ಬೆಂಗಳೂರಿನ ಗಾಂಧಿ ಭವನದಲ್ಲಿ ಭಾನುವಾರ (ಅ.12) ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಲೇಖಕಿ ಪ್ರೊ ಎಲ್.ವಿ.ಶಾಂತಕುಮಾರಿ ಮತ್ತು ಕವಿ ಅರಬಗಟ್ಟೆ ಅಣ್ಣಪ್ಪ ಅವರಿಗೆ ಕ್ರಮವಾಗಿ ‘ಆದಿಕವಿ’ ಮತ್ತು ‘ವಾಗ್ದೇವಿ’ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಬೆಂಗಳೂರು: ‘ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಕನ್ನಡದ ವಾತಾವರಣ ಮತ್ತೆ ನೆಲೆಸಬೇಕು ಎಂದು ಹಿರಿಯ ಲೇಖಕಿ, ವಿಮರ್ಶಕಿ, ಅನುವಾದಕಿ ಪ್ರೊ. ಎಲ್. ವಿ. ಶಾಂತಕುಮಾರಿ‌ ಅವರು ಅಭಿಪ್ರಾಯಪಟ್ಟರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಗಾಂಧಿ ಭವನದಲ್ಲಿ ಅಕ್ಟೋಬರ್ 12ರಂದು ಆಯೋಜಿಸಿದ್ದ 2025ನೇ ಸಾಲಿನ ಆದಿಕವಿ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದರು.

ನವೋದಯ ಕಾಲದ ಎಲ್ಲ ಮುಖ್ಯ ಕವಿಗಳು ಮತ್ತು ಲೇಖಕರು ಇಂಗ್ಲಿಷ್ ಚೆನ್ನಾಗಿ ಓದಿಕೊಂಡಿದ್ದರು. ಅದನ್ನು ಕನ್ನಡಕ್ಕೆ ಪೂರಕವಾಗಿ ಬಳಸಿಕೊಂಡರು. ಅದು ನಮಗೆ ಮಾದರಿಯಾಗಬೇಕು.
ನಮ್ಮ ಕನ್ನಡದ ಮೇಷ್ಟ್ರುಗಳು ಶಾಲೆಗಳಲ್ಲಿ ಕುಮಾರವ್ಯಾಸ ಭಾರತದಂಥ ಪದ್ಯಗಳನ್ನು ಓದಿಸುತ್ತಿದ್ದರು. ನನ್ನ ಮನೆಯಲ್ಲಿ ಗೌರಿ ಹಬ್ಬದ ಉಡುಗೊರೆಯಾಗಿ ಪುಸ್ತಕಗಳನ್ನು ಕೊಡುತ್ತಿದ್ದರು. ನನ್ನಲ್ಲಿ ಸಾಹಿತ್ಯ ಆಸಕ್ತಿ ಬೆಳೆಯಲು ಇವೆಲ್ಲವೂ ಕಾರಣವಾಯಿತು ಎಂದರು.

2025ನೇ ಸಾಲಿನ ವಾಗ್ದೇವಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಕವಿ, ಸಾಹಿತಿ ಅರಬಗಟ್ಟೆ ಅಣ್ಣಪ್ಪ ಅವರು, ಅಕ್ಷರ ಕಲಿತವರೆಲ್ಲರೂ ವಿದ್ಯಾವಂತರಲ್ಲ. ಕೇವಲ ಅಕ್ಷರ ಕಲಿತವರು ವ್ಯವಹಾರ ಲೋಕದ ಪ್ರಜೆ ಆಗಬಹುದು. ಆದರೆ ವಿದ್ಯಾವಂತರು ಸಾಂಸ್ಕೃತಿಕ ಜಗತ್ತಿನ ಭಾಗವಾಗುತ್ತಾರೆ. ನಾಲ್ಕು ಜನ ಎಲ್ಲಿಯೇ ಸೇರಿದರೂ ರಾಜಕೀಯದ ಚರ್ಚೆ ಆರಂಭವಾಗುತ್ತದೆ. ಈ ಪರಿಸ್ಥಿತಿ ಬದಲಾಗಬೇಕು. ಸಾಂಸ್ಕೃತಿಕ ನಾಯಕತ್ವ ಬೆಳೆಸುವ ಮೌಲಿಕ ಚರ್ಚೆಗಳು ನಮ್ಮ ನಡುವೆ ನಡೆಯಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ವಾಗ್ದೇವಿ ಬಹುಮಾನದ ಪ್ರಾಯೋಜಕ ಹರೀಶ್ ಕೃಷ್ಣಮೂರ್ತಿ ಮಾತನಾಡಿ, ಅರ್ಹರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಗಳು ಸಿಗುವಂತೆ ಆಗಲು ಅಭಾಸಾಪ ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.

ಮುಖ್ಯ ವಕ್ತಾರರಾಗಿ ಮಾತನಾಡಿದ ಅಭಾಸಾಪ ಕರ್ನಾಟಕ ಉಪಾಧ್ಯಕ್ಷ ರಮೇಶ್ ಭಟ್ ಬೆಳಗೋಡು, ಕಾಶ್ಮೀರದ ಶಾರದಾ ಪೀಠವು ಭಾರತದ ಜ್ಞಾನದ ಶಕ್ತಿ ಕೇಂದ್ರವಾಗಿತ್ತು. ಆದರೆ ಇಂದಿನ ಭೌಗೋಳಿಕ ರಾಜಕಾರಣದ ಪರಿಣಾಮ ಅದು ಭಾರತದಿಂದ ಹೊರಗಿದೆ. ನಾವೆಲ್ಲರೂ ಭಾರತೀಯರು ಆ ಸ್ಥಾನಗಳನ್ನು ಪುನಃ ಪಡೆಯುವ ಹಾಗೂ ಅಲ್ಲಿನ ಕಥೆಗಳನ್ನು ಮುಂದಿನ ಪೀಳಿಗೆಗಳಿಗೆ ವರ್ಗಾಯಿಸುವ ಕೆಲಸ ಮಾಡಬೇಕು ಎಂದರು.

ಅಭಾಸಾಪ ರಾಜ್ಯ ಸಂಪರ್ಕ ಪ್ರಮುಖ್ ರಘುನಂದನ್ ಭಟ್, ಅಭಾಸಾಪ ರಾಜ್ಯ ಘಟಕದ ಅಧ್ಯಕ್ಷ ಎಸ್.ಜಿ.ಕೋಟಿ ಬಾಗಲಕೋಟೆ, ಅಭಾಸಾಪ ಸಂಘಟನೆಯ ಪ್ರಮುಖರಾದ
ನಾರಾಯಣ ಶೆವಿರೆ, ರಘುನಂದನ್ ಭಟ್, ಎಂ.ಎಸ್. ನರಸಿಂಹಮೂರ್ತಿ ಇತರರು ಪಾಲ್ಗೊಂಡಿದ್ದರು.

ಪರಿಚಯ

ಪ್ರೊ ಎಲ್.ವಿ.ಶಾಂತಕುಮಾರಿ ಪರಿಚಯ

ತಿಪಟೂರು ಮೂಲದ ಪ್ರೊ ಎಲ್.ವಿ.ಶಾಂತಕುಮಾರಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 50 ಹೆಚ್ಚು ಕೃತಿಗಳನ್ನು ರಚಿಸಿರುವ ಶಾಂತಕುಮಾರಿ, ಗೃಹಭಂಗ, ದಾಟು, ಧರ್ಮಶ್ರೀ ಸೇರಿದಂತೆ ಹಲವು ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಇಂಗ್ಲಿಷಿನ ಹಲವು ಕೃತಿಗಳನ್ನು ಕನ್ನಡಕ್ಕೂ ತಂದಿದ್ದಾರೆ. ಸ್ವತಂತ್ರವಾಗಿಯೂ ಹಲವು ಕಥೆ, ಕವನಗಳನ್ನು ರಚಿಸಿದ್ದಾರೆ.

ಅರಬಗಟ್ಟೆ ಅಣ್ಣಪ್ಪ ಪರಿಚಯ
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ಅರಬಗಟ್ಟೆ ಗ್ರಾಮದ ಅಣ್ಣಪ್ಪ ಪ್ರಸ್ತುತ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಜಾತ್ರೆಗೆ ನುಗ್ಗಿದ ಮಗು’ ಕವನ ಸಂಕಲನ, ‘ಅಕ್ಕಡಿ’ ಪ್ರಬಂಧ ಸಂಕಲನ ಪ್ರಕಟವಾಗಿದೆ. ಹಲವು ಪತ್ರಿಕೆಗಳಲ್ಲಿ ಇವರ ನೂರಾರು ಕಥೆ, ಕವನ, ಪ್ರಬಂಧಗಳು ಪ್ರಕಟವಾಗಿವೆ.

Leave a Reply

Your email address will not be published.

This site uses Akismet to reduce spam. Learn how your comment data is processed.