– ಸ.ಗಿರಿಜಾಶಂಕರ ಚಿಕ್ಕಮಗಳೂರು
ಒಂದು ಕೃತಿಯ ಪ್ರವೇಶಕ್ಕೆ ಅರ್ಥಪೂರ್ಣ ಮುನ್ನುಡಿಯೊಂದು ಅತ್ಯಂತ ಅವಶ್ಯಕ. ಉತ್ತಮ ಮುನ್ನುಡಿ ಆ ಕೃತಿಯ ಸಾರಭೂತ ಅಂಶವಾಗಿ ಬಿಡುತ್ತದೆ. ಕೃತಿಯ ಪ್ರವೇಶಕ್ಕೆ ಒಂದು ಕೈಮರವಿದ್ದಂತೆ. ಸಹೃದಯನನ್ನು ಕೃತಿಯ ಪ್ರವೇಶಕ್ಕೆ ಮುನ್ನುಗ್ಗುವಂತೆ ಮಾಡುವಷ್ಟರಮಟ್ಟಿಗೆ ಮುನ್ನುಡಿ ಆ ಕೃತಿಯ ಒಳಹೂರಣದ ಸವಿಯನ್ನು ನೀಡುತ್ತದೆ. ಕೆಲವೊಮ್ಮೆ ಸಂತೆಗೆ ಮೂರು ಮೊಳ ನೇಯುವಂತಹ ಮುನ್ನುಡಿಗಳು ಬಂದಿವೆ. ಆದರೆ ಕೃತಿಯೊಂದರ ಆಪ್ತತೆಯನ್ನು, ಅದರ ಸಂಕೀರ್ಣತೆಯನ್ನು ಬಿಚ್ಚಿಟ್ಟು ಓದುಗನನ್ನು ಕೃತಿಯೊಳಗೆ ಮಗ್ನನಾಗುವಂತೆ ಮಾಡುವ ಶಕ್ತಿ ಬಹುಶೃತರಿಗಿರುತ್ತದೆ.
ಇತ್ತೀಚೆಗೆ ನನ್ನ ಹಸ್ತವೇರಿದ್ದು ‘ಆನ್ವೀಕ್ಷಿಕೀ’ ಎಂಬ ಸಮಕಾಲೀನ ಆಖ್ಯಾನಗಳ ಕೃತಿ. ದೇಶ ಎದುರಿಸುತ್ತಿರುವ ಆರು ಸಮಸ್ಯೆಗಳು ಹಾಗೂ ಸಂದರ್ಭಗಳನ್ನು ಮಂಥಿಸಿ ವಿಚಾರ ನವನೀತವನ್ನು ಕಟ್ಟಿಕೊಟ್ಟಿರುವ ಒಂದು ವಿಶಿಷ್ಟ ಕೃತಿ ಆನ್ವೀಕ್ಷಿಕೀ. ಕೃತಿಯ ವಿಚಾರಪೂರಿತ ಲೇಖನಗಳತ್ತ ಈ ಮುನ್ನುಡಿ ಕಾಲುದಾರಿಗಳನ್ನು ನಿರ್ಮಿಸುತ್ತಲೇ ಓದುಗನನ್ನು ಚಿಂತಿಸಲು ಹಚ್ಚುವಷ್ಟು ಸ್ವೋಪಜ್ಞತೆಯಿಂದ ಕೂಡಿ ಓದುಗನನ್ನು ಹಿಡಿದಿಡುತ್ತದೆ. ಓದುಗ ಚಿಂತಿಸುವಂತೆ ಮಾಡಲು ಕಿರು ವೈಚಾರಿಕ ನಿಲ್ದಾಣಗಳನ್ನು ಹೊಂದಿರುವ ಪ್ರದೀಪ ಮೈಸೂರು ಅವರ ಮುನ್ನುಡಿ ಆಖ್ಯಾನಗಳ ಅಂಗಳ ಪ್ರವೇಶಿಸಲು ಮಾರ್ಗ ತೆರೆಯುತ್ತದೆ.
ಆಖ್ಯಾನ-ಆಖ್ಯಾಯಿಕೆಗೆ ಇರುವ ಅರ್ಥ ವ್ಯತ್ಯಾಸ ಹಾಗೆಯೇ ಈ ಕೃತಿ ಚರ್ಚಿಸಲು ಹೊರಟಿರುವ ನರೆಟಿವ್ ಗಳತ್ತ ಬೆಳಕು ಚೆಲ್ಲುತ್ತಲೇ ಪ್ರತೀ ಚರ್ಚಾ ವಿಷಯ ಆರಂಭವಾಗಿ ಸಂಕೀರ್ಣತೆಗೆ ಒಳಗಾಗಿ ಓದುಗನ ಚಿಂತನಾ ಸ್ತರವನ್ನು ಪ್ರವೇಶಿಸಿ ಮತ್ತೆ ಓದುಗ ತನ್ನ ಅನುಭವದ ಮೂಸೆಯಲ್ಲಿ ಅದನ್ನಿಟ್ಟು ಕಾಯಿಸಿ,ಕುದಿಸಿ ಅವಲೋಕಿಸುವಂತೆ ಮಾಡುವ ಪ್ರಬುದ್ಧತೆಯಿಂದೊಡಗೂಡಿದೆ. ಕೃತಿಯೊಂದು ಕಟ್ಟಿಕೊಡುವ ಲೇಖನಗಳನ್ನು ‘ಬೌದ್ಧಿಕ ಕುತೂಹಲದಿಂದ ನೋಡಿದರೆ ತಪ್ಪಾಗುತ್ತದೆ. ಇಲ್ಲಿನ ಲೇಖನಗಳು ದಡದಲ್ಲಿ ನಿಂತು ನೀರು ತಾನಾಗಿಯೇ ಬಂದು ಕಾಲಿಗೆ ಬಡಿಯಲಿ ಎಂದು ಕಾಯುವ ಸೋಮಾರಿತನದಿಂದ ಕೂಡಿಲ್ಲ’ ಎಂದು ಪ್ರದೀಪ್ ಎಚ್ಚರಿಕೆಯ ಮಾತೊಂದನ್ನು ಹೇಳಿದ್ದಾರೆ.
ಒಮ್ಮೆ ಕೃತಿಯನ್ನು ಓದಲಾರಂಭಿಸಿದರೆ ಆ ವಿಚಾರ ಸಲಿಲದಲ್ಲಿ ಸಾಗುತ್ತಾ ಅದರ ಆಳ, ಅಗಲ, ಖಾಚಿತ್ಯವನ್ನು ಒಳಗೆಳೆದುಕೊಳ್ಳುವಂತೆ ಹಿಡಿದಿಡುವ ವಿಶ್ಲೇಷಣೆಯನ್ನು ಒಳಗೊಂಡಿದೆ. ಬಗೆದು ನೋಡುವ ಗುಣದಿಂದ ಮಾತ್ರ ಇಲ್ಲಿನ ಲೇಖನಗಳ ಮಂಥನ ಸಾಧ್ಯ. ಅದರಿಂದ ವಿಚಾರ ನವನೀತ ಹೊರ ಬರಬಹುದು. ಬಂದ ನಂತರವೂ ಅದು ಮತ್ತಷ್ಟು ಗತಿ ತಾರ್ಕಿಕತೆಗೆ ಒಳಗಾಗಬಹುದು ಎಂಬ ಮುನ್ಸೂಚನೆಯನ್ನು ಒಳಗೊಂಡಿದೆ.
ಪ್ರದೀಪ ಒಂದು ಉದ್ಬಕ ಧಕ ಮುನ್ನುಡಿಯ ಮೂಲಕ ಕೃತಿಯ ಆಖ್ಯಾನಗಳತ್ತ ಓದುಗ ಸಾಗಲು ಅನುವು ಮಾಡಿದ್ದಾರೆ. ಕೃತಿ ತೆರೆದಿಡುವ ವಿಚಾರಗಳಷ್ಟೇ ಅರ್ಥಗರ್ಭಿತ ಮುನ್ನುಡಿ ಇದಾಗಿದ್ದು, ಪುಸ್ತಕದೊಳಗಿನ ವೈಚಾರಿಕ ಹೂರಣಕ್ಕೆ ಮತ್ತಷ್ಟು ಸವಿಯನ್ನೊದಗಿಸಿದೆ.