ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ–ನಿರ್ಧಾರಗಳನ್ನು ನಿರೂಪಿಸುವ ಅತಿ ಮಹತ್ವದ ವಾರ್ಷಿಕ ಮಹಾಸಭೆ ಅಖಿಲ ಭಾರತೀಯ ಪ್ರತಿನಿಧಿ ಸಭಾ (ABPS) ಇದೇ 2016ರ ಮಾರ್ಚ್ 11, 12, 13ರಂದು ರಾಜಸ್ಥಾನದ ನಾಗೌರ್ ಪಟ್ಟಣದ ಶಾರದಾಪುರಂನ ಶಾರದಾ ಬಾಲ ನಿಕೇತನ ವಿದ್ಯಾಮಂದಿರದ ವಿಶಾಲ ಪರಿಸರದಲ್ಲಿ ನಡೆಯಲಿದೆ.
ಸಂಘದ ಅಖಿಲ ಭಾರತೀಯ ಪದಾಧಿಕಾರಿಗಳು, ಕ್ಷೇತ್ರ ಹಾಗೂ ರಾಜ್ಯಮಟ್ಟದ ಹೊಣೆಗಾರಿಕೆಯ ಪದಾಧಿಕಾರಿಗಳು, ಸಂಘ ಪರಿವಾರದ 40ಕ್ಕೂ ಮಿಕ್ಕ ಸಂಘಟನೆಗಳ ರಾಷ್ಟ್ರೀಯ ಪದಾಧಿಕಾರಿಗಳು, ದೇಶಾದ್ಯಂತ ಹರಡಿಕೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳ ಮೂಲಕ ಆಯ್ಕೆಯಾದ ಪ್ರತಿನಿಧಿಗಳು, ಸೇರಿದಂತೆ 1400ಕ್ಕೂ ಪ್ರತಿನಿಧಿಗಳು ಈ 3 ದಿನದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾರ್ಚ್ 11 ರಂದು ಬೆಳಗ್ಗೆ 8.30ಕ್ಕೆ ಸರಸಂಘಚಾಲಕ ಶ್ರೀ ಮೋಹನ್ ಭಾಗವತ್ ಅಖಿಲ ಭಾರತೀಯ ಪ್ರತಿನಿಧಿ ಸಭಾವನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಹಾಗೂ ಸರಕಾರ್ಯವಾಹರಾದ ಶ್ರೀ ಸುರೇಶ್ ಜೋಷಿಯವರ ಹಿರಿತನದಲ್ಲಿ ಸಭೆ ಜರುಗಲಿದೆ.
ರೈತಾಪಿ ಜನರ ನಡುವೆ ಕೆಲಸ ಮಾಡುತ್ತಿರುವ ಭಾರತೀಯ ಕಿಸಾನ್ ಸಂಘ, ಗುಡ್ಡಗಾಡಿನ ಜನರ ನಡುವೆ ಸೇವಾಕಾರ್ಯದ ಹಂದರ ನಿರ್ಮಿಸಿರುವ ವನವಾಸಿ ಕಲ್ಯಾಣಾಶ್ರಮ, ಕಾಲೇಜು ವಿದ್ಯಾರ್ಥಿಗಳ ನಡುವೆ ಕ್ರಿಯಾಶೀಲವಾಗಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕಾರ್ಮಿಕ ರಂಗದಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಮಜ್ದೂರ್ ಸಂಘ, ಸಾಧು, ಸಂತ, ಮಠಾಧೀಶರ ನಡುವಿನ ಧಾರ್ಮಿಕ ಸಂಘಟನೆ ವಿಶ್ವ ಹಿಂದೂ ಪರಿಷದ್, ರಾಜಕೀಯ ರಂಗದಲ್ಲಿ ಸಕ್ರಿಯವಾಗಿರುವ ಭಾರತೀಯ ಜನತಾ ಪಕ್ಷದ ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಮಾಜ ಜೀವನದ ಅನ್ಯಾನ್ಯ ರಂಗಗಳಲ್ಲಿ ಕಾರ್ಯಶೀಲವಾಗಿರುವ ವಿದ್ಯಾ ಭಾರತಿ, ವಿಜ್ಞಾನ ಭಾರತಿ, ಕ್ರೀಡಾ ಭಾರತಿ, ಸೇವಾ ಭಾರತಿ, ಸಂಸ್ಕೃತ ಭಾರತಿ, ಸಂಸ್ಕಾರ ಭಾರತಿ, ಲಘು ಉದ್ಯೋಗ ಭಾರತಿ ಅಲ್ಲದೆ ಸ್ತ್ರೀ ಶಕ್ತಿ ಜಾಗರಣದಲ್ಲಿ ತೊಡಗಿರುವ ರಾಷ್ಟ್ರಸೇವಿಕಾ ಸಮಿತಿ, ಮಹಿಳಾ ಸಮನ್ವಯ, ಜನ ಜಾಗೃತಿಯ ರಂಗದಲ್ಲಿ ಸಕ್ರಿಯವಾಗಿರುವ ಸ್ವದೇಶಿ ಜಾಗರಣ ಮಂಚ್, ದೀನದಯಾಳ್ ಸಂಶೋಧನಾ ಸಂಸ್ಥೆ, ಭಾರತ ವಿಕಾಸ ಪರಿಷತ್, ಶೈಕ್ಷಣಿಕ ಮಹಾಸಂಘ, ಧರ್ಮಜಾಗರಣ, ವಿಶ್ವ ವಿಭಾಗ – ಮುಂತಾದ ಸಂಘಟನೆಯ ಪ್ರಮುಖರು ಭಾಗವಹಿಸಲಿದ್ದಾರೆ.
ದೃಷ್ಟಿಹೀನರ ನಡುವೆ ಕ್ರಿಯಾಶೀಲರಾಗಿರುವ ಸಕ್ಷಮ, ಭಾರತದ ಗಡಿ ಪ್ರದೇಶದ ಜನರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿರುವ ಸೀಮಾ ಸುರಕ್ಷಾ ಪರಿಷತ್, ನಿವೃತ್ತ ಸೈನಿಕರ ಸಮಾಜಮುಖಿ ವೇದಿಕೆ ಪೂರ್ವಸೈನಿಕ ಪರಿಷತ್‌ನಂತಹ ವಿಶಿಷ್ಟ ಸಂಘಟನೆಗಳ ಪ್ರಮುಖರು ಪ್ರತಿನಿಧಿಸಭಾದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಎಲ್ಲ ಸಂಘಟನೆಗಳ ವಾರ್ಷಿಕ ಕಾರ್ಯಕಲಾಪದ ವರದಿ, ವಿಶ್ಲೇಷಣೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜ್ಯವಾರು ಕಾರ್ಯಚಟುವಟಿಕೆಗಳ ಅವಲೋಕನ ನಡೆಯಲಿದೆ. ಜೊತೆಗೆ ದೇಶದ ಆಗುಹೋಗುಗಳನ್ನು ಪ್ರಭಾವಿಸುವ ಪ್ರಮುಖ ವಿಷಯಗಳ ಕುರಿತು ಚರ್ಚಿಸಿ ಸಭೆ ನಿರ್ಣಯ ಅಂಗೀಕರಿಸಲಿದೆ.
ಸಮಾಜ ಜೀವನದ ಎಲ್ಲ ರಂಗಗಳಲ್ಲಿ ಕಾರ್ಯನಿರತರಾಗಿರುವ 1400ಕ್ಕೂ ಹೆಚ್ಚು ಪ್ರತಿನಿಧಿಗಳು ದೇಶದ ಮೂಲೆ–ಮೂಲೆಗಳಿಂದ ಈ ಸಭೆಗೆ ಆಗಮಿಸುತ್ತಿದ್ದಾರೆ.
ಅಖಿಲ ಭಾರತೀಯ ಪ್ರತಿನಿಧಿ ಸಭೆಯ ವರದಿ, ಇತರ ಮಾಹಿತಿಗಳು ಆರೆಸ್ಸೆಸ್ ವೆಬ್ ಸೈಟ್ www.samvada.org ನಲ್ಲಿ ಲಭ್ಯವಿರಲಿದೆ.