ಭಾರತ ಹಳ್ಳಿಗಳ ದೇಶ. ಗ್ರಾಮಗಳೇ ಭಾರತದ ಜೀವಾಳ ಎಂಬುದನ್ನು ನಾವು ನಮ್ಮ ಬಾಲ್ಯದಿಂದಲೂ ಕೇಳುತ್ತಲೇ ಬಂದಿದ್ದೇವೆ. ಇತ್ತೀಚಿನ ಕೆಲವು ವರ್ಷಗಳವರೆಗೂ ಅದು ಸತ್ಯವೂ ಆಗಿತ್ತು. ಆದರೆ, ಕಳೆದ 20 ವರ್ಷಗಳಲ್ಲಿ ಭಾರತವು ಜಾಗತೀಕರಣಕ್ಕೆ ಹೆಚ್ಚು ಹೆಚ್ಚು ತೆರೆದುಕೊಳ್ಳುತ್ತಲೇ ಹೋಯಿತು. ನಗರಗಳಲ್ಲಿ ಉದ್ಯೋಗದ ಅವಕಾಶಗಳೂ ಹೆಚ್ಚಿದವು. ಹಾಗಾಗಿಯೇ ಗ್ರಾಮಭಾರತ ಬಡವಾಗುತ್ತಾ ಬಂತು, ಜನರಿಲ್ಲದೇ ಬರಿದಾಗುತ್ತಾ ಬಂತು. ನಗರಗಳಲ್ಲಿ ಜನ ಹೆಚ್ಚಾದಂತೆಲ್ಲಾ ನಗರಭಾರತದ ದುರವಸ್ಥೆಯೂ ಹೆಚ್ಚುತ್ತಾ ಹೋಯಿತು. ನಗರಗಳಲ್ಲಿ ಟ್ರಾಫಿಕ್ ಜಾಮ್ಗಳೂ, ಮಳೆ ಬಂದಾಗ ಪ್ರವಾಹಗಳೂ ಹೆಚ್ಚಿದವು. ಹಳ್ಳಿ-ನಗರಗಳೆಂಬ ಭೇದವಿಲ್ಲದೇ ಮನೆಮನೆಗೂ ಟಿವಿಯೂ, ಮೊಬೈಲೂ ಬಂತು. ಜೊತೆಜೊತೆಗೇ ಆಧುನಿಕ ಜೀವನ ಶೈಲಿ ನಗರದಿಂದ ಹಳ್ಳಿಗೂ ಬಂತು. ಹಳ್ಳಿಯ ಉದ್ಯೋಗಗಳು ಸದ್ದಿಲ್ಲದೇ ಇತಿಹಾಸದ ಪುಟ ಸೇರಿದವು.
ಚಪ್ಪಲಿ ಹೊಲಿಯುವ ಚಮ್ಮಾರರೂ, ಕುಲುಮೆಯೂದುತ್ತಾ ಕತ್ತಿ, ಸಲಾಕೆ ಮಾಡುವ ಕಮ್ಮಾರರೂ ಕಾರ್ಖಾನೆಗಳೊಂದಿಗೆ ಸೆಣಸಲಾಗದೇ ಸೋತರು. ಇದ್ದ ಉದ್ಯೋಗಗಳೂ ಅಪ್ರಸ್ತುತವಾದ ಮೇಲೆ ಹಳ್ಳಿಯ ಬದುಕೂ ದುರ್ಭರವಾಗುತ್ತಾ ಬಂತು. ಹಾಗೆಯೇ, ಪಟ್ಟಣದ ದುಡ್ಡೂ ಥಳುಕು-ಬಳುಕೂ, ಸುಖಮಯವೆಂದು ತೋರುವ ಜೀವನವೂ ಹಳ್ಳಿಗರನ್ನು ಮರುಳು ಮಾಡಿತು. ಇದೆಲ್ಲದರಿಂದಾಗಿ, ನಮ್ಮ ಮಕ್ಕಳಿಗಂತೂ ಹಳ್ಳಿ ಬೇಡ, ಪಟ್ಟಣದಲ್ಲಿ ಯಾವುದಾದರೂ ನೌಕರಿ, ಸಿಕ್ಕರೆ ಸಾಕೆಂಬ ಭಾವ ಆವರಿಸಿತು. ಹಳ್ಳಿಯಲ್ಲಿ ತನಗೆ ತಾನೇ ಒಡೆಯನಾಗಿದ್ದವನು ಪಟ್ಟಣಕ್ಕೆ ಬಂದು ಬೇರೆಯವರ ಆಫೀಸಿನಲ್ಲೋ, ಕಂಟ್ರಾಕ್ಟರ್ಗಳಡಿಯಲ್ಲೋ ಕೆಲಸ ಮಾಡಲು ಪ್ರಾರಂಭಿಸಿದ! ಹಳ್ಳಿಯಲ್ಲಿ ಸ್ವಂತ ಮನೆ, ಮನೆಯ ಸುತ್ತ ಒಂದಿಷ್ಟು ಜಾಗ, ಉಸಿರಾಡಲು ಒಳ್ಳೆ ಗಾಳಿ – ಇವೆಲ್ಲದರ ಬದಲು, ಸ್ಲಮ್ಮಿನಂತಿರುವ ಪ್ರದೇಶದಲ್ಲಿ ಸಣ್ಣ ಮನೆ, ಗೋಡೆಗೆ ತಾಗಿಕೊಂಡೇ ಇರುವ ಪಕ್ಕದ ಮನೆ, ರಸ್ತೆಯೇ ಅಂಗಳದಂತಿರುವ ಮನೆಗಳಾದರೂ ಪರ್ವಾಗಿಲ್ಲ; ಪಟ್ಟಣಕ್ಕೇ ಜೈ ಎನ್ನುವವರ ಸಂಖ್ಯೆ ಹೆಚ್ಚಾಗುತ್ತಾ ಬಂತು. ಎಂಬಲ್ಲಿಗೆ, ಹಳ್ಳಿಯೆಂಬ ಹಳ್ಳಿ ನಿಧಾನವಾಗಿ ಕರಗಲು ಪ್ರಾರಂಭವಾಗಿದ್ದು ಬಹಳಷ್ಟು ಜನರಿಗೆ ಗೊತ್ತಾಗಲೇ ಇಲ್ಲ!
ಇವೆಲ್ಲದರ ಮಧ್ಯೆ, ನಗರೀಕರಣದ ಅಪಾಯವನ್ನರಿತ ಕೆಲವರು ಹಳ್ಳಿಯಲ್ಲೇ ಬದುಕು ಕಟ್ಟಿಕೊಳ್ಳುವುದು ಹೇಗೆಂದು ಯೋಚನೆ ಮಾಡಿದರು. ಗ್ರಾಮ ಜೀವನವನ್ನು ಶ್ರೀಮಂತಗೊಳಿಸುವ ಯೋಚನೆ ಮಾಡಿದರು. ಗ್ರಾಮಜೀವನದಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಕೆಲವು ಯೋಜನೆಗಳನ್ನು ಮಾಡಿದರು. ಅದರ ಫಲವಾಗಿ ಬಂದ ಯೋಚನೆಯೇ ಗ್ರಾಮೋತ್ಸವ. ಸಂಘದ ಗ್ರಾಮವಿಕಾಸ ಯೋಜನೆಯ ಕಾರ್ಯಕರ್ತರೇ ಮುಂದೆ ನಿಂತು ನಡೆಸಿದ ಈ ಗ್ರಾಮೋತ್ಸವ ಹಲವರ ಮನದಲ್ಲಿ ಹೊಸ ಭರವಸೆ ಮೂಡಿಸಿದ್ದು ಸುಳ್ಳಲ್ಲ. ಇತ್ತೀಚೆಗೆ ನಡೆದ ಅಂತಹ ಎರಡು ಗ್ರಾಮೋತ್ಸವಗಳ ಬಗ್ಗೆ ಮಾಹಿತಿ ಇಲ್ಲಿದೆ.
ಗ್ರಾಮಗೌರವಕ್ಕೊಂದು ಹೊಸ ಮಾದರಿ
ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಕಳೆದ 25-30 ವರ್ಷಗಳಿಂದ ಸಂಘದ ಶಾಖೆ ನಡೆಯುತ್ತಿದೆ. ಆಗ ಬಾಲ-ಕಿಶೋರರಾಗಿದ್ದವರು ಇಂದು ಪ್ರೌಢರಾಗಿದ್ದಾರೆ. ಸಂಘದ ಚಿಂತನೆಗಳನ್ನು ತಮ್ಮ ಊರಲ್ಲಿ ಆಚರಣೆಗೆ ತರುವ ಚಿಂತನೆ ಪ್ರಾರಂಭವಾಗಿದೆ. ಮೊದಲು ಊರಿನ ದೇವಾಲಯದಲ್ಲಿ ಭಜನೆ ಪ್ರಾರಂಭವಾಯಿತು. ಪ್ರತಿವಾರವೂ ತರುಣರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೇರಲಾರಂಭಿಸಿದರು. ಕಳೆದ ತಿಂಗಳು ನಡೆದ ಬೆಳದಿಂಗಳೂಟ ಕಾರ್ಯಕ್ರಮದಲ್ಲಿ 700 ರಷ್ಟು ಗ್ರಾಮಸ್ಥರು ಪಾಲ್ಗೊಂಡಿದ್ದರು. ಸುಮಾರು 200 ತಾಯಂದಿರು ಮನೆ ಮನೆಗಳಿಂದ ಹಣತೆ ತಂದು ಊರ ಹೊರಗಿನ ಕೆಂಕೇರಮ್ಮ ದೇವರ ಮೈದಾನದಲ್ಲಿ ಒಟ್ಟು ಸೇರಿ ದೀಪಪೂಜನ, ಸಹಭೋಜನ ಮಾಡುವ ಮೂಲಕ ಸದ್ದಿಲ್ಲದೆ ಸಾಮರಸ್ಯದ ದೀಪ ಬೆಳಗಿದರು.
ಗ್ರಾಮೋತ್ಸವದ ದಿನ ಮತ್ತೊಂದು ದಿನ ಸುತ್ತಲಿನ ಏಳೆಂಟು ಗ್ರಾಮದ ೫೦-೬೦ ರೈತರು ಸೇರಿ ಕೃಷಿ ಸಂವಾದ ನಡೆಸಿದರು. ವಿಷಮುಕ್ತ ಕೃಷಿ, ಸಾಮರಸ್ಯ, ಪರಿಸರ, ಜಲಸಂರಕ್ಷಣೆ, ಮಾತೃಭಾಷೆ, ಗ್ರಾಮಪಲಾಯನ, ಇವೆಲ್ಲದರ ಚಿಂತನೆ ನಡೆಯಿತು. ಶೂನ್ಯಬಜೆಟ್ ಕೃಷಿಯಂತೆಯೇ ಶೂನ್ಯ ಬಜೆಟ್ ಶಿಕ್ಷಣ, ಅಡುಗೆಮನೆ, ಮನೋರಂಜನೆ, ಮನೋವಿಕಾಸವಾದಾಗಲೇ ಗ್ರಾಮ ಸಂಸ್ಕೃತಿ ಉಳಿದೀತು ಎನ್ನುವ ವಿಚಾರಗಳೂ ಚರ್ಚಿತವಾದುವು.
ಗೋಪೂಜೆಯ ಬಳಿಕ ಊರಿನ ಎಲ್ಲಾ ಬೀದಿಗಳಲ್ಲಿ ನಡೆದ ಗೋಮಾತೆಯ ಮೆರವಣಿಗೆಗೆ ರಂಗವಲ್ಲಿಯ ಸ್ವಾಗತ. ಮೆರವಣಿಗೆಯಲ್ಲಿನ ನೃತ್ಯ, ಹಾಡು, ಘೋಷಣೆಗಳು ಇಡೀ ಹಳ್ಳಿಯಲ್ಲಿ ಹಬ್ಬದ ವಾತಾವರಣ ನಿರ್ಮಿಸಿದ್ದವು. ಪಾರಂಪರಿಕ ರಂಗದ ಕುಣಿತದ ಡೊಳ್ಳಿನ ಶಬ್ದ ಯಾರನ್ನೂ ಬಿಡಲಿಲ್ಲ, ಹಲವು ವರ್ಷಗಳಿಂದ ಕುಣಿಯುವುದನ್ನೇ ಮರೆತಿದ್ದ ಹಲವು ಹಿರಿಯರನ್ನೂ ಕುಣಿಯುವಂತೆ ಮಾಡಿತು! ಸೋಬಾನೆ ಪದ ಹೇಳಲು ಬಂದ ಅಜ್ಜಿಯಂದಿರ ಸಮೂಹಕ್ಕೆ ತಮ್ಮ ಪದ ಕೇಳಲು ಇಷ್ಟೊಂದು ಜನ ಸೇರಿದ್ದಾರೆ ಅನ್ನುವ ಸಂಭ್ರಮ ಅಂದು!
ಶ್ರದ್ಧೆಯಿಂದ ನಿರಂತರವಾಗಿ ಗ್ರಾಮದ ಕಾಯಕ ನಡೆಸಿಕೊಂಡು ಬರುತ್ತಿದ್ದ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಗ್ರಾಮ ಗೌರವ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸನ್ಮಾನಿತರ ವಿವರ ಇಲ್ಲಿದೆ.
- ಕಾರ್ಯವೃತ್ತಿಯ ಜೊತೆಗೆ ಶಾಸ್ತ್ರೀಯ ಸಂಗೀತಗಾರರಾದ ಶ್ರೀ ಅಣ್ಣಯ್ಯ
- ಕೃಷಿಗೆ ಬೇಕಾದ ಮರ, ಕಬ್ಬಿಣದ ಸಲಕರಣೆ ತಯಾರಿಸುವ ಶ್ರೀ ಯಾಲಕ್ಕಿ ಶೆಟ್ಟಿ
- ಗ್ರಾಮಪುರೋಹಿತರಾದ ವಯೋವೃದ್ದ ಶ್ರೀ ಎಸ್. ಕೃಷ್ಣಮೂರ್ತಿ
- ಊರಿನ ವೈದ್ಯ-ಸೂಲಗಿತ್ತಿ ಶ್ರೀಮತಿ ಸಾಕಮ್ಮ
- ಬಳೆತೊಡಿಸುವ ಕಾಯಕದ ಶ್ರೀಮತಿ ದೇವಿರಮ್ಮ
- ತಮಟೆ ಬಾರಿಸುವ ಶ್ರೀ ಚಲವಯ್ಯ
- ದರ್ಜಿ ಶ್ರೀ ಟಿ. ರಾಮೇಗೌಡ
ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಗ್ರಾಮದಲ್ಲೂ ಇಂತಹುದೇ ಗ್ರಾಮೋತ್ಸವ ಇತ್ತೀಚೆಗೆ ನಡೆಯಿತು. ಊರಿನ ಸಂಪಿಗೆ ಶ್ರೀನಿವಾಸ ದೇವಸ್ಥಾನವೇ ಗ್ರಾಮದ ಚಟುವಟಿಕೆಗಳಿಗೆ ಕೇಂದ್ರ. ಸಂಪಿಗೆ ಧಾರ್ಮಿಕ ಕ್ಷೇತ್ರವಾದರೂ ಶುಭಕಾರ್ಯಕ್ಕಾಗಲೀ ಗೋಪೂಜೆಗಾಗಲೀ ಬೇಕೆಂದರೆ ಒಂದೂ ದೇಸೀ ಹಸು ಇರಲಿಲ್ಲ. ಇದನ್ನು ಗಮನಿಸಿದ ಗ್ರಾಮಸ್ಥರು ದೇವಸ್ಥಾನದ ವತಿಯಿಂದ ಗೋಶಾಲೆ ಪ್ರಾರಂಭಿಸಿದರು. ಅಲ್ಲದೇ, ದೇವಸ್ಥಾನದ ವತಿಯಿಂದ ಕಲಿಕಾ-ಕೇಂದ್ರ, ಬಾಲಗೋಕುಲ ಮೊದಲಾದ ಚಟುವಟಿಕೆಗಳು ಈ ಗ್ರಾಮದಲ್ಲಿ ನಡೆಯುತ್ತಿವೆ. ಭಜನಾ ಕಾರ್ಯಕ್ರಮದಿಂದಾಗಿ ತರುಣರು ವಾರಕ್ಕೊಮ್ಮೆ ಸೇರುವ ಪರಿಪಾಠ ಪ್ರಾರಂಭವಾಗಿದೆ.
ಗ್ರಾಮೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಷ್ಟೇ ಅಲ್ಲದೇ, ಒಂದು ಕಿರು ಪ್ರದರ್ಶಿನಿಯೂ ಇತ್ತು. ಪ್ರದರ್ಶಿನಿಯಲ್ಲಿದ್ದ ಈಗ ಮೂಲೆ ಸೇರಿರುವ ಕಂಚು, ಹಿತ್ತಾಳೆ, ತಾಮ್ರ ಮತ್ತು ಮಣ್ಣಿನ ವೈವಿಧ್ಯಮಯ ಪಾತ್ರೆಗಳು, ಕೃಷಿ ಉಪಕರಣಗಳು – ತರುಣರಲ್ಲಿ ಕಿಶೋರರಲ್ಲಿ ಕುತೂಹಲ ಮೂಡಿಸಿತು. ಗ್ರಾಮಗೌರವಕ್ಕೆ ಪಾತ್ರಾದವರ ಹಿರಿಯರ ವಿವಿರ ಇಲ್ಲಿದೆ.
- ಕಾಮಲೆಗೆ ಔಷಧಿ ನೀಡುವ ಶ್ರೀ ಶಂಕರ
- ಗೋ ಚಿಕಿತ್ಸಕ ಶ್ರೀ ರಂಗಸ್ವಾಮಿ
- ಉಳುಕು ತೆಗೆಯುವ ಶ್ರೀ ಗಂಗಣ್ಣ
- ಚರಂಡಿ ಸ್ವಚ್ಚಮಾಡುವ ಶ್ರೀ ತಿಮ್ಮಯ್ಯ
- ಅರೆತಲೆನೋವು ನಿವಾರಿಸುವ ಶ್ರೀಮತಿ ಮೋಹನಕುಮಾರಿ
- ಅನಾಥಶವಸಂಸ್ಕಾರ ನಡೆಸುವ ಶ್ರೀ ಶ್ರೀನಿವಾಸ
ಸುತ್ತಮುತ್ತಲಿನ ಹಳ್ಳಿಗಳ ಜನರು ಈ ವಿಶೇಷ ಪ್ರಯೋಗವನ್ನು ಆಸಕ್ತಿಯಿಂದ ಗಮನಿಸಿದ್ದಷ್ಟೇ ಅಲ್ಲದೇ ತಮ್ಮ ಹಳ್ಳಿಗಳಲ್ಲೂ ಇಂತಹ ಕಾರ್ಯಕ್ರಮಗಳನ್ನು ಮಾಡುವ ಬಗ್ಗೆ ಮಾತನಾಡಿಕೊಂಡಿದ್ದು ಗ್ರಾಮೋತ್ಸವದ ಯಶಸ್ಸಿಗೆ ಸಾಕ್ಷಿಯಾಗಿತ್ತು! ಈ ಎರಡೂ ಗ್ರಾಮೋತ್ಸವಗಳಲ್ಲಿ ಸಂಘದ ಅಖಿಲ ಭಾರತ ಗ್ರಾಮವಿಕಾಸ ಪ್ರಮುಖರಾದ ಡಾ|| ದಿನೇಶ್ ಅವರು ಭಾಗವಹಿಸಿದ್ದು ವಿಶೇಷವಾಗಿತ್ತು.
ಗ್ರಾಮ ಜೀವನದ ವಿಶಿಷ್ಟತೆ
- ತಮ್ಮ ಅಗತ್ಯಕ್ಕೆ (ವಾಸಕ್ಕೆ) ಎಷ್ಟು ಬೇಕೋ ಅಷ್ಟು ಮನೆ ಕಟ್ಟಿಕೊಳ್ಳುತ್ತಾರೆ. ಮಿಕ್ಕಿದ ಜಾಗದಲ್ಲಿ ಕೃಷಿ-ಗಿಡಮರ ಬೆಳೆಸುತ್ತಾರೆ, ಅದನ್ನು ಪ್ರಕೃತಿಗೇ ಬಿಡುತ್ತಾರೆ.
- ವನವಾಸಿ-ಗ್ರಾಮವಾಸಿ-ನಗರವಾಸಿಗಳ ಖರ್ಚುವೆಚ್ಚದ ತುಲನೆ ಇಲ್ಲಿದೆ ನೋಡಿ!
- ವನವಾಸಿಗಳು ೮-೧೦ ಜನರ ಕುಟುಂಬವನ್ನು ೫ ಸಾವಿರ ರೂಪಾಯಿಗಳಿಗಿಂತಲೂ ಕಡಿಮೆ ಖರ್ಚಿನಲ್ಲಿ ನಿಭಾಯಿಸಬಲ್ಲರು.
- ಗ್ರಾಮವಾಸಿಗಳಿಗಾದರೆ ೬-೭ ಜನರ ಕುಟುಂಬವನ್ನು ನಿರ್ವಹಿಸಲು ೮-೧೦ ಸಾವಿರ ರೂಪಾಯಿ ಬೇಕು.
- ನಗರವಾಸಿಗಳ ೩-೪ ಜನರ ಕುಟುಂಬವನ್ನು ನಿಭಯಿಸಲು ೧೫-೨೦ ಸಾವಿರ ರೂಪಾಯಿಯೂ ಸಾಲದು!
- ನಮ್ಮ ಗ್ರಾಮಜೀವನವನ್ನು ಗಟ್ಟಿಗೊಳಿಸಲು ನಾವೇನು ಮಾಡಬಹುದು? ಯೋಚಿಸಿ.
- ನಾವು ನಮ್ಮ ಗ್ರಾಮದಲ್ಲೇ ಇರುವ ನೌಕರಿಯನ್ನು ಆರಿಸಬಹುದೇ?
- ಗ್ರಾಮದಲ್ಲೇ ಇದ್ದು ಹತ್ತಿರದ ಪಟ್ಟಣದಲ್ಲಿರುವ ನೌಕರಿಗಾಗಿ ಓಡಾಡಬಹುದೇ?
- ಹೊರಗಿದ್ದರೂ ನನ್ನ ಗ್ರಾಮದ ಚಿಂತನೆ ಮಾಡಬಹುದೇ? ಗ್ರಾಮದ ಉತ್ಸವಗಳಲ್ಲಿ, ವಿಶೇಷ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಹುದೇ?
- ನಿವೃತ್ತಿಯ ನಂತರ ಗ್ರಾಮಕ್ಕೆ ಮರಳಬಹುದೇ