವಶ್ಯ. ಅವಯವವನ್ನು ಅವಲೋಕಿಸಿಯೂ ರಾಷ್ಟ್ರದ ನೀತಿರೀತಿಗಳನ್ನು ಗಮನಿಸುವುದಾಗುತ್ತದೆ.

‘ಈತ’ – ಅಂತ ಒಬ್ಬ ವ್ಯಕ್ತಿಯನ್ನು ತೋರಿಸಲು ಆತನ ಕೈಯನ್ನೋ ತಲೆಯನ್ನೋ ಮುಟ್ಟಿ ಹೇಳುವಂತೆ ಅವಯವಸ್ವರೂಪೀ ಪ್ರಜೆಯ ಮೂಲಕ ಒಂದು ರಾಷ್ಟ್ರದ ಕುರಿತು ಹೇಳುವಷ್ಟು ಆ ರಾಷ್ಟ್ರದ ಪ್ರಜೆಯು ನಿಜ ರಾಷ್ಟ್ರಕನಾಗಬೇಕು. ವ್ಯಕ್ತಿನಿರ್ಮಾಣದ ಮೂಲಕ ರಾಷ್ಟ್ರನಿರ್ಮಾಣವೆಂದರೆ ಇದುವೇ ತಾನೇ! ‘ಹಿಂದುರಾಷ್ಟ್ರಾಂಗಭೂತಾ’ ಪದಗುಚ್ಛವು ಈ ನೆಲೆಯ ಅರ್ಥವನ್ನು ಧ್ವನಿಸುತ್ತಿದೆ. ಡಾಕ್ಟರ್‌ಜೀ ಕಲ್ಪನೆಯ ಹಿಂದೂ ಸಂಘಟನೆ ಈ ನಿಟ್ಟಿನದು. ಇದರಲ್ಲಿ ವ್ಯಕ್ತಿನಿರ್ಮಾಣ ಬೇರೆಯಲ್ಲ, ಸಂಘಟನೆ ಬೇರೆಯಲ್ಲ, ರಾಷ್ಟ್ರಕಾರ್ಯ ಬೇರೆಯಲ್ಲ ಎಂಬ ಏಕತೆ ಇಲ್ಲಿ ಸಿದ್ಧಿಸಿದೆ.

ಹೋರಾಟದಲ್ಲೂ ನಿರ್ಮಾಣ

ಸ್ವಾತಂತ್ರ್ಯ ಹೋರಾಟ ಮಾಡುತ್ತಿದ್ದಾಗಲೂ ಅವರು ಅನ್ಯಾಯದ ಶಾಸನವನ್ನು ಹೇರಿದ ಆಂಗ್ಲರ ವಿರುದ್ಧ ಮಾತನಾಡುತ್ತಿದ್ದರಾದರೂ ಮಾತನ್ನು ಅಷ್ಟಕ್ಕೇ ಸೀಮಿತಗೊಳಿಸುತ್ತಿರಲಿಲ್ಲ. ಅವರ ಮಾತಿನಲ್ಲಿ ರಾಷ್ಟ್ರೀಯರ ಕರ್ತವ್ಯದ ಬಗೆಗೆ ಆವಾಹನೆಯಿರುತ್ತಿತ್ತು. ದುಶ್ಚಟಗಳ ಬಗೆಗೆ ಎಚ್ಚರಿಕೆ ಇರುತ್ತಿತ್ತು. ನೀತಿನಿಲುಮೆಗಳ ಬಗೆಗೆ ಸ್ಪಷ್ಟನೆ ಇರುತ್ತಿತ್ತು.

ನೋಡಿ, 1920ರಲ್ಲಿ ಗಾಂಧೀಜಿ ಅಸಹಕಾರ ಚಳುವಳಿಗೆ ಕರೆನೀಡಿದಾಗ ಅದರಲ್ಲಿ ಭಾಗವಹಿಸಿ ಹಳ್ಳಿಹಳ್ಳಿಗಳಲ್ಲಿ ಭಾಷಣ ಮಾಡುತ್ತ ಡಾಕ್ಟರ್‌ಜೀ ಮದ್ಯಪಾನನಿಷೇಧದ ಕುರಿತು ಜಾಗೃತಿ ಮೂಡಿಸುತ್ತಿದ್ದರು. ಇದೂ ಸ್ವಾತಂತ್ರ್ಯ ಹೋರಾಟದ ಭಾಗವೇ ಆಗಿತ್ತವರಿಗೆ. ಅಂದರೆ; ಹೋರಾಟ ಯಾರ ವಿರುದ್ಧ ಎನ್ನುವುದರ ಜತೆಗೆ ಹೋರಾಟ ಯಾರಿಂದ ಎಂಬುದೂ ಮುಖ್ಯವಾಗಿತ್ತವರಿಗೆ. ಹೋರಾಟ ಮಾಡುವುದು ಇಲ್ಲಿಯ ರಾಷ್ಟ್ರೀಯರು. ಅವರು ಹೇಗಿರಬೇಕೋ ಹಾಗಿರದಿದ್ದರೆ ಹೋರಾಟದಿಂದ ಸಿಗುವ ಸ್ವಾತಂತ್ರ್ಯಕ್ಕೆ ಅರ್ಥಬರದು. ಹೋರಾಟದ ಕೆಚ್ಚಂತೂ ಇರಲಿಕ್ಕೇ ಬೇಕು. ಜತೆಗೆ ಸ್ವತಂತ್ರರಾಷ್ಟ್ರವನ್ನು ಪುನರ್ನಿರ್ಮಾಣ ಮಾಡುವ ಸಾಮರ್ಥ್ಯವೂ ಅಂತಿರಬೇಕು.

ರಾಷ್ಟ್ರಕನಿಂದಲೇ ರಾಷ್ಟ್ರ. ರಾಷ್ಟ್ರಕನಿಂದಲೇ ರಾಷ್ಟ್ರನಿರ್ಮಾಣ. ಆತನ ವ್ಯಕ್ತಿತ್ವ ಚೆನ್ನಾಗಿರುವುದು ಸರಿಯಾಗಿರುವುದು ಮುಖ್ಯ. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿ ಉಗ್ರ ಭಾಷಣಗಳನ್ನು ಮಾಡುತ್ತಿದ್ದಾಗಲೇ ಅವರು ಯೋಚಿಸುತ್ತಿದ್ದ ರೀತಿ ಇಂಥ ಎತ್ತರದ ಆಯಾಮವನ್ನು ಹೊಂದಿತ್ತು.

ಅಷ್ಟೇ ಏಕೆ; ಅವರು ಸ್ವಾತಂತ್ರ್ಯ ಹೋರಾಟವನ್ನು ಮಾಡುವುದಕ್ಕಾಗಿಯೂ ಒಂದು ಪ್ರಶಿಕ್ಷಣವನ್ನು ಆಯೋಜಿಸಿದ್ದರು. ಈಗಿನ ಮಧ್ಯಪ್ರದೇಶದ ಬಹುಭಾಗ ಹಾಗೂ ಮಹಾರಾಷ್ಟ್ರದ ಉತ್ತರಭಾಗ ಸೇರಿಕೊಂಡಂತೆ ಇದ್ದ ಆಗಿನ ಮಧ್ಯಪ್ರಾಂತದ ಕಾಂಗ್ರೆಸ್ಸಿನ ಜವಾಬ್ದಾರಿ ಡಾಕ್ಟರ್‌ಜೀಯವರಿಗಿತ್ತು. ಅಲ್ಲಿ ಚಳವಳಿಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಅವರು ಹೋರಾಟಗಾರರಿಗೆಂದೇ ವಾರದ ಪ್ರಶಿಕ್ಷಣವನ್ನು ಆಯೋಜಿಸಿದ್ದರು. ಅದರಲ್ಲಿ ದೈಹಿಕ ದಾರ್ಢ್ಯಕ್ಕಾಗಿ ಶಾರೀರಿಕಶಿಕ್ಷಣ, ವೈಚಾರಿಕ ಸ್ಪಷ್ಟತೆಗಾಗಿ ಬೌದ್ಧಿಕಶಿಕ್ಷಣ, ಅನುಶಾಸನದ ಶಿಕ್ಷಣ.. ಹೀಗೆ ವಿಧವಿಧವಾಗಿ ಶಿಕ್ಷಣನೀಡುವ ಏರ್ಪಾಟನ್ನು ಮಾಡಿದ್ದರು. ವ್ಯಕ್ತಿತ್ವನಿರ್ಮಾಣದಲ್ಲಿ ತೊಡಗುವುದು ಅವರ ಬದುಕಿನ ಭಾಗವೇ ಆಗಿತ್ತು. ಹಾಗಾಗಿ ಅವರೆಷ್ಟೇ ಉಗ್ರಭಾಷಣಗೈದರೂ ಹೋರಾಟದಲ್ಲಿ ಯಾರಿಂದಲೂ ಯಾವುದೇ ಅತಿರೇಕಕ್ಕೆ ಅವಕಾಶವಾಗಲಿಲ್ಲ.

ಗಾಂಧೀಜಿ ಕರೆಯಂತೆ ನಡೆದ ಆ ಅಸಹಕಾರ ಚಳವಳಿ ತೀರಾ ಅಹಿಂಸಾತ್ಮಕವಾಗಿತ್ತಷ್ಟೆ. ಆದರೆ 1922ರಲ್ಲಿ ಉತ್ತರಪ್ರದೇಶದ ಚೌರಿಚೌರಾದಲ್ಲಿ ‌ಹೋರಾಟಗಾರರು ಪೊಲೀಸ್ ಠಾಣೆಯನ್ನು ಬೆಂಕಿಗಾಹುತಿಯಾಗಿಸಿದರು. ಈ ಘಟನೆಯಲ್ಲಿ ಹತ್ತಕ್ಕೂ ಅಧಿಕ ಮಂದಿ ಸಾವನ್ನಪ್ಪಿದರು. ಅಹಿಂಸೆಯ ಚಳವಳಿಯಲ್ಲಿ ಹಿಂಸೆ ಆಸ್ಫೋಟಿಸಿತು. ಕೂಡಲೇ ಗಾಂಧೀಜಿ ಚಳವಳಿಯನ್ನು ವಾಪಸ್ ತೆಗೆದುಕೊಂಡರು.

ನಂತರದ ದಿನಗಳಲ್ಲಿ ಗಾಂಧೀಜಿ ಹೇಳಿದ್ದಿಷ್ಟು; ನಮ್ಮ ಜನ ಅಹಿಂಸಾತ್ಮಕ ಹೋರಾಟಕ್ಕೆ ಇನ್ನೂ ಸಿದ್ಧವಾಗಿಲ್ಲ.

ಹೋರಾಟದಲ್ಲಿ ಪಾಲ್ಗೊಳ್ಳುವ ಜನರನ್ನು ತಯಾರುಮಾಡುವ ಕಾರ್ಯವನ್ನು ಅಹಿಂಸಾವಾದಿಯೆನಿಸದ ಡಾಕ್ಟರ್‌ಜೀ ಮುಂಚಿತವಾಗಿಯೇ ಮಾಡಿಪೂರೈಸಿದ್ದರು.

ಅನುಷ್ಠಾನದ ಐದಂಶಗಳು

ಡಾಕ್ಟರ್‌ಜೀ ಪ್ರಾರಂಭಿಸಿದ ಸಂಘಕ್ಕೆ ಇದೀಗ ನೂರು ವರ್ಷ ತುಂಬುತ್ತಿದೆ. ಕಳೆದ ನೂರು ವರ್ಷಗಳಲ್ಲಿ ಅದು ಸಂಘಟನೆಯ ಕಾರ್ಯವಾಗಿ ವ್ಯಕ್ತಿನಿರ್ಮಾಣವನ್ನೇ ಮಾಡುತ್ತ ಬಂದಿರುವುದು. ಹಂತಹಂತದಲ್ಲಿ ಅವಲೋಕನದ ಕಾರ್ಯವನ್ನೂ ಮಾಡುತ್ತ ಬಂದಿದೆ. ಅವಲೋಕನಕ್ಕೆ ಸಂಘವು ಪರ್ಯಾಯಪದದಂತೆ ಇದೆ.

ಇಂಥ ಸಂಘಕ್ಕೆ ನೂರು ತುಂಬಿದಾಗ ಅದು ಸಂಭ್ರಮದ ಪರ್ವವೇ ಸರಿ. ಹಾಗೆ ನೋಡಿದರೆ ಅದಕ್ಕೆ ಸಂಬಂಧಿಸಿದ ನೂರರ ಪರ್ವ ಇದೇ ಮೊದಲಲ್ಲ; 1989ರಲ್ಲಿ ಡಾಕ್ಟರ್‌ಜೀ ಜನ್ಮಶತಾಬ್ದಿಯನ್ನೂ 2006ರಲ್ಲಿ ಗುರೂಜಿ ಜನ್ಮಶತಾಬ್ದಿಯನ್ನೂ ಅದು ಆಚರಿಸಿತ್ತು. ಆ ಸಂದರ್ಭವೂ ಸಂಭ್ರಮದ ಸಂದರ್ಭವೇ ಆಗಿತ್ತು. ಆದರೆ ಹಾಗೆ ಬರಿಯ ಸಂಭ್ರಮಪಡದೆ ರಾಷ್ಟ್ರಜಾಗೃತಿಯ ತನ್ನ ಕಾರ್ಯಕ್ಕೆ ಇನ್ನಷ್ಟು ವೇಗತುಂಬುವ ಅನ್ಯಾನ್ಯ ಕಾರ್ಯ-ಚಟುವಟಿಕೆಗಳನ್ನು ಹಮ್ಮಿಕೊಂಡಿತು. ಇದೀಗ ಸಂಘಪ್ರಾರಂಭದ ನೂರನೆಯ ವರ್ಷ.

ಈ ಸಂದರ್ಭದಲ್ಲಿ ವ್ಯಕ್ತಿಗತವಾಗಿ ಸ್ವಯಂಸೇವಕರೇ ಮಾಡಬೇಕಾದ ಐದು ಕಾರ್ಯಗಳನ್ನು ಸೂಚಿಸಲಾಗಿದೆ. ಸ್ವಯಂಸೇವಕರಂತೂ ಮಾಡಬೇಕು, ಉಳಿದೆಲ್ಲರೂ ಮಾಡಬೇಕಾದ ಕಾರ್ಯಗಳಿವು. ನಿರಂತರವಾಗಿ ಎಲ್ಲರೂ ಮಾಡಬೇಕಾದ ಕಾರ್ಯಗಳೂ ಹೌದಿವು. ಆ ಐದು ಕಾರ್ಯಗಳೆಂದರೆ; ಕುಟುಂಬ, ಸಮಾಜ, ಪರಿಸರ, ಬದುಕು ಹಾಗೂ ನಡೆವಳಿಕೆಗಳಲ್ಲಿ ಹಿಂದೂಸ್ಫೂರ್ತಿಯನ್ನು ತುಂಬಿಕೊಳ್ಳುವುದು. ಹಿಂದೂ ಕುಟುಂಬದ ಸ್ಫೂರ್ತಿ ಮನೆಗಳಲ್ಲಿ ಅಭಿವ್ಯಕ್ತಗೊಳ್ಳಬೇಕು, ಮನೆಯಲ್ಲೂ ಹೊರಗಡೆಯೂ ಜಾತೀಯತೆ ಅಸ್ಪೃಶ್ಯತೆಯಂಥ ಕುರೂಢಿಯ ಆಚರಣೆಗಳು ಸಂಪೂರ್ಣವಾಗಿ ನಿಲ್ಲಬೇಕು, ಪರಿಸರಕ್ಕೆ ಗೈವ ಹಾನಿಯನ್ನು ಇಲ್ಲವಾಗಿಸಿ ಅದರ ರಕ್ಷಣೆಯತ್ತ ಹೆಜ್ಜೆಯಿಡಬೇಕು, ಬದುಕಿನ ನಾನಾ ವಿಧ ಆಗುಹೋಗುಗಳನ್ನು ಸ್ವದೇಶಿಮಯಗೊಳಿಸಬೇಕು ಹಾಗೂ ನಡೆನುಡಿಗಳಲ್ಲಿ ಎಲ್ಲರಿಗೂ ಹಿತವಾಗುವಂತೆ ಉನ್ನತ ಸಭ್ಯತೆಯನ್ನು ಮೆರೆಯಬೇಕು – ಇವೇ ಆ ಐದು ಬಿಂದುಗಳು. ಸ್ವಯಂಸೇವಕರು ಹಿಂದಿನಿಂದಲೂ ಪಾಲಿಸಿಕೊಂಡು ಬರುತ್ತಿದ್ದ ವಿಷಯಗಳೇ ಇವು. ಪುನರಪಿ ಅವುಗಳನ್ನು ನೆನಪಿಸಿ ಅವುಗಳನ್ನು ಆಗ್ರಹಪೂರ್ವಕವಾಗಿ ಅನುಷ್ಠಿಸುವ ನಿಟ್ಟಿನಲ್ಲಿ ಸಂಘವು ಸ್ವಯಂಸೇವಕರಿಗೆ ಆವಾಹನೆಯನ್ನು ನೀಡಿದೆ.

ಅನುಷ್ಠಿಸಬೇಕಾದ ಈ ಐದಂಶಗಳು ಇನ್ನೊಂದು ನಿಟ್ಟಿನಲ್ಲಿ ಅವಲೋಕನದ ಐದಂಶಗಳೂ ಹೌದು. ಪ್ರತಿ ಹಿಂದೂ ಮನೆಯಲ್ಲಿಯೂ ಹಿರಿಯರು ಮಕ್ಕಳಿಗೆ ಮೊಮ್ಮಕ್ಕಳಿಗೆ ‘ಒಳ್ಳೆಯದನ್ನು ಮಾಡುತ್ತಿರು, ಸಲ್ಲದ್ದನ್ನು ಬಿಡುತ್ತಿರು’ ಎಂದು ಹೇಳುವಂತೆ ಈ ಅಂಶಗಳು ಇವೆ. ನಾವು ಮಾಡಿ ಉಳಿದವರಲ್ಲಿ ಚೋದಿಸಬೇಕು ಎಂಬ ಧಾಟಿಯಲ್ಲಿ ಈ ಐದಂಶಗಳ ಆವಾಹನೆಯು ಇದೆ.

ಸವಾಲಿನ ನಡುವೆ ವ್ಯಕ್ತಿನಿರ್ಮಾಣ

ದೇಶವು ಇದೀಗ ಅತಿ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಒಂದೆಡೆ ಭಯೋತ್ಪಾದಕರ ಅಟ್ಟಹಾಸ ಮೇರೆಮೀರಿ ನಡೆದಿದೆ. ದೂರದ ಕಾಶ್ಮೀರದಲ್ಲಿ ಕೇಳುತ್ತಿದ್ದ ಬಾಂಬಿನ ಸದ್ದು ಸಂಸತ್ತಿನೊಳಗೂ ಮೊಳಗಿದೆ ಮತ್ತೀಗದು ಮನೆಯ ಹತ್ತಿರವೇ ಸುಳಿದಿದೆ. ಇನ್ನೊಂದೆಡೆ ಮತಾಂತರದ ಮೂಲಕ ಇಡಿಯ ದೇಶವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಯತ್ನದಲ್ಲಿದೆ ಮಿಶನರಿಶಕ್ತಿ. ಮತ್ತೊಂದೆಡೆ ಸಮಾಜದಲ್ಲಿ ಬಗೆಬಗೆಯ ಬಿರುಕುಗಳನ್ನು ಮೂಡಿಸಿ, ಸೈದ್ಧಾಂತಿಕವಾಗಿ ಇಡಿಯ ದೇಶದ ಮೇಲೆ ಹತೋಟಿಸಾಧಿಸುವ ನಿಟ್ಟಿನಲ್ಲಿ ಎಡಪಂಥವು ತೊಡೆತಟ್ಟಿನಿಂತಿದೆ. ಇವೆಲ್ಲ ಪರಕೀಯ ಶಕ್ತಿಗಳಿಗೆ ಇಲ್ಲಿಯ ಬುದ್ಧಿಜೀವಿವಲಯವೂ ರಾಜಕೀಯಶಕ್ತಿಯೂ ತನ್ನೆಲ್ಲ ಸಹಕಾರಗಳನ್ನು ಯಥಾಶಕ್ತಿ ನೀಡುತ್ತಲೇ ಬರುತ್ತಿವೆ. ರಾಷ್ಟ್ರೀಯತೆಯನ್ನು ಉಸಿರಾಡುವವರಿಗೆ ಭರವಸೆಯೇ ಹೊರಟುಹೋಗುವಂತೆ ಈಯೆಲ್ಲ ಶಕ್ತಿಗಳ ಅಬ್ಬರ ನಡೆದಿದೆ.

ದೇಶವನ್ನೇ ಕಿತ್ತುತಿನ್ನುವ ಇಂಥ ಸವಾಲುಗಳು ಕಣ್ಣುಕೋರೈಸುವಂತೆ ದಟ್ಟವಾಗಿ ವಕ್ಕರಿಸಿರಲು ಈ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಬಗೆಯಲ್ಲಿ ತೊಡಗುವುದಾಗಬೇಕಿತ್ತು. ಅದರ ಕುರಿತು ಅಷ್ಟಾಗಿ ಯೋಚಿಸದೆ ಕುಟುಂಬ – ಪರಿಸರ – ಸ್ವದೇಶೀ ಎಂದು ಅನುಷ್ಠಾನದ ಆಗ್ರಹದಲ್ಲಿ ತೊಡಗುವುದು ಎಷ್ಟು ಸರಿ? ನಾಗರಿಕ ಶಿಷ್ಟಾಚಾರ ಇತ್ಯಾದಿಗಳನ್ನು ಇಂದಲ್ಲ ನಾಳೆ ಬದುಕಿನಲ್ಲಿ ಅನುಷ್ಠಾನಕ್ಕೆ ತರಲು ಅವಕಾಶವಿದ್ದೇ ಇದೆ, ಬದುಕು ಇದ್ದರೆ! ಬದುಕಿಗೇ ಕಂಟಕ ಎದುರಾಗಿರುವ, ರಾಷ್ಟ್ರದ ಅಸ್ತಿತ್ವಕ್ಕೇ ಧಕ್ಕೆ ಬಂದಿರುವ ಈಗಿನ ಸನ್ನಿವೇಶದಲ್ಲಿ ಮೊದಲು ನಿರ್ವಹಿಸಬೇಕಾದುದು ಸವಾಲುಗಳನ್ನಲ್ಲವೇ? ವ್ಯಕ್ತಿನಿರ್ಮಾಣದ ಕ್ರಿಯೆಗೆ ನೀಡಬೇಕಾದ ಆದ್ಯತೆ ನಂತರದ್ದಲ್ಲವೇ?

ಇದಕ್ಕೆ ಉತ್ತರ ಕಂಡುಕೊಳ್ಳಲು ಮತ್ತೆ ನಾವು ಡಾಕ್ಟರ್‌ಜೀ ಬಳಿಗೇ ಹೋಗುವುದೊಳಿತು. ಸ್ವಾತಂತ್ರ್ಯಹೋರಾಟದಲ್ಲಿ ಪ್ರತ್ಯಕ್ಷ ತೊಡಗಿಕೊಂಡಾಗಲೂ ಅವರು ಮದ್ಯಪಾನನಿಷೇಧದಂಥ ವ್ಯಕ್ತಿತ್ವಪರಿಷ್ಕಾರದ ಕಾರ್ಯಕ್ಕೆ ಒತ್ತು ನೀಡಿದ್ದರಷ್ಟೆ. ನಂತರ ಸ್ವಾತಂತ್ರ್ಯಹೋರಾಟದ ಕಾರ್ಯದಿಂದ ತುಸು ವಿಮುಖರಾಗಿ ಸಂಘಸ್ಥಾಪನೆಯ ಮೂಲಕ ವ್ಯಕ್ತಿನಿರ್ಮಾಣದ ಕಾರ್ಯಕ್ಕೇ ಪೂರ್ಣ ಒತ್ತನ್ನು ನೀಡಿದರಷ್ಟೆ. 1930ರಲ್ಲಿ ಗಾಂಧೀಜಿ ಉಪ್ಪಿನ ಸತ್ಯಾಗ್ರಹಕ್ಕೆ ಕರೆನೀಡಿದಾಗ ಡಾಕ್ಟರ್‌ಜೀ ಅದರಲ್ಲಿ ಸ್ವತಃ ಪಾಲ್ಗೊಂಡರು. ಅದಕ್ಕೆ ಪೂರಕವಾಗಿ ನಡೆದ ಜಂಗಲ್ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಡಾಕ್ಟರ್‌ಜೀ ಜತೆಗೆ ಹೆಜ್ಜೆಹಾಕಿದವರು ನಾಲ್ಕು ಸಾವಿರಕ್ಕೂ ಅಧಿಕ ಮಂದಿ. ಈ ಹೋರಾಟವನ್ನು ಮಾಡುವಾಗ ಅವರು ಸಂಘದ ತಮ್ಮ ಸರಸಂಘಚಾಲಕ ಜವಾಬ್ದಾರಿಯನ್ನು ಪರಾಂಜಪೆ ಎಂಬ ಇನ್ನೊಬ್ಬ ಹಿರಿಯ ಕಾರ್ಯಕರ್ತರಿಗೆ ವಹಿಸಿದ್ದರು.

ಸ್ವಾತಂತ್ರ್ಯ ಹೋರಾಟ ಮುಖ್ಯವೇ. ಅದರಲ್ಲಿ ಪಾಲ್ಗೊಳ್ಳುವ ಬಗೆಗೂ ಯಾವುದೇ ಮೀನಮೇಷ ಎಣಿಸುವ ಪ್ರಮೇಯ ಇಲ್ಲ. ಅದೇ ವೇಳೆಗೆ ವ್ಯಕ್ತಿನಿರ್ಮಾಣದ ಕಾರ್ಯಕ್ಕೆ ಯಾವುದೇ ರೀತಿಯ ಹಾನಿಯೊದಗದಂತೆಯೂ ಮತ್ತದು ನಿರಂತರವಿರುವಂತೆಯೂ ನೋಡಿಕೊಳ್ಳಬೇಕಾದುದು ಅಷ್ಟೇ ಅವಶ್ಯ ಎಂಬುದನ್ನು ತಮ್ಮೀ ನಡೆಯಿಂದ ಅವರು ತೋರಿಸಿಕೊಟ್ಟರು.

ಮಾಡದೇ ಆಗುವ ಪರಿ

ಅಧರ್ಮಿಗಳ ಅಟ್ಟಹಾಸಕ್ಕೆ ಧರ್ಮಿಗಳು ಹೇಗೆ ಪ್ರತಿಕ್ರಿಯಿಸಬೇಕೆಂಬುದರ ಜತೆಗೆ ಹೇಗಿರಬೇಕೆಂಬುದು ಕೂಡ ಒಂದು ಗಮನಿಸಬೇಕಾದ ಅಂಶವೇ. ಅಧರ್ಮಿಗಳು ಭ್ರಷ್ಟಜೀವನ ನಡೆಸುತ್ತಿದ್ದಾರೆ, ಆದುದರಿಂದ ಧರ್ಮಿಗಳು ಕೂಡಾ ಭ್ರಷ್ಟರಾದರೆ ಅಡ್ಡಿಯಿಲ್ಲ ಎಂಬ ವಾದ ಇದೆ. ಅವರು ಸಂಪತ್ತನ್ನು ಯದ್ವಾತದ್ವಾ ದೋಚುತ್ತಿದ್ದಾರೆ, ಹಾಗಾಗಿ ಅದು ಹೇಗಾದರೂ ಧರ್ಮಿಗಳ ಕೈಯನ್ನೇ ಸೇರಲಿ ಎಂದು ಅಡ್ಡದಾರಿಯನ್ನು ಸಮರ್ಥಿಸುವುದು ಇದೆ.

ಅಧರ್ಮಿಗಳ ಅಧರ್ಮದ ನಡೆಯು ಧರ್ಮಿಗಳು ತಪ್ಪುದಾರಿ ತುಳಿಯಲು ಆನುಮತಿಯಾಗುವುದಿಲ್ಲ. ಅಧರ್ಮಿಗಳಿಗೆ ನಡೆಯ ಯಾವುದೇ ಮಾದರಿಯೂ ಇಲ್ಲ, ನಡೆಗೊಂದು ನೀತಿಯಾಗಲೀ ನಿಯಮವಾಗಲೀ ಇಲ್ಲ. ಅವೆಲ್ಲವೂ ಇರುವುದು ಅನಿವಾರ್ಯವಾದುದು ಧರ್ಮಿಗಳಿಗೆ. ನೀತಿನಿಯಮವಿಲ್ಲದವರು ಪ್ರಚೋದನೆಯ ವಸ್ತುವಾದಾರು, ಆದರೆ ಅವರಿಂದ ಚೋದನೆಗೊಳ್ಳದೆ ತನ್ನತನ ಉಳಿಸಿಕೊಳ್ಳಬೇಕಾದುದು ಧರ್ಮಿಗಳ ಕರ್ತವ್ಯ.

ರಾಮರಾಜ್ಯದ ಒಂದು ವಿವರ ನಮ್ಮ ಗಮನದಲ್ಲಿರುವುದೇ ಆಗಿದೆ. ಅಲ್ಲಿ ಯಾರೂ ಕಡಮೆ ಆಯುಷ್ಯದಲ್ಲಿ ಮರಣವನ್ನಪ್ಪುತ್ತಿರಲಿಲ್ಲ, ರೋಗರುಜಿನಗಳು ಹಾನಿಯೆಸಗುತ್ತಿರಲಿಲ್ಲ, ಋತುಮಾನದಲ್ಲಿ ಏರುಪೇರು ಆಗುತ್ತಿರಲಿಲ್ಲ, ಪ್ರಕೃತಿವಿಕೋಪ ಘಟಿಸುತ್ತಿರಲಿಲ್ಲ.. ಈ ಬಗೆಯ ಲಕ್ಷಣಗಳೊಂದಿಗೆ ರಾಮರಾಜ್ಯದ ವಿವರಗಳು ವಾಲ್ಮೀಕಿ ರಾಮಾಯಣದಲ್ಲಿ ಸಾಗುತ್ತವೆ. ಇದರಲ್ಲಿ ರಾಮನ ಪಾತ್ರವೇನು ಎಂಬ ಪ್ರಶ್ನೆ ತಾರ್ಕಿಕರನ್ನು ಕಾಡುತ್ತದೆ.

ಹೌದು, ಹೀಗೆ ಮಾಡುವಲ್ಲಿ ರಾಮನ ಪಾತ್ರವೇನೂ ಇರದು. ಆದರೆ ಹೀಗೆ ಆಗುವಲ್ಲಿ ಆತನಿಲ್ಲದೆ ಆಗದು. ‘ಇಂಥವರು ಇರುವುದರಿಂದಲೇ ಮಳೆಬಳೆ ಎಲ್ಲಾ ಚೆನ್ನಾಗಿ ಆಗುತ್ತಿದೆ’ ಎಂದು ಕೆಲವು ಅತ್ಯಂತ ಸಜ್ಜನ ವ್ಯಕ್ತಿಗಳನ್ನು ಕುರಿತು ಹೇಳುತ್ತೇವಲ್ಲ! ಅಂಥ ವ್ಯಕ್ತಿತ್ವಗಳ ಸಾಲಿನಲ್ಲಿ ಯಾರಿಗೂ ಎಟುಕದ ಎತ್ತರದಲ್ಲಿ ರಾಮನ ವ್ಯಕ್ತಿತ್ವವಿದೆ. ಆತ ಏನೂ ಮಾಡದೆಯೂ ಎಲ್ಲವೂ ಸುಸೂತ್ರವಾಗಿ ಆಗುವಂತೆ ಆತನ ಇರವು ಇದೆ.

ಲೋಕರಾವಣನನ್ನೇ ಮಟ್ಟಹಾಕಿದ ರಾಮ ಏನನ್ನೂ ಮಾಡಬಲ್ಲ. ಏನನ್ನೂ ಮಾಡದೆಯೇ ಎಲ್ಲವೂ ಆಗುವಂತೆ ಇರಬಲ್ಲ ಕೂಡಾ.

ಸವಾಲು ಎಂತೂ ಇರಲಿ, ನಾವದನ್ನು ಎಷ್ಟೇ ಎದುರಿಸುವ ಕಾರ್ಯವನ್ನು ಮಾಡಲಿ, ಆದರೆ ನಾವು ಹೇಗಿದ್ದೇವೆ ಎನ್ನುವುದರ ಮೇಲೆ ಅದರ ನಿರಸನ ನಿಂತಿದೆ.

ಸಂಘ ತನ್ನ ನೂರರ ಸಂಭ್ರಮದ ಸಂದರ್ಭದಲ್ಲಿ ಆವಾಹನೆ ನೀಡಿರುವ ಪಂಚ ಪರಿವರ್ತನೆಯ ಬಿಂದುಗಳು ಈ ನಿಟ್ಟಿನಲ್ಲಿ ನಮಗೆಲ್ಲ ಅನುಷ್ಠೇಯವಾಗಿವೆ.

(“ವಿಕ್ರಮ” ವಿಜಯದಶಮಿ ವಿಶೇಷಾಂಕದಲ್ಲಿ ಪ್ರಕಟಿತ ಲೇಖನ)

Leave a Reply

Your email address will not be published.

This site uses Akismet to reduce spam. Learn how your comment data is processed.