ಅಕ್ಟೋಬರ್ 30 – ನವೆಂಬರ್ 1, 2025 ಜಬಲ್ಪುರ, ಮಧ್ಯಪ್ರದೇಶ
ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಗಳು
1. ವಂದೇ ಮಾತರಂ – 150ರ ಸಂಭ್ರಮ
ಮಾತೃಭೂಮಿಯ ಆರಾಧನೆ ಹಾಗೂ ಸಂಪೂರ್ಣ ರಾಷ್ಟ್ರಜೀವನದಲ್ಲಿ ಚೈತನ್ಯ ಸಂಚರಿಸುವಂತೆ ಮಾಡುವ ಅದ್ಭುತ ಮಂತ್ರವಾದ ವಂದೇ ಮಾತರಂ ರಚನೆಯ 150 ವರ್ಷಗಳು ಪೂರ್ಣಗೊಂಡ ಈ ಶುಭ ಸಂದರ್ಭದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ವಂದೇ ಮಾತರಂ ರಚಿಸಿದ ಶ್ರದ್ಧೇಯ ಬಂಕಿಮಚಂದ್ರ ಚಟ್ಟೋಪಾಧ್ಯಾಯರನ್ನು ಕೃತಜ್ಞತೆಯೊಂದಿಗೆ ಸ್ಮರಿಸಿ, ಅವರಿಗೆ ಭಾವಪೂರ್ಣ ನಮನ ಸಲ್ಲಿಸುತ್ತದೆ. 1875ರಲ್ಲಿ ರಚಿತವಾದ ಈ ಗೀತೆಯನ್ನು 1896ರ ಕಾಂಗ್ರೆಸ್ನ ರಾಷ್ಟ್ರೀಯ ಅಧಿವೇಶನದಲ್ಲಿ ರಾಷ್ಟ್ರಕವಿ ರವೀಂದ್ರನಾಥ ಟಾಗೋರ್ ಅವರು ರಾಗಬದ್ಧವಾಗಿ ಹಾಡಿ, ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿದರು. ಆ ಸಮಯದಿಂದಲೇ ಈ ಗೀತೆ ಕೇವಲ ದೇಶಭಕ್ತಿಯ ಮಂತ್ರವಲ್ಲ, ರಾಷ್ಟ್ರೀಯ ಉದ್ಘೋಷ, ರಾಷ್ಟ್ರೀಯ ಚೇತನ ಮತ್ತು ರಾಷ್ಟ್ರದ ಆತ್ಮಸ್ವರವಾಗಿ ಪರಿಣಮಿಸಿತು.

ವಂಗಭಂಗ ಆಂದೋಲನ ಸಹಿತ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರತಿಯೊಬ್ಬ ಸ್ವಾತಂತ್ರ್ಯ ಸೇನಾನಿಯ ಘೋ?ಮಂತ್ರವೂ ವಂದೇ ಮಾತರಂ ಆಗಿತ್ತು. ಈ ಮಹಾಮಂತ್ರದ ವ್ಯಾಪಕತೆಯನ್ನು ಮಹರ್ಷಿ ಶ್ರೀ ಅರವಿಂದ, ಮೇಡಮ್ ಭಿಕಾಜಿ ಕಾಮಾ, ಮಹಾಕವಿ ಸುಬ್ರಹ್ಮಣ್ಯಂ ಭಾರತೀ, ಲಾಲಾ ಹರದಯಾಳ್, ಲಾಲಾ ಲಜಪತರಾಯ್ ಮುಂತಾದ ದೇಶದ ಅನೇಕ ಮಹರ್ಷಿಗಳು ಮತ್ತು ಮಹನೀಯರು ತಮ್ಮ ಪತ್ರ ಮತ್ತು ಪತ್ರಿಕೆಗಳಲ್ಲಿ ವಂದೇ ಮಾತರಂ ಎಂಬ ಶಬ್ದವನ್ನು ತಮ್ಮ ಹೆಸರಿನ ಜೊತೆಗೆ ಸೇರಿಸಿಕೊಂಡಿದ್ದರು ಎಂಬ ಸಂಗತಿಯಲ್ಲಿ ಕಾಣಬಹುದು. ಮಹಾತ್ಮ ಗಾಂಧಿಯವರೂ ಕೂಡ ತಮ್ಮ ಅನೇಕ ಪತ್ರಗಳ ಅಂತ್ಯದಲ್ಲಿ ವಂದೇ ಮಾತರಂ ಎಂದೇ ಬರೆದು ಗೌರವಿಸುತ್ತಿದ್ದರು.
ವಂದೇ ಮಾತರಂ ರಾಷ್ಟ್ರದ ಆತ್ಮ ಗಾನವಾಗಿದ್ದು, ಅದು ಪ್ರತಿಯೊಬ್ಬನಿಗೂ ಪ್ರೇರಣೆಯನ್ನು ನೀಡುತ್ತದೆ. ತನ್ನ ದಿವ್ಯ ಪ್ರಭಾವದ ಕಾರಣದಿಂದಾಗಿ 150 ವರ್ಷಗಳಾದ ನಂತರವೂ ಅದು ಸಂಪೂರ್ಣ ಸಮಾಜವನ್ನು ರಾಷ್ಟ್ರದ ಕುರಿತು ಸಮರ್ಪಣ ಭಾವದಿಂದ ಓತಪ್ರೋತಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಇಂದು ಪ್ರಾಂತ, ಭಾಷೆ, ಜಾತಿ ಇತ್ಯಾದಿ ಸಂಕುಚಿತತೆಗಳ ಆಧಾರಗಳಿಂದ ವಿಭಜನೆಗೆ ಒತ್ತು ನೀಡುವ ಪ್ರವೃತ್ತಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ವಂದೇ ಮಾತರಂ ಎಂಬುದು ಸಮಾಜವನ್ನು ಏಕತೆಯಲ್ಲಿ ಕಟ್ಟಿ ಇಡುವ ಪವಿತ್ರ ಸೂತ್ರವಾಗಿದೆ. ಭಾರತ ದೇಶದ ಎಲ್ಲ ಪ್ರಾಂತಗಳಲ್ಲಿ, ಸಮಾಜಗಳಲ್ಲಿ ಹಾಗೂ ಭಾಷೆಗಳಲ್ಲಿ ಇದರ ಸ್ವೀಕಾರ ಅತ್ಯಂತ ಸಹಜವಾಗಿದೆ. ಇದು ಇಂದಿಗೂ ನಮ್ಮ ರಾಷ್ಟ್ರೀಯ ಚೇತನ, ಸಾಂಸ್ಕೃತಿಕ ಅಸ್ಮಿತೆ ಮತ್ತು ಏಕಾತ್ಮ ದರ್ಶನ ಭಾವದ ಸಶಕ್ತ ಆಧಾರವಾಗಿದೆ. ರಾಷ್ಟ್ರೀಯ ಚೇತನದ ಪುನರ್ ಜಾಗರಣ ಮತ್ತು ರಾಷ್ಟ್ರನಿರ್ಮಾಣದ ಪವಿತ್ರ ವೇಳೆಯಲ್ಲಿ, ಈ ಮಹಾಮಂತ್ರದ ಭಾವನೆಗಳನ್ನು ಹೃದಯಂಗಮಗೊಳಿಸುವ ಅಗತ್ಯವಿದೆ.
ವಂದೇ ಮಾತರಂ ಗೀತೆಯ ರಚನೆಯ 150 ವರ್ಷಗಳ ಪುಣ್ಯ ಸಂದರ್ಭವನ್ನು ಸ್ಮರಿಸುತ್ತ, ರಾಷ್ಟ್ರೀಯ ಸ್ವಯಂಸೇವಕ ಸಂಘವು ಎಲ್ಲಾ ಸ್ವಯಂಸೇವಕರು ಸೇರಿದಂತೆ ಸಮಸ್ತ ಸಮಾಜ ಬಾಂಧವರಿಗೆ ವಂದೇ ಮಾತರಂ ಮಂತ್ರದ ಪ್ರೇರಣೆಯನ್ನು ಪ್ರತಿಯೊಬ್ಬರ ಹೃದಯದಲ್ಲೂ ಜಾಗೃತಗೊಳಿಸಿ, ’ಸ್ವ’ ಆಧಾರದ ಮೇಲೆ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಿ ಮತ್ತು ಈ ಸಂದರ್ಭವನ್ನು ಸ್ಮರಿಸುವ ಕಾರ್ಯಕ್ರಮಗಳಲ್ಲಿ ಉತ್ಸಾಹಭರಿತವಾಗಿ ಭಾಗವಹಿಸಿ ಎಂದು ಆಹ್ವಾನಿಸುತ್ತದೆ.
2. ಶ್ರೀ ಗುರು ತೇಗ್ ಬಹದ್ದೂರ್ – ಭಾರತೀಯ ಪರಂಪರೆಯ ದೇದೀಪ್ಯಮಾನ ನಕ್ಷತ್ರ
ಸಿಖ್ ಪರಂಪರೆಯ ಒಂಬತ್ತನೇ ಗುರು, ಶ್ರೀ ಗುರು ತೇಗ್ ಬಹದ್ದೂರ್ ಅವರ ಹುತಾತ್ಮತೆಯ ೩೫೦ನೆಯ ಪ್ರೇರಣಾ ದಿನದಂದು ಭಾರತದಾದ್ಯಂತ ಈ ವರ್ಷ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳ ಸಹಿತ ಭಾರತದ ಎಲ್ಲಾ ಸಮಾಜದವರು ಶ್ರದ್ಧೆ ಮತ್ತು ಗೌರವದ ಜೊತೆಗೆ ಅನೇಕಾನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.

ಸಂಘರ್ಷದ ಆ ಕಾಲಖಂಡದಲ್ಲಿ, ಭಾರತದ ಅಧಿಕ ಭೂಭಾಗವು ವಿದೇಶಿ ಆಡಳಿತಗಾರ ಔರಂಗಜೇಬನ ಕ್ರೂರ ದೌರ್ಜನ್ಯಗಳಿಂದ ಬಳಲುತ್ತಿತ್ತು. ಸಂಪೂರ್ಣ ಭರತವರ್ಷದಲ್ಲಿ ಅನಾದಿಕಾಲದಿಂದಲೂ ಆಚರಿಸಿಕೊಂಡು ಬಂದಿದ್ದ ಧರ್ಮಾಧಾರಿತ ಸಂಸ್ಕೃತಿ ಮತ್ತು ನಂಬಿಕೆಗಳ ನಾಶ ಹಾಗೂ ಬಲವಂತದ ಮತಾಂತರವನ್ನು ಮಾಡಲಾಗುತ್ತಿತ್ತು. ಇದೇ ಕಾಲಘಟ್ಟದಲ್ಲಿ ಕಾಶ್ಮೀರ ಕಣಿವೆಯಲ್ಲಿನ ಸಮುದಾಯದ ಪ್ರಮುಖ ಜನರು ಒಂದಾಗಿ ಪಂಡಿತ್ ಕೃಪಾರಾಮ್ ದತ್ತ ಅವರ ನೇತೃತ್ವದಲ್ಲಿ ಶ್ರೀ ಗುರು ತೇಗ್ ಬಹದ್ದೂರ್ ಅವರ ಬಳಿಗೆ ಮಾರ್ಗದರ್ಶನಕ್ಕಾಗಿ ಬಂದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಗುರುಗಳು ತಮ್ಮ ದೇಹತ್ಯಾಗ ಮಾಡಿಯಾದರೂ ಸಮಾಜದ ಚೇತನ ಹಾಗೂ ಸಂಕಲ್ಪಶಕ್ತಿಯನ್ನು ಜಾಗೃತಿಗೊಳಿಸಲು ನಿಶ್ಚಯಿಸಿದರು. ಹಾಗೂ ಔರಂಗಜೇಬನ ಕ್ರೂರ ಆಡಳಿತಕ್ಕೆ ಸವಾಲನ್ನು ಒಡ್ಡಿದರು. ಮತಾಂಧ ಮೂಲಭೂತವಾದಿ ಆಡಳಿತವು ಅವರನ್ನು ಬಂಧಿಸಿ ಇಸ್ಲಾಂಗೆ ಮತಾಂತರಗೊಳ್ಳಬೇಕು ಇಲ್ಲದಿದ್ದರೆ ಮೃತ್ಯುದಂಡನೆಗೆ ಒಳಗಾಗುವಂತೆ ಸವಾಲನ್ನೊಡ್ಡಿತು. ಗುರು ತೇಗ್ ಬಹದ್ದೂರ್ ಅವರು ದಬ್ಬಾಳಿಕೆಯ ಆಡಳಿತಕ್ಕೆ ತಲೆಬಾಗದೆ ಆತ್ಮಸಮರ್ಪಣೆಯ ಮಾರ್ಗವನ್ನು ಸ್ವೀಕರಿಸಿದರು. ಶ್ರೀ ಗುರು ತೇಗ್ ಬಹದ್ದೂರ್ ಅವರ ಸಂಕಲ್ಪ ಮತ್ತು ಆತ್ಮವಿಶ್ವಾಸವನ್ನು ಮುರಿಯುವ ದುಸ್ಸಾಹಸದಲ್ಲಿ ಮೊಘಲ ಸುಲ್ತಾನರು ಅವರ ಶಿಷ್ಯರಾದ ಭಾಯಿ ದಯಾಲ (ಕಾಯುವ ಪಾತ್ರೆಯಲ್ಲಿ ಎಣ್ಣೆಯನ್ನು ಕುದಿಸಿ ಸುರಿಯುವ ಮೂಲಕ), ಭಾಯಿ ಸತಿದಾಸ (ಹತ್ತಿ ಮತ್ತು ಎಣ್ಣೆಯಲ್ಲಿ ಜೀವಂತವಾಗಿ ದಹಿಸಿ) ಹಾಗೂ ಭಾಯಿ ಮತಿದಾಸ್ ಅವರನ್ನು (ಗರಗಸದಿಂದ ಕತ್ತರಿಸುವ ಮೂಲಕ) ಕ್ರೂರವಾಗಿ ಹತ್ಯೆ ಮಾಡಲಾಯಿತು.
ತದನಂತರ ಶ್ರೀ ತೇಗ್ ಬಹದ್ದೂರ್ ಅವರು ಮಾರ್ಗಶಿರ ಶುಕ್ಲ 5, ಸಂವತ್ 1732 (1675ರಲ್ಲಿ) ದಿಲ್ಲಿಯ ಚಾಂದನಿ ಚೌಕದಲ್ಲಿ ಧರ್ಮ ರಕ್ಷಣೆಗಾಗಿ ದಿವ್ಯ ಜ್ಯೋತಿಯಲ್ಲಿ ಲೀನವಾದರು. ಅವರ ದೇಹತ್ಯಾಗವು ಸಮಾಜದಲ್ಲಿ ಧರ್ಮರಕ್ಷಣೆಗಾಗಿ ತ್ಯಾಗ ಮತ್ತು ಹೋರಾಟದ ಸಂಕಲ್ಪವನ್ನು ಸೃಷ್ಟಿಸಿತು. ಇದರ ಕಾರಣ ಮೊಘಲ್ ಸಾಮ್ರಾಜ್ಯದ ಅಡಿಪಾಯವು ಅಲುಗಾಡಿತು. ಶ್ರೀ ತೇಗ್ ಬಹದ್ದೂರ್ ಅವರ ಜೀವನ ಸಮಾಜದಲ್ಲಿ ಧಾರ್ಮಿಕ ನಂಬಿಕೆಯನ್ನು ಬಲಪಡಿಸಲು, ಸಮಾಜವನ್ನು ಮೂಢನಂಬಿಕೆಗಳು ಮತ್ತು ದುಷ್ಟ ಸಂಪ್ರದಾಯದಿಂದ ಮುಕ್ತಗೊಳಿಸಲು ಹಾಗೂ ಸಮಾಜದ ಕಲ್ಯಾಣಕ್ಕಾಗಿ ಸಮರ್ಪಿತವಾಗಿತ್ತು. ಅವರು ಶ್ರೇಷ್ಠ ಜೀವನಕ್ಕಾಗಿ ಸುಖ ಮತ್ತು ದು:ಖ, ಹೊಗಳಿಕೆ-ತೆಗಳಿಕೆ, ಮಾನ-ಅವಮಾನ, ಲೋಭ ಮತ್ತು ಮೋಹ, ಕಾಮ ಕ್ರೋಧದಿಂದ ಮುಕ್ತವಾದ ಜೀವನ ನಡೆಸುವ ಉಪದೇಶವನ್ನು ಬೋಧಿಸಿದರು. ಮೊಘಲರ ದುರಾಡಳಿತದಿಂದ ಆತಂಕಕ್ಕೆ ಈಡಾಗಿದ್ದ ಸಮಾಜದಲ್ಲಿ ಅವರ ಸಂದೇಶವಾದ ಭಾಯಿ ಕಹು ಕೋ ದೇತ್ ನಹಿ, ನ ಭಯ್ ಮನತ್ ಆನಿ (ಯಾರನ್ನೂ ಹೆದರಿಸಬೇಡಿ ಅಥವಾ ಯಾರಿಗೂ ಭಯಪಡಬೇಡಿ) ಎಂಬ ಸಂದೇಶವು ನಿರ್ಭಯತೆ ಮತ್ತು ಧರ್ಮದ ರಕ್ಷಣೆಯ ಮನೋಭಾವವನ್ನು ಜಾಗೃತಗೊಳಿಸಿತು.
ಭಾರತೀಯ ಪರಂಪರೆಯ ಈ ದೇದೀಪ್ಯಮಾನ ನಕ್ಷತ್ರ ಶ್ರೀ ಗುರು ತೇಗ್ ಬಹದ್ದೂರ್ ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವವೆಂದರೆ ಅವರ ಬೋಧನೆಗಳು ಮತ್ತು ಅವರ ತ್ಯಾಗದ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸುವುದು. ರಾಷ್ಟ್ರೀಯ ಸ್ವಯಂಸೇವಕ ಸಂಘವು ಅವರ ಜೀವನದ ಆದರ್ಶ ಮತ್ತು ಮಾರ್ಗದರ್ಶನವನ್ನು ಸ್ಮರಿಸುತ್ತಾ ತಮ್ಮ ತಮ್ಮ ಜೀವನನಿರ್ಮಾಣದಲ್ಲಿ ಹಾಗೂ ಈ ವರ್ಷ ಆಯೋಜಿಸಲಾಗುವ ಎಲ್ಲ ಕಾರ್ಯಕ್ರಮಗಳಲ್ಲೂ ಸ್ವಯಂಪ್ರೇರಿತವಾಗಿ ಭಾಗವಹಿಸುವಂತೆ ಎಲ್ಲ ಸ್ವಯಂಸೇವಕರು ಹಾಗೂ ಸಮಾಜದ ಎಲ್ಲರಿಗೂ ಕರೆ ನೀಡುತ್ತದೆ.
3. ಭುವಿಯ ಕಿರಣ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ಜಯಂತಿ
ಭಾರತದ ಗೌರವಶಾಲಿ ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಯೋಧರು ಒಂದು ದೀರ್ಘ ಪರಂಪರೆಯನ್ನು ಹೊಂದಿದ್ದಾರೆ ಮತ್ತು ಅವರ ಕೊಡುಗೆಗಳು ಅವಿಸ್ಮರಣೀಯವಾಗಿದೆ. ಈ ಸ್ವಾತಂತ್ರ್ಯ ಹೋರಾಟದ ಶ್ರೇಷ್ಠ ನಾಯಕರು ಮತ್ತು ಯೋಧರಲ್ಲಿ ಭಗವಾನ್ ಬಿರ್ಸಾ ಮುಂಡಾ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. 15 ನವೆಂಬರ್ 1875ರಂದು ಜಾಖಂಡ್ನ ಉಲಿಹಾತುವಿನಲ್ಲಿ ಜನಿಸಿದ ಭಗವಾನ್ ಬಿರ್ಸಾ ಅವರ 150ನೇ ಜನ್ಮವರ್ಷ ಇದಾಗಿದೆ. ಬ್ರಿಟಿಷರು ಅವರ ಆಡಳಿತದ ಮೂಲಕ ಬುಡಕಟ್ಟು ಸಮುದಾಯಗಳ ವಿರುದ್ಧ ನಡಿಸಿದ ದೌರ್ಜನ್ಯಗಳಿಂದ ಬಸವಳಿದ ಅವರ ತಂದೆ ಉಲಿಹಾತುವಿನಿಂದ ಬಂಬಾಗೆ ಬಂದು ನೆಲೆಸಿದರು. ಸುಮಾರು ಹತ್ತನೇ ವಯಸ್ಸಿನಲ್ಲಿ ಅವರಿಗೆ ಚಾಯಿಬಾಸ ಮಿಷನರಿ ಶಾಲೆಯಲ್ಲಿ ಪ್ರವೇಶ ದೊರೆಯಿತು. ಮಿಷನರಿ ಶಾಲೆಗಳಲ್ಲಿ ಬುಡಕಟ್ಟು ವಿದ್ಯಾರ್ಥಿಗಳನ್ನು ಅವರ ಧಾರ್ಮಿಕ ಸಂಪ್ರದಾಯಗಳಿಂದ ದೂರಗೊಳಿಸಿ ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಳಿಸುವ ಷಡ್ಯಂತ್ರ ಅವರ ಅನುಭವಕ್ಕೆ ಬಂತು. ಮತಾಂತರವು ವ್ಯಕ್ತಿಯ ಧಾರ್ಮಿಕ ನಂಬಿಕೆ ಮತ್ತು ಸಾಂಸ್ಕೃತಿಕ ಚೇತನವನ್ನು ಅಡ್ಡಿಪಡಿಸುವುದಲ್ಲದೆ, ಕ್ರಮೇಣ ಸಮಾಜದ ಅಸ್ಮಿತೆಯನ್ನು ನಾಶಪಡಿಸುತ್ತದೆ. 15ನೇ ವಯಸ್ಸಿನಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಷಡ್ಯಂತ್ರಗಳನ್ನು ಅರ್ಥಮಾಡಿಕೊಂಡ ಬಿರ್ಸಾ ಮುಂಡಾ ಅವರು ಸಮಾಜ ಜಾಗರಣದ ಮೂಲಕ ತನ್ನ ಧಾರ್ಮಿಕ ಅಸ್ಮಿತೆ ಮತ್ತು ಪರಂಪರೆಯನ್ನು ರಕ್ಷಿಸುವುದಕ್ಕಾಗಿ ಹೋರಾಟವನ್ನು ಪ್ರಾರಂಭಿಸಿದರು. ಭಗವಾನ್ ಬಿರ್ಸಾ ಮುಂಡಾ ಅವರು ಕೇವಲ 25ನೇ ವಯಸ್ಸಿನಲ್ಲಿ, ಕಷ್ಟಕರ ಪರಿಸ್ಥಿತಿಗಳಿಂದ ಬಳಲುತ್ತಿದ್ದ ಅವರ ಸಮಾಜದಲ್ಲಿ ಸಾಂಸ್ಕೃತಿಕ ಪುನರುಜ್ಜೀವನದ ಅಲೆಯನ್ನು ಸೃಷ್ಟಿಸಿದರು. ಆಡಳಿತ ಸುಧಾರಣೆಗಳ ಹೆಸರಿನಲ್ಲಿ ಅರಣ್ಯಗಳನ್ನು ಸ್ವಾಧೀನಪಡಿಸಿಕೊಂಡ, ಬುಡಕಟ್ಟು ಸಮುದಾಯಗಳಿಂದ ಭೂಮಾಲೀಕತ್ವವನ್ನು ಕಸಿದುಕೊಂಡ ಮತ್ತು ಬಲವಂತದ ಕಾರ್ಮಿಕ ನೀತಿಗಳನ್ನು ಜಾರಿಗೆ ತಂದ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಭಗವಾನ್ ಬಿರ್ಸಾ ಬೃಹತ್ ಸಾರ್ವಜನಿಕ ಆಂದೋಲನದ ನೇತೃತ್ವ ವಹಿಸಿದರು. ಅವರ “ಅಬು ದಿಶುಂ-ಅಬು ರಾಜ್” (ನಮ್ಮ ದೇಶ-ನಮ್ಮ ಆಳ್ವಿಕೆ) ಎಂಬ ಆಂದೋಲನದ ಘೋಷಣೆಯು ಯುವಕರಿಗೆ ಪ್ರೇರಣಾ ಮಂತ್ರವಾಯಿತು. ಅದರಿಂದಾಗಿ ಸಾವಿರಾರು ಯುವಕರು ತಮ್ಮ ಧರ್ಮ ಮತ್ತು ಅಸ್ಮಿತೆಗಾಗಿ ಬಲಿದಾನ ಮಾಡಲು ಪ್ರೇರೇಪಿಸಿತು. ಬುಡಕಟ್ಟು ಜನರ ಅಧಿಕಾರ, ನಂಬಿಕೆ, ಪರಂಪರೆ ಮತ್ತು ಧರ್ಮವನ್ನು ರಕ್ಷಿಸಲು ಭಗವಾನ್ ಬಿರ್ಸಾ ಅನೇಕ ಆಂದೋಲನಗಳು ಮತ್ತು ಸಶಸ್ತ್ರ ಹೋರಾಟಗಳನ್ನು ನಡೆಸಿದರು. ತಮ್ಮ ಪವಿತ್ರ ಜೀವನದ ಧ್ಯೇಯಕ್ಕೆ ಹೋರಾಡುತ್ತಾ ಜೈಲುಸೇರಿದರು. 25ನೇ ವಯಸ್ಸಿನಲ್ಲಿ ದುರದೃಷ್ಟಕರ ಮತ್ತು ಅನುಮಾನಾಸ್ಪದವಾಗಿ ಅವರ ಬಲಿದಾನವಾಯಿತು.
ಸಮಾಜಕ್ಕಾಗಿ ಅವರ ಪ್ರೇಮ ಮತ್ತು ತ್ಯಾಗದ ಕಾರಣದಿಂದಾಗಿ, ಇಡೀ ಬುಡಕಟ್ಟು ಸಮಾಜ ಅವರನ್ನು ದೇವರ ಸ್ವರೂಪವೆಂದು ಪರಿಗಣಿಸುತ್ತದೆ ಮತ್ತು ಅವರನ್ನು ಭುವಿಯ ಕಿರಣ ಭಗವಾನ್ ಬಿರ್ಸಾ ಮುಂಡಾ ಎಂದು ಕರೆಯುತ್ತದೆ. ಸಂಸತ್ ಭವನದ ಆವರಣದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಭಾರತ ಸರ್ಕಾರ ಅವರಿಗೆ ಸೂಕ್ತ ಗೌರವವನ್ನು ನೀಡಿದೆ. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಪ್ರತಿ ವರ್ಷ ನವೆಂಬರ್ 15ರಂದು “ಜನಜಾತಿ ಗೌರವ ದಿವಸ್” ಎಂದು ಆಚರಿಸಲಾಗುತ್ತದೆ. ಅವರ ತ್ಯಾಗವು ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಜನಾಂಗದವರ ಮಹಾನ್ ಕೊಡುಗೆಗೆ ಉದಾಹರಣೆಯಾಗಿದೆ ಮತ್ತು ರಾಷ್ಟ್ರವು ಅದನ್ನು ಸ್ಮರಿಸುತ್ತದೆ. ಧಾರ್ಮಿಕ ನಂಬಿಕೆ, ಸಾಂಸ್ಕೃತಿಕ ಪರಂಪರೆ, ಸ್ವಾಭಿಮಾನ ಮತ್ತು ಬುಡಕಟ್ಟು ಸಮಾಜದ ಅಸ್ಮಿತೆಯ ರಕ್ಷಣೆಗಾಗಿ ಭಗವಾನ್ ಬಿರ್ಸಾ ಮುಂಡಾ ಅವರ ಜೀವನದ ಸಂದೇಶ ಇಂದಿಗೂ ಪ್ರಸ್ತುತ.

ವರ್ತಮಾನ ಕಾಲದಲ್ಲಿ ವಿಭಜಕ ವಿಚಾರಧಾರೆಯ ಮೂಲಕ ಭಾರತದ ಸಂದರ್ಭದಲ್ಲಿ ಬುಡಕಟ್ಟು ಸಮುದಾಯವನ್ನು ಇಟ್ಟುಕೊಂಡು ಒಂದು ಭ್ರಾಂತಿ ಮತ್ತು ತಪ್ಪು ಚರ್ಚೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಅಂತಹ ಸಮಯದಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ ಧಾರ್ಮಿಕ ಮತ್ತು ಪರಾಕ್ರಮದ ಕಥೆಗಳು ಅನೇಕಾನೇಕ ತಪ್ಪು ಕಲ್ಪನೆಗಳನ್ನು ದೂರಮಾಡುವ ಮತ್ತು ಸಮಾಜದಲ್ಲಿ ಸ್ವಯಂ ಅರಿವು, ಆತ್ಮವಿಶ್ವಾಸ ಮತ್ತು ಏಕಾತ್ಮತೆಯನ್ನು ಬಲಪಡಿಸಲು ಯಾವಾಗಲೂ ಸಹಾಯಕವಾಗುತ್ತವೆ. ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಗವಾನ್ ಬಿರ್ಸಾ ಮುಂಡಾ ಅವರ ಜೀವನ, ಕಾರ್ಯಗಳು ಮತ್ತು ಆಲೋಚನೆಗಳನ್ನು ಅಳವಡಿಸಿಕೊಂಡು ಪೂರ್ಣ ಅರಿವಿನೊಂದಿಗೆ ಸಂಘಟಿತ ಮತ್ತು ಸ್ವಾಭಿಮಾನಿ ಸಮಾಜ ನಿರ್ಮಾಣಕ್ಕಾಗಿ ಮಹತ್ವದ ಭೂಮಿಕೆ ನಿರ್ವಹಿಸಲು ಸ್ವಯಂಸೇವಕರು ಮತ್ತು ಸಂಪೂರ್ಣ ಸಮಾಜಕ್ಕೆ ಮನವಿ ಮಾಡುತ್ತದೆ.