ಬೆಂಗಳೂರು, ಅ. 27: ನವೆಂಬರ್ 1 ರಿಂದ ಆರಂಭಿಸಿ 37 ದಿನಗಳ ಕಾಲ ನಡೆಯಲಿರುವ ರಾಷ್ಟ್ರೋತ್ಥಾನ ಸಾಹಿತ್ಯದ 5ನೇ ಕನ್ನಡ ಪುಸ್ತಕ ಹಬ್ಬದ ಕುರಿತು ಪತ್ರಿಕಾಗೋಷ್ಠಿ ಇಲ್ಲಿನ ಕೆಂಪೇಗೌಡನಗರದ ರಾಷ್ಟ್ರೋತ್ಥಾನ ಪರಿಷತ್ ನ ಕಾನ್ಫರೆನ್ಸ್ ಸಭಾಂಗಣದಲ್ಲಿ ಆಯೋಜಿಲಾಗಿತ್ತು. ರಾಷ್ಟ್ರೋತ್ಥಾನ ಸಾಹಿತ್ಯದ ವಿಶ್ವಸ್ಥ ಕೆ ಎಸ್ ನಾರಾಯಣ, ಮುಖ್ಯಸ್ಥ ಸುಬ್ರಹ್ಮಣ್ಯ ಬಿ ಎ ಹಾಗೂ ಪ್ರಧಾನ ಸಂಪಾದಕ ವಿಘ್ನೇಶ್ವರ ಭಟ್ಟರು ಪುಸ್ತಕ ಹಬ್ಬದ ಬಗೆಗೆ ಮಾಹಿತಿ ನೀಡಿದರು. ರಾಷ್ಟ್ರೋತ್ಥಾನ ಸಾಹಿತ್ಯದ ಹಿರಿಯ ವ್ಯವಸ್ಥಾಪಕ ಉಮೇಶ್ ಕುಮಾರ್ ಶಿಮ್ಲಡ್ಕ ಉಪಸ್ಥಿತರಿದ್ದರು.

ಈ ಬಾರಿ ‘ಕನ್ನಡ ಪುಸ್ತಕ ಹಬ್ಬ’ದ ಐದನೆಯ ಆವೃತ್ತಿ ನವೆಂಬರ್ 1 ರಿಂದ ಡಿಸೆಂಬರ್ 7ರ ವರೆಗೆ ಒಟ್ಟು 37 ದಿನಗಳ ಕಾಲ ‘ಕೇಶವಶಿಲ್ಪ’ ಸಭಾಂಗಣದಲ್ಲಿ ನಡೆಯಲಿದೆ. ನವೆಂಬರ್ 1 ರಂದು ಬೆಳಗ್ಗೆ 11 ಗಂಟೆಗೆ, ಮೈಸೂರು ರಾಜವಂಶಸ್ಥ, ಕೊಡಗು-ಮೈಸೂರು ಕ್ಷೇತ್ರದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪುಸ್ತಕ ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾರತ ಸರಕಾರದ ಸಾಮರ್ಥ್ಯ ನಿರ್ಮಾಣ ಆಯೋಗದ ಮಾನವಸಂಪನ್ಮೂಲ ಸದಸ್ಯ, ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್‌ನ ಸ್ಥಾಪಕ ಡಾ|| ಆರ್. ಬಾಲಸುಬ್ರಮಣ್ಯಂ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ|| ಮಲ್ಲೇಪುರಂ ಜಿ. ವೆಂಕಟೇಶ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷ ಎಂ. ಪಿ. ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಶೋಭಾಯಾತ್ರೆ
ನವೆಂಬರ್ 1, 2025ರಂದು ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 9:30ಕ್ಕೆ ಎನ್. ಆರ್. ಕಾಲೊನಿಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಆವರಣದಿಂದ ರಾಷ್ಟ್ರೋತ್ಥಾನ ಪರಿಷತ್ತಿನವರೆಗೆ ತಾಯಿ ಭುವನೇಶ್ವರಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ.
ಪುಸ್ತಕ ಹಬ್ಬದ ವೈಶಿಷ್ಟ್ಯಗಳು:
ಈ ಬಾರಿಯ 37 ದಿನಗಳ ಪುಸ್ತಕ ಹಬ್ಬದಲ್ಲಿ ಹಲವು ರೀತಿಯ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.




- 37 ದಿನವೂ ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 9ರ ವರೆಗೆ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಕಟನೆಗಳಲ್ಲದೆ, ಬೇರೆ ಬೇರೆ ಪ್ರಕಾಶಕರ ಪ್ರಮುಖ ಸಾಹಿತಿ-ಲೇಖಕರ ಪುಸ್ತಕಗಳೂ ಶೇ.10 ರಿಂದ ಶೇ.50ರ ವರೆಗಿನ ರಿಯಾಯಿತಿಯಲ್ಲಿ ದೊರೆಯಲಿವೆ.
- ಪ್ರತಿದಿನ ಸಾಯಂಕಾಲ ಸಂಸ್ಕಾರಭಾರತೀ ಸಹಯೋಗದಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಗೀತ, ನೃತ್ಯ, ಜಾನಪದ, ಏಕವ್ಯಕ್ತಿ ತಾಳಮದ್ದಲೆ, ಯಕ್ಷಗಾನ, ಹಾಸ್ಯ, ಮ್ಯಾಜಿಕ್, ವಿವಿಧ ವಾದ್ಯಗೋಷ್ಠಿಗಳು, ಹರಿಕಥೆ, ಗಮಕ, ನಾಟಕ, ಅಷ್ಟಾವಧಾನ, ತಾಳವಾದ್ಯ ಕಛೇರಿ – ಹೀಗೆ ನಾಡಿನ ನುರಿತ ಹೆಸರಾಂತ ಕಲಾವಿದರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.
- ‘ಪುಸ್ತಕ ಲೋಕಾರ್ಪಣ’ ಕಾರ್ಯಕ್ರಮಗಳು ನಡೆಯಲಿವೆ.
- ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮತ್ತು ಚರ್ಚಾಸ್ಪರ್ಧೆ, ಶಾಲಾ ವಿದ್ಯಾರ್ಥಿಗಳಿಗಾಗಿ ಪುಸ್ತಕ ಪರಿಚಯ ಮತ್ತು ಲೇಖನ ಸ್ಪರ್ಧೆಗಳನ್ನು ಯೋಜಿಸಲಾಗಿದೆ.
- ಮಕ್ಕಳಿಗಾಗಿ ‘ಮಂಕುತಿಮ್ಮನ ಕಗ್ಗ ಹೇಳುವ ಸ್ಪರ್ಧೆ’, ‘ಕನ್ನಡ ಗದ್ಯ ಮತ್ತು ಪದ್ಯಭಾಗಗಳನ್ನು ತಪ್ಪಿಲ್ಲದೆ ಓದುವ ಸ್ಪರ್ಧೆ’ ಹಾಗೂ ‘ಆಶುಭಾಷಣ ಸ್ಪರ್ಧೆ’ಗಳು ನಡೆಯಲಿವೆ. ಇವುಗಳಿಗೆ ಉಚಿತ ಪ್ರವೇಶ ಇರುತ್ತದೆ.


ಹೀಗೆ ವೈವಿಧ್ಯಮಯ ಸಾಹಿತ್ಯಕ-ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ನಡೆಯಲಿರುವ ಈ ಬಾರಿಯ ಪುಸ್ತಕಹಬ್ಬದಲ್ಲಿ ನಾಡಿನ ಪ್ರಸಿದ್ಧ ಬರಹಗಾರರ ಪುಸ್ತಕಗಳೆಲ್ಲವೂ ಒಂದೇ ಕಡೆ ಓದುಗರಿಗೆ ಲಭ್ಯವಾಗಲಿವೆ. ಶಾಲಾ-ಕಾಲೇಜುಗಳು, ಗ್ರಂಥಾಲಯಗಳು ಕೂಡ ಈ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಬಹುದು.
ರಾಷ್ಟ್ರೋತ್ಥಾನ ಸಾಹಿತ್ಯದ ಕುರಿತು ಪರಿಚಯ
1965ರಲ್ಲಿ ಪ್ರಾರಂಭವಾದ ರಾಷ್ಟ್ರೋತ್ಥಾನ ಪರಿಷತ್ತಿನ ಮೊದಲ ಚಟುವಟಿಕೆಯಾದ ‘ರಾಷ್ಟ್ರೋತ್ಥಾನ ಸಾಹಿತ್ಯ’ ಕಳೆದ 60 ವರ್ಷಗಳ ನಿರಂತರ ಕಾರ್ಯನಿರ್ವಹಣೆಯಲ್ಲಿ ಇದುವರೆಗೂ 306 ಪುಸ್ತಕಗಳನ್ನು ಪ್ರಕಟಿಸಿದೆ. ಇತಿಹಾಸ, ರಾಷ್ಟ್ರೀಯತೆ, ಸಂಸ್ಕೃತಿ, ವ್ಯಕ್ತಿತ್ವವಿಕಾಸ, ಜೀವನಚರಿತ್ರೆಗಳು, ವ್ಯಕ್ತಿಚಿತ್ರಗಳು, ಪರಿಸರ, ಯೋಗ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಆರ್ಥಿಕತೆ – ಹೀಗೆ ಹಲವು ವಿಷಯ-ಕ್ಷೇತ್ರಗಳಿಗೆ ಸಂಬಂಧಿಸಿ ಈ ಪ್ರಕಟನೆಗಳನ್ನು ತರಲಾಗಿದೆ. ಇವುಗಳಲ್ಲದೆ, ಭಾರತದ ಇತಿಹಾಸ-ಪರಂಪರೆ-ಮಹಾಕಾವ್ಯಗಳು-ಪುರಾಣಗಳು-ಕಲೆ-ಸಾಹಿತ್ಯ ಸೇರಿದಂತೆ ಎಲ್ಲ ಜೀವನಕ್ಷೇತ್ರಗಳಿಗೆ ಸಂಬಂಧಿಸಿದ ಮಹಾಪುರುಷರನ್ನು ಮಕ್ಕಳಿಗೆ ಪರಿಚಯಿಸುವುದಕ್ಕಾಗಿ ರೂಪಿಸಲಾದ ‘ಭಾರತ-ಭಾರತಿ ಪುಸ್ತಕ ಸಂಪದ’ ಯೋಜನೆಯಲ್ಲಿ, ಮೊದಲ ಹಂತದಲ್ಲಿ, ಪ್ರೊ|| ಎಲ್. ಎಸ್. ಶೇಷಗಿರಿರಾಯರ ಸಂಪಾದಕತ್ವದಲ್ಲಿ 510 ಪುಸ್ತಕಗಳನ್ನು ಪ್ರಕಟಿಸಲಾಗಿತ್ತು. ಹತ್ತು ವರ್ಷಗಳ ಹಿಂದೆ, ಹಿರಿಯ ಪತ್ರಕರ್ತ ಶ್ರೀ ಚಿರಂಜೀವಿ ಅವರ ಸಂಪಾದಕತ್ವದಲ್ಲಿ ಮತ್ತೆ 100 ಪುಸ್ತಕಗಳನ್ನು ಈ ಸರಣಿಗೆ ಸೇರಿಸಲಾಗಿದೆ. ಈ 610 ಪುಸ್ತಕಗಳಲ್ಲಿ 225 ಪುಸ್ತಕಗಳು ಇಂಗ್ಲಿಷಿಗೂ ಅನುವಾದಗೊಂಡಿವೆ.
ಮೊದಲ ಪುಸ್ತಕ ‘ರಣವೀಳ್ಯ’ವೂ ಸೇರಿದಂತೆ ನಮ್ಮ ಹಲವು ಪ್ರಕಟನೆಗಳು ಕಳೆದ ಐದಾರು ದಶಕಗಳಿಂದ ನಿರಂತರ ಬೇಡಿಕೆಯಲ್ಲಿವೆ. ‘ಅಜೇಯ’, ‘ಅದಮ್ಯ’, ‘ಕೋಲ್ಮಿಂಚು’, ‘ಮನಸ್ಸೇ ರಿಲ್ಯಾಕ್ಸ್ ಪ್ಲೀಸ್’, ‘ಭಾರತದರ್ಶನ’, ‘ಭಾರತೀಯ ಕ್ಷಾತ್ರಪರಂಪರೆ’, ‘ಸ್ವಾತಂತ್ರ್ಯವೀರ ಸಾವರಕರ್’, ‘ಕೃತಿರೂಪ ಸಂಘದರ್ಶನ’ – ಹೀಗೆ ನಮ್ಮ ಹಲವು ಪ್ರಕಟನೆಗಳು ನಿರಂತರವಾಗಿ ಓದುಗರನ್ನು ತಲಪುತ್ತಿವೆ. ಪ್ರಸಿದ್ಧ ಗಾಂಧಿವಾದಿ, ಚಿಂತಕ ಧರ್ಮಪಾಲ್ ಅವರ ಮಹತ್ತ್ವದ ಕೃತಿಗಳನ್ನು ನಾವು ಪ್ರಕಟಿಸುತ್ತಿದ್ದು, ವ್ಯಾಪಕ ಮೆಚ್ಚುಗೆ ಪಡೆದಿವೆ. ಈ ವರ್ಷ ಪ್ರೊ|| ಎಸ್. ಕೆ. ರಾಮಚಂದ್ರರಾಯರ ಶತಮಾನೋತ್ಸವ ಸಂಸ್ಮರಣಗ್ರಂಥ ’ವಿದ್ಯಾಲಂಕಾರ’ ಪ್ರಕಟಿಸಿದ್ದು, ರಾಯರ ಸಾರ್ಥಕಜೀವನವನ್ನೂ ಪ್ರೇರಕ ಕೆಲಸಗಳನ್ನೂ ಪರಿಚಯಿಸುವ ಪ್ರಯತ್ನ ಆಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಂದರ್ಭದಲ್ಲಿ ಸಂಘವು ಕೈಗೆತ್ತಿಕೊಂಡಿರುವ ’ಪಂಚ ಪರಿವರ್ತನೆ’ ಎಂಬ ಜನಜಾಗೃತಿ ಅಭಿಯಾನಕ್ಕೆ ಪೂರಕವಾಗಿ ’ಚರಿತಪಂಚಕ’ ಕೃತಿಯನ್ನು ಹೊರತರಲಾಗಿದೆ.
ನಮ್ಮ ಹಲವು ಪ್ರಕಟನೆಗಳು ವಿವಿಧ ಅಕಾಡೆಮಿ-ಸಂಘಸಂಸ್ಥೆಗಳ ಬಹುಮಾನ-ಪ್ರಶಸ್ತಿಗಳಿಗೂ ಪಾತ್ರವಾಗಿವೆ. ‘ತೋರ್‌ಬೆರಳು’, ‘ಅಜೇಯ’, ‘ಅದಮ್ಯ’, ‘ಶತಮಾನದ ತಿರುವಿನಲ್ಲಿ ಭಾರತ’, ‘ಗಾಂಧೀಯ ಅರ್ಥಶಾಸ್ತ್ರ’, ‘ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾಸಾಹೇಬ ಅಂಬೇಡ್ಕರ್’ – ಮೊದಲಾದ ಕೃತಿಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾಭಾರತಿ ಪ್ರಾಧಿಕಾರಗಳು ಗೌರವಿಸಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ‘ಅಂಕಿತ ದತ್ತಿ ಪ್ರಶಸ್ತಿ’ಯೂ ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ಲಭಿಸಿದೆ. ಕನ್ನಡ ಪುಸ್ತಕ ಪ್ರಾಧಿಕಾರವು ಕೊಡಮಡುವ ‘2021ರ ಅತ್ಯುತ್ತಮ ಪ್ರಕಾಶನ’ ವಾರ್ಷಿಕ ಪ್ರಶಸ್ತಿಯೂ ಲಭಿಸಿದೆ.
ಪುಸ್ತಕ ಪ್ರಕಟನೆಯಲ್ಲದೆ, ಸದಭಿರುಚಿಯ ಸಾಹಿತ್ಯಪ್ರಸಾರವೂ ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಮುಖ ಚಟುವಟಿಕೆ. ಈ ಉದ್ದೇಶಕ್ಕಾಗಿ ಬೆಂಗಳೂರಿನಲ್ಲಿ 3 ಪುಸ್ತಕ ಮಳಿಗೆಗಳಿವೆ. ರಾಜ್ಯದಾದ್ಯಂತ ಇರುವ ಪುಸ್ತಕ ಮಾರಾಟಗಾರರು, ಪರಿಚಾರಕರ ಮೂಲಕ ಓದುಗರನ್ನು ತಲಪಲಾಗುತ್ತಿದೆ. ಇದರ ಜೊತೆಗೆ, 2021ರಿಂದ ನಾವು ವಿಶೇಷವಾಗಿ ‘ಕನ್ನಡ ಪುಸ್ತಕ ಹಬ್ಬ’ ಹೆಸರಿನಲ್ಲಿ ಬೆಂಗಳೂರಿನಲ್ಲಿ, ‘ಕೇಶವಶಿಲ್ಪ’ ಸಭಾಂಗಣದಲ್ಲಿ ಕನಿಷ್ಠ 1 ತಿಂಗಳ ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸುತ್ತಿದ್ದೇವೆ. ಮೈಸೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿಯೂ ಈ ಪುಸ್ತಕ ಹಬ್ಬಗಳನ್ನು ನಡೆಸುತ್ತಿದ್ದೇವೆ. ಈ ಹಬ್ಬಗಳಲ್ಲಿ ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸಗಳು, ಪುಸ್ತಕಗಳ ಲೋಕಾರ್ಪಣೆ, ಸಾಹಿತಿಗಳೊಂದಿಗೆ ಸಂವಾದ, ಮೊದಲಾದ ಕಾರ್ಯಕ್ರಮಗಳೂ ನಡೆದಿವೆ.