Krushi Prayog Parivar organised this seminar

ನೆಡುತೋಪಿನಲ್ಲಿ ಮತ್ತೆ ಮತ್ತೆ ಅರಣ್ಯ ಕಾನೂನು ಉಲ್ಲಂಘನೆ

ಅರಣ್ಯ ಭೂಮಿಯಲ್ಲಿ ಅಕೇಸಿಯಾ ಬೇಡವೇ ಬೇಡ!

 ತೀರ್ಥಹಳ್ಳಿಯಲ್ಲಿ ಅಕೇಸಿಯಾ ಮಾತುಕತೆ

 ತೀರ್ಥಹಳ್ಳಿ, Ausust 11ಪಶ್ಚಿಮ ಘಟ್ಟದಲ್ಲಿ ಅಕೇಸಿಯಾ ನೆಡುತೋಪುಗಳನ್ನು ಸಂಪೂರ್ಣ ನಿಷೇಧಿಸಬೇಕು. ಈಗಾಗಲೇ ಕಣಿವೆಗಳಲ್ಲಿ ಬೆಳೆಸಲಾದ ನೆಡುತೋಪನ್ನು ಬದಲಿಸಿ ಸ್ಥಳೀಯ ಸಸ್ಯ ಬೆಳೆಸುವ ಕಾರ್ಯ ನಡೆಯಬೇಕೆಂಬ ಒಕ್ಕೊರಲಿನ ಅಭಿಪ್ರಾಯ ಮಲೆನಾಡಿನಲ್ಲಿ ಅಕೇಸಿಯಾ ನೆಡುತೋಪುಗಳ ಕುರಿತ ಕಾರ್ಯಾಗಾರದಲ್ಲಿ ವ್ಯಕ್ತವಾಗಿದೆ. ವಿಶ್ವದ ಅತ್ಯಂತ ಪ್ರಮುಖ ಜೀವ ಸಂಕುಲಗಳ ತಾಣವನ್ನು ಅಕೇಸಿಯಾ ಕಣಿವೆಯಾಗಿ ಬದಲಿಸುತ್ತಿರುವ ಅರಣ್ಯ ಇಲಾಖೆ ಹಾಗು ಮೈಸೂರು ಪೇಪರ್ ಮಿಲ್ಸ್ ಕೃತ್ಯವನ್ನು ಸಭೆ ತೀವ್ರವಾಗಿ ಖಂಡಿಸಿದೆ.

Krushi Prayog Parivar organised this seminar

ತೀರ್ಥಹಳ್ಳಿಯ ಪುರುಷೋತ್ತಮ ಸಭಾಂಗಣದಲ್ಲಿ ಅಗಸ್ಟ್ 11ರ ಗುರುವಾರ ಇಡೀ ದಿನ ಅಕೇಸಿಯಾ ಕುರಿತ ಮಾತುಕತೆ ಕಾರ್ಯಕ್ರಮ  ನಡೆಯಿತು.ಪುರುಷೋತ್ತಮ ಸಾವಯವ ಕೃಷಿ ಪರಿವಾರ,ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನ ಹಾಗು ಮಲೆನಾಡು ಜಾಗೃತ ವೇದಿಕೆಗಳು ಸಂಯುಕ್ತವಾಗಿ ಕಾರ್ಯಕ್ರಮ ಸಂಘಟಿಸಿದ್ದವು. ಲೇಖಕ ಶಿವಾನಂದ ಕಳವೆ ಬರೆದ  ಪಶ್ಚಿಮ ಘಟ್ಟದ ಅಕೇಸಿಯಾ ನೆಡುತೋಪುಗಳ ಕುರಿತ ಅಧ್ಯಯನ ಗ್ರಂಥ ಅರಣ್ಯಜ್ಞಾನದ ಹತ್ಯಾಕಾಂಡ ಪುಸ್ತಕ ಬಿಡುಗಡೆ ವಿಶೇಷ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಯಿತು.

ಅಕೇಸಿಯಾ ನೆಡುತೋಪುಗಳ ವಿರುದ್ದ ಕಳೆದ ಮೂರು ದಶಕಗಳಿಂದ ಹೋರಾಡುತ್ತಿರುವ ತೀರ್ಥಹಳ್ಳಿ,ಕೊಪ್ಪ,ಶಿವಮೊಗ್ಗ ಪ್ರದೇಶಗಳಿಂದ 170ಕ್ಕೂ ಹೆಚ್ಚು ಕೃಷಿಕರು,ಪರಿಸರ ಚಿಂತಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ನೋವು ತೋಡಿಕೊಂಡರು.ಗೋಮಾಳ,ಸೊಪ್ಪಿನಬೆಟ್ಟ  ಸಮಸ್ಯೆ ವಿವರಿಸಿದರು. ತೀರ್ಥಹಳ್ಳಿಯ ಭಾರತೀಪುರ,ಗುಡ್ಡೆಕೊಪ್ಪಗಳಲ್ಲಿ ಕೃಷಿ ನೆಲವನ್ನು ಉಳುಮೆ ಮಾಡಿದಂತೆ ರಿಪ್ಪಿಂಗ್ ಯಂತ್ರದಿಂದ ಉಳುಮೆ ಮಾಡಿ ಅಕೇಸಿಯಾ ನೆಡಲಾಗಿದೆ. ಅಪಾರ ಪ್ರಮಾಣದ ಮಣ್ಣು ಸವಕಳಿಯಾಗಿದೆ. ಶರಾವತಿ ನದಿ ಮೂಲವಾದ ಅಂಬುತೀರ್ಥದಲ್ಲಿ ಎಳೆಯ ಅಕೇಸಿಯಾ ಗಿಡಗಳಿಗೆ ಗೆದ್ದಲು ತಿನ್ನುತ್ತವೆಂದು ಥಿಮೇಟ್ ವಿಷ ಹಾಕಲಾದ ಆತಂಕಕಾರಿ ಕೃತ್ಯ ನಡೆದಿದೆ.ಬಿದಿರು,ನೈಸರ್ಗಿಕ ಗಿಡಗಳನ್ನು ನಾಶಪಡಿಸುತ್ತ ಅಕೇಸಿಯಾ ಬೆಳೆಸುವ ಕಾರ್ಯ  ನಡೆಯುತ್ತಿರುವದನ್ನು ಭಾಗವಹಿಸಿದವರು ದಾಖಲೆ ಸಹಿತ ವಿವರಿಸಿದರು.

ಜಾಗತೀಕರಣಕ್ಕೂ, ಮಲೆನಾಡಿನ ಅಕೇಸಿಯಾಕರಣಕ್ಕೂ ನೇರ ಸಂಬಂಧವಿದೆ. ಮಾರುಕಟ್ಟೆ ಬೆಂಬಲಿತ ಆರ್ಥಿಕನೀತಿಯನ್ನು ಅರಣ್ಯ ಅಭಿವೃದ್ಧಿಯಲ್ಲಿ ಅಳವಡಿಸಿ ಎಕಜಾತಿಯ ನೆಡುತೋಪು ಅಭಿವೃದ್ಧಿ ಮಾಡಲಾಗಿದೆಯೆಂದು ಪರಿಸರ ತಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ವಿವರಿಸಿದರು. ಇಂದು ಅಕೇಸಿಯಾವನ್ನು ಜನ ಒಪ್ಪಿದ್ದಾರೆಂದು ಅನೇಕರು ಹೇಳುತ್ತಾರೆ. ಬೇರೆ ಸಸ್ಯಗಳಿಲ್ಲದ ಕಾರಣಕ್ಕೆ ಇದರ ಅವಲಂಬನೆ ಜಾಸ್ತಿಯಾಗಿದೆ.ನಮ್ಮ ದನಕರುಗಳು ತೀವ್ರವಾಗಿ ಹಸಿದಾಗ ಗೋಡೆಗೆ ಹಾಕಿದ ಸಿನೆಮಾ ಪೋಸ್ಟರ್ ತಿನ್ನುತ್ತವೆ. ಹಾಗಂತ ದನಕರುಗಳ ಮುಖ್ಯ ಆಹಾರ ಸಿನೆಮಾ ಪೋಸ್ಟರ್ ಎಂದು ಹೆಚ್ಚು ಹೆಚ್ಚು ಪೋಸ್ಟರ್ ಹಚ್ಚಲು ತೀರ್ಮಾನಿಸುವಂತಹ ಮೂರ್ಖತನ ಇದು ಎಂದರು.

ರಾಜ್ಯದಲ್ಲಿ ಅಕೇಸಿಯಾ ನೆಡುತೋಪಿನ ಪರಿಣಾಮಗಳನ್ನು ಬರಹಗಾರ ಶಿವಾನಂದ ಕಳವೆ ಸ್ಲೈಡ್ಸ್‌ಗಳ ಮೂಲಕ ಪ್ರಸ್ತುತಪಡಿಸಿದರು. ಪಶ್ಚಿಮ ಘಟ್ಟದಲ್ಲಿ ಅಕೇಸಿಯಾ ನಿಷೇಧಿಸುವ ಸುತ್ತೋಲೆ ದೊಡ್ಡ ಮೋಸವಾಗಿದೆ. ಕ್ರಿ,ಶ 1994ರಲ್ಲಿ ಅಕೇಸಿಯಾ ಬಗೆಗೆ ಇದ್ದ ಪ್ರಸ್ಥಾಪವನ್ನು ಪುನರುಚ್ಚರಿಸಲಾಗಿದೆ. ನಿಯಮಮೀರಿ ಕಣಿವೆಗಳಲ್ಲಿಯೂ ಅಕೇಸಿಯಾ ಬೆಳೆಸುವ ಕೆಲಸ ಈಗಲೂ ನಡೆಯುತ್ತಿದೆ. ಗ್ರಾಮ ಅರಣ್ಯ ಸಮಿತಿಗೆ ಆದಾಯದ ಆಮಿಷತೋರಿಸಿ ಅಕೇಸಿಯಾ ಅಭಿವೃದ್ಧಿಯಾಗಿದೆ. ನೆಡುತೋಪು ಕಟಾವಿನಲ್ಲಿ ಅರಣ್ಯ ಹಾಗು ಪರಿಸರ ಕಾನೂನುಗಳ ಸ್ಪಷ್ಟ ಉಲ್ಲಂಘನೆ ನಡೆದಿದೆ.ತನಿಖೆ ನಡೆಸಿದರೆ ಮೈನಿಂಗ್ ಕರ್ಮಕಾಂಡದಂತೆ ದೊಡ್ಡ ಹಗರಣ ಬೆಳಕಿಗೆ ಬರುತ್ತದೆ. ಪಶ್ಚಿಮ ಘಟ್ಟದ ರಕ್ಷಣೆಗೆ ಅರಣ್ಯ ಇಲಾಖೆಗೆ ಪರ್ಯಾಯವಾಗಿ ಸಮಾಜದ ಪರಿಸರ ಆಸಕ್ತರ ಪಶ್ಚಿಮ ಘಟ್ಟ ರಕ್ಷಣಾ ಪಡೆ ಕೆಲಸ ಮಾಡುವ ಅಗತ್ಯವಿದೆಯೆಂದು ಕಳವೆ ಅಭಿಪ್ರಾಯ ಪಟ್ಟರು.  ಪಶ್ಚಿಮ ಘಟ್ಟದ ಅಕೇಸಿಯಾ ನೆಡುತೋಪುಗಳ ಬಗೆಗೆ ಮಲೆನಾಡು ಜಾಗೃತ ವೇದಿಕೆ ೧೪ವರ್ಷಗಳಿಂದ ನಡೆಸಿದ ನ್ಯಾಯಾಲಯ ಹೋರಾಟದ ವಿವರಗಳನ್ನು ಮಲೆನಾಡು ಜಾಗೃತ ವೇದಿಕೆ ಮುಖ್ಯಸ್ಥ ಕೆ.ಜಿ.ಶ್ರೀಧರ ಪ್ರಸ್ತುತಪಡಿಸಿದರು. ಸತತ ಹೋರಾಟದ ಪರಿಣಾಮ  3812 ಹೆಕ್ಟೇರ್ ಗೋಮಾಳ ಹಾಗು ೪೬೬೫ಹೆಕ್ಟೇರ್ ವನ್ಯಜೀವಿ ಸಂರಕ್ಷಣಾ ಪ್ರದೇಶಗಳು ಈಗ ಮೈಸೂರು ಪೇಪರ್ ಮಿಲ್ಸ್ ನೆಡುತೋಪು ವ್ಯಾಪ್ತಿಯಿಂದ ಹೊರಗಿಡುವ ನಿರ್ಧಾರವಾಗಿದೆ. ಮೂಲ ಒಪ್ಪಂದದಂತೆ ಎಮ್‌ಪಿಎಮ್ ಹೆಕ್ಟೇರಿಗೆ ೪೦ ಶ್ರೀಗಂಧದ ಗಿಡ ಬೆಳೆಸಬೇಕಿತ್ತು. ಇದರಿಂದ ಈಗ ೧೦.೦೦೦ಕೋಟಿ ಆದಾಯ ದೊರೆಯಬೇಕಿತ್ತು. ಆದರೆ ಶ್ರೀಗಂಧ ನೆಡಲಾಗಿಲ್ಲ. ಸರಕಾರಕ್ಕೆ ಆದ ನಷ್ಟವನ್ನು ಎಮ್‌ಪಿಎಮ್  ತುಂಬಿಕೊಡಬೇಕು ಎಂದು ಆಗ್ರಹಿಸಿದರು. ಪ್ರತಿವರ್ಷ ನೆಡುತೋಪುಗಳಲ್ಲಿ ಅರಣ್ಯ ಕಾನೂನು ಉಲ್ಲಂಘನೆ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಕೈಕಟ್ಟಿ ಕುಳಿತಿದೆ. ಕಾನೂನು ಕಾಯುವವರು ಯಾರು ಎಂಬ ಪ್ರಶ್ನೆ ಉದ್ಬವಿಸಿದೆ ಎಂದು ಶ್ರೀಧರ ವಿಷಾದಿಸಿದರು. ಸಾವಯವ ಕೃಷಿ ಪರಿವಾರದ ಕಾರ್ಯಕರ್ತ ಸರು ದಿನೇಶ್ ಮಾತನಾಡಿ ಮಲೆನಾಡಿನ ನಮ್ಮ ಮಕ್ಕಳು ಕಾಡು ಹಣ್ಣುಗಳನ್ನು ಕಳಕೊಂಡಿದ್ದೇವೆ. ದನಕರುಗಳ ಮೇವು ಸಂಪೂರ್ಣ ನಾಶವಾಗಿದೆ ಎಂದರು.

ತಜ್ಞರ ವಿಷಯ ಮಂಡನೆಯ ನಂತರ ಮುಕ್ತ ಸಂವಾದ ಕಾರ್ಯಕ್ರಮ ನಡೆಯಿತು.ಪರ್ಯಾಯ ಶಕ್ತಿ ಮೂಲಗಳ ಬಗೆಗೆ ಅಧ್ಯಯನ ನಡೆಸುತ್ತಿರುವ ಶಂಕರಶರ್ಮ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕೃಷಿ ಪ್ರಯೋಗ ಪರಿವಾರದ ಅರುಣ್, ಮಲೆನಾಡು ಜಾಗೃತ ವೇದಿಕೆಯ ಡಾ.ಎ.ಎನ್.ನಾಗರಾಜ  ಸೇರಿದಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀವತ್ಸ ಚಿಕ್ಕನಬೈಲು ಠರಾವು ಮಂಡಿಸಿದರು.

ಮಲೆನಾಡಿನಲ್ಲಿ ಅಕೇಸಿಯಾ ಸೇರಿದಂತೆ ಎಕಜಾತಿಯ ನೆಡುತೋಪು ಅಭಿವೃದ್ಧಿಯನ್ನು  ತಡೆಯುವ ಅಗತ್ಯವಿದೆ. ನಮ್ಮ ಕಾಡಿನ ಬೇಗ ಬೆಳೆಯುವ ಸಸ್ಯಗಳನ್ನು ಗುರುತಿಸಿ ಅರಣ್ಯೀಕರಣದಲ್ಲಿ ಬಳಸುವ ಪ್ರಯತ್ನ ಮಾಡಲಾಗುವದು ಎಂದು ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಅಶೀಸರ ನುಡಿದರು. ಅವರು ತೀರ್ಥಹಳಿಯಲ್ಲಿ ನಡೆದ ಅಕೇಸಿಯಾ ನೆಡುತೋಪು ಚಿಂತನೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಕೇಸಿಯಾ ನಿಷೇಧ ಸುತ್ತೋಲೆ ವಿಶೇಷ ಮಹತ್ವವಿಲ್ಲದೇ ಹಳೆಯ ವಿಚಾರಗಳನ್ನು ಪ್ರಸ್ಥಾಪಿಸಿರುವದನ್ನು ಗಮನಿಸಿದ್ದೇನೆ. ನಿಜವಾದ ಅರ್ಥದಲ್ಲಿ ನಿಷೇಧಿಸಲು ಮುಂದೆ ಪ್ರಯತ್ನಿಸಲಾಗುವದೆಂದರು. ಶಾಲಾವನ,ದೇವರಕಾಡು ಮುಂತಾದ ಸ್ಥಳಗಳಲ್ಲಿ ಸ್ಥಳೀಯ ಸಸ್ಯ ಬೆಳೆಸಲು ಹೆಚ್ಚಿನ ಒತ್ತು ನೀಡಲಾಗುವದು ಎಂದರು. ಇದೇ ಸಂದರ್ಭದಲ್ಲಿ ಅಕೇಸಿಯಾ ಸಸ್ಯದ ಕುರಿತು ಶಿವಾನಂದ ಕಳವೆ ಬರೆದ ಪುಸ್ತಕ ಅರಣ್ಯಜ್ಞಾನದ ಹತ್ಯಾಕಾಡ ಕೃತಿ ಬಿಡುಗಡೆಗೊಳಿಸಿದರು. ಜಾಗೃತಿ ಮೂಡಿಸುವ ಉಪಯುಕ್ತ ಮಾಹಿತಿ ಕೃತಿಯಲ್ಲಿದೆ ಎಂದರು.

ಸಮಾರಂಭದಲ್ಲಿ ಪುರುಷೋತ್ತಮ ಸಾವಯವ ಕೃಷಿ ಪರಿವಾರದ ಅಧ್ಯಕ್ಷ ಶ್ರೀ ನರಸಿಂಹಮೂರ್ತಿ ಉಸ್ಥಿತರಿದ್ದರು. ಎ. ಎನ್.ನಾಗಭೂಷಣ ಕಾರ್ಯಕ್ರಮ ನಿರ್ವಹಿಸಿದರು.

 

Report: ಶಿವಾನಂದ ಕಳವೆ

Leave a Reply

Your email address will not be published.

This site uses Akismet to reduce spam. Learn how your comment data is processed.