ದು.ಗು.ಲಕ್ಷ್ಮಣ್, ಹಿರಿಯ ಪತ್ರಕರ್ತರು
ವನವಾಸಿ ಕಲ್ಯಾಣ ಆಶ್ರಮ, ಭಾರತೀಯ ಕುಷ್ಠ ನಿವಾರಕ ಸಂಘ, ವನಬಂಧು ಪರಿಷತ್, ಸಂಸ್ಕಾರ ಭಾರತೀ, ವಿಜ್ಞಾನ ಭಾರತೀ, ಲಘು ಉದ್ಯೋಗ ಭಾರತೀ, ಸೇವಾ ಸಹಯೋಗ, ಸೇವಾ ಇಂಟರ್ನ್ಯಾಷನಲ್, ರಾಷ್ಟ್ರ ಸೇವಿಕಾ ಸಮಿತಿ, ಆರೋಗ್ಯ ಭಾರತೀ, ಕ್ರೀಡಾ ಭಾರತೀ, ದುರ್ಗಾ ವಾಹಿನಿ, ಸಾಮಾಜಿಕ ಸಮರಸತಾ ಮಂಚ್, ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣ ನ್ಯಾಸ, ದೀನದಯಾಳ ಶೋಧ ಸಂಸ್ಥಾನ, ಭಾರತೀಯ ವಿಚಾರ ಸಾಧನಾ, ಹಿಂದು ಸೇವಾ ಪ್ರತಿಷ್ಠಾನ, ದೃಷ್ಟಿ ಸಂಸ್ಥಾನ, ಹಿಂದೂ ಹೆಲ್ಪ್ಲೈನ್, ಹಿಂದೂ ಮುನ್ನಣಿ, ರಾಷ್ಟ್ರ ಪರಿಷತ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ , ವಿಶ್ವ ಹಿಂದೂ ಪರಿಷತ್, ವಿದ್ಯಾರ್ಥಿ ಪರಿಷತ್, ವಿವೇಕಾನಂದ ಕೇಂದ್ರ , ಅಖಿಲ ಭಾರತ ಗ್ರಾಹಕ ಪಂಚಾಯತ್, ಇತಿಹಾಸ ಸಂಕಲನ ಸಮಿತಿ, ಧರ್ಮ ಜಾಗರಣ, ಹಿಂದು ಜಾಗರಣ ಮಂಚ್, ಪತಿತ ಪಾವನ ಸಂಘಟನಾ, ಏಕಲ್ ವಿದ್ಯಾಲಯ, ಭಾರತೀಯ ಕಿಸಾನ್ ಸಂಘ … ಇತ್ಯಾದಿತ್ಯಾದಿ.
ಆಡು ಮುಟ್ಟದ ಸೊಪ್ಪಿಲ್ಲ, ಆರೆಸ್ಸೆಸ್ ತಲುಪದ ಕ್ಷೇತ್ರಗಳಿಲ್ಲ. ಈ ಮಾತಿಗೆ ಮೇಲೆ ಉಲ್ಲೇಖಿಸಿದ ಹಲವಾರು ಸಂಘಟನೆಗಳೆ ಜ್ವಲಂತ ಸಾಕ್ಷಿ. ಈ ಸಂಘಟನೆಗಳ ಪಟ್ಟಿ ಇನ್ನೂ ಉದ್ದವಾಗಿದೆ. ಲೇಖನದ ಮಿತಿಯ ಕಾರಣಕ್ಕಾಗಿ ಅವುಗಳನ್ನೆಲ್ಲ ಇಲ್ಲಿ ಹೆಸರಿಸಲು ಸಾಧ್ಯವಾಗಿಲ್ಲ. ಸಂಘ ಪರಿವಾರವೆಂದರೆ ಇವೆಲ್ಲ ಸಂಘಟನೆಗಳ ಸಮುಚ್ಚಯ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಳೆದ ನೂರು ವರ್ಷಗಳಲ್ಲಿ ಮಾಡಿದ್ದೇನು ಎಂಬ ಸಿನಿಕರ ಪ್ರಶ್ನೆಗೆ ಈ ಸಂಘಟನೆಗಳ ಸಾಧನೆಯೇ ಉತ್ತರ. ಯಾವುದೇ ಪ್ರಚಾರ , ಜನಪ್ರಿಯತೆಯ ಸಾಂಕ್ರಾಮಿಕ ರೋಗಕ್ಕೆ ತುತ್ತಾಗದೆ ಸದ್ದಿಲ್ಲದ ಕಾರ್ಯದಲ್ಲಿ ಈ ಸಂಘಟನೆಗಳು ತೊಡಗಿರುವುದರಿಂದಲೇ ಸಾರ್ವಜನಿಕರ ಗಮನವನ್ನು ಇವು ಅಷ್ಟಾಗಿ ಸೆಳೆದಿಲ್ಲ. ಆದರೆ ಆಯಾ ಕ್ಷೇತ್ರದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಬಲವಾಗಿ ಊರಿವೆ. ಆಯಾ ಕ್ಷೇತ್ರದ ಅಚ್ಚುಮೆಚ್ಚಿನ ಸಂಘಟನೆಯಾಗಿ ಜನಮನವನ್ನು ಮೀಟಿವೆ.
ಈ ಪೈಕಿ ಕುಷ್ಠ ನಿವಾರಕ ಸಂಘ ಮತ್ತು ವನವಾಸಿ ಕಲ್ಯಾಣ ಆಶ್ರಮ – ಈ ಸಂಘಟನೆಗಳ ಹುಟ್ಟಿಗೆ ಕಾರಣವಾದ ಹಿನ್ನೆಲೆಯ ಕಥೆ ಬಲು ರೋಚಕ. ಮಧ್ಯಪ್ರದೇಶದ ಚಾಂಪಾದಲ್ಲಿರುವ ಭಾರತೀಯ ಕುಷ್ಠ ನಿವಾರಕ ಸಂಘ ಒಂದು ನೋಂದಾಯಿತ ಸಂಸ್ಥೆಯಾಗಿ ಸ್ಥಾಪನೆಯಾಗಿದ್ದು 1962 ಮೇ 5 ರಂದು. ಈ ಸಂಸ್ಥೆಯ ಸ್ಥಾಪನೆಯಲ್ಲಿ ಪ್ರಧಾನ ಪಾತ್ರವಹಿಸಿದವರು ಸದಾಶಿವ ಗೋವಿಂದ ಕಾತ್ರೆ. ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಅತ್ಯಂತ ಶ್ರೀಸಾಮಾನ್ಯ ವ್ಯಕ್ತಿ. ಅವರ ಪತ್ನಿ ಸಿಡುಬು ರೋಗಕ್ಕೆ ಬಲಿಯಾದರೆ, ಪುತ್ರ ಬಾಲಗ್ರಹ ರೋಗದಿಂದ ಸಾವಿಗೀಡಾದ. ಪುಟ್ಟ ಮಗಳನ್ನು ಕಾತ್ರೆಯವರೇ ತಾಯಿಯಾಗಿ ತಂದೆಯಾಗಿ ಸಲಹಿದರು. ಆದರೆ ನೆರೆಹೊರೆಯವರು ಪತ್ನಿಯ ಸಾವು ಸಹಜವಲ್ಲ ಅದು ಹತ್ಯೆ ಎಂಬ ಆಪಾದನೆ ಹೊರಿಸಿದ್ದರಿಂದ ಕಾತ್ರೆಯವರು ನ್ಯಾಯಾಲಯದ ಮೆಟ್ಟಿಲೇರಬೇಕಾಯಿತು. ತೀರ್ಪು ಅವರ ವಿರುದ್ಧವಾಗಿ ಜೈಲು ಶಿಕ್ಷೆಗೂ ಗುರಿಯಾಗಬೇಕಾಗಿತ್ತು.
ಜೈಲಿನಲ್ಲಿದ್ದಾಗಲೇ ಕಾತ್ರೆ ಅವರಿಗೆ ಕುಷ್ಠ ರೋಗ ತಗಲಿತು. ಬಿಡುಗಡೆಯ ಬಳಿಕ ಬಿಲಾಸಪುರದ ಕ್ರೈಸ್ತ ಕುಷ್ಠರೋಗ ಸದನದ ನಿವಾಸಿಯಾಗಿ ಸೇರಿದರು. ಕುಷ್ಠರೋಗ ನಿವಾರಣೆ ನೆಪದಲ್ಲಿ ನಿವಾಸಿಗಳಾಗಿ ಬಂದವರನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡುತ್ತಿದ್ದ ಮಿಷನರಿ ಪಾದ್ರಿಗಳ ವಿರುದ್ಧ ಸಿಡಿದೆದ್ದು ರಾಜ್ಯಪಾಲರಿಗೆ ದೂರು ನೀಡಿದರು. ರಾಜ್ಯಪಾಲರಾಗಿದ್ದ ಹರಿಬಾವೂ ಪಾಟಸ್ಕರ್ “ಮಿಷನರಿಗಳು ಏಳು ಸಾಗರದಾಚೆಯಿಂದ ಇಲ್ಲಿಗೆ ಬಂದು ಈ ಕೆಲಸ ಮಾಡುತ್ತಿದ್ದಾರೆ. ಅವರಂತೆ ಕೆಲಸ ಮಾಡುವವರು ಇಲ್ಲಿನವರು ಯಾರೂ ತಯಾರಿಲ್ಲವಲ್ಲ. ನೀವು ಅವರಂತೆ ಕೆಲಸ ಮಾಡಬಲ್ಲಿರಾ ?” ಎಂದು ಮರುಪ್ರಶ್ನೆ ಎಸೆದರು.
ಕಾತ್ರೆಯವರು ಸುಮ್ಮನಾಗಲಿಲ್ಲ. ಬಿಲಾಸಪುರದಲ್ಲಿ ಮತಾಂತರ ವಿರೋಧಿ ಪ್ರದರ್ಶನ ನಡೆಸಿದರು. ಆದರೆ ಅದು ಕೇವಲ ಕುಷ್ಠರೋಗಿಗಳಿಗೆ ಸಂಬಂಧಿಸಿದ್ದರಿಂದ ಅಷ್ಟಾಗಿ ಯಾರ ಗಮನವನ್ನೂ ಸೆಳೆಯಲಿಲ್ಲ.
ಈ ನಡುವೆ ಕಾರ್ಯನಿಮಿತ್ತ ಬಿಲಾಸಪುರಕ್ಕೆ ಒಮ್ಮೆ ಸಂಘದ ಸರಸಂಘಚಾಲಕ ಗುರೂಜಿಯವರು ಬಂದಿದ್ದಾಗ ಕಾತ್ರೆಯವರು ಈ ವಿಷಯವನ್ನು ಅವರಿಗೆ ವಿವರವಾಗಿ ತಿಳಿಸಿದರು. ಗುರೂಜಿಯವರ ಉತ್ತರ : “ಈ ಪ್ರದರ್ಶನ, ಪ್ರತಿಭಟನೆಗಳಿಂದ ಪ್ರಯೋಜನವಿಲ್ಲ. ನಾವೇ ಇಂತಹ ರೋಗಿಗಳ ಸೇವೆಗೆ ಮುಂದಾಗಬೇಕು. ನೀವಂತೂ ಸಂಘದ ಸ್ವಯಂಸೇವಕರು ಮತ್ತು ಸ್ವತಹ ಕುಷ್ಠರೋಗ ಪೀಡಿತರಾಗಿದ್ದೀರಿ. ನೀವೇ ಯಾಕೆ ರೋಗಪೀಡಿತರ ನೆರವಿಗೆ ಧಾವಿಸಬಾರದು?” ಕಾತ್ರೆಯವರಿಗೆ ಜ್ಞಾನೋದಯವಾಗಿ ಸ್ಥಳೀಯ ಸಂಘದ ಕಾರ್ಯಕರ್ತರ ನೆರವು ಪಡೆದು ಕುಷ್ಠ ನಿವಾರಕ ಸಂಘವನ್ನು ಸ್ಥಾಪಿಸಿದರು. ಸರ್ಕಾರದ ನೆರವಿಗೆ ಕೈ ಚಾಚದೆ ದಾನಿಗಳ ನೆರವಿನಿಂದಲೇ ಕುಷ್ಠ ರೋಗಿಗಳ ಆರೈಕೆಯಲ್ಲಿ ನಿರತರಾದರು. ಸೇವೆ ಮಾಡುತ್ತಾ ಮಾಡುತ್ತಾ ಗ್ರಾಮವಾಸಿಗಳಿಗೆ ಅವರೊಬ್ಬ ‘ಬಾಬಾ’ ಆದರು. ಸಾಮಾನ್ಯ ಸ್ವಯಂಸೇವಕರಾಗಿದ್ದ ಅವರನ್ನು ಸಂತನೊಬ್ಬನ ಎತ್ತರಕ್ಕೇರಿಸಲು ಕಾರಣರಾದವರು ಮಾತ್ರ ಗುರೂಜಿಯವರು. ಕುಶಲ ಯೋಜಕನೊಬ್ಬನಿಗೆ ಜಗತ್ತಿನಲ್ಲಿ ಅಪ್ರಯೋಜಕ ವ್ಯಕ್ತಿ ಎನ್ನಬಹುದಾದವರು ಯಾರೂ ಇಲ್ಲ ಎಂಬುದು ಕಾತ್ರೆಯವರ ವಿಷಯದಲ್ಲೂ ಸಾಬೀತಾಯಿತು. ಈಗ ಕಾತ್ರೆ ನಗರದಲ್ಲಿ 20 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ, ಆಂಬುಲೆನ್ಸ್ ಸೇವೆ, ರೋಗಿಗಳ ಪುನರ್ವಸತಿ ಕೇಂದ್ರ, ರೋಗಪೀಡಿತರ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಇತ್ಯಾದಿ ವ್ಯವಸ್ಥೆ ಮಾಡಲಾಗಿದೆ.
ಕುಷ್ಠ ನಿವಾರಕ ಸಂಘದ ಕಾರ್ಯ ಉತ್ತರಾಂಚಲ, ಕರ್ನಾಟಕ, ಮಹಾರಾಷ್ಟ್ರ , ಪಂಜಾಬ್ ರಾಜ್ಯಗಳಿಗೂ ವಿಸ್ತರಿಸಿದೆ. ಗುಲ್ಬರ್ಗ ಸಮೀಪದ ಗಾಣಗಾಪುರದಲ್ಲಿ ವೆಂಕಟೇಶ ಗುರು ನಾಯಕ್ ಎಂಬ ಸಂಘದ ಹಿರಿಯ ಪ್ರಚಾರಕರು ಕುಷ್ಠನಿವಾರಕ ಸಂಘದ ಕಾರ್ಯಕ್ಕಾಗಿಯೇ ಬದುಕು ಮೀಸಲಿಟ್ಟು ಇಹಲೋಕ ತ್ಯಜಿಸಿದರು .
ವನವಾಸಿ ಕಲ್ಯಾಣ ಆಶ್ರಮ
ವನವಾಸಿ ಕಲ್ಯಾಣ ಆಶ್ರಮ ಆರಂಭವಾಗಿದ್ದು ಕೂಡ ಮಧ್ಯಪ್ರದೇಶದ ಜಶ್ಪುರದಲ್ಲಿ (ಈಗ ಛತ್ತೀಸ್ಗಡಕ್ಕೆ ಸೇರಿದೆ). ವಿಶಾಲವಾದ ವನವಾಸಿ ಸಮುದಾಯದ ಏಳಿಗೆಗಾಗಿ, ಅವರನ್ನು ಮುಖ್ಯ ಪ್ರವಾಹದಲ್ಲಿ ಒಂದಾಗಿಸುವ ಹಿನ್ನೆಲೆಯಲ್ಲಿ ಈ ಸಂಘಟನೆ ಪ್ರಾರಂಭವಾಗಿದ್ದು 1952ರಲ್ಲಿ.
ಭಾರತ ಸ್ವತಂತ್ರಗೊಂಡ ಆರಂಭದ ದಿನಗಳಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಆಗಿದ್ದವರು ಪಂಡಿತ ರವಿಶಂಕರ ಶುಕ್ಲಾ ಅವರು. ಅವರೊಮ್ಮೆ ಜಶಪುರಕ್ಕೆ ಹೋಗಿದ್ದಾಗ ಅಲ್ಲಿನ ಠಾಣೆಯ ಬುಡಕಟ್ಟು ಸಮುದಾಯದವರಿಂದ ಶುಕ್ಲ ವಿರುದ್ಧ ಭಾರೀ ಕಪ್ಪು ಬಾವುಟ ಪ್ರದರ್ಶನ ನಡೆಯಿತು. ‘ಶುಕ್ಲಾ ಗೋ ಬ್ಯಾಕ್’ ‘ಜಾರ್ಖಂಡ್ ಜಿಂದಾಬಾದ್’ ಮುಂತಾದ ಘೋಷಣೆಗಳು ಮೊಳಗಿದವು. ಶುಕ್ಲಾರಿಗೆ ಇದು ಅನಿರೀಕ್ಷಿತ. ಈ ಪ್ರದರ್ಶನದ ಹಿಂದೆ ವಿದೇಶಿ ಮಿಷನರಿಗಳ ಕೈವಾಡವಿದ್ದದ್ದು ಅನಂತರ ಅವರಿಗೆ ತಿಳಿಯಿತು. ಆ ದಿನಗಳಲ್ಲಿ ಶಿಕ್ಷಣ ಮತ್ತು ಜನಕಲ್ಯಾಣ ಖಾತೆಗಳು ಮಿಷನರಿಗಳ ಕೈಗೊಂಬೆಗಳಾಗಿದ್ದವು. ಸರ್ಕಾರಿ ನೌಕರರಲ್ಲೂ ಬಹುತೇಕರು ಮಿಷನರಿಗಳ ಅಂಕಿತದಲ್ಲಿರುವುದು ಮುಖ್ಯಮಂತ್ರಿಗಳ ಗಮನಕ್ಕೆ ಬಂದಿತು.
ಸಾತ್ವಿಕರೂ ದೇಶಭಕ್ತರೂ ಆಗಿದ್ದ ಶುಕ್ಲಾ, ಈ ಪರಿಸ್ಥಿತಿಯನ್ನು ಸರಿಪಡಿಸಬೇಕೆಂದು ರಮಾಕಾಂತ ಕೇಶವ ದೇಶಪಾಂಡೆ (ಬಾಳಾಸಾಹೇಬ ದೇಶಪಾಂಡೆ) ಎಂಬವರನ್ನು ಜಶಪುರದ ವಿಭಾಗ ಅಧಿಕಾರಿಯಾಗಿ ನೇಮಿಸಿದರು.
ದೇಶಪಾಂಡೆ 1942ರ ‘ಚಲೇಜಾವ್ ಚಳವಳಿ’ಯ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದ ಪ್ರಾಮಾಣಿಕ ವ್ಯಕ್ತಿ. ಜೊತೆಗೆ ಅವರು ಸಂಘದ ಸ್ವಯಂಸೇವಕರೂ ಆಗಿದ್ದರಿಂದ ಕ್ರೈಸ್ತ ಮಿಷನರಿಗಳ ಪಾಲಿಗೆ ಅವರೊಬ್ಬ ಶತ್ರುವಾಗಿ ಕಾಣಿಸಿದ್ದು ಸಹಜ. ಹಾಗಾಗಿ ಆಧಾರರಹಿತ ಆರೋಪಗಳನ್ನು ಹೊರಿಸಿ, ದೇಶಪಾಂಡೆ ಅವರನ್ನು ಪದೇ ಪದೇ ವರ್ಗಾವಣೆ ಮಾಡಿಸುವ ಕಿತಾಪತಿಯಲ್ಲಿ ಮಿಷನರಿಗಳು ತೊಡಗಿದರು.
ಒಮ್ಮೆ ಕಾರ್ಯನಿಮಿತ್ತ ದೇಶಪಾಂಡೆಯವರು ನಾಗಪುರಕ್ಕೆ ಬಂದಿದ್ದಾಗ ಗುರೂಜಿಯವರ ಗಮನಕ್ಕೆ ಇವೆಲ್ಲ ಮಾಹಿತಿಗಳನ್ನು ತಿಳಿಸಿ ಪರಿಹಾರ ಬಯಸಿದರು. ಎಲ್ಲವನ್ನು ಶಾಂತವಾಗಿ ಆಲಿಸಿದ ಗುರೂಜಿಯವರು ಕೊನೆಯಲ್ಲಿ “ಈ ಕ್ಷೇತ್ರದಲ್ಲಿ ಪರಿವರ್ತನೆ ತರಬೇಕೆಂಬ ಇಚ್ಛೆ ನಿಮಗಿದ್ದಲ್ಲಿ ಸರ್ಕಾರಿ ನೌಕರಿಯಲ್ಲಿದ್ದು ಅದನ್ನು ಮಾಡಲು ಸಾಧ್ಯವಿಲ್ಲ. ನೀವು ಹೇಗೂ ವಕೀಲರಿದ್ದೀರಿ. ಹಾಗಿರುವಾಗ ಸರ್ಕಾರಿ ನೌಕರಿಯಿಂದ ಮುಕ್ತರಾಗಿ ಸ್ವತಂತ್ರವಾಗಿ ವಕಾಲತ್ತು ನಡೆಸಿ ಸಂಪಾದಿಸಿ. ಆಗ ನಿಮಗೆ ಇಂತಹ ಕೆಲಸ ಮಾಡುವುದಕ್ಕೆ ಸಮಯವು ಧಾರಾಳವಾಗಿ ಲಭಿಸುತ್ತದೆ. ಸ್ವಾವಲಂಬಿಯಾಗಿ ನಿಮ್ಮ ಕೆಲಸ ಮುಂದುವರಿಸಿರಿ” ಎಂದು ಕಿವಿಮಾತು ಹೇಳಿದರು. ದೇಶಪಾಂಡೆ ಅವರಿಗೆ ಅದು ಮಾರ್ಗದರ್ಶಕ ಬೆಳಕಾಯಿತು. ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ ವಕೀಲಿ ವ್ಯಕ್ತಿ ಆರಂಭಿಸಿದರು. ಜೊತೆಗೆ ಸಂಘದ ಕಾರ್ಯಕರ್ತರ ನೆರವಿನೊಂದಿಗೆ ಜಶಪುರ ಪ್ರದೇಶದಲ್ಲಿ ವನವಾಸಿಗಳಲ್ಲಿ ದೇಶಪ್ರೇಮ, ಜಾಗೃತಿ ಮೂಡಿಸುವ ಕಾರ್ಯಕ್ಕೆ ತೊಡಗಿದರು. ಹೀಗೆ ಒಂಬತ್ತು ಮಂದಿ ವನವಾಸಿ ಬಂಧುಗಳನ್ನು ಸಂಘಟಿಸಿ 1952 ಡಿಸೆಂಬರ್ 26ರಂದು ಆರಂಭವಾಗಿದ್ದೇ ವನವಾಸಿ ಕಲ್ಯಾಣ ಆಶ್ರಮ.
ಮಧ್ಯಪ್ರದೇಶ ಸರಕಾರವು 1954 ರಲ್ಲಿ ವಿದೇಶಿ ಮಿಷನರಿಗಳ ಕೂಲಂಕಷ ತಪಾಸಣೆಗಾಗಿ ಜಸ್ಟಿಸ್ ಭವಾನಿ ಶಂಕರ್ ನಿಯೋಗಿ ಅಧ್ಯಕ್ಷತೆಯಲ್ಲಿ ಒಂದು ಆಯೋಗವನ್ನು ರಚಿಸಿತು. 1958ರಲ್ಲಿ ಕೇಂದ್ರ ಸರ್ಕಾರವು ಢೇಬರ್ ಬಾಯೀ ಅವರ ಅಧ್ಯಕ್ಷತೆಯಲ್ಲಿ ಇದೇ ಕಾರ್ಯಕ್ಕಾಗಿ ಇನ್ನೊಂದು ಆಯೋಗವನ್ನು ರಚಿಸಿತು. ಕಲ್ಯಾಣ ಆಶ್ರಮದ ಕೆಲಸಕ್ಕೆ ಮಿಷನರಿಗಳಿಂದ ಪದೇ ಪದೇ ಅಡ್ಡಗಾಲು ಶುರುವಾಯಿತು. ಮಧ್ಯಪ್ರದೇಶ ಸರಕಾರ ಒಮ್ಮೆ ಕಲ್ಯಾಣ ಆಶ್ರಮದ ಕೆಲಸಕ್ಕೆ ಸರ್ಕಾರಿ ಅನುದಾನವನ್ನೂ ಘೋಷಿಸಿತ್ತು. ಆದರೆ ಮಿಷನರಿಗಳ ಕುತಂತ್ರದಿಂದ ಅದು ಕೈಗೆ ಸಿಗದಂತಾಯಿತು. ಆಗಲೂ ಗುರೂಜಿಯವರು ಹೇಳಿದ್ದು “ನಮ್ಮೆಲ್ಲ ಕೆಲಸವನ್ನು ಸ್ವಾವಲಂಭಿಯಾಗಿ ಮಾಡಬೇಕು. ನಾವು ಆತ್ಮನಿರ್ಭರರಾಗಿದ್ದಾಗ ಮಾತ್ರ ಕಾರ್ಯಕ್ಕೆ ಯಶಸ್ಸು ಲಭಿಸುತ್ತದೆ” ಅಲ್ಲಿಂದಾಚೆಗೆ ದೇಶಪಾಂಡೆಯವರ ಚಿಂತನಾ ಧಾಟಿಯೇ ಬದಲಾಯಿತು.
ಸಂಘಟನೆಯನ್ನು ಬೆಳೆಸಲು ಪಣತೊಟ್ಟರು. ತಮ್ಮ ಇಡೀ ಬದುಕನ್ನೇ ಅದಕ್ಕಾಗಿ ಮುಡುಪಾಗಿಟ್ಟರು. 1977ರ ಅಕ್ಟೋಬರ್ 19ರಂದು ಭಾರತದ ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ ಜಶಪುರದ ಕಲ್ಯಾಣ ಆಶ್ರಮಕ್ಕೆ ಭೇಟಿ ನೀಡಿ ಪ್ರಶಂಸಿಸಿ ‘ನಿಮ್ಮ ಕಾರ್ಯಕ್ಕೆ ನಾನು ಹೇಗೆ ನೆರವಾಗಲಿ” ಎಂದು ಪ್ರಶ್ನಿಸಿದಾಗ ದೇಶಪಾಂಡೆ ಹೇಳಿದ್ದು “ಸರ್ಕಾರದಿಂದ ಯಾವುದೇ ಅನುದಾನ ಪಡೆಯಬಾರದೆಂಬುದೇ ಕಲ್ಯಾಣ ಆಶ್ರಮದ ನಿಲುವು” ಅಚ್ಚರಿ ಪಡುವ ಸರದಿ ಮೊರಾರ್ಜಿಯವರದಾಗಿತ್ತು.
ಬಾಳಾಸಾಹೇಬ ದೇಶಪಾಂಡೆಯವರ ಅಹರ್ನಿಶಿ ಪ್ರಯತ್ನದಿಂದಾಗಿ ವನವಾಸಿ ಬುಡಕಟ್ಟು ಜನರ ಕತ್ತಲೆಯ ಬದುಕಿನಲ್ಲೂ ಬೆಳಕು ಪ್ರಜ್ವಲಿಸಿತು. ನಾವು ಕೂಡ ಇದೇ ದೇಶದ ಅವಿಭಾಜ್ಯ ಅಂಗವೆಂಬ ಹೆಮ್ಮೆ ಅವರಲ್ಲಿ ಉದಯಿಸಿತು.
ಸಂಘದ ಕೆಲಸ ಸರ್ವಸ್ಪರ್ಶಿ, ಸರ್ವವ್ಯಾಪಿ. ಎಲ್ಲರನ್ನೂ ಈ ಸಮಾಜದ ಮುಖ್ಯ ಪ್ರವಾಹದೊಂದಿಗೆ ಬೆಸೆಯುವ ಅನುಪಮ ಕಾರ್ಯ. ಒಡೆಯುವುದಲ್ಲ, ಆದರೆ ಜೋಡಿಸುವ ಮೌನ ಕಾಯಕ. ಈ ಕಾಯಕ ನಿರಂತರ. ಸಂಘದ ಉದ್ದ, ಅಗಲ , ಆಳದ ಬಗ್ಗೆ ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸುವ ಪ್ರಗತಿಪರರೆನಿಸಿಕೊಂಡವವರಿಗೆ ಇದೆಲ್ಲ ಅರ್ಥವಾಗುವುದಿಲ್ಲ, ಬಿಡಿ.