ಸ್ವತಃ ಅಣ್ಣಾ ಹಜಾರೆ ಹೇಳುವಂತೆ ಇದು ಎರಡನೇ ಸ್ವಾತಂತ್ರ್ಯ ಸಂಗ್ರಾಮ. ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣವಾದಾಗಲೇ ನಿಜಾರ್ಥದ ಸ್ವಾತಂತ್ರ್ಯ ದೊರೆಯುವುದು. ಈ ನಿಟ್ಟಿನಲ್ಲಿ ಪ್ರತಿಯೋರ್ವ ಭಾರತೀಯನೂ ಇಂದು ತನ್ನ ಸಾಮಾಜಿಕ ಹೊಣೆಯರಿತುಕೊಳ್ಳಬೇಕಾಗಿದೆ. ಹಳ್ಳಿ – ನಗರಗಳಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟದ ಕೂಗನ್ನು ಮತ್ತಷ್ಟು ಬಲಗೊಳಿಸಬೇಕಾಗಿದೆ. ವೈಯಕ್ತಿಕ ಜೀವನದಲ್ಲಿ ಭ್ರಷ್ಟತೆಯ ಲವಲೇಶವೂ ತಾಕದಂತೆ ವ್ಯವಹರಿಸುವ ದೃಢ ನಿಶ್ಚಯದೊಂದಿಗೆ ಈ ಸಂಗ್ರಾಮದಲ್ಲಿ ದೇಶವಾಸಿಗಳೆಲ್ಲರೂ ಭಾಗಿಯಾಗಬೇಕಾಗಿದೆ.
120 ವರ್ಷಗಳ ಹಿಂದೆ, ತನ್ನ ವ್ಯಾಪಾರ ಜಾಲದ ಸ್ಥಾಪನೆಯಾದಂದಿನಿಂದ, ನಿಖರತೆಗೆ ಹೆಸರುವಾಸಿಯಾಗಿರುವ ಮುಂಬೈನ ಡಬ್ಬಾವಾಲಾಗಳು ಇದುವರೆಗೂ ಒಂದೇ ಒಂದು ದಿನ ಮುಷ್ಕರ ಮಾಡದೆ ವಿಶ್ವದಾಖಲೆ ಬರೆದಿದ್ದರು. ಕಚೇರಿ ಅಧಿಕಾರಿಗಳಿಗೆ ಅವರ ಮನೆಯಿಂದಲೇ (ಮಧ್ಯಾಹ್ನದ ಊಟವನ್ನು) ಸರಬರಾಜು ಮಾಡುವ ಈ ಸಾವಿರಾರು ಡಬ್ಬಾವಾಲಾಗಳು ಆಗಸ್ಟ್ 19 ರಂದು ಇಡೀ ದೇಶವೇ ಅಚ್ಚರಿಗೊಳ್ಳುವಂತೆ ಮೊತ್ತಮೊದಲ ಬಾರಿಗೆ ಮುಷ್ಕರ ಹೂಡಿ ಬೀದಿಗಿಳಿದರು. ವೇತನ ಹೆಚ್ಚಳಕ್ಕೆ, ಭಡ್ತಿ – ಪಿಂಚಣಿ ಇತ್ಯಾದಿಗಳಿಗಿನ ಮುಷ್ಕರವಲ್ಲವದು!
ಅವರಲ್ಲಿ ಮೊಳಗುತ್ತಿದ್ದ ಘೋಷಣೆ ‘ಅಣ್ಣಾ ಹಜಾರೇ ಕೀ ಜೈ !’
ಇಂದು ದೇಶದೆಲ್ಲೆಡೆ ಅಣ್ಣಾ ಹಜಾರೆ ಕರೆಕೊಟ್ಟಿರುವ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ನಭೂತೋ ಎಂಬ ಸ್ಪಂದನೆ ದೊರೆತಿದೆ. ಮೇಲೆ ಉಲ್ಲೇಖಿಸಿದ ಸಾಮಾನ್ಯವರ್ಗದ ಡಬ್ಬಾವಾಲಾಗಳಿಂದ ಮೊದಲ್ಗೊಂಡು ಸಾಫ್ಟ್ವೇರ್ ಉದ್ಯೋಗಿಗಳು, ವ್ಯಾಪಾರಿಗಳು, ವಿದ್ಯಾರ್ಥಿಗಳು, ಕೃಷಿಕರು, ಅಧ್ಯಾಪಕರು, ಕೂಲಿಕಾರ್ಮಿಕರು, ಚಿತ್ರನಟರು ಹೀಗೆ ಸಮಾಜದ ಎಲ್ಲ ಕ್ಷೇತ್ರಗಳ ಜನರು ಅಣ್ಣಾರ ಕೂಗಿಗೆ ಬಲ ತುಂಬಿದಿದ್ದಾರೆ. ಬತ್ತದ ಉತ್ಸಾಹದಿಂದ ಚಳುವಳಿಗೆ ಧುಮುಕಿದ್ದಾರೆ. ದೆಹಲಿಯಂತೂ ಪ್ರತ್ಯಕ್ಷ ರಣಾಂಗಣದಂತಾಗಿದೆ. ಕಾಂಗ್ರೆಸ್ ನೇತೃತ್ವದ ಕೇಂದ್ರಸರ್ಕಾರದ ಅಪಕ್ವ ಹಾಗೂ ಅಹಂಕಾರಿ ಧೋರಣೆಗಳಿಂದ ಜನಸಾಮಾನ್ಯನ ಅಂತರಾಳದಲ್ಲಿ ಮಡುಗಟ್ಟಿದ್ದ ಆಕ್ರೋಶದ ಕಟ್ಟೆಯೊಡೆದ ಪರಿಣಾಮವಾಗಿ ಭ್ರಷ್ಟಾಚಾರದ ವಿರುದ್ಧದ ಸಮರಕ್ಕೆ ಅನಿರೀಕ್ಷಿತ ಹಾಗೂ ಅಗಾಧ ಬೆಂಬಲ ವ್ಯಕ್ತವಾಗಿದೆ.
ಹೋರಾಟದ ಹಾದಿ
1979 ರ ಮೋರಾರ್ಜಿದೇಸಾಯಿ ಸರಕಾರದಲ್ಲಿ ಅಂದಿನ ಕಾನೂನು ಸಚಿವರಾಗಿದ್ದ ಖ್ಯಾತ ಸುಪ್ರೀಂ ಕೋರ್ಟ್ ನ್ಯಾಯವಾದಿ ಶಾಂತಿಭೂಷಣ್, ದೇಶದಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಪ್ರಬಲ ಕಾನೂನು ಅಗತ್ಯ ಎಂದು ಮನಗಂಡು ಲೋಕ್ಪಾಲ್ ಮಸೂದೆ ಜಾರಿಗೆ ತರಲು ಪ್ರಯತ್ನಿಸಿದರು. ಆದರೆ ಹಠಾತ್ತಾಗಿ ಮೊರಾರ್ಜಿ ಸರ್ಕಾರದ ಪತನದೊಂದಿಗೆ ಆ ಮಸೂದೆ ವಿಚಾರವೂ ಮೂಲೆಗುಂಪಾಯಿತು. ನಂತರ ಬಂದ ಕಾಂಗ್ರೆಸ್ ಸರ್ಕಾರಗಳು ಶಾಂತಿಭೂಷಣ್ರ ಈ ಮಸೂದೆಯ ವಿಚಾರವನ್ನು ನಿರ್ಲಕ್ಷಿಸುತ್ತಲೇ ಬಂದಿತ್ತು. ಆದರೆ ಮಸೂದೆ ಜಾರಿಯಾಗುವ ಪ್ರಯತ್ನದಿಂದ ಹಿಂದೆ ಸರಿಯದ ಶಾಂತಿಭೂಷನ್ ತನ್ನ ಮಗ, ಈಗಿನ ಸುಪ್ರೀಂಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಜತೆಗೂಡಿ ಅನೇಕ ಹೊಸ ಅಂಶಗಳುಳ್ಳ, ಭ್ರಷ್ಟಾಚರವನ್ನು ತಡೆಯಬಲ್ಲ ಪ್ರಬಲವಾಗಿರುವ ‘ಜನ್ಲೋಕ್ಪಾಲ್’ ಮಸೂದೆಯ ಕರಡನ್ನೂ ರಚಿಸಿದರು. ಇದಕ್ಕೆ ಅಣ್ಣಾ ಹಜಾರೆ, ಮ್ಯಾಗ್ಸೆಸೆ ಪ್ರಶಸ್ತಿ ವಿಚೇತ ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್, ಕರ್ನಾಟಕದ ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ, ದೇಶದ ಮೊತ್ತಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ಬೇಡಿ, ಸ್ವಾಮಿ ಅಗ್ನಿವೇಶ್ ಸೇರಿದಂತೆ ಹಲವಾರ ಸಲಹೆ-ಕೊಡುಗೆಯೂ ಪ್ರಾಪ್ತವಾಯಿತು. ಇದೀಗ ಕೇಂದ್ರಸರ್ಕಾರ ತರಲುದ್ದೇಶಿಸಿರುವ ಲೋಕ್ಪಾಲ್ ಮಸೂದೆಗಿಂತ ಪ್ರಬಲ ಹಾಗೂ ಭ್ರಷ್ಟಾಚಾರವನ್ನು ಸಮರ್ಥವಾಗಿ ಹತ್ತಿಕ್ಕಬಲ್ಲ ‘ಜನಲೋಕ್ಪಾಲ್’ ಮಸೂದೆ ಜಾರಿ ಆಗ್ರಹಿಸಿ ದೇಶಾದಾದ್ಯಂತ ಆಂದೋಲನ ಪ್ರಾರಂಭವಾಗಿದೆ.
ಕಾಂಗ್ರೆಸ್ಸಿಗೆ ಸಿಟ್ಟೇಕೆ?
ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತ ಅಣ್ಣಾಹಜಾರೆ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಹೆಸರುವಾಸಿ, 7 ನೇ ತರಗತಿ ಓದಿರುವ ಅಣ್ಣಾ, ಭಾರತೀಯ ಸೇನೆಯಲ್ಲಿ ಚಾಲಕರಾಗಿ ವೃತ್ತಿಯಲ್ಲಿದ್ದವರು. ಭಾರತ – ಪಾಕ್ ಯುದ್ಧದ ವೇಳೆ ಪವಾಡಸದೃಶ ಬದುಕುಳಿದ ಹಜಾರೆ ನಂತರ ಸೇನೆಯಿಂದ ಸ್ವಯಂನಿವೃತ್ತಿ ಪಡೆದು, ರಾಳೇಗಣಸಿದ್ಧಿ ಹಳ್ಳಿಗೆ ಮರಳಿದ ನಂತರ ತಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಿಕೊಂಡವರು. ಹಳ್ಳಿಯಲ್ಲಿದ್ದ ಮದ್ಯ, ತಂಬಾಕು, ಅವಲು ಸೇವನೆ ಇತ್ಯಾದಿ ಚಟಗಳನ್ನೇ ಕೇಂದ್ರವಾಗಿರಿಸಿ ಹೋರಾಡಿದ ಅಣ್ಣಾರ ಪ್ರಯತ್ನ ದಶಕಗಳ ನಂತರ ಫಲನೀಡಿತು. ರಾಳೇಗಣಸಿದ್ಧಿ ಎಂಬ ಹಳ್ಳಿಯ ಪ್ರತಿಯೋರ್ವನೂ ಜವಾಬ್ದಾರಿಯುತ ನಾಗರಿಕನಾಗಿ ರೂಪುಗೊಂಡು, ಗ್ರಾಮೀಣ ಅಭಿವೃದ್ಧಿಯ ಕಲ್ಪನೆಯನ್ನು ಸಾಕಾರಗೊಳಿಸಿ ವಿಶ್ವಮನ್ನಣೆ ಪಡೆಯಿತು. ಅಣ್ಣಾರ ಈ ಪ್ರಯತ್ನಕ್ಕೆ 1992 ರಲ್ಲಿ ಭಾರತದ ೩ನೇ ಅತ್ಯುಚ್ಚ ನಾಗರಿಕ ಪ್ರಶಸ್ತಿ ಪದ್ಮಭೂಷಣ ಒಲಿದುಬಂತು.
ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನಾ ಅಧಿಕಾರದಲ್ಲಿದ್ದಾಗ ಭ್ರಷ್ಟ ಸಚಿವರೊಬ್ಬರ ವಿರುದ್ದ ಹೋರಾಟದ ಕಹಳೆ ಮೊಳಗಿಸಿದ ಅಣ್ಣಾ, ನಂತರ ಬಂದ ಕಾಂಗ್ರೆಸ್ ಸರ್ಕಾರಗಳಿಗೂ ಬಿಸಿ ಮುಟ್ಟಿಸಿದವರು ತನ್ನ ಸರಳ ಬದುಕು, ನಿಷ್ಕಳಂಕ ವ್ಯಕ್ತಿತ್ವ, ತಾನು ನಂಬಿದ ಗಾಂಧೀ ಮೌಲ್ಯಗಳಿಂದ ಅಣ್ಣಾ ಹಜಾರೆ ಜನಸಾಮಾನ್ಯರ ಆಶಾಕಿರಣವಾಗಿ ಮಾರ್ಪಟ್ಟರು.
ಜನಲೋಕಪಾಲ ಮಸೂದೆ ಆಗ್ರಹದ ಕೂಗಿಗೆ ಅಣ್ಣಾ ಹಜಾರೆಯವರ ನೇತೃತ್ವ ದೊರೆಯಿತು. 2011ರ ಏಪ್ರಿಲ್ನಲ್ಲಿ ಅಣ್ಣಾಹಜಾರೆ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಕುಳಿತಾಗ ಇಡೀ ದೇಶದಲ್ಲೊಮ್ಮೆ ಸಂಚಲನ ಮೂಡಿತ್ತು. ಕೇಂದ್ರ ಸರಕಾರ ತಾನು ನಿಮ್ಮೆಲ್ಲಾ ಭರವಸೆ ಪೂರೈಸುವೆ ಎಂದು ಹೇಳಿತಾದರೂ, ನಂತರದ ದಿನಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುವಲ್ಲಿ ತನ್ನ ಉದಾಸೀನತೆ ತೋರಿತು. ಸರ್ಕಾರದ ಭರವಸೆಗಳೆಲ್ಲವೂ ಪೊಳ್ಳು ಎಂದು ಮೇಲ್ನೋಟಕ್ಕೆ ಸಾಬೀತಾಗುವುದರೊಂದಿಗೆ ಅಣ್ಣಾ ಹಜಾರೆ, 2011 ರ ಆಗಸ್ಟ್ 16 ರಂದು ಮತ್ತೆ ಸತ್ಯಾಗ್ರಹ ಕೂರುವ ಘೋಷಣೆ ಮಾಡಿದರು.
ಆಗಸ್ಟ್ 15 ರಂದು ದೆಹಲಿಯಲ್ಲಿ 65ನೇ ಸ್ವಾತಂತ್ರೋತ್ಸವದ ಸಂಭ್ರಮವಾದರೆ ಆಗಸ್ಟ್ 16ರಂದು 75ರ ವೃದ್ಧ ಅಣ್ಣಾಹಜಾರೆಯವರ ಸಂವಿಧಾನ ಬದ್ಧ ನಾಗರಿಕ ಪ್ರತಿಭಟನೆಯ ಹಕ್ಕನ್ನು ಕಸಿದುಕೊಂಡ ಕೇಂದ್ರ ಸರ್ಕಾರ ಸತ್ಯಾಗ್ರಹಕ್ಕೂ ಮುನ್ನ ಅಣ್ಣಾಹಜಾರೆಯವರನ್ನು ಬಂಧಿಸಿ, ತಿಹಾರ್ ಜೈಲಿಗೆ ಹಾಕಿ ತನ್ನ ದುರಹಂಕಾರ ಮೆರೆಯಿತು.
ಅಣ್ಣಾ ಬಂಧನಕ್ಕೆ ದೇಶದ ಉದ್ದಗಲ ವ್ಯಕ್ತವಾದ ಖಂಡನೆ ಪ್ರತಿಭಟನೆಗೆ ಎಳ್ಳಷ್ಟೂ ಚಿಂತಿಸದ ಪ್ರಧಾನಿ ಸಂಸತ್ತಿನಲ್ಲಿ ಹೇಳಿದ್ದು ಹೀಗೆ, ‘ಅಣ್ಣಾ ಹಜಾರೆ ಅವರು ತಮಗೆ ಸರಿ ಎನಿಸುವ ಲೋಕಪಾಲ ಮಸೂದೆಯನ್ನು ರಾಷ್ಟ್ರದ ಮೇಲೆ ಹೇರಲು ಹೊರಟಿದ್ದಾರೆ. ಸಂಪೂರ್ಣ ತಪ್ಪು ಕಲ್ಪನೆಗಳಿಂದ ತುಂಬಿರುವ ಅವರ ಮಾರ್ಗವು ಸಂಸದೀಯ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ!’.
ಪ್ರಧಾನಿಯ ಈ ಹೇಳಿಕೆ ಕೇಂದ್ರ ಸರಕಾರದ ಅಹಂಕಾರವನ್ನು ಮತ್ತೆ ಸಾಬೀತು ಪಡಿಸಿದೆ ಎಂದು ರಾಜ್ಯ ಸಭೆಯ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಗುಡುಗಿದರು. ಅಣ್ಣಾ ಹಜಾರೆಯವರನ್ನು ಬಂಧಿಸಿದ ಕ್ರಮವನ್ನು ಬಿ.ಜೆ.ಪಿ, ಎಡಪಕ್ಷಗಳು ಸೇರಿದಂತೆ ಸ್ವತಃ ಹಲವಾರು ಕಾಂಗ್ರೆಸ್ ಧುರೀಣರು ಖಂಡಿಸಿದ್ದಾರೆ.
ಗಾಂಧಿ ಹೆಸರನ್ನೇ ಬಂಡವಾಳವಾಗಿರಿಸಿ ಅಧಿಕಾರದ ಪೀಠದಲ್ಲಿರುವ ಕಾಂಗ್ರೆಸ್, ಜೀವನದ ಪ್ರತಿಕ್ಷಣದಲ್ಲೂ ಅಕ್ಷರಶಃ ಗಾಂಧೀವಾದವನ್ನು ಪಾಲಿಸುತ್ತಿರುವ ಅಣ್ಣಾಹಜಾರೆಯವರನ್ನು ನಡೆಸಿಕೊಂಡ ರೀತಿ ಇಡೀ ದೇಶವನ್ನೇ ರೊಚ್ಚಿಗೆಬ್ಬಿಸಿದೆ. ಬಂಧನದ ದಿನಗಳಲ್ಲಿ, ಜೈಲಿನಿಂದ ಹೊರಬಂದು ರಾಮ್ಲೀಲಾ ಮೈದಾನದಲ್ಲಿ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದಾರೆ.
ಕರ್ನಾಟಕದಲ್ಲಿ ಅಣ್ಣಾಹಜಾರೆ ಆಂದೋಲನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಭ್ರಷ್ಟಾಚಾರ ವಿರೋಧಿ ಹೋರಾಟದ ಕಾವು ತೀವ್ರಗೊಂಡಿದೆ. ರಾಜ್ಯ ಮತ್ತು ಕೇಂದ್ರ – ಎರಡೂ ಕಡೆ ಭ್ರಷ್ಟ ಸರ್ಕಾರಗಳನ್ನು ಕಂಡು ರೋಸಿ ಹೋಗಿರುವ ಕನ್ನಡಿಗ ಹೋರಾಟಗಾರರು, ವಿದ್ಯಾರ್ಥಿಗಳು, ರೈತರು ಸೇರಿದಂತೆ ಕೋಟ್ಯಾಂತರ ಮಂದಿ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಕೈಜೋಡಿಸಿದ್ದಾರೆ. ರಾಜ್ಯದಲ್ಲಿ ಆಗಸ್ಟ್ 17ರಂದು ನಡೆದ ಧರಣಿಯಲ್ಲಿ 4 ಲಕ್ಷಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳನ್ನು ಆಂದೋಲನದಲ್ಲಿ ತೊಡಗಿಸಿಕೊಂಡ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸೇರಿದಂತೆ ಸಂಘಪರಿವಾರದ ಅನೇಕ ಸಂಘಟನೆಗಳು ಅಣ್ಣಾ ಹೋರಾಟಕ್ಕೆ ಬೆಂಬಲ ಸೂಚಿಸಿದೆ.
ಸ್ವತಃ ಅಣ್ಣಾ ಹಜಾರೆ ಹೇಳುವಂತೆ ಇದು ಎರಡನೇ ಸ್ವಾತಂತ್ರ್ಯ ಸಂಗ್ರಾಮ. ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣವಾದಾಗಲೇ ನಿಜಾರ್ಥದ ಸ್ವಾತಂತ್ರ್ಯ ದೊರೆಯುವುದು. ಈ ನಿಟ್ಟಿನಲ್ಲಿ ಪ್ರತಿಯೋರ್ವ ಭಾರತೀಯನೂ ಇಂದು ತನ್ನ ಸಾಮಾಜಿಕ ಹೊಣೆಯರಿತುಕೊಳ್ಳಬೇಕಾಗಿದೆ. ಹಳ್ಳಿ – ನಗರಗಳಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟದ ಕೂಗನ್ನು ಮತ್ತಷ್ಟು ಬಲಗೊಳಿಸಬೇಕಾಗಿದೆ. ವೈಯಕ್ತಿಕ ಜೀವನದಲ್ಲಿ ಭ್ರಷ್ಟತೆಯ ಲವಲೇಶವೂ ತಾಕದಂತೆ ವ್ಯವಹರಿಸುವ ದೃಢ ನಿಶ್ಚಯದೊಂದಿಗೆ ಈ ಸಂಗ್ರಾಮದಲ್ಲಿ ದೇಶವಾಸಿಗಳೆಲ್ಲರೂ ಭಾಗಿಯಾಗಬೇಕಾಗಿದೆ.
ಹೋರಾಟ ಮುಂದುವರಿದಿದೆ, ಇನ್ನಷ್ಟು ಭಾರತೀಯರು ಈ ಹೋರಾಟಕ್ಕೆ ಬಲ ತುಂಬಬೇಕಿದೆ.