Nation remembers Dr BR Ambedkar on his 121st birthday, tomorrow on April 14th.
ಸಾಮರಸ್ಯಕ್ಕೆ ಬೇಕು ತೆರೆದ ಮನಸ್ಸು
ಏಪ್ರಿಲ್ 14ರಂದು ಡಾ|| ಬಿ.ಆರ್. ಅಂಬೇಡ್ಕರ್ರ 121ನೇ ಜಯಂತಿ. ಜೀವನದುದ್ದಕ್ಕೂ ಅಸಮಾನತೆಯ ಅಪಮಾನವನ್ನು ಸಹಿಸುತ್ತಾ, ಸಾಮಾಜಿಕ ಸಾಮರಸ್ಯದ ಪ್ರಯತ್ನಗಳಿಗೆ ಭೀಮ ಬಲನೀಡಿದ ರಾಷ್ಟ್ರ ಪುರುಷ ಅಂಬೇಡ್ಕರ್. ಕೆಳವರ್ಗದ ಜಾತಿ ಆಧಾರಿತ ಶೋಷಣೆ ಇನ್ನ ಸಂಪೂರ್ಣ ತೊಲಗಿಲ್ಲ. ವಿದ್ಯಾವಂತನಾದರೂ ‘ಕೆಳಜಾತಿಯವ’ ಎಂಬ ಕಾರಣನೀಡಿ ಮೇಲು-ಕೀಳು ಬಿರುಕನ್ನ ಜೀವಂತವಾಗಿ ಕಾಯ್ದುಕೊಂಡವರೂ ಇದ್ದಾರೆ. ಈ ಹೈಟೆಕ್ ಯುಗದಲ್ಲೂ ಬೇರೆ ಜಾತಿಯ ಹುಡುಗನನ್ನು ಮದುವೆಯಾದ ಕಾರಣಕ್ಕೆ ‘ಮರ್ಯಾದಾ ಹತ್ಯೆ’ಯಂತಹ ಭೀಕರ ಪ್ರವೃತ್ತಿಗೂ ಮುಂದಾಗಿರುವುದು ಗಂಭೀರವಾಗಿ ಚಿಂತಿಸಬೇಕಾದ ವಿಷಯವೇ. 87 ವರ್ಷಗಳಿಂದ ಸದ್ದಿಲ್ಲದ ಸಾಮಾಜಿಕ ಪರಿವರ್ತನೆಯಲ್ಲಿ ತೊಡಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ಥಾಪನೆಯ ದಿನದಿಂದಲೂ ಸಾಮಾಜಿಕ ಸಾಮರಸ್ಯದ ಪ್ರಯತ್ನಗಳಲ್ಲಿ ಸಕ್ರಿಯವಾಗಿದೆ. ಸಾಮರಸ್ಯಕ್ಕೆ ಬೇಕಾಗಿರುವುದು ‘ತೆರೆದ ಮನಸ್ಸು’ ಮಾತ್ರ!
ಮಲೆನಾಡಿನ ಪೂರ್ಣಚಂದ್ರ ತೇಜಸ್ವಿ ಇರಲಿ ಕರಾವಳಿಯ ಪ್ರೊ|| ಅಮೃತ ಸೋಮೇಶ್ವರ ಇರಲಿ ಅಥವಾ ಕೋಲಾರದ ಗುಡಿಬಂಡೆಯ ಡಾ|| ಎಂ.ಟಿ.ಕಾಂಬೈ ಇರಲಿ ‘ಸಾಮರಸ್ಯ’ ನನಗದು ಅತ್ಯಂತ ಪ್ರಿಯವಾದ ಶಬ್ದ ಎನ್ನುವುದುಂಟು. ಅದು ಮನೆಯಲಿರಲಿ, ವ್ಯಾಪಾರವಿರಲಿ ಕೊನೆಗೆ ರಾಜಕಾರಣವೇ ಇರಲಿ ಸಾಮರಸ್ಯಬೇಕು.
ಈ ಸಾಮರಸ್ಯ ಮನುಷ್ಯನಲ್ಲೇ ಇದೆ. ಕಾಲಿರಲಿ, ಕೈಯಿರಲಿ, ತಲೆಯಿರಲಿ ಒಂದಕ್ಕೊಂದು ಪೂರಕವೇ. ಕಾಲಿಗೆ ಮುಳ್ಳು ಚುಚ್ಚಿದಾಗ ಕೈ ‘ತನಗೇನೂ ಆಗಿಲ್ವಲ್ಲ’ ಎಂದು ಸುಮ್ಮನಿರುವುದಿಲ್ಲ. ಹೀಗೆ ಒಂದಕ್ಕೊಂದು, ಒಬ್ಬರಿಗೊಬ್ಬರು ಪೂರಕವಾಗಿ ಯೋಚಿಸುವುದು, ನೆರವಿಗೆ ಮುಂದಾಗುವುದೇ ಸಾಮರಸ್ಯ. ಶರೀರದಲ್ಲಿರುವ ಈ ಸಮರಸತೆ, ಸಮಾಜದಲ್ಲೂ ಬರಬೇಕಷ್ಟೆ.
ಹಾಗೇ ಸಮಾಜ ಸಾಮರಸ್ಯದಿಂದಿರಲು ತೊಡಕುಗಳೂ ಇವೆ. ವಿದ್ಯೆ, ಆಸ್ತಿ, ಅಂತಸ್ತು, ಜಾತಿ, ಭಾಷೆ ತೊಡಕು ತಂದುಹಾಕುತ್ತೇವೆ. ವಿದ್ಯೆ, ಸಿರಿವಂತಿಕೆ ಇದೆಯಲ್ಲ ಅದು ಅವರವರು ಗಳಿಸಿದ್ದು, ಆದರೆ ಜಾತಿ- ಅದು ಗಳಿಸಿದ್ದಲ್ಲ. ಅದು ಹುಟ್ಟಿದಾಗ ಅಂಟಿಕೊಂಡಿದ್ದು.
‘ಮಂಡಲ್ ವರದಿ’ ಖ್ಯಾತಿಯ ಆ ಬಿಂದೇಶ್ವರ ಪ್ರಸಾದ್ ಮಂಡಲ್ ಪ್ರಕಾರ ಭಾರತದಲ್ಲಿ 5600 ಜಾತಿಗಳು. ಜಾತಿ ಇರೋದೆ ತಪ್ಪಾ? ಹಾಗೆ ಹೇಳೋರು ಇದಾರೆ. ಅವರೊಂದಿಗೆ ಹೊಸ ಜಾತಿನೇ ಆಗಿದ್ದಾರೆ. ಯಾವುದರಲ್ಲಿ ಜಾತಿ ಇಲ್ಲ? ಭತ್ತದಲ್ಲಿ ಅದೆಷ್ಟು ನಮೂನೆ? ಮಾವಿನಹಣ್ಣಿನಲ್ಲಿ ಅದೆಷ್ಟು ಥರಾ? ಬದನೆಕಾಯಿಯಲ್ಲೂ ಅದೆಷ್ಟು ರೀತಿ? ಹೋಗಲಿ ನಮ್ಮ ದೇಶದ ಮಣ್ಣಿದೆಯಲ್ಲ ಅದೆಷ್ಟು ಬಗೆ? ಈ ನಮೂನೆ, ಥರ, ಬಗೆ, ರೀತಿಗಳೇ ಜಾತಿಗಳಾಗೋದು. ಬಣ್ಣವೋ, ರುಚಿಯೋ, ಗುಣ ಸ್ವಭಾವವೋ ಜಾತಿ ಆಗಿಬಿಡುತ್ತದೆ ಸರಿ. ಆದರೆ ‘ನಾನೇ ಮೇಲು’ ಎಂಬ ಈ ‘ಶ್ರೇಷ್ಠತೆಯ ವ್ಯಸನ’ ಇದೆಯಲ್ಲ ಇದು; ವಿವೇಕ’ ಇರೋ ಮನುಷ್ಯ ಸಂಕುಲದಲ್ಲಿ ಮಾತ್ರ. ಅದು ಯಾವುದೇ, ಯಾರದೇ ಭಾಷಣವಿರಲಿ ಸಾಮಾನ್ಯವಾಗಿ ಶುರುವಾಗುವುದು ‘ಅಣ್ಣತಮ್ಮಂದಿರೇ’ ಎಂದಲ್ಲವೇ? ಆಸ್ತಿ ಹಂಚಿಕೊಳ್ಳುವುದು ಬೇಡ ಸ್ವಾಮಿ, ಒಟ್ಟಿಗೆ ಕೂತು ಒಂದೇ ಸಾಲಿನಲ್ಲಿ ಊಟ ಮಾಡಲೇನು ಅಡ್ಡಿ? ಹೆಗಲ ಮೇಲೆ ಕೈಹಾಕಿ ಪ್ರೀತಿಯಿಂದ ಮಾತನಾಡಿಸಲೇನು ಸಂಕಟ? ನಮ್ಮೂರ ದೇವಸ್ಥಾನಕ್ಕೆ ಇದೇ ಅಣ್ಣತಮ್ಮಂದಿರೆಲ್ಲ ಬಂದರೇಕೆ ಕಿರಿಕಿರಿ?
ಸಮಸ್ಯೆ ಇರುವುದೇ ಈ ನಡೆನುಡಿಯ ನಡುವಿನ ಅಂತರದಲ್ಲಿ. ಅಸಲಿಗೆ ನಮ್ಮ ವೇದಗಳು, ಉಪನಿಷತ್ತುಗಳು ಜಗತ್ತಿನ ಹಿತವನ್ನೇ ಮಾತನಾಡುತ್ತವೆ. ಆದರೆ ವೇದದ ವಕ್ತಾರಿಕೆ ಹಿಡಿದೋರು ಜಗತ್ತಿನಲ್ಲಿ ಪಕ್ಕದ ಕೇರಿಯವನನ್ನೂ ಹತ್ತಿರ ಸೇರಿಸುವುದಿಲ್ಲ, ಶರಣರನ್ನು, ವಚನಕಾರರನ್ನು ಕಂಠಪಾಠ ಮಾಡಿರೋರು ಇದಾರೆ, ಅರ್ಥ ತಿಳಿದು ಆಚರಿಸುವವರನ್ನು ಹುಡುಕಬೇಕಷ್ಟೆ. ಕೋಲಾರ ಜಿಲ್ಲೆಯಲ್ಲಿ ಬಸ್ಸಿನಲ್ಲೊಮ್ಮೆ ಪ್ರಯಾಣಸಾಗಿತ್ತು. ಹಳ್ಳಿಯೊಂದರಲ್ಲಿ ಬಸ್ಸು ನಿಂತಾಗ ಕೆಲವು ಕಾಲೇಜು ಹುಡುಗರು ಹತ್ತಿದರು. ಹಾಗೆ ಬಂದು ಪಕ್ಕದಲ್ಲಿ ಕೂತವನ ಹತ್ತಿರ ಮಾತಿಗಿಳಿದಿದ್ದೆ. ಹೆಸರು, ಊರು, ಕಾಲೇಜು, ಕೋರ್ಸು, ಕಾಂಬಿನೇಶನ್ ಕೇಳುತ್ತಲೇ ‘ನಿಮ್ಮ ಊರಲ್ಲೊಂದು ಚರ್ಚ್ ಆಗಿದೆಯಂತಲ್ಲ, ಹೌದಾ?’ ಎಂದೆ.
ಈ ಪ್ರಶ್ನೆಯನ್ನವನು ನಿರೀಕ್ಷಿಸಿರಲಿಲ್ಲ. ‘ಇಲ್ಲ ಸ್ಸಾರ್ ನಮ್ಮೂರಲ್ಲಿ ಚರ್ಚ್ ಇಲ್ಲ, ಎಂದ. ನನಗೂ ಅವನ ಊರಿನ ಬಗ್ಗೆ ಗೊತ್ತಿರಲಿಲ್ಲ, ಆದರೂ ಜೋರಾಗಿ ಕೇಳಿದೆ, ’ಇಲ್ಲ ನಿಮ್ಮೂರಲ್ಲಿ ಆಗಿದೆ’. ಆಗವನು ಹೇಳಿದ ’ಹೌದು ಸ್ಸಾರ್ ಚರ್ಚ್ ಆಗಿದೆ. ಆದರೆ ನಮ್ಮೂರಲ್ಲಲ್ಲ. ನಮ್ಮೂರ ಹೊರಗೆ ಕಾಲೋನಿಯಲ್ಲಿ!’.
ಕಾಲೋನಿಗೆ ಚರ್ಚ್ ಬಂದಿದೆ, ಮತಾಂತರ ನಡೀತಾ ಇದೆ. ತಲೆಬಿಸಿ ಮಾಡಬೇಕಾದ ವಿಚಾರವೇ ಆದರೆ ಆಳದಲ್ಲಿ ಇನ್ನೊಂದಿಷ್ಟು ಪ್ರಶ್ನೆಗಳಿವೆ.
ಚರ್ಚ್ ಕಾಲೋನಿಯಲ್ಲೇ ಏಕೆ ಆಗುತ್ತೆ? ಬ್ರಾಹ್ಮಣರ ಅಗ್ರಹಾರದಲ್ಲೊ, ಲಿಂಗಾಯಿತರ ಓಣಿಯಲ್ಲೊ ಏಕೆ ಆಗೋಲ್ಲ? ಅದಕ್ಕಿಂತ ಮುಖ್ಯವಾಗಿ ಕಾಲೋನಿ ಏಕೆ ಊರಿನಿಂದ ಹೊರಗಿದೆ?
ಅದೇ ಊರಿನ ಕಾಲೇಜು ಓದುವ ವಿದ್ಯಾವಂತನಿಗೆ ಕಾಲೋನಿನೂ ನಮ್ಮೂರೇ ಅಂತ ಅನ್ನಿಸೊಲ್ಲ ಏಕೆ?
ಹೀಗೆ ಹೊರಗಿಡೋದು, ದೂರ ಇಡೋದು, ಮುಟ್ಟದಿರುವುದು ನಮ್ಮ ಸಮಾಜಕ್ಕಂಟಿರುವ ಹಳೇ ಖಾಯಿಲೆ. ಎಷ್ಟು ಹಳೆಯದು ಅನ್ನವಾಗ ಕೆಲವರು ಮಹಾಭಾರತದ ಕರ್ಣ, ಏಕಲವ್ಯನವರೆಗೂ ಹೋಗುವುದಿದೆ. ಆದರೆ ವಾಲ್ಮೀಕಿ, ವ್ಯಾಸ, ಕಾಳಿದಾಸ, ಅಶ್ವಘೋಷ ಇವರ್ಯಾರು ಬ್ರಾಹ್ಮಣರಾಗಿರಲಿಲ್ಲ. ಅಂತಹ ಶೂದ್ರರಿಗೂ ಸಂಸ್ಕೃತ ‘ಲೀಲಾಜಾಲ’ ಎನ್ನವಷ್ಟು ಒಲಿದಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳ ಬೇಕಾಗುತ್ತದೆ.
ಮುಸಲ್ಮಾನರು, ಕ್ರಿಶ್ಚಿಯನ್ನರ ದಾಳಿಯಿಂದ ಹೀಗಾಯ್ತು ಅನ್ನುವುದು ಹೊಣೆಗೇಡಿತನವೇ ಆಗುತ್ತದೆ. 12ನೇ ಶತಮಾನದಲ್ಲಿ ಬಸವಣ್ಣ, ೬ನೇ ಶತಮಾನದಲ್ಲಿ ಬುದ್ಧ ಪರಿಹಾರ ಹುಡುಕಲು ಹೆಣಗಿದ್ದಾರೆ ಅಂದರೆ ಸಮಸ್ಯೆ ಇತ್ತು ಅಂತ ತಾನೆ ಅರ್ಥ? ಆದರೆ ಇದ್ದ ಅಂತರವನ್ನು ಪರಕೀಯರು ಕಂದಕ ಮಾಡಿಟ್ಟರು ಅನ್ನೋದು ವಾಸ್ತವವೇ.
ಅಸ್ಪೃಶ್ಯತೆಯ ಅರ್ಥವಾಗಬೇಕಾದರೆ ಆ ನೆಲದಲ್ಲಿ ನಿಂತು ಅದನ್ನು ಅನುಭವಿಸಬೇಕು. ಬಾಬಾಸಾಹೇಬ್ ಅಂಬೇಡ್ಕರ್ ಅಮೇರಿಕಾದ ಕೊಲಂಬಿಯಾಕ್ಕೆ ಹೋಗಿ ಓದಿಕೊಂಡು ಬಂದಿದ್ದರು. ಬರೋಡ ಮಹಾರಾಜರ ಹತ್ತಿರ ಅವರಿಗೆ ಕೆಲಸವೂ ಸಿಕ್ಕಿತು. ಆದರೆ ಅವರಿಗೆ ಉಳಿಯಲಿಕ್ಕೆ ಒಂದು ರೂಮು, ಒಂದು ಮನೆ ಸಿಗಲಿಲ್ಲ. ಅವತ್ತು ಬಾಬಾಸಾಹೇಬರ ಹತ್ತಿರ ಇದ್ದ ಆಸ್ತಿ ಅಂದರೆ 30 ಪೆಟ್ಟಿಗೆ ಪುಸ್ತಕಗಳು. 3 ದಿನಗಳ ಕಾಲ ಅವರೊಂದು ಮರದ ಕೆಳಗೆ ತಮ್ಮ ಆಸ್ತಿ ಸಮೇತ ಇದ್ದರು. ಕೊನೆಗೆ ಅವರಿಗೆ ರೂಮು ಸಿಕ್ಕಿದ್ದು ಯಾವುದೋ ಪಾರ್ಸಿ ಹೊಟೇಲಿನಲ್ಲಿ.
ತುಂಬ ಸಲ ಈ ಅಸ್ಪಶ್ಯತೆ, ಮಡಿ, ಮೈಲಿಗೆ ಆಚರಿಸುವವರೆಲ್ಲ ಬ್ರಾಹ್ಮಣರೇನೆ ಅಂದ್ಕೋತೀವಿ. ಆದರೆ ಹಾಗಿಲ್ಲ, ಬ್ರಾಹ್ಮಣರ ಮೇಲ್ಪಂಕ್ತಿ ಇದೆ ಅನ್ನೋದು ವಾಸ್ತವವೇ. ಮಧ್ಯಮ ಎನಿಸಿದ ಜಾತಿಗಳಲ್ಲೂ ಶ್ರೇಷ್ಠತೆಯ ವ್ಯಸನ ಅಪಾಯಕಾರಿ ಮಟ್ಟದಲ್ಲಿದೆ. ಆದರೆ ಇವತ್ತು ನೀವು ಕರಾವಳಿ, ಮಲೆನಾಡಿನ ಕೆಲವು ಜಿಲ್ಲೆಗಳನ್ನು ಬಿಟ್ಟರೆ ಉಳಿದ ಜಿಲ್ಲೆಗಳ ಹಳ್ಳಿಗಳಲ್ಲಿ ಬ್ರಾಹ್ಮಣರೇ ಇಲ್ಲ. ಇದ್ದರೂ ಒಂದೋ ಎರಡೋ ಮನೆ. ಎಲ್ಲ ಊರು ಬಿಟ್ಟು ಪಟ್ಟಣ ಸೇರಿದ್ದಾರೆ. ಬ್ರಾಹ್ಮಣರು ಖಾಲಿಯಾದರೂ ಅಂತ ಅಸ್ಪೃಶ್ಯತೆ ಮಾಯವಾಗಿದೆಯಾ? ಬ್ರಾಹ್ಮಣರ ಅಸ್ಪೃಶ್ಯತೆಯಾದರೂ ‘ಥೂ ಮುಂಡೇವಾ’ ಅಂತ ಶಪಿಸಿ ಒಂದು ಸ್ನಾನ ಮಾಡುವುದರಲ್ಲಿ ಮುಗಿದುಹೋಗುತ್ತಿತ್ತು. ಆದರಿವತ್ತು ಎಕರೆಗಟ್ಟಲೆ ಜಮೀನಿನ ಒಡೆತನ ಹೊಂದಿರೊ ಜಾತಿಗಳು ದಬ್ಬಾಳಿಕೆಗೆ ದಾರಿ ಹಿಡಿದಿರೋದ್ರಿಂದ ಹೆಣಗಳು ಬೀಳ್ತಾ ಇದೆ. ಬದನವಾಳು, ಕಂಬಾಲಪಲ್ಲಿಗಳು-ವರ್ಷಕ್ಕೆ ಒಂದೋ ಎರಡೋ ಇದ್ದೇ ಇರುತ್ತವೆ.
ಸರ್ಕಾರದ ಕಾನೂನು ಕಟ್ಟಲೆಗಳು ಇದನ್ನೇನಾದರೂ ಸರಿ ಮಾಡಬಹುದಾ? ಸರ್ಕಾರ ಶಿಕ್ಷಣ, ಉದ್ಯೋಗದಿಂದ ಹಿಡಿದು ಪಂಚಾಯ್ತಿ ಚುನಾವಣೆವರೆಗೂ ಮೀಸಲಾತಿ ತಂದಿದೆ. ಸರ್ಕಾರದ ಈ ಕಾನೂನುನ್ನು ಪ್ರಬಲ ಜಾತಿ, ಸಮುದಾಯಗಳು ಹೇಗೆ ನಿಷ್ಟ್ರಭಗೊಳಿಸುತ್ತವೆ ಎಂಬುದನ್ನು ನೋಡಲು ನೀವು ಕೊಡಗಿಗೆ ಬರಬೇಕು.
ಕೊಡಗಿನ ವಿರಾಜಪೇಟೆ ತಾಲೂಕಿನ ಹಾಲಗುಂದ ಎಂಬುದೊಂದು ಗ್ರಾಮ ಪಂಚಾಯ್ತಿ. ಒಮ್ಮೆ ಇಲ್ಲಿ ಚುನಾವಣೆ ಮುಗಿದಾಗ ಸರ್ಕಾರದ ನಿಯಮ ‘ಎಸ್ಸಿ ಮಹಿಳೆಗೆ ಅಧ್ಯಕ್ಷ ಪಟ್ಟ’ ಎಂದು ಹೇಳುತ್ತಿತ್ತು. ಗೆದ್ದ ಹದಿನೈದು ಜನರಲ್ಲಿ ಆ ಆರ್ಹತೆ ಇದ್ದದ್ದು ಒಬ್ಬರಿಗೆ ಮಾತ್ರ. ಅಧ್ಯಕ್ಷೆಯಾಗಿ ಆ ಹೆಣ್ಣುಮಗಳನ್ನು ಅನುಮೋದಿಸಬೇಕು. ಯಾರೂ ಅದರ ಉಸಾಬರಿಗೆ ಹೋಗಲಿಲ್ಲ. ಕೊನೆಗದು ಕೋರ್ಟ್ ಮೆಟ್ಟಿಲೇರಿತು. ನ್ಯಾಯಾಲಯ ‘ಉಳಿದ 14 ಸದಸ್ಯರು ಹೃದಯವಿಲ್ಲದವರು, ಹೀಗಾಗಿ ಈ ಎರಡೂವರೆ ವರ್ಷ ಮಾತ್ರ ಅಲ್ಲ. ಐದೂ ವರ್ಷಕ್ಕೂ ಈ ಮಹಿಳೆಯೇ ಅಧ್ಯಕ್ಷೆಯಾಗಿರಲಿ’ ಎಂದು ತೀರ್ಪು ಕೊಟ್ಟಿತು. ಸಮಸ್ಯೆ ಬಗ್ಗೆ ಎಷ್ಟು ಪುಟ ಚರ್ಚಿಸಿದರೂ ಕಡಿಮೆಯೇ. ಹೀಗಾಗಿ ಇನ್ನು ಪರಿಹಾರದ ದಿಕ್ಕಿಗೆ ಹೊರಳೋಣ.
ಬುದ್ಧ, ಬಸವ, ಕನಕ, ನಾರಾಯಣಗುರು, ಸಾವರಕರ್, ವಿವೇಕಾನಂದ, ಗಾಂಧಿ, ಗುರೂಜಿ ಹೀಗೆ ಹಲವು ಸಮಾಜ ಸುಧಾರಕರು ಸಾಮರಸ್ಯ ತರಲೆಂದು ಇನ್ನಿಲ್ಲದ ಪ್ರಯತ್ನ ಮಾಡಿದ್ದಾರೆ. ಸಮಸ್ಯೆಯ ಬೇರುಗಳು ಎಷ್ಟು ಆಳಕ್ಕಿಳಿದಿದೆ ಎಂದರೆ ಅಷ್ಟು ಸುಲಭಕ್ಕೆ ಏನೂ ಆಗದು.
ಇದನ್ನೆಲ್ಲ ತಿಳಿಗೊಳಿಸಬೇಕೆಂದರೆ ಧರ್ಮಾಚಾರ್ಯರನ್ನೂ ಮಠಾಧೀಶರನ್ನೂ ಅಣಿಗೊಳಿಸಬೇಕೆಂದು ಪ್ರಯತ್ನಶೀಲರಾದವರು ಶ್ರೀ ಗುರೂಜಿ. ಆರೆಸ್ಸೆಸ್ನ ಎರಡನೇ ಸರಸಂಘಚಾಲಕರಾಗಿದ್ದ ಶ್ರೀ ಗುರೂಜೀ 60, 70 ರ ದಶಕದಲ್ಲಿ ಇದಕ್ಕಾಗಿಯೇ ಸಾವಿರಾರು ಸಾಧು, ಸಂತರು ಧರ್ಮಾಚಾರ್ಯರನ್ನು ಭೇಟಿ ಮಾಡಿ ಚರ್ಚಿಸಿದರು. ’ನಿಮ್ಮನ್ನು ನೀವು ಜಗದ್ಗುರುಗಳು ಎಂದು ಕರೆದುಕೊಳ್ಳುತ್ತೀರಿ. ನಿಮ್ಮ ಜಗತ್ತಿನಲ್ಲಿ ದಲಿತರು, ವನವಾಸಿಗಳು ಇದ್ದಾರೇನು? ಅಂತಹ ವಂಚಿತರೊಂದಿಗೆ ಕೈಜೋಡಿಸದೇ ನೀವು ಜಗದ್ಗುರುಗಳಾಗೋದು ಹೇಗೆ?’ ಇಂತಹ ನೇರ, ದಿಟ್ಟ ಪ್ರಶ್ನೆಗಳ ಮೂಲಕ ಗುರೂಜಿ ಮಠಾಧೀಶರ ಮನಸ್ಸುಗಳನ್ನು ಕಲಕಿದರು.
ಇದೆಲ್ಲದರ ಪರಿಣಾಮವಾಗಿ 1969 ರಲ್ಲಿ ಉಡುಪಿಯಲ್ಲಿ ಧರ್ಮಾಚಾರ್ಯರು, ಮಠಾಧೀಶರು ಒಂದೆಡೆ ಸೇರಿದರು. ಚರ್ಚಿಸಿದರು. ‘ಅಸ್ಪೃಶ್ಯತೆ ಶಾಸ್ತ್ರ ಸಮ್ಮತವಲ್ಲ, ಎಲ್ಲ ಹಿಂದುಗಳು ಸೋದರರು. ಯಾವ ಹಿಂದುವೂ ಪತಿತನಲ್ಲ’ ಎಂದು ಘೋಷಿಸಿದರು.
ಇದೆಲ್ಲದರ ಪರಿಣಾಮವಾಗಿ ಇಂದು ನೂರಾರು ಸಾಧು, ಸಂತರು, ಮಠಾಧೀಶರು, ದಲಿತಕೇರಿಗೆ ಪಾದಯಾತ್ರೆ ಮಾಡುವ, ಮೈಮುಟ್ಟಿ ಆಶೀರ್ವದಿಸುವ ಸ್ಥಿತಿ ಬಂದಿದೆ. ಅಷ್ಟು ಮಾತ್ರಲ್ಲ ೧೯೮೯ರಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಶಿಲಾನ್ಯಾಸದ ಸಂದರ್ಭದಲ್ಲಿ ನೂರಾರು ಸಾಧು, ಸಂತರು, ಮಠಾಧೀಶರ ಸಮ್ಮುಖದಲ್ಲೇ ದಲಿತ ಬಂಧು ಕಾಮೇಶ್ವರ ಚೌಪಾಲ್ ಮೊದಲ ಇಟ್ಟಿಗೆ ಇಡುವತ್ತ ಕ್ರಾಂತಿ ಸಾಧ್ಯವಾಗಿದೆ.
ಹೀಗೆ ಸಾಮಾಜಿಕ ಪರಿವರ್ತನೆಯ ತಂಗಾಳಿ ಸಣ್ಣದಾಗಿಯಾದರೂ ಬೀಸುತ್ತಲಿರುವ ಈ ಹೊತ್ತಿನಲ್ಲಿ ಪ್ರತಿಯೊಬ್ಬರೂ ನಾನೇನು ಮಾಡಬಹುದೆಂದು ಯೋಚಿಸಿ ಗಟ್ಟಿ ಹೆಜ್ಜೆ ಇಡುವುದೇ ಬಹಳ ಮುಖ್ಯವಾದದ್ದೆನಿಸುತ್ತದೆ.
ಮೊಮ್ಮಗನಿಂದ ಪ್ರಾಯಶ್ಚಿತ್ತ
1930-ನಾಸಿಕ್ನ ಕಾಳಾರಾಮ ದೇವಾಲಯ ದೆದುರು ಜನಜಂಗುಳಿ. ‘ನಮಗೂ ದೇವಾಲಯ ಪ್ರವೇಶಕ್ಕೆ ಅವಕಾಶ ಕೊಡಿ’ ಸೇರಿದ ಜನರ ಒಕ್ಕೊರಲ ಮನವಿ. ಸ್ವತಃ ಡಾ|| ಬಾಬಾಸಾಹೇಬ ಅಂಬೇಡ್ಕರ್ರವರ ನೇತೃತ್ವ. ಸವರ್ಣೀಯರು ಅಡ್ಡನಿಂತರು. ದೇವಾಲಯ ಪ್ರವೇಶದ ಮಾತು ದೂರ ಉಳಿಯಿತು. ಸರಿಯಾಗಿ 75 ವರ್ಷದ ನಂತರ 2005ರಲ್ಲಿ ಅಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಈಗ ಆ ದೇವಾಲಯದಲ್ಲಿ ಅವತ್ತಿನ ಅರ್ಚಕರ ಮೊಮ್ಮಗ ಸುಧೀರ್ಪೂಜಾರಿ ಕೈಯಲ್ಲಿ ಅರ್ಚಕ ಹುದ್ದೆ. ಸುಧೀರ್ಗೆ ಬಾಲ್ಯದಿಂದಲೇ ಆರೆಸ್ಸೆಸ್ ಸಂಪರ್ಕ ಪರಿಣಾಮವಾಗಿ ಕಳೆದ ಅಂದಿನ ಪಾಪವನ್ನು ಅವರು ತೊಳೆದುಕೊಂಡರು. ಈಗ ಆ ದೇವಾಲಯಕ್ಕೆ ಎಲ್ಲರಿಗೆ ಮುಕ್ತ ಪ್ರವೇಶ.
ಅಷ್ಟು ಮಾತ್ರವಲ್ಲ. ದೇವಸ್ಥಾನದ ಆದಾಯದಲ್ಲಿ ನೂರು ದಲಿತ ಮಕ್ಕಳ ವಿದ್ಯಾಭ್ಯಾಸದ ಖರ್ಚು ನೋಡಿಕೊಳ್ಳುವುದಾಗಿ ಘೋಷಣೆ. ಇದು ಅಜ್ಜನ ತಪ್ಪಿಗಾಗಿ ನಮ್ಮ ಪ್ರಾಯಶ್ಚಿತ್ತದ ಕ್ರಮ ಎಂಬ ನಮ್ರ ವಿವರಣೆ.
ಯಾವುದು ಮೈಲಿಗೆ?
ಪ್ರಶ್ನೆ: ಇಂದಿಗೂ ಹರಿಜನರಿಗೆ ಎಷ್ಟೋ ಹಳ್ಳಿಗಳಲ್ಲಿ ದೇವಾಲಯಗಳಿಗೆ ಪ್ರವೇಶ ನೀಡುವುದಿಲ್ಲ. ಹರಿಜನರಿಗೂ ದೇವಾಲಯಗಳಿಗೆ ಹೋದಲ್ಲಿ ಮೈಲಿಗೆಯಾದೀತೆಂಬ ಅಂಜಿಕೆ. ಇದರಿಂದ ಹೊರಬರುವ ಹಾದಿ?
ಉತ್ತರ: ಯಾರಿಗೆ ಮೈಲಿಗೆ? ದೇವರಿಗೇ? ಮನುಷ್ಯರ ಸಂಪರ್ಕದಿಂದ ಮೈಲಿಗೆಯಾಗುವಂತಿದ್ದಲ್ಲಿ ದೇವರಿಗಿಂತ ಮನುಷ್ಯನೇ ಪ್ರಬಲ ಎಂದ ಹಾಗೆ ಆಯಿತು! ದೇವರ ಹೆಸರೇ ಪತಿತಪಾವನ. ಮನುಷ್ಯನ ಅಂತರಂಗದ ಕೊಳೆಯನ್ನು ತೊಳೆಯುವ ನೈರ್ಮಲ್ಯದ ಝರಿ. ಆ ಗಂಗೆಯೇ ಮೈಲಿಗೆಯಾಗುವುದೆಂತು?
ಇನ್ನೂ ಒಂದು ಮಾತಿದೆ, ಭಗವಂತ ಸರ್ವವ್ಯಾಪಿ. ಸಕಲ ಚರಾಚರ ಸೃಷ್ಟಿಯಲ್ಲೂ ಅವನ ಚೇತನ ಸ್ಪಂದಿಸುತ್ತದೆ. ಮಿಕ್ಕೆಲ್ಲ ಕಡೆಗಳಿಗಿಂತ ಮಿಗಿಲಾಗಿ ಮನುಷ್ಯನಲ್ಲಿ ಆ ಚೇತನ ಅಭಿವ್ಯಕ್ತಗೊಳ್ಳುತ್ತದೆ. ಮಾನವರೆಲ್ಲರು ಅಮೃತತ್ವದ ಪುತ್ರರು. ಇದು ನಮ್ಮ ಧರ್ಮದ ಸಾರ. ಹೀಗೆ ಪ್ರತಿ ಮಾನವನಲ್ಲಿ ದೈವತ್ವವೇ ತುಂಬಿರುವಾಗ ಅವನು ಮೈಲಿಗೆ ಆಗುವುದೆಂತು? ಪರಮಾತ್ಮನಂತೆ ಎಲ್ಲ ಜೀವಗಳೂ ನಿತ್ಯಶುದ್ಧ, ನಿತ್ಯಪವಿತ್ರ.
(‘ಉತ್ಥಾನ’ ಮಾಸಪತ್ರಿಕೆಯ ‘ಪರಿಪ್ರಶ್ನ’ ಅಂಕಣದಲ್ಲಿ ಆರೆಸ್ಸೆಸ್ ನಾಯಕರಾಗಿದ್ದ ಹೊ. ವೆ. ಶೇಷಾದ್ರಿಯವರ ಜೊತೆಗಿನ ಪ್ರಶ್ನೋತ್ತರದಲ್ಲಿ)
ನಾವೇನು ಮಾಡಬಹುದು?
- ಮನೆಯಲ್ಲಿ ನಮ್ಮ ಸ್ವಜಾತಿ ಹೊರತಾದ ಮಹಾಪುರುಷರ ಭಾವಚಿತ್ರ ಇಡಬಹುದೇ? ಉದಾ: ಡಾ|| ಅಚಿಬೇಡ್ಕರ್, ನಾರಾಯಣಗುರು, ಬಸವೇಶ್ವರ, ಕನಕದಾಸ….. ಇತ್ಯಾದಿ ಹಾಗೆ ಇಟ್ಟಾಗ ಮನೆಗೆ ಬಂದು ಬಂಧು, ಮಿತ್ರರು ಕೇಳ್ತಾರೆ; ಏನ್ ತಮ್ಮಾ ಇದು ಹೀಗೆ?’ ಆಗ ವಿವರಿಸಬೇಕಾಗುತ್ತದೆ, ಮನೆ, ಮನೆಗಳಲ್ಲೂ ಸಾಮರಸ್ಯದ ಚರ್ಚೆ ಶುರುವಾಗುತ್ತದೆ.
- ನಮಗೆ ಎಲ್ಲ ಜಾತಿಯವರೂ ಸ್ನೇಹಿತರಿದ್ದಾರೆಯೇ? ಆತ್ಮೀಯರಿದ್ದಾರೆಯೇ? ಈ ಕುರಿತು ಯೋಚಿಸಬಹುದೇ?
- ನಮ್ಮ ಮನೆಗೆ ಎಲ್ಲರೂ ಬರುವ ಹಾಗೆ ಮಾಡಬಹುದೇ? ಬಾಗಿಲು ತೆರೆದರೆ ಸಾಲದು, ನಾವೂ ಹೋಗಬೇಕು, ಕರೆತರಬೇಕು.
- ಮಕ್ಕಳ ಹುಟ್ಟುಹಬ್ಬ-ಕುಲದೇವರ ಪೂಜೆ ಇತ್ಯಾದಿಗಳಿಗೆ ನಿಜಕ್ಕೂ ನಮಗೆ ‘ಬೇಕಾದವರ’ನ್ನು ಕರೆಯಬಹುದೇ? ನಮಗೆ ನಿತ್ಯ ಬೇಕಾದವರೆಂದರೆ- ನಮ್ಮ ಮನೆಗೆ ಪೇಪರ್ ಹಾಕುವವ, ಹಾಲು, ತರಕಾರಿ ತಂದು ಕೊಡುವವ, ಇಸ್ತ್ರಿ ಮಾಡಿಕೊಡುವವ, ಹರಿದ ಚಪ್ಪಲಿ ಹೊಲಿದು ಕೊಡುವವ, ಮನೆಗೆಲಸಕ್ಕೆ ನೆರವಾಗುವವ ಇತ್ಯಾದಿ.
- ಮಾಡುವ ಕೆಲಸವನ್ನು ಕೀಳೆಂದು ಭಾವಿಸಿ ಅಂತಹವರನ್ನು ಏಕವಚನದಲ್ಲಿ ಕರೆಯೋದು ಇದೆ. ಈ ರೋಗ ಮನೆ ಮಕ್ಕಳಿಗೂ ಹರಡದಂತೆ ‘ಸಂಸ್ಕೃತಿ’ ಕಲಿಸಬಹುದೇ?
- ರಜೆ ಬಂದಾಗ ತೀರ್ಥಯಾತ್ರೆಗೋ, ಫ್ಯಾಂಟಸೀ ಪಾರ್ಕ್ಗೋ ಹೋಗುವ ಬದಲು ವನವಾಸಿ ಪ್ರದೇಶಗಳಿಗೆ ಹೋಗಬಹುದೇ? ಅಲ್ಲಿನ ಜನ ಜೀವನ ಅರ್ಥಮಾಡಿಕೊಳ್ಳಬಹುದೇ?
- ನಮ್ಮ ಅಪ್ಪನಿಗೆ ನಮಗಿಂತ ಕಡಿಮೆ ಆದಾಯ ಇತ್ತು. ಆದರೂ ೩-೪ ಮಕ್ಕಳನ್ನು ಸಾಕಿ-ಸಲುಹಿ ಬೆಳೆಸಿದರು. ನಮಗೀಗ ಒಂದೇ ಮಗು, ಆದಾಯವೂ ಜಾಸ್ತಿ. ನಾವೇಕೆ ಇನ್ನೂ ಒಂದೆರಡು ಅರ್ಹಮಕ್ಕಳನ್ನು ದತ್ತು ಪಡೆದು ಓದಿಸಬಾರದು?
- ನಮಗೆ ಹತ್ತಿರ ಇರುವ, ನಮ್ಮ ಮಾತು ನಡೆಯುವ ದೇವಸ್ಥಾನಗಳನ್ನೂ ಸಾಮಾಜಿಕ ಕೇಂದ್ರವಾಗುವಂತೆ ಪ್ರಯತ್ನಿಸಬಹುದೇ? ದೇವಸ್ಥಾನದಲ್ಲಿ ಎಲ್ಲರಿಗೂ ಪ್ರವೇಶ-ಸಮಾಜ ಅವಕಾಶ – ಕೆಳವರ್ಗದ ಮಕ್ಕಳಿಗೆ ಸಂಸ್ಕೃತ-ವೇದ ಕಲಿಕೆ, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ – ಸಮಾಜ ಸುಧಾರಕರ ಜಯಂತಿ ಆಚರಣೆ-ಎಲ್ಲರೂ ಬರುವಂತೆ ಆಣ್ರಹ. ಹೀಗೊಂದಿಷ್ಟು ಹೆಜ್ಜೆ ಇಟ್ಟು ನೋಡಿ, ಸಾಮರಸ್ಯದ ಬಗ್ಗೆ ನಿಮ್ಮ ಧ್ವನಿ ಗಟ್ಟಿಯಾಗದಿದ್ದರೆ ಹೇಳಿ!