ಪ್ರತಿ ಬಾರಿ ಭಯೋತ್ಪಾದಕರ ದಾಳಿ ನಡೆದಾಗ ನಮ್ಮ ಸುರಕ್ಷಾ ಪಡೆಗಳ ಸಂಖ್ಯೆ ಶಕ್ತಿ ಸಾಮರ್ಥ್ಯಗಳ ಬಗ್ಗೆ ಚರ್ಚೆ ನಡೆಯುತ್ತದೆ. ಆದರೆ ಅಂತಹ ಸಂದರ್ಭಗಳಲ್ಲಿ ನಮ್ಮ ಜನಸಂಖ್ಯೆ, ದೇಶದ ವಿಶಾಲತೆ ಇವುಗಳನ್ನು ಮರೆತು ರಕ್ಷಣಾ ಪಡೆಗಳ ವೈಫಲ್ಯ, ಪೊಲೀಸ್ ನಿರ್ಲಕ್ಷ್ಯ ಮುಂತಾದ ಆಪಾದನೆಗಳು ಪುಂಖಾನುಪುಂಖವಾಗಿ ಹೊರಬೀಳುತ್ತವೆ. ಹವಾ ನಿಯಂತ್ರಿತ ವ್ಯವಸ್ಥೆಗಳಲ್ಲೆ ಇರುವ ರಾಜಕಾರಣಿಗಳು ತಮ್ಮ ದೌರ್ಬಲ್ಯವನ್ನು ಕೆಲವೊಮ್ಮೆ ಬಹಳ ಸುಲಭವಾಗಿ ನಮ್ಮ ರಕ್ಷಣಾತಂಡಗಳ ಮೇಲೆ ಆರೋಪ ಹೊರಿಸುತ್ತಾರೆ. ಆದರೆ ಈ ದೇಶದಲ್ಲಿ ಪೊಲೀಸ್ ಬಲ ಎಷ್ಟಿದೆ ? ಮುಂತಾದ ಕೆಲವು ಕುತೂಹಲಕಾರಿ ಅಂಕಿ ಅಂಶಗಳ ಇಲ್ಲಿವೆ.
ಭಾರತದಲ್ಲಿರುವ ಒಟ್ಟು ಪೊಲೀಸ್ ಜಿಲ್ಲೆಗಳು : ೬೦೫
ಒಟ್ಟು ಪೊಲೀಸ್ ಠಾಣೆಗಳು : ೧೧,೮೪೦
ಒಟ್ಟು ವಾರ್ಷಿಕ ಅಪರಾಧಗಳು : ೬೧ ಲಕ್ಷ
ಪ್ರತಿ ೧೦,೦೦೦ ಜನಸಂಖ್ಯೆಗೆ ಅಪರಾಧಗಳ ಸಂಖ್ಯೆ : ೬೩
ದೇಶದಲ್ಲಿರುವ ಒಟ್ಟು ಸಿವಿಲ್ ಪೊಲೀಸರ ಸಂಖ್ಯೆ : ೧೦,೧೨,೦೦೦
ಪೊಲೀಸ್ ಸಶಸ್ತ್ರ ಪಡೆಯ ಸಂಖ್ಯೆ : ೩,೬೩,೦೦೦
ಪ್ರತಿ ೧೦,೦೦೦ ಜನಸಂಖ್ಯೆಗೆ ಇರುವ ಪೊಲೀಸರು : ೧೪.೩
ಪ್ರತಿ ೧೦೦ ಕಿ.ಮೀ.ಗಳಿಗೆ ಇರುವ ಪೊಲೀಸರ ಸಂಖ್ಯೆ : ೪೩.೪೧
ದೇಶದಲ್ಲಿರುವ ಒಟ್ಟು ಮಹಿಳಾ ಪೊಲೀಸರ ಸಂಖ್ಯೆ : ೨೦,೫೦೦
ಪೊಲೀಸ್ ಇಲಾಖೆಯ ವಾರ್ಷಿಕ ಖರ್ಚು : ಒಟ್ಟು ರಾಷ್ಟ್ರೀಯ ಉತ್ಪನ್ನದ ೦.೬ %
ದೇಶದಲ್ಲಿರುವ ಅಪರಾಧ ತನಿಖಾ ಪ್ರಯೋಗಾಲಯಗಳು : ೧೦೫
ದೇಶದಲ್ಲಿರುವ ಪೊಲೀಸ್ ತರಬೇತಿ ಕೇಂದ್ರಗಳು : ೧೬೨
ಮಾಹಿತಿ ಮೂಲ:www. bprd.nic.in
ದೇಶದ ಸುರಕ್ಷತೆಯ ಹೊಣೆ ಕೇವಲ ಪೊಲೀಸ್ ಇಲಾಖೆ ಅಥವಾ ಇನ್ನಾವುದೇ ರಕ್ಷಣಾಪಡೆಗಳ ಮೇಲಿಲ್ಲ. ಸಮಾಜವು ತನ್ನ ರಕ್ಷಣೆಯನ್ನು ತಾನೂ ವಹಿಸಿಕೊಳ್ಳಬೇಕು. ಯಾವುದೇ ಒಂದು ವ್ಯವಸ್ಥೆ ಶಾಶ್ವತವಾದ ರಕ್ಷಣೆಯನ್ನು ನೀಡಲಾರದು. ಹಾಗಾಗಿ ಸಮಾಜ ತನ್ನ ಮೇಲಿನ ರಕ್ಷಣೆಯ ಹೊಣೆಯನ್ನು ಯಾವುದೋ ಇಲಾಖೆಯ ಮೇಲೆ ವಹಿಸಿ ಆರೋಪ ಹೊರಿಸುವ ರೀತಿ ತರವಲ್ಲ. ಸುರಕ್ಷಾ ಪಡೆ, ಯಾವುದೇ ಆಯುಧ, ಮೊಬೈಲ್, ಕಮ್ಯಾಂಡೋ ಪಡೆ ಇತ್ಯಾದಿ ಯಾವುದೂ ಶಾಶ್ವತವಾದ ರಕ್ಷಣೆಯನ್ನು ನೀಡಲಾರದು. ಪ್ರತಿಯೊಬ್ಬನ ಒಳಗಿನ ಧೈರ್ಯ ಅವನ ನಿರ್ಭಯತೆಗಳು ಮತ್ತು ಪರಿಸ್ಥಿತಿಯನ್ನು ನಿಭಾಯಿಸುವ ಕುಶಲತೆಗಳನ್ನು ತನ್ನ ನಿಜವಾದ ಆಸ್ತಿ ಎಂಬುದನ್ನು ಅರಿಯಬೇಕು.
ಇನ್ನು ಬೇಹುಗಾರಿಕೆ ವಿಭಾಗದ ವೈಫಲ್ಯ ಎನ್ನುವುದು ಇನ್ನೊಂದು ಗುರುತರ ಆಪಾದನೆಯನ್ನು ನಮ್ಮ ರಕ್ಷಣಾ ಪಡೆಗಳ ಮೇಲೆ ಹೋರಿಸಲಾಗುತ್ತದೆ. ನಿಜ, ಗುಪ್ತಚರ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳಾಗಬೇಕು. ಅದು ವಿಶ್ವದ ಇಂದಿನ ಗುಣಮಟ್ಟಕ್ಕೆ ಇಲ್ಲ ಎಂಬುದು ನಿಜ. ಆಂತರಿಕವಾಗಿ ಅದು ತನ್ನ ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಭಯೋತ್ಪಾದನೆಯ ಇಂದಿನ ದಿನಗಳಲ್ಲಿ ಸಮಾಜದಲ್ಲಿ ನಡೆಯುವ ಅನೇಕ ವಿದ್ಯಮಾನಗಳನ್ನು ಗಮನಿಸುವ ಸೂಕ್ಷ್ಮ ಕಣ್ಣುಗಳಿಂದ ಅರಿತು ಅದನ್ನು ದೇಶದ ರಕ್ಷಣಾ ದೃಷಟಿಯಿಂದ ಎಚ್ಚರಿಸುವ ಒಂದು ಸಹಜ, ಸಾಮೂಹಿಕ ಪ್ರಕ್ರಿಯೆಯು ಇಲ್ಲಿ ನಡೆಯಬೇಕಾಗಿದೆ. ಅದು ಒಬ್ಬ ಆಟೋ ಚಾಲಕನಿರಬಹುದು, ದಿನಸಿ ಅಥವಾ ಪಾನ್ ಅಂಗಡಿಯವನಾಗಿರಬಹುದು, ಬ್ಯಾಟರಿ ಅಥವಾ ಟೈರ್ ಪಂಚರ್ ಸರಿಪಡಿಸುವವನಿರಬಹುದು ಅಥವಾ ದೋಬಿ, ಕ್ಷೌರಿಕ ಯಾರೇ ಆಗಿರಲಿ ಒಂದು ಎಚ್ಚರಿಕೆಯ ಸ್ವಭಾವವನ್ನು ಬೆಳೆಸಿಕೊಳ್ಳಬೇಕಾದುದು ಇವತ್ತಿನ ಸನ್ನಿವೇಶದಲ್ಲಿ ಅನಿವಾರ್ಯ. ಇಂದು ಬಹಳ ಸೂಕ್ಷ್ಮ ಸ್ತರದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಅವರ ಬೆಂಬಲ ನೀಡುವ ಸ್ಲೀಪರ್ ಸೆಲ್ಗಳು ಎಲ್ಲಿ ಹೇಗೆ ಅಡಗಿಕೊಂಡಿರುತ್ತವೆ ಎಂದು ಹೇಳುವುದು ಕಷ್ಟ. ಭಯೋತ್ಪಾದನೆ ನಿರ್ಮೂಲನೆಗೆ ಇರುವ ಅತಿ ದೊಡ್ಡ ಸವಾಲು ಇದೇ ಆಗಿದೆ.
-ಸಂವಾದ ಸಂಗ್ರಹ