ಭಾರತೀಯ ಸೈನ್ಯದ ಮಹಾದಂಡನಾಯಕ ಜೆನರಲ್ ವಿ.ಕೆ.ಸಿಂಗ್ ಅವರ ಜನ್ಮದಿನಾಂಕದಿಂದ ಪ್ರಾರಂಭವಾದ ವಿವಾದಗಳು, ಭಾರತ ಸರಕಾರ ಮತ್ತು ಭಾರತೀಯ ಸೈನ್ಯದ ನಡುವಣ ಸಂಬಂಧಗಳು ಹದಗೆಟ್ಟಿರುವುದರ ಸೂಚನೆ ನೀಡುತ್ತಿದೆ. ಜೆನರಲ್ ವಿ.ಕೆ.ಸಿಂಗ್ ಅವರ ಜನ್ಮದಿನಾಂಕದ ವಿವಾದ ಅನಾವಶ್ಯಕವಾದದ್ದು. ಇದನ್ನು ಕೇಂದ್ರ ಸರಕಾರ ಸರಿಯಾಗಿ ನಿರ್ವಹಿಸದ ಕಾರಣ, ಅದು ರಾಷ್ಟ್ರಾದ್ಯಂತ ಸುದ್ದಿಯಾಯಿತು. ಇದರಿಂದ ಆದ ಏಕೈಕ ಸಾಧನೆಯೆಂದರೆ, ಸರಕಾರದ ಮುಖ್ಯಸ್ಥರ ಮತ್ತು ಸೇನಾದಂಡನಾಯಕರ ಗೌರವ ಕುಸಿದಿದ್ದಷ್ಟೇ!
ಇದಾದ ಸ್ವಲ್ಪ ಸಮಯದಲ್ಲೇ, ಜೆನರಲ್ ವಿ.ಕೆ.ಸಿಂಗ್ ಅವರ ಇಸ್ರೇಲ್ ಪ್ರವಾಸವನ್ನು ಸರಕಾರ ರದ್ದುಪಡಿಸಿತು. ಜನ್ಮದಿನಾಂಕ ವಿವಾದ ನಡೆದ ಸ್ವಲ್ಪ ದಿನದಲ್ಲೇ ನಡೆದ ಈ ಘಟನೆ, ಜನರು ಸರಕಾರದ ಕಡೆ ಅನುಮಾನದಿಂದ ನೋಡುವಂತೆ ಮಾಡಿತು. ಅದೇ ಸಮಯದಲ್ಲಿ ವಿ.ಕೆ.ಸಿಂಗ್ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡಿ, ಭಾರತೀಯ ಸೈನ್ಯದ ನಿವೃತ್ತ ಜನರಲ್ ಒಬ್ಬರು, ಅವರು ಹೇಳಿದ ರೀತಿಯಲ್ಲಿ ರಕ್ಷಣಾ ಇಲಾಖೆಯ ಖರೀದಿಗಳನ್ನು ನಡೆಸಿದರೆ, ೧೪ ಕೋಟಿ ರೂಪಾಯಿ ಲಂಚ ನೀಡುವುದಾಗಿ ಹೇಳಿದ್ದರು ಮತ್ತು ತಾವಿದನ್ನು ಹಿಂದೆಯೇ ರಕ್ಷಣಾ ಸಚಿವರಿಗೆ ತಿಳಿಸಿದ್ದೆ, ಎಂದು ತಿಳಿಸಿದರು. ಇದಾದ ಕೂಡಲೇ, ಸಿ.ಬಿ.ಐ ಕಾರ್ಯಪ್ರವೃತ್ತವಾಗಿ, ಕೆಲವರನ್ನು ಸೆರೆಮನೆಗೆ ದೂಡಿ ವಿಚಾರಣೆ ಪ್ರಾರಂಭಿಸಿದರೂ, ರಕ್ಷಣಾ ಸಚಿವರ ನಿಷ್ಕ್ರಿಯತೆಯನ್ನು ಎತ್ತಿ ತೋರಿಸಿದಂತಾಗಿ, ಮತ್ತೊಮ್ಮೆ ಸರಕಾರಕ್ಕೆ ಮುಜುಗರವುಂಟಾಯಿತು.
ಅದೇ ಸಮಯದಲ್ಲಿ, ವಿ.ಕೆ.ಸಿಂಗ್ ಅವರು ಪ್ರಧಾನ ಮಂತ್ರಿಗಳಿಗೆ ಬರೆದಿದ್ದ ಗುಪ್ತ ಪತ್ರವು ಮಾಧ್ಯಮಗಳಿಗೆ ಸೋರಿಕೆಯಾಯಿತು. ಈ ಪತ್ರದಲ್ಲಿ, ಭಾರತೀಯ ಸೈನ್ಯದ ಸ್ಥಿತಿಗತಿಗಳನ್ನು ಅವರು ಬಿಡಿಸಿಟ್ಟಿದ್ದರು. ಭಾರತೀಯ ಸೈನ್ಯದ ಬಳಿಯಿರುವ ಶಸ್ತ್ರಾಸ್ತ್ರಗಳಲ್ಲಿ ಶೇಕಡಾ ೯೭ರಷ್ಟು ಶಸ್ತ್ರಗಳು ಬಹಳ ಹಳತಾಗಿವೆ. ಜೊತೆಗೆ, ತೀರಾ ಆವಶ್ಯಕವಾದ ಅನೇಕ ಶಸ್ತ್ರಗಳು ಭಾರತೀಯ ಸೈನ್ಯದ ಬಳಿಯಿಲ್ಲ. ಶತ್ರುಗಳು ಆಕ್ರಮಣ ನಡೆಸಿದರೆ ಅದನ್ನು ಬಹಳ ದಿನ ತಡೆಯಲಾರೆವು, ಎಂಬುದಾಗಿಯೂ ಅವರು ಪತ್ರದಲ್ಲಿ ಬರೆದಿದ್ದಾರೆ.
ಪತ್ರದ ವಿವಾದ ಹಸಿರಾಗಿರುವಾಗಲೇ, ದೆಹಲಿಯ ಪತ್ರಿಕೆಯೊಂದು, ಭಾರತೀಯ ಸೈನ್ಯವು ಬಂಡಾಯ ಏಳುವ ಸೂಚನೆ ನೀಡಿದೆ ಎಂದು ಸುದ್ದಿ ಪ್ರಕಟಿಸಿತು. ಆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಜನವರಿ ೧೬-೧೭ರಂದು ಬೆಳಗಾಗುವ ಮೊದಲೇ ಭಾರತೀಯ ಸೈನ್ಯದ ೨ ತುಕಡಿಗಳು ದೆಹಲಿಯತ್ತ ಪ್ರಯಾಣ ಬೆಳೆಸಿದ್ದವು. ಇದರಿಂದ ಬೆಚ್ಚಿದ ಸರಕಾರ, ಕೂಡಲೇ ಸೈನ್ಯದ ತುಕಡಿಗಳನ್ನು ಬೇರೆಡೆ ಕಳುಹಿಸುವಲ್ಲಿ ಸಫಲವಾದವು, ಎಂಬುದಾಗಿ ವರದಿಯಲ್ಲಿ ತಿಳಿಸಲಾಗಿತ್ತು.
ಭಾರತದ ಸೈನ್ಯದ ಶಸ್ತ್ರಗಳು ನಕ್ಸಲೀಯರಿಗೆ ಮಾರಾಟವಾಗಿರುವ ಕೆಲವು ಘಟನೆಗಳೂ ಬೆಳಕಿಗೆ ಬಂದಿವೆ. ಇದರ ಬಗ್ಗೆ ತನಿಖೆಗಳೂ ನಡೆಯುತ್ತಿವೆ. ಸರಕಾರ ಮತ್ತು ಸೈನ್ಯದ ನಡುವಣ ಸಂಬಂಧ ಹದಗೆಟ್ಟಿರುವ ಈ ಸಂದರ್ಭದಲ್ಲಿ, ಪ್ರತಿಯೊಂದು ನಡೆಯೂ ಅದು ಸಣ್ಣದಿರಲಿ, ದೊಡ್ಡದಿರಲಿ – ಅನುಮಾನಗಳನ್ನು ಹುಟ್ಟುಹಾಕುವುದರಲ್ಲಿ ಆಶ್ಚರ್ಯವಿಲ್ಲ.
ಭಾರತದ ಗಡಿಗಳು ಇಂದು ಸುರಕ್ಷಿತವಾಗಿಲ್ಲ. ಒಂದು ಬದಿಯಲ್ಲಿ ಪಾಕಿಸ್ತಾನ ಮತ್ತು ಇನ್ನೊಂದು ಬದಿಯಲ್ಲಿ ಚೀನಾ ಇವೆರಡೂ ನಮ್ಮ ಮೇಲೆರಗಲು ಸದಾ ಕಾಯುತ್ತಿರುತ್ತವೆ. ೨೦೦೮ರಲ್ಲಿ ನಡೆದ ಮುಂಬೈ ಆಕ್ರಮಣದಲ್ಲಿ ಭಾಗವಹಿಸಿದವರು, ಪಾಕಿಸ್ತಾನದಿಂದ ದೋಣಿಯಲ್ಲಿ ಸಮುದ್ರ ಮಾರ್ಗವಾಗಿ ಬಂದಿದ್ದರು ಅವರು ಮುಂಬೈನಲ್ಲಿ ಇಳಿದು ಆಕ್ರಮಣ ಪ್ರಾರಂಭಿಸುವವರೆಗೂ ಯಾರೂ ಇವರನ್ನು ಪತ್ತೆಹಚ್ಚಿರಲಿಲ್ಲ. ಹೀಗೆ, ಸಮುದ್ರದ ಭಾಗವೂ ಸುರಕ್ಷಿತವಾಗಿಲ್ಲ. ಅರುಣಾಚಲ ಪ್ರದೇಶ ತನ್ನದೆಂದು ಚೀನಾ ಸದಾ ಹೇಳಿಕೆ ನೀಡುತ್ತಿರುತ್ತದೆ. ಆಗಾಗ ಚೀನಾದ ಸೈನಿಕರು ಗಡಿ ಉಲ್ಲಂಘಿಸಿ ಬಂದಿರುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಅರುಣಾಚಲ ಪ್ರದೇಶಕ್ಕೆ ಭಾರತದ ರಾಷ್ಟ್ರಪತಿಗಳೋ, ಪ್ರಧಾನಿಗಳೋ ಭೇಟಿ ನೀಡುವರೆಂದು ಪ್ರಕಟವಾದ ಕೂಡಲೇ ಚೀನಾ ಪ್ರತಿಭಟಿಸುತ್ತದೆ. ೧೯೬೨ರಲ್ಲಿ ಚೀನಾ ಕಬಳಿಸಿದ ಭಾರತದ ಭಾಗಗಳು ಚೀನಾದ ಬಳಿಯೇ ಇವೆ. ಪಾಕ್-ಆಕ್ರಮಿತ-ಕಾಶ್ಮೀರದ ಒಂದು ಭಾಗವೂ ಚೀನಾ ವಶದಲ್ಲಿದೆ ಮತ್ತು ಪಾಕ್-ಆಕ್ರಮಿತ-ಕಾಶ್ಮೀರದಲ್ಲಿ ಚೀನಾದ ಸೈನ್ಯ ಚಟುವಟಿಕೆ ನಡೆಸಿದೆ. ಚೀನಾವು ಹಿಮಾಲಯದಲ್ಲಿ ರಸ್ತೆಯನ್ನೂ ನಿರ್ಮಿಸಿದೆ. ಪಕ್ಕದಲ್ಲಿರುವ ಬಾಂಗ್ಲಾದೇಶವೂ ನಮಗೆ ಶತ್ರುವಾಗಿದೆ. ಅಲ್ಲಿಂದ ಕೋಟ್ಯಂತರ ಅಕ್ರಮ ಪ್ರವೇಶಿಗರು ಭಾರತದೊಳಗೆ ನುಸುಳಿದ್ದಾರೆ. ಮತ್ತು ಭಾರತದೊಳಗೆ ಭಯೋತ್ಪಾದಕರು ಸಕ್ರಿಯವಾಗಿದ್ದಾರೆ. ಮಾವೋವಾದಿಗಳು ಮತ್ತು ನಕ್ಸಲೀಯರೂ ನವ ಉತ್ಸಾಹದಿಂದ ಕಾರ್ಯಪ್ರವೃತ್ತರಾಗಿದ್ದಾರೆ. ಸರಕಾರಕ್ಕೇ ಸೆಡ್ಡು ಹೊಡೆಯುವಷ್ಟು ಪ್ರಬಲರಾಗುತ್ತಿದ್ದಾರೆ. ಗಣ್ಯ ವ್ಯಕ್ತಿಗಳ ಅಪಹರಣ, ಬಂಧಿತ ಮಾವೋ ಉಗ್ರರ ಬಿಡುಗಡೆಗೆ ಒತ್ತಾಯ… ಇತ್ಯಾದಿ ಸಂಗತಿಗಳು ಹೆಚ್ಚಾಗುತ್ತಿವೆ. ಇವರಿಗೆ ಪಾಕಿಸ್ತಾನ, ಚೀನಗಳು ಸಹಾಯ ನೀಡುತ್ತವೆ. ಪರಿಸ್ಥಿತಿ ಹೀಗಿರುವಾಗ, ಭಾರತೀಯ ಸೈನ್ಯದ ಕುರಿತಾಗಿ ಜೆನರಲ್ ಸಿಂಗ್ ಅವರ ಪತ್ರ ಮಾಧ್ಯಮಗಳಿಗೆ ಸೋರಿಕೆಯಾಗಿದ್ದು ಅಪಾಯಕರವೇ ಆಗಿದೆ. ಈಗಾಗಲೇ ನಮ್ಮ ಮೇಲೆ ಮುಗಿಬೀಳಲು ಕಾಯುತ್ತಿರುವ ಶತ್ರುಗಳಿಗೆ, ಈ ಸುದ್ದಿಯಿಂದ ಮತ್ತಷ್ಟು ಉತ್ತೇಜನ
ಸಿಗುವಂತಾಗುತ್ತದೆ.
- ಜೆನರಲ್ ವಿ.ಕೆ.ಸಿಂಗ್ ಅವರ ಪತ್ರದಿಂದ, ಭಾರತೀಯ ಸೈನ್ಯವು ಯುದ್ಧಸನ್ನದ್ಧವಾಗಿಲ್ಲ ಎನ್ನುವುದು ಸ್ಪಷ್ಟ. ಪರಿಸ್ಥಿತಿ ಕೈಮೀರುವ ಮೊದಲೇ ಸರಕಾರ ಕಾರ್ಯಪ್ರವೃತ್ತವಾಗುವುದು ಆವಶ್ಯಕವಾಗಿದೆ.
- ಯುದ್ಧಸನ್ನದ್ಧ ಸ್ಥಿತಿಯಲ್ಲಿಲ್ಲದಿದ್ದರೆ ಏನಾಗುತ್ತದೆ ಎನ್ನುವುದು 1962ರ ಯುದ್ಧದಲ್ಲೇ ಭಾರತ ಕಂಡಿದೆ ಮತ್ತು ಈ ಪಾಠವನ್ನು ಎಂದೂ ಮರೆಯಬಾರದು.
- ಸೈನ್ಯದ ಮಹಾದಂಡನಾಯಕರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದದ್ದು ಗುಪ್ತವಾಗಿರಬೇಕು. ಅದು ಮಾಧ್ಯಮಗಳಿಗೆ ಸೋರಿಕೆಯಾಗಿದ್ದು ಬಹಳ ಗಂಭೀರ ವಿಷಯವೇ. ಸರಕಾರ ಮತ್ತು ಸೈನ್ಯದ ನಡುವಣ ಸಂಬಂಧ ಸರಿಯಿಲ್ಲ ಎನ್ನುವ ಸೂಚನೆಯನ್ನೇ ಇದು ನೀಡುತ್ತದೆ. ಮಾರ್ಚ್ 12ರಂದು ಬರೆದ ಪತ್ರ ಚೀನಾದ ಅಧ್ಯಕ್ಷ ಹು ಜಿನ್ತಾವೋ `ಬ್ರಿಕ್ಸ್ ಸಮ್ಮೇಳನಕ್ಕಾಗಿ ಭಾರತಕ್ಕೆ ಬಂದ ದಿನವಾದ ಮಾರ್ಚ್ ೨೮ರಂದೇ ಸೋರಿಕೆಯಾದದ್ದು ಕಾಕತಾಳೀಯವಾಗಿರಲಾರದು. ಬದಲಾಗಿ ಧೂರ್ತ ಚೀನಾದ ಮುಂದೆ ದೇಶದ ಪ್ರತಿಷ್ಠಿತ ಸೈನ್ಯದ ಮನೋಬಲವನ್ನು ಕುಗ್ಗಿಸುವ ಈ ಪ್ರಯತ್ನವನ್ನು ಪ್ರಬಲ ದೇಶದ್ರೋಹಿ ಶಕ್ತಿಗಳೇ ಮಾಡಿರಬಹುದು.
- ಸೈನ್ಯವು ಬಂಡಾಯ ನಡೆಸಲು ಆಲೋಚಿಸಿತ್ತು ಎನ್ನುವುದು ನೈಜ ಸುದ್ದಿಯಾಗಿರಲಾರದು. ಭಾರತದ ಸೈನ್ಯ ಬಹಳ ಸುಶಿಸ್ತಿನ ಮತ್ತು ಅತ್ಯಂತ ನಿಯತ್ತಿನ ಸೈನ್ಯವಾಗಿದೆ. ಈ ರೀತಿ ಬಂಡಾಯವೇಳುವುದು ಭಾರತದ ಸಂಸ್ಕೃತಿಯಲ್ಲೇ ಇಲ್ಲ. ಮತ್ತು ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಈ ರೀತಿಯ ಬಂಡಾಯ ನಡೆಸುವುದು ಸುಲಭದ ಮಾತಲ್ಲ. ಕೆಲವು ಮಾಧ್ಯಮಗಳ ವರದಿಯಂತೆ ಈ `ಬಂಡಾಯದ ಸುದ್ದಿಯ ಜನಕ ಒಬ್ಬ ಹಿರಿಯ ಕೇಂದ್ರ ಮಂತ್ರಿ. ಆದರೆ, ಸೈನ್ಯದೊಡನೆ ಸರಕಾರದ ಸಂಬಂಧ ಹಳಸಿದಾಗ, ಈ ರೀತಿಯ ಊಹಾಪೋಹಗಳನ್ನು ಹುಟ್ಟಿಸುವಲ್ಲಿ ಯಾರು ತೊಡಗಿದ್ದಾರೆ, ಅವರ ಉದ್ದೇಶವೇನು ಎಂಬ ಪ್ರಶ್ನೆ ಮೂಡುತ್ತದೆ.
- ಸೈನ್ಯದಲ್ಲಿ ನಡೆಯುವ ಖರೀದಿಗಳಲ್ಲಿ ಭ್ರಷ್ಟಾಚಾರ ನಡೆಯುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಬೋಫ಼ೋರ್ಸ್ ವಿವಾದವೂ ಇದಕ್ಕೆ ಸಂಬಂಧಿಸಿದ್ದೇ ಆಗಿತ್ತು. ಇದೀಗ ಟ್ರಕ್ಕುಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ವಿ.ಕೆ.ಸಿಂಗ್ ಅವರು ಹೊರಗೆಡವಿದ್ದಾರೆ. ಆದರೆ, ಕೇವಲ ಈ ರೀತಿಯ ಸುದ್ದಿಗಳನ್ನು ಮಾಧ್ಯಮಗಳು ಪ್ರಕಟಿಸುವುದರಿಂದ, ಭ್ರಷ್ಟಾಚಾರ ಕೊನೆಯಾಗುವುದಿಲ್ಲ. ಅದಕ್ಕೆ ಚಿಕ್ಕಂದಿನಿಂದಲೇ ಮೌಲ್ಯದ ಶಿಕ್ಷಣ ಸಿಗಬೇಕು; ಜೊತೆಗೆ ತಪ್ಪಿಗೆ ಕಠಿಣ ಶಿಕ್ಷೆಯಾಗಬೇಕು. ಇವೆರಡೂ ಆಗದೆ, ಭ್ರಷ್ಟಾಚಾರ ದೂರಗೊಳಿಸಲು ಆಗುವುದಿಲ್ಲ. ಆದರೆ, ಈ ರೀತಿಯ ವಿವಾದದ ಮಧ್ಯೆ, ನಾವು ಖರೀದಿಸುವ ಶಸ್ತ್ರಾಸ್ತ್ರಗಳು ಕಳಪೆಯಾಗಿರದಂತೆ ನೋಡಿಕೊಳ್ಳುವುದು ಅದ್ಯತೆಯ ವಿಷಯವಾಗಿರುತ್ತದೆ.
- ನಕ್ಸಲೀಯರಿಗೆ ನಮ್ಮದೇ ಸೈನ್ಯದ ಶಸ್ತ್ರಗಳು ಸಿಗುತ್ತವೆ ಎಂದ ಮೇಲೆ ಶಸ್ತ್ರಾಸ್ತ್ರಗಳ ಉಗ್ರಾಣದಲ್ಲಿನ ಸಿಬ್ಬಂದಿಯಿಂದಿ ಹಿಡಿದು ಉನ್ನತ ಸ್ಥಾನದ ವರೆಗೆ ಕೆಲವು ದೇಶದ್ರೋಹಿಗಳು ಸೈನ್ಯದ ವ್ಯವಸ್ಥೆಯಲ್ಲಿ ನುಸುಳಿರಬಹುದು. ಇದನ್ನು ಸೇನಾ ಗುಪ್ತಚರ ದಳವು ಮತ್ತಷ್ಟು ತೀಕ್ಷ್ಣ ದೃಷ್ಟಿಯಿಂದ ಗಮನಿಸಿ ನುಸುಳುಕೋರರನ್ನು ಹೊಸಕಿಹಾಕಬೇಕು.
- ಈ ಪ್ರಕರಣದಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಚಿಂತಾಜನಕವಾಗಿದೆ. ವಿದೇಶೀ ಬಂಡವಾಳ ಮಾಧ್ಯಮ ಕ್ಷೇತ್ರದಲ್ಲೂ ಹರಿದುಬರುತ್ತಿರುವ ಈ ಸಂದರ್ಭದಲ್ಲಿ ಮಾಧ್ಯಮಗಳು ದೇಶದ ಹಿತಚಿಂತನೆ ಮಾಡಿ ಅದರಂತೆ ವರ್ತಿಸುವುದನ್ನು ಬಿಟ್ಟು ವಿದೇಶೀ ಹಿತಚಿಂತಕರ ಮತ್ತು ಶಸ್ತ್ರಾಸ್ತ್ರ ಮಾರಾಟದ ಲಾಬಿಗಳ ಬಲೆಯಲ್ಲಿ ಸಿಲುಕಿರುವಂತೆ ತೋರುತ್ತಿದೆ. ಕೆಲವು ಮಾಧ್ಯಮಗಳು ೨ಜಿ ಹಗರಣಕ್ಕೆ ಸಂಬಂಧಿಸಿದಂತೆ ನೀರಾ ರಾಡಿಯಾರಂತಹ ಕಾರ್ಪೊರೇಟ್ ಅಧಿಕಾರಿಗಳ ಜಾಲದಲ್ಲಿ ಸಿಲುಕಿಕೊಂಡ ಸಂಗತಿ ಜನರ ಮನದಲ್ಲಿ ಇನ್ನೂ ಹಸಿಯಾಗಿದೆ. ದೇಶದ ಹಿತವನ್ನು ಗಮನಿಸದೆ ತಮ್ಮ ಮತ್ತು ತಮ್ಮನ್ನು ಸಮರ್ಥಿಸುತ್ತಿರುವ `ಲಾಬಿಗಳ ಹಿತಕ್ಕಾಗಿ ಯಾವುದೇ ಸುದ್ದಿಯನ್ನು ಭಾವೋದ್ರೇಕಗೊಳಿಸಿ (sensationalise) ಪ್ರಚಾರ ಮಾಡುವ ಮಾಧ್ಯಮದ ಗೀಳನ್ನು ಜನರು ಗಮನಿಸಬೇಕು. ಈ ನಾಲ್ವರೂ (ದೇಶದ್ರೋಹಿಗಳು, ಅವರ ವಿದೇಶೀ ಸಮರ್ಥಕರು, ಶಸ್ತ್ರಾಸ್ತ್ರ ಮಾರಾಟ `ಲಾಬಿ, ಮಾಧ್ಯಮದ ಕೆಲವು ಭಾಗಗಳು) ಸೇರಿ ಸೃಷ್ಟಿಸಿರುವ ಬಲೆಯಲ್ಲಿ ಸಿಲುಕದಂತೆ ಜನರು ಜಾಗರೂಕರಾಗಿರಬೇಕು.
- ಕಳೆದ ಕೆಲವು ತಿಂಗಳುಗಳಿಂದ ನಡೆದಿರುವ ಈ ವಿವಾದಗಳು ಪ್ರತಿಯೊಬ್ಬ ದೇಶಭಕ್ತನನ್ನೂ ಚಿಂತಾಕ್ರಾಂತನನ್ನಾಗಿಸುತ್ತದೆ. ಜೊತೆಗೆ, ಇದು ಸೈನಿಕರ ವಿಶ್ವಾಸವನ್ನೂ ಕುಗ್ಗಿಸುತ್ತದೆ. ಸೈನ್ಯದ ವಿಶ್ವಾಸ ಮರಳಲು, ದೇಶದ ಜನರು ತಮ್ಮ ಬೆನ್ನಿಗಿದ್ದಾರೆ ಮತ್ತು ತಮ್ಮ ಕುರಿತಾಗಿ ಅವರಿಗೆ ಕಾಳಜಿಯಿದೆ ಎನ್ನುವುದು ಅವರಿಗೆ ತಿಳಿಯಬೇಕು. ಯಾವುದೇ ಕಾರಣಕ್ಕೂ ಸೈನಿಕರ ಮನೋಬಲ (morale) ಕುಗ್ಗಬಾರದು. ಈ ನಿಟ್ಟಿನಲ್ಲಿ ಸರಕಾರವು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು.
- ಜಾಗೃತ, ದೇಶಭಕ್ತ ಮತ್ತು ಸಂಘಟಿತ ಸಮಾಜವೇ ಈ ರೀತಿಯ ಸಮಸ್ಯೆಗಳನ್ನು ಎದುರಿಸಬಲ್ಲದು. ಈ ಕೆಲಸವು ನಿರಂತರವಾಗಿ ಸಾಗುವಂತಾಗಲು ಎಲ್ಲ ಸ್ವಯಂಸೇವಕರು ಶ್ರಮವಹಿಸಬೇಕು.