ಜಬಲ್ಪುರ, ಅಕ್ಟೋಬರ್ 28, 2025: ಕಚ್ನಾರ್ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಅವರು ಮಾತನಾಡಿದರು.ಜಬಲ್ಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಲಿಯ ವಾರ್ಷಿಕ ಸಭೆಯನ್ನು ಆಯೋಜಿಸಲಾಗುತ್ತಿದೆ. ಈ ಸಭೆಯು ಅಕ್ಟೋಬರ್ 30 ರಿಂದ ನವೆಂಬರ್ 1, 2025 ರವರೆಗೆ ನಡೆಯಲಿದೆ. ಸಂಘದ ದೃಷ್ಟಿಕೋನದಿಂದ, ಭಾರತದ 46 ಪ್ರಾಂತಗಳಿಂದ 407 ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸಭೆಯಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮತ್ತು 06 ಮಂದಿ ಸಹ-ಸರಕಾರ್ಯವಾಹರು ಸೇರಿದಂತೆ ಅಖಿಲ ಭಾರತೀಯ ಕಾರ್ಯಕಾರಿಣಿ ಸಹಿತ 11 ಕ್ಷೇತ್ರಗಳ ಹಾಗೂ 46 ಪ್ರಾಂತಗಳ ಸಂಘಚಾಲಕರು, ಕಾರ್ಯವಾಹರು ಮತ್ತು ಪ್ರಚಾರಕರು ಉಪಸ್ಥಿತರಿರುತ್ತಾರೆ. ಇದರೊಂದಿಗೆ ಆಯ್ದ ಕಾರ್ಯಕರ್ತರು ಸಹ ಭಾಗವಹಿಸಲಿದ್ದಾರೆ.

ಅಕ್ಟೋಬರ್ 2, 2025 ರಂದು ನಾಗ್ಪುರದಲ್ಲಿ ವಿಜಯದಶಮಿಯ ಮೂಲಕ ಸಂಘ ಶತಮಾನೋತ್ಸವದ ವರ್ಷ ಪ್ರಾರಂಭವಾಯಿತು. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು. ಪೂಜ್ಯ ದಲೈ ಲಾಮಾ ಅವರ ಶುಭಸಂದೇಶವನ್ನು ಸಹ ಓದಲಾಯಿತು. ಸಮವಸ್ತ್ರ ಧರಿಸಿದ 14,101 ಸ್ವಯಂಸೇವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಗ್ಪುರದ ನಾಗರಿಕರು ಭಾಗವಹಿಸಿದ್ದರು. ವಿದೇಶಗಳಿಂದ ವಿಶೇಷ ಆಹ್ವಾನಿತರು ಸಹ ಉಪಸ್ಥಿತರಿದ್ದರು. ದೇಶಾದ್ಯಂತ ವಸತಿಗಳು ಮತ್ತು ಮಂಡಲಗಳಲ್ಲಿ ಸಂಘ ಶತಮಾನೋತ್ಸವ ವರ್ಷದ ಕಾರ್ಯಕ್ರಮವನ್ನು ನಡೆಸಲಾಯಿತು. ಅಲ್ಲಿ ಸ್ವಯಂಸೇವಕರು ಸಮವಸ್ತ್ರ ಧರಿಸಿ ಭಾಗವಹಿಸಿದ್ದರು. ಸಮಾಜದ ಗಣ್ಯರು ಸಹ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಮನೆ ಮನೆ ಸಂಪರ್ಕ ಅಭಿಯಾನದ ಅಡಿಯಲ್ಲಿ ಪ್ರತಿ ಪ್ರಾಂತದಲ್ಲಿ 25 ರಿಂದ 40 ದಿನಗಳ ಅಭಿಯಾನ ನಡೆಯಲಿದೆ. ಸ್ವಯಂಸೇವಕರು ಕರಪತ್ರಗಳು ಮತ್ತು ಕಿರುಪುಸ್ತಕ ಸೇರಿದಂತೆ ಸಂಘಸಾಹಿತ್ಯದೊಂದಿಗೆ ಮನೆ ಮನೆಗೆ ತಲುಪುತ್ತಾರೆ. ಮನೆ ಸಂಪರ್ಕದ ಮೂಲಕ ಪಂಚಪರಿವರ್ತನೆಯ ವಿಷಯಗಳಾದ ಕುಟುಂಬ ಪ್ರಬೋಧನ, ಸಾಮಾಜಿಕ ಸಾಮರಸ್ಯ, ಪರಿಸರ ಸ್ನೇಹಿ ಜೀವನಶೈಲಿ, ಸ್ವಬೋಧೆ ಮತ್ತು ನಾಗರಿಕ ಕರ್ತವ್ಯ ವಿಷಯಗಳನ್ನು ತಲುಪಿಸಲಿದ್ದಾರೆ.

ಬೈಠಕ್ ನಲ್ಲಿ ವಸತಿ ಮತ್ತು ಮಂಡಲ ಮಟ್ಟದಲ್ಲಿ ಮುಂಬರುವ ಹಿಂದೂ ಸಮ್ಮೇಳನಗಳು, ಜಿಲ್ಲಾ ಮಟ್ಟದಲ್ಲಿ ಪ್ರಮುಖ ನಾಗರಿಕ ಗೋಷ್ಠಿಗಳು, ತಾಲೂಕು/ನಗರ ಮಟ್ಟದಲ್ಲಿ ಸಾಮಾಜಿಕ ಸಾಮರಸ್ಯ ಸಭೆಗಳು ಮತ್ತು ಯುವಕರಿಗಾಗಿ ಕಾರ್ಯಕ್ರಮಗಳ ಕುರಿತು ವಿವರವಾಗಿ ಚರ್ಚಿಸಲಾಗುವುದು. ಪಂಚ ಪರಿವರ್ತನೆಯ ವಿಷಯದೊಂದಿಗೆ ಸಮಾಜದ ಸಜ್ಜನಶಕ್ತಿ, ಸಂಘದ ಕೆಲಸವನ್ನು ಬೆಂಬಲಿಸುವವರು, ಪ್ರಮುಖ ವ್ಯಕ್ತಿಗಳು, ಪ್ರಮುಖ ಸಂಸ್ಥೆಗಳು, ಮಠ-ಮಂದಿರಗಳು, ಸಾಮಾಜಿಕ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ವ್ಯಾಪಾರ ಸಂಸ್ಥೆಗಳನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ.

ಸಮಾಜ ಪರಿವರ್ತನೆಯ ಪ್ರಕ್ರಿಯೆಯಲ್ಲಿ ಮಹಿಳೆಯರು ಮಹತ್ವದ ಪಾತ್ರ ವಹಿಸುತ್ತಾರೆ. ಅವರನ್ನೂ ಸಹ ಈ ಸಾಮಾಜಿಕ ಚಟುವಟಿಕೆಗಳಲ್ಲಿ ಜೋಡಿಸುವ ಪ್ರಯತ್ನಗಳನ್ನು ಮಾಡಲಾಗುವುದು. ಸಂಘಟಿತ ರೀತಿಯಲ್ಲಿ ಸಾಮಾಜಿಕ ಬದಲಾವಣೆಯನ್ನು ತರಲು ಇವರೆಲ್ಲರೂ ಒಟ್ಟಾಗಿ ಹೇಗೆ ಕೆಲಸ ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಯಲಿದೆ. ಕಾರ್ಯಕಾರಿ ಮಂಡಳಿ ಸಭೆಯಲ್ಲಿ ವರ್ತಮಾನದ ಪರಿಸ್ಥಿತಿಯ ಬಗ್ಗೆಯೂ ಚರ್ಚಿಸಲಾಗುವುದು.

ಸರಸಂಘಚಾಲಕರು ತಮ್ಮ ರಾಷ್ಟ್ರವ್ಯಾಪಿ ಪ್ರವಾಸದ ಭಾಗವಾಗಿ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಘದ ಕುರಿತಾದ ವಿಚಾರವನ್ನು ವ್ಯಕ್ತಪಡಿಸಲಿದ್ದಾರೆ. ನವೆಂಬರ್ 8 ಮತ್ತು 9 ರಂದು ಬೆಂಗಳೂರಿನಲ್ಲಿ, ಡಿಸೆಂಬರ್ 21 ರಂದು ಕಲ್ಕತ್ತಾದಲ್ಲಿ ಮತ್ತು ಫೆಬ್ರವರಿ 7 ಮತ್ತು 8 ರಂದು ಮುಂಬೈನಲ್ಲಿ ಅವರು ಭಾಷಣ ಮಾಡಲಿದ್ದಾರೆ.

ಗುರು ತೇಜ್ ಬಹದ್ದೂರ್ ಅವರ 350 ನೇ ಹುತಾತ್ಮ ದಿನ ಮತ್ತು ಧರ್ತಿ ಅಬಾ ಬಿರ್ಸಾ ಮುಂಡಾ ಅವರ 150 ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ವಿಶೇಷ ಹೇಳಿಕೆ ನೀಡಲಾಗುವುದು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ಸಂಘಚಾಲಕ ಡಾ. ಪ್ರದೀಪ್ ದುಬೆ ವೇದಿಕೆಯಲ್ಲಿದ್ದರು. ಅಖಿಲ ಭಾರತೀಯ ಸಹ-ಪ್ರಚಾರ ಪ್ರಮುಖರಾದ ನರೇಂದ್ರ ಠಾಕೂರ್ ಮತ್ತು ಪ್ರದೀಪ್ ಜೋಶಿ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.