-Narendra SS
‘ಜನವರಿ 1’ರಂದು ಏನು ವಿಶೇಷವೆಂದು ಕೇಳಿದರೆ, ಸಣ್ಣ ಮಕ್ಕಳೂ ಸಹ ‘ಹೊಸ ವರ್ಷ’ ಎಂದು ಹೇಳುತ್ತಾರೆ. ಅನೇಕರು ಇದನ್ನೊಂದು ಹಬ್ಬವನ್ನಾಗಿಯೂ ಆಚರಿಸಿ ಹೊಸ ವರ್ಷವನ್ನು ಸ್ವಾಗತಿಸುವುದು ತಿಳಿದಿರುವಸಂಗತಿಯೇ. ಇನ್ನು ಈ ‘ಹೊಸ ವರ್ಷ’ದ ಸುತ್ತ ದೊಡ್ಡ ಉದ್ಯಮಗಳೇ ಹುಟ್ಟಿಕೊಂಡಿದೆ ಮತ್ತು ಅನೇಕ ಪತ್ರಿಕೆಗಳು ಇದಕ್ಕೆ ವ್ಯಾಪಕ ಪ್ರಚಾರವನ್ನೂ ಕೊಡುತ್ತವೆ.
ಆದರೆ, ಜನವರಿ ತಿಂಗಳಲ್ಲಿಯೇ ವರ್ಷಾರಂಭವೇಕೆ? ಫ಼ೆಬ್ರವರಿಯಲ್ಲೋ, ಜುಲೈ ತಿಂಗಳಿನಲ್ಲೋ ಏಕಿಲ್ಲ? ಪ್ರಾಯಶಃ ಇಂದಿನವರನೇಕರಿಗೆ ಈ ರೀತಿಯ ಪ್ರಶ್ನೆಗಳೇ ಉದ್ಭವಿಸುವುದಿಲ್ಲ ಮತ್ತು ಅದಕ್ಕೆ ಉತ್ತರವೂ ತಿಳಿದಿರುವುದಿಲ್ಲ. ಪ್ರಾಯಶಃ ಹಿಂದೆ ವರ್ಷಾರಂಭ ಜನವರಿಯಲ್ಲಿ ಆಗುತ್ತಿರಲಿಲ್ಲ. ಅದು ಹೇಗೆ ಮತ್ತು ಜನವರಿ ಅಲ್ಲದಿದ್ದರೆ ಬೇರಾವಾಗ ವರ್ಷಾರಂಭವಾಗುತ್ತಿತ್ತು ಎನ್ನುವುದನ್ನು ಚರ್ಚಿಸುವುದೇ ಈ ಕಿರು-ಲೇಖನದ ಉದ್ದೇಶ.
ನಾವು ಈಗ ಉಪಯೋಗಿಸುವ ಕ್ಯಾಲೆಂಡರ್‌ನ ಹೆಸರು, ‘ಗ್ರಿಗೋರಿಯನ್ ಕ್ಯಾಲೆಂಡರ್’. ಇದರಲ್ಲಿ ೧೨ ತಿಂಗಳುಗಳಿವೆ. ಇದರ ಹಿಂದಿದ್ದ ಕ್ಯಾಲೆಂಡರ್ ಹೆಸರು ‘ಜೂಲಿಯನ್ ಕ್ಯಾಲೆಂಡರ್’. ಇವುಗಳೆಲ್ಲವೂ ಹಿಂದೆ ಪ್ರಚಲಿತವಿದ್ದ ‘ರೋಮನ್ ಕ್ಯಾಲೆಂಡರ್’ನಿಂದ ವಿಕಸಿತಗೊಂಡದ್ದು. ನಾವಿಂದು ಉಪಯೋಗಿಸುವ ಕ್ಯಾಲೆಂಡರ್‌ನಲ್ಲಿ ೧೨ ತಿಂಗಳುಗಳಿವೆ. ಇವುಗಳಲ್ಲಿ ೯ರಿಂದ ೧೨ನೇ ತಿಂಗಳುಗಳ ಹೆಸರನ್ನು ಗಮನಿಸಿ – ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್. ಈ ಹೆಸರುಗಳು ವಿಶೇಷವಾದವುಗಳು. ಗ್ರೀಕ್ ಭಾಷೆಯಲ್ಲಿ ಸೆಪ್ಟ, ಆಕ್ಟ, ನವ ಮತ್ತು ಡೆಸಿ ಪದಗಳಿಗೆ ಕ್ರಮವಾಗಿ ೭, ೮, ೯ ಮತ್ತು ೧೦ ಎಂಬ ಅರ್ಥವಿದೆ. ಅದನ್ನೇ ಸಂಸ್ಕೃತದಲ್ಲಿ ಸಪ್ತ, ಅಷ್ಟ, ನವ ಮತ್ತು ದಶ ಎಂಬು ಕರೆಯುತ್ತೇವೆ. ಆದರೆ, ೭ ಎಂಬ ಅಂಕೆಯನ್ನು ಸೂಚಿಸುವ ಸೆಪ್ಟೆಂಬರ್ ೯ನೇ ತಿಂಗಳಾಗಿದೆ. ಅದೇ ರೀತಿ ಉಳಿದ ತಿಂಗಳುಗಳು. ಇದು ಏಕೆ ಹೀಗಾಯಿತು? ಪ್ರಾಯಶಃ ಇದು ಆಕಸ್ಮಿಕವಾಗಿ ಆದದ್ದಲ್ಲ! ಇದಕ್ಕೆ ಎರಡು ರೀತಿಯ ಕಾರಣಗಳನ್ನು ಕೊಡಬಹುದು.
ಪ್ರಾಯಶಃ ಹಿಂದೆ ಇದ್ದ ರೋಮನ್ ಕ್ಯಾಲೆಂಡರ್‌ನಲ್ಲಿ ಕೇವಲ 10 ತಿಂಗಳುಗಳಿದ್ದವು, ಜುಲೈ ಮತ್ತು ಆಗಸ್ಟ್ ಇರಲಿಲ್ಲ. ಈಗ ಜನವರಿಯಿಂದ ಎಣಿಸಿ, ಸೆಪ್ಟೆಂಬರ್ 7ನೇ ತಿಂಗಳಾಗುತ್ತದೆ. ರೋಮ್‌ನ ಸುಪ್ರಸಿದ್ಧ ದೊರೆ ಜೂಲಿಯಸ್ ಸೀಸರ್ ತನ್ನ ಹೆಸರಿನಲ್ಲಿ ಜುಲೈ ತಿಂಗಳನ್ನೂ ಮತ್ತು ನಂತರ ಬಂದ ಅಗಸ್ಟೈನ್ ದೊರೆ ತನ್ನ ಹೆಸರಿನಲ್ಲಿ ಆಗಸ್ಟ್ ತಿಂಗಳನ್ನೂ ಸೇರಿಸಿದರು. ಇದರಿಂಗ ಸೆಪ್ಟೆಂಬರ್ 9ನೇ ತಿಂಗಳಾಗಬೇಕಾಯಿತು. ಇದು ಒಂದು ವಾದ.
ಇನ್ನು ಎರಡನೆಯ ತರ್ಕವೆಂದರೆ, ವರ್ಷಾರಂಭ ಆಗುತ್ತಿದ್ದುದೇ ಮಾರ್ಚ್ ತಿಂಗಳಿನಲ್ಲಿ. ಪುರಾತನ ರೋಮನ್ ಕ್ಯಾಲೆಂಡರ್‌ನಲ್ಲಿ ಮಾರ್ಚ್ 25ನೇ ತಾರೀಖಿನಂದು ಹೊಸ ವರ್ಷ ಆಗುತ್ತಿತ್ತು ಎಂಬುದಕ್ಕೆ ದಾಖಲೆಗಳಿವೆ. ಮಾರ್ಚ್‌ನಿಂದ ಎಣಿಸಿದರೂ, ಸೆಪ್ಟೆಂಬರ್ ತಿಂಗಳು 7ನೇ ತಿಂಗಳಾಗುತ್ತದೆ.
ಡಿಸೆಂಬರ್ ತಿಂಗಳು 10ನೇ ತಿಂಗಳಾಗಿತ್ತು ಎಂಬ ವಾದಕ್ಕೆ ಪುಷ್ಟಿ ನೀಡುವ ಮತ್ತೊಂದು ಸಂಗತಿಯಿದೆ. ಅದೆಂದರೆ, ಕ್ರೈಸ್ತ ಬಂಧುಗಳಾಚರಿಸುವ ಕ್ರಿಸ್ತ್‌ಮಸ್ ಹಬ್ಬ. ಈ ಹಬ್ಬವನ್ನಾಚರಿಸುವುದು ಡಿಸೆಂಬರ್ ತಿಂಗಳಿನಲ್ಲಿ. ಈ ಹಬ್ಬಕ್ಕೆ ‘X-mas?’ ಎಂದೂ ಕರೆಯುತ್ತಾರೆ. ಇದೇನಿದು, ‘X’ ಅಕ್ಷರಕ್ಕಿಲ್ಲೇನು ಕೆಲಸ? ಇದು ಇಂಗ್ಲಿಷಿನ ‘x’ ಅಕ್ಷರವಲ್ಲ, ಬದಲಾಗಿ ರೋಮನ್ ಅಂಕೆಯ ೧೦. ಮತ್ತು ‘mas?’ ಎಂಬುದು ನಮ್ಮ ಕನ್ನಡದ ಮಾಸ ಆಗಿರಬಹುದೇ? ಅಂದರೆ ಇದು ಡಿಸೆಂಬರ್ ಅನ್ನು 10ನೇ ತಿಂಗಳನ್ನಾಗಿ ಸೂಚಿಸುತ್ತದೆಯಲ್ಲವೇ?
ಇದೆಲ್ಲವೂ ಪಶ್ಚಿಮದ ಕ್ಯಾಲೆಂಡರ್‌ಗಳ ಚರಿತ್ರೆ. ಆದರೆ, ಭಾರತದಲ್ಲಿ ಇವೆಲ್ಲಕ್ಕಿಂತ ಭಿನ್ನವಾದ ತತ್ವಗಳನ್ನಾಧರಿಸಿ ಕ್ಯಾಲೆಂಡರ್ ರಚಿಸಲಾಯಿತು. ಮತ್ತು ಅದು ಇವೆಲ್ಲಕ್ಕಿಂತ ಪುರಾತನವೂ ಮತ್ತು ಹೆಚ್ಚು ವೈಜ್ಞಾನಿಕವಾದುದೂ ಆಗಿತ್ತು. ಅದನ್ನು ‘ಪಂಚಾಂಗ’ ಎನ್ನುತ್ತಿದ್ದರು. ನಮ್ಮಲ್ಲಿ ಹೆಚ್ಚು ಬಳಕೆಯಲ್ಲಿರುವ ಚಾಂದ್ರಮಾನ ಪಂಚಾಂಗದಲ್ಲಿ ಚೈತ್ರಶುದ್ಧ ಪ್ರತಿಪದೆ, ಅಂದರೆ ಯುಗಾದಿಯಿಂದ ವರ್ಷಾರಂಭ. ಅದು ವಸಂತ ಋತುವಿನ ಆರಂಭದ ಕಾಲ. ಪ್ರಕೃತಿಯು ಛಳಿಗಾಲವನ್ನು ಕಳೆದು, ಗಿಡ-ಮರಗಳೆಲ್ಲಾ ಹಳೆಯ ಎಲೆಗಳನ್ನು ಕಳಚಿ, ಹೊಸ ಚಿಗುರಿನಿಂದ ಕಂಗೊಳಿಸಿ, ಇಡೀ ಪ್ರಕೃತಿಯೇ ಲವಲವಿಕೆಯಿಂದಿರುವ ಕಾಲವದು. ವರ್ಷವನ್ನು ಆರಂಭಿಸುವುದಕ್ಕೆ ಇದಕ್ಕಿಂತ ಪ್ರಶಸ್ತವಾದ ಕಾಲವಿನ್ನಾವುದಿದೆ? ಹೀಗಾಗಿ, ಪ್ರಕೃತಿಯ ಶಿಶುಗಳೂ, ಖಗೋಳ ವಿಜ್ಞಾನ ಹಾಗೂ ಮನೋವಿಜ್ಞಾನವನ್ನು ಚೆನ್ನಾಗಿ ಬಲ್ಲವರೂ ಆದ ನಮ್ಮ ಪ್ರಾಚೀನರು ಇದನ್ನೇ ವರ್ಷಾರಂಭವನ್ನಾಗಿ ಆಯ್ದರು.
ಸಾಮಾನ್ಯವಾಗಿ, ನಾವಿಂದು ಉಪಯೋಗಿಸುವ ಗ್ರೆಗೋರಿಯನ್ ಕ್ಯಾಲೆಂಡರಿನ ಮಾರ್ಚ್ ತಿಂಗಳಿಗೆ ಹಿಂದು ಪಂಚಾಂಗದ ಯುಗಾದಿ ಬರುತ್ತದೆ. ನಮ್ಮ ಚಾಂದ್ರಮಾನ ಪಂಚಾಂಗವು ಚಂದ್ರನ ಚಲನೆಯ ಮೇಲೆ ಆಧರಿತವಾದ್ದರಿಂದ ಅದು ಇಂಗ್ಲಿಷ್ ಕ್ಯಾಲೆಂಡರಿನ ತಿಂಗಳುಗಳಿಗೆ ಸರಿಯಾಗಿ ಹೊಂದುವುದಿಲ್ಲ, ಪ್ರತಿ ವರ್ಷವೂ ಬದಲಾಗುತ್ತಿರುತ್ತದೆ.
ಇದನ್ನೆಲ್ಲಾ ಹೊಂದಿಸಿ ನೋಡಿದಾಗ ನಾವು ಬರಬಹುದಾದ ನಿಶ್ಕರ್ಷೆ ಎಂದರೆ, ಹಿಂದೆ ಮಾರ್ಚ್ ತಿಂಗಳಿನಲ್ಲಿ ವರ್ಷಾರಂಭವಾಗುತ್ತಿತ್ತು. ಮತ್ತು ಮಾರ್ಚ್ ತಿಂಗಳೆಂದರೆ ‘ಯುಗಾದಿ’ – ಹಿಂದು ಪಂಚಾಂಗದಂತೆ ವರ್ಷಾರಂಭ. ಇದರ ಅರ್ಥ ಇಷ್ಟೇ – ಹಿಂದೊಮ್ಮೆ ಪಶ್ಚಿಮದ ‘ಕ್ಯಾಲೆಂಡರ್’ಗಳೂ ನಮ್ಮ ‘ಹಿಂದೂ ಪಂಚಾಂಗ’ವನ್ನಾಧರಿಸಿಯೇ ರಚಿತವಾಗಿತ್ತು; ಅದರ ಪ್ರಕಾರವಾಗಿಯೇ ಮಾರ್ಚ್ ತಿಂಗಳಿನಲ್ಲಿ ವರ್ಷಾರಂಭವಾಗುತ್ತಿತ್ತು.
ಹೀಗೆ ಜಗತ್ತಿಗೆ ಕಾಲಗಣನೆಯನ್ನು ಕಲಿಸಿದವರು ಹಿಂದುಗಳು. ಇಂದಿಗೂ ನಮ್ಮ ಪಂಚಾಂಗ, ಇಂಗ್ಲಿಷ್ ಕ್ಯಾಲೆಂಡರ್‌ಗಿಂತ ಹೆಚ್ಚು ವೈಜ್ಞಾನಿಕವಾದುದಾಗಿದೆ. ಯಾವ ರೀತಿ ‘ಜನವರಿಗೇ ಏಕೆ ವರ್ಷಾರಂಭ’ ಎನ್ನುವ ಪ್ರಶ್ನೆಗೆ ಉತ್ತರವಿಲ್ಲವೋ, ಅದೇ ರೀತಿ ಜನವರಿಯಲ್ಲೇಕೆ ೩೧ ದಿನ, ಸೆಪ್ಟೆಂಬರ್‌ನಲ್ಲೇಕೆ ೩೦ ದಿನ, ಫ಼ೆಬ್ರವರಿಯಲ್ಲೇಕೆ ೨೮ ದಿನ, ಎಂಬುದಕ್ಕೂ ಉತ್ತರವಿಲ್ಲ. ಹಿಂದು ಪಂಚಾಂಗವು, ಗ್ರಹಗಳ, ನಕ್ಷತ್ರಗಳ, ಸೂರ್ಯನ, ಭೂಮಿಯ ಚಲನೆಗಳನ್ನಾಧರಿಸಿ, ಪ್ರಕೃತಿಗೆ ಹೊಂದುವಂತೆ ರಚಿತವಾದದ್ದು. ಈ ರೀತಿಯ ಯಾವ ವೈಜ್ಞಾನಿಕ ಅಂಶಗಳೂ ಇಲ್ಲದೆ ರಚಿತವಾಗಿರುವುದು ಇಂದಿನ ಇಂಗ್ಲಿಷ್ ಕ್ಯಾಲೆಂಡರ್! ಇಷ್ಟೆಲ್ಲ ಹಿನ್ನೆಲೆಯಲ್ಲಿ, ಹೆಚ್ಚು ವೈಜ್ಞಾನಿಕವಾದುದು ಯಾವುದು ಮತ್ತು ಇಂದಿನ ವೈಜ್ಞಾನಿಕ ಯುಗಕ್ಕೆ ಯಾವುದು ಹೆಚ್ಚು ಸೂಕ್ತ ಎಂಬುದನ್ನು ಪ್ರಬುದ್ಧ ಓದುಗರಿಗೆ ಪ್ರತ್ಯೇಕವಾಗಿ ತಿಳಿಸಬೇಕಾದ್ದೇನೂ ಇಲ್ಲವೆಂದು ತಿಳಿಯುತ್ತೇನೆ.
೧. ಮಾರ್ಚ್ ೨೫ಕ್ಕೆ ವರ್ಷಾರಂಭಕ್ಕೆ ಸಂಬಂಸಿದ ಪೂರಕ ವಿಷಯ:
http://www.bedfordonline.com/editorial/calendar.html
http://rfraley301.blogspot.com/2006_03_01_rfraley301_archive.html