ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ.ಕೇಶವ ಬಲಿರಾಮ್ ಹೆಡಗೇವಾರ್ ಅವರು ದೇಶದ ಸ್ವಾಭಿಮಾನದ ಪರವಾಗಿ ಕೆಲಸ ಮಾಡಿದ ಜನ್ಮಜಾತ ದೇಶಭಕ್ತರು. ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳು ಸಕ್ರಿಯವಾಗಿದ್ದ ಸಂದರ್ಭದಲ್ಲೇ ಅವುಗಳಲ್ಲಿ ಭಾಗಿಯಾಗುವುದರ ಜೊತೆಗೆ ಬಂದಂತಹ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ಸರಳವಾದಂತಹ ಕಾರ್ಯಪದ್ಧತಿಯನ್ನು ಒಳಗೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಪ್ರಾರಂಭಿಸಿದರು ಎಂದು ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಮಾತನಾಡಿದರು.

ರಾಷ್ಟ್ರೋತ್ಥಾನ ಸಾಹಿತ್ಯ ಕೆಂಪೇಗೌಡನಗರದ ರಾಷ್ಟ್ರೋತ್ಥಾನ ಪರಿಷತ್ ನಲ್ಲಿ ಆಯೋಜಿಸಿರುವ 5ನೇ ಕನ್ನಡ ಪುಸ್ತಕ ಹಬ್ಬದಲ್ಲಿ ‘ನೂರು ವರುಷ, ಸಾವಿರದ ಕೆಲಸ: ರಾಷ್ಟ್ರೀಯ ಸ್ವಯಂಸೇವಕ ಸಂಘ ನಡೆದು ಬಂದ ಹಾದಿ’ ವಿಷಯದ ಕುರಿತು ಮಾತನಾಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅದರ ಕಾರ್ಯಪದ್ಧತಿಯನ್ನು ಅರ್ಥ ಮಾಡಿಕೊಳ್ಳಬೇಕು.‌ ರಾಷ್ಟ್ರ ನಿರ್ಮಾಣಕ್ಕಾಗಿ ವ್ಯಕ್ತಿನಿರ್ಮಾಣ ಎಂಬ ಧ್ಯೇಯದೊಂದಿಗೆ ಡಾ.ಹೆಡಗೇವಾರ್ ಕಾರ್ಯಪ್ರವೃತ್ತರಾದರು. ಈ ನಿಟ್ಟಿನಲ್ಲಿ ಸಣ್ಣ ಸಣ್ಣ ಚಟುವಟಿಕೆಗಳ ಮೂಲಕ ವ್ಯಕ್ತಿ ನಿರ್ಮಾಣದ ಕಾರ್ಯ ಪ್ರಾರಂಭವಾಯಿತು. ಇಂದು ಒಟ್ಟು 850ಕ್ಕೂ ಹೆಚ್ಚು ಸಂಸ್ಥೆಗಳು, 40ಕ್ಕೂ ಹೆಚ್ಚು ಅಖಿಲ ಭಾರತೀಯ ಸಂಘಟನೆಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನುಡಿದರು.

ಹಿಂದೂ ಎಂದು ಗುರುತಿಸಿಕೊಳ್ಳಲು ಕೀಳರಿಮೆ ಇದ್ದ ಸಂದರ್ಭದಲ್ಲಿ ಹಿಂದೂ ಎನ್ನುವುದರ ಕುರಿತು ಪ್ರೌಢಿಮೆ ಮೂಡುವಂತೆ ಮಾಡಲು ಡಾ.ಕೇಶವ ಬಲಿರಾಮ್ ಹೆಡಗೇವಾರ್ ಶ್ರಮವಹಿಸಿದರು. ಅಪಹಾಸ್ಯಗಳಿಗೆ ಕಿವಿಗೊಡದೆ ಹಿಂದೂ ಸಮಾಜವನ್ನು ಸಂಘಟಿಸುವುದಕ್ಕೆ ಮುಂದಾದರು. ಅದರ ಪರಿಣಾಮ ಇಂದು ಹಿಂದೂ ಭಾವ ಜಾಗರಣವಾಗಿದೆ, ಹಿಂದೂ ಸಮಾಜ ಸಂಘಟಿತವಾಗಿದೆ ಎಂದರು.

ಅನೇಕ ಸವಾಲುಗಳನ್ನು ಎದುರಿಸಿ ನೂರು ವರ್ಷಗಳನ್ನು ಪೂರೈಸಿದೆ. ಈ ನೂರು ವರ್ಷಗಳ ಅವಧಿಯಲ್ಲಿ ಹಲವು ಆಯಾಮಗಳಲ್ಲಿ ತನ್ನನ್ನು ತಾನು ತೆರೆದುಕೊಂಡಿದೆ. ದೇಶದ ಭದ್ರತೆ ಮತ್ತು ಸುರಕ್ಷತೆಯ ವಿಷಯ ಬಂದಾಗ 1947ರ ದೇಶ ವಿಭಜನೆಯ ಸಂದರ್ಭದಿಂದ ಹಿಡಿದು ಇತ್ತೀಚೆಗೆ ನಡೆದ ಆಪರೇಷನ್ ಸಿಂದೂರದವರೆಗೂ ಆರೆಸ್ಸೆಸ್ ಸ್ವಯಂಸೇವಕರು ಸಾರ್ವಜನಿಕರ ರಕ್ಷಣೆಯಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸಿದ್ದಾರೆ. 6 ಗತಿವಿಧಿಗಳ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಸಮಾಜದ ಜೊತೆಗೂಡಿ ಕಾರ್ಯನಿರ್ವಹಿಸುತ್ತಿದೆ. ಸಂಘಶತಾಬ್ದಿಯ ಹಿನ್ನೆಲೆಯಲ್ಲಿ ಪಂಚಪರಿವರ್ತನೆಯ ಪಾಲನೆಗೆ ಮಹತ್ವವನ್ನು ನೀಡುತ್ತಿದೆ ಎಂದು ನುಡಿದರು.

ಸುಮಾರು ಒಂದು ಲಕ್ಷ ಗ್ರಾಮಗಳಲ್ಲಿ ಸಂಘ ಮತ್ತು ವಿವಿಧ ಕ್ಷೇತ್ರಗಳ ಚಟುವಟಿಕೆಗಳಿವೆ.‌ ನಮ್ಮ ಎಲ್ಲಾ ಸಂಘಟನೆಗಳೂ ರಾಷ್ಟ್ರೀಯ ಹಿತಾಸಕ್ತಿಯನ್ನು ಹೊಂದಿವೆ. ಅದರ ಫಲವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಹಿಂದೂ ಸಂಘಟಿತನಾಗಿದ್ದಾನೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರ ಏಳಿಗೆಗಾಗಿ ನಿರಂತರವಾಗಿ ಸಂಘದ ಸ್ವಯಂಸೇವಕರು ವಿವಿಧ ಚಟುವಟಿಕೆಗಳ ಮೂಲಕ ತೊಡಗಿಕೊಂಡಿದ್ದಾರೆ. ಸೇವಾಬಸ್ತಿಗಳಲ್ಲಿ ಸೇವಾ ಚಟುವಟಿಕೆಗಳು ನಡೆಯುತ್ತಿವೆ. ಸ್ವಾವಲಂಬಿ, ಶಿಕ್ಷಿತರಾಗಿ, ಸೇವೆಯ ಮುಖಾಂತರ ಪರಿವರ್ತನೆ ತರುವುದಕ್ಕೆ ಪ್ರಯತ್ನಗಳಾಗುತ್ತಿವೆ ಎಂದರು.

ಯುವಶಕ್ತಿಯನ್ನು ದಾರಿ ತಪ್ಪಿಸುವ, ನಮ್ಮ ಸಂಸ್ಕೃತಿಯನ್ನು ನಾಶ ಮಾಡಬೇಕು ಎಂಬ ಹುನ್ನಾರಗಳು ನಡೆಯುತ್ತಿದೆ. ನಮ್ಮ ಅರಿವಿಲ್ಲದೇ ನಾವು ಸಿಕ್ಕಿ ಹಾಕಿಕೊಳ್ಳುತ್ತಿದ್ದೇವೆ. ಅಂತಹ ಷಡ್ಯಂತ್ರಗಳ ಕುರಿತು ಯುವಜನತೆ ಎಚ್ಚರಿಕೆವಹಿಸಬೇಕು. ಮನೆಯ ಮೂಲಕ ಅವರಿಗೆ ಸಂಸ್ಕಾರ ಸಿಗಬೇಕು. ದೈನಂದಿನ ವ್ಯವಹಾರದಲ್ಲಿ ನಮ್ಮತನವನ್ನು ಉಳಿಸಿಕೊಂಡಿರುವುದರಿಂದ ಸಾವಿರಾರು ವರ್ಷಗಳ ನಂತರವೂ ನಮ್ಮ ಸಂಸ್ಕೃತಿ ಉಳಿದಿದೆ. ಹಾಗಾಗಿ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸುವ ಮೂಲಕ ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಬೇಕು ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಸಂವಿತ್ ಸಂಶೋಧನಾ ಕೇಂದ್ರ ನಿರ್ದೇಶಕ ಸುಬ್ರಹ್ಮಣ್ಯ ಬಿ.ಎ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.