ಮಂಗಳೂರು ಜ೧೦: ಮಹಿಳೆಯರ ರಕ್ಷಣೆ ಸರಕಾರದ ಕರ್ತವ್ಯ ಅಸಾಧ್ಯವಾದರೆ ಅಧಿಕಾರ ಬಿಡಿ:ತೇಜಸ್ವಿನಿ
ಮಂಗಳೂರು: ಮಹಿಳೆಯರ ಸುರಕ್ಷತೆ ಬಿಕ್ಷೆ ಅಲ್ಲ; ಅದು ನಮ್ಮ ಹಕ್ಕು. ರಕ್ಷಣೆ ನೀಡುವುದು ಸರಕಾರದ ಕರ್ತವ್ಯ. ಅದನ್ನು ಸರ್ಮರ್ಥವಾಗಿ ನಿರ್ವಹಿಸುವುದು ಸಾಧ್ಯವಾಗದಿದ್ದರೆ ಅಧಿಕಾರ ಬಿಡಿ ಎಂದು ಮಾಜಿ ಸಂಸತ್ ಸದಸ್ಯೆ,ಕಾಂಗ್ರೆಸ್ ನಾಯಕಿ ತೇಜಸ್ವಿನಿ ರಮೇಶ್ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮಂಗಳೂರು ಘಟಕ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸುರಕ್ಷಿತ ಮಹಿಳೆ-ಸ್ವಾಸ್ಥ್ಯಸಮಾಜ ಕುರಿತ ದುಂಡು ಮೇಜಿನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಹೆಣ್ಮಕ್ಕಳ ದೌರ್ಜನ್ಯ ಪ್ರಕರಣಗಳನ್ನು ರಾಜ್ಯ ಗೃಹ ಸಚಿವಾಲಯ ಪರಿಣಾಮಕಾರಿಯಾಗಿ ನಿರ್ವಹಿಸದಿದ್ದರೆ ಹೋರಾಟ ಮಾಡುವುದಾಗಿ ಹೇಳಿದ ಅವರು ಕರ್ನಾಟಕದಲ್ಲಿ ಸಮರ್ಥರಾದ ಪೊಲೀಸ್ ಅಧಿಕಾರಿಗಳಿಗೆ ಕಡಿಮೆ ಇಲ್ಲ. ಆದರೆ ಇಂದು ಚಮಚಾಗಿರಿಯಲ್ಲಿ ತೊಡಗಿರುವವರು ಆಯಕಟ್ಟಿನ ಜಾಗಗಳಲ್ಲಿ ಠಿಕಾಣಿ ಹೂಡಿದ್ದಾರೆ. ಒಳ್ಳೆಯವರನ್ನು ಕೇಳುವವರು ಇಲ್ಲದಂತಾಗಿದೆ ಎಂದರು. ಪೊಲೀಸ್ ಇಲಾಖೆ ಸಂವೇದನೆ ಕಳೆದು ಕೊಂಡಿದೆ. ಅದಕ್ಕೆ ಅಧಿಕಾರಸ್ಥರ ಈ ನಡವಳಿಕೆಯೇ ಪ್ರಮುಖ ಕಾರಣ ಎಂದು ಬೊಟ್ಟು ಮಾಡಿದ ತೇಜಸ್ವಿನಿ ಇಲಾಖೆಯ ಸಂವೇದನೆಯನ್ನು ಬಡಿದು ಎಚ್ಚರಿಸ ಬೇಕಿದೆ. ಜತೆಗೆ ಪೊಲೀಸ್ ಇಲಾಖೆಯ ತನಿಖಾ ವಿಧಾನವನ್ನು ಸರಳಗೊಳಿಸ ಬೇಕು. ನ್ಯಾಯಾಲಯದ ವಿಚಾರಣೆಯಲ್ಲೂ ಸೂಕ್ತ ಮಾರ್ಪಾಡುಗಳು ಅಗತ್ಯ ಎಂದು ಪ್ರತಿಪಾದಿಸಿದರು.
ಭಾರತದ ಧಾರ್ಮಿಕ ಮತ್ತು ಕೌಟುಂಬಿಕ ಮೌಲ್ಯಗಳು ಮಹಿಳೆಯ ರಕ್ಷಣೆಗೆ ಪೂರಕವಾಗಿವೆ. ಆ ಮೌಲ್ಯಗಳ ಬಗ್ಗೆ ನಾವು ಹೆಮ್ಮೆ ಪಡ ಬೇಕು. ವೋಟ್‌ಬ್ಯಾಂಕ್‌ಗಾಗಿ ಆ ಮೌಲ್ಯಗಳನ್ನು ಕಳಚ ಬೇಡಿ;ರಾಜಕಾರಣದ ಬಣ್ಣ ಹಚ್ಚ ಬೇಡಿ ಎಂದು ಅವರು ರಾಜಕಾರಣಿಗಳನ್ನು ಆಗ್ರಹಿಸಿದರಲ್ಲದೆ ವಿರೋಧಿಗಳು ಹೇಳಿದನ್ನೆಲ್ಲ ಧಿಕ್ಕರಿಸುವ ಹೇಯ ರಾಜಕೀಯವನ್ನು ಕೈ ಬಿಡಿ ಎಂದರು. ಒಳ್ಳೆಯ ಕೆಲಸವನ್ನು ಯಾವುದೇ ಪಕ್ಷ, ಸಂಘಟನೆ, ವ್ಯಕ್ತಿ ಕೈಗೊಂಡರೆ ಅದನ್ನು ಬೆಂಬಲಿಸುವ ಮನೋಧರ್ಮ ಬೆಳೆಸಿ ಕೊಳ್ಳೋಣ ಎಂದು ಹೇಳಿದ ತೇಜಸ್ವಿನಿ ಮಹಿಳೆಯರ ಮನೋಬಲ ವೃದ್ಧಿಸುವ ಕೆಲಸ ಆಗ ಬೇಕು ಎಂದರು. ಆಡಳಿತ ವೈಫಲ್ಯ ಕರಾವಳಿ,ಧಾರವಾಡ, ಟಿ.ನರಸೀಪುರ ಹೀಗೆ ರಾಜ್ಯದೆಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯ, ಬ್ಲೇಕ್‌ಮೇಲ್ ಪ್ರಕರಣಗಳು ಹೆಚ್ಚುತ್ತಿದೆ. ಡ್ರಗ್ ಮಾಫಿಯಾ, ಫೇಸ್‌ಬುಕ್, ಲವ್ ಜೆಹಾದ್, ಹೆಣ್ಮಕ್ಕಳ ಅಪಹರಣಗಳು ವ್ಯಾಪಕವಾಗಿ ನಡೆಯುತ್ತಿದ್ದರೂ ಸರಕಾರ ಇವುಗಳನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಸೋತಿದೆ. ಮಾಫಿಯಾಗಳ ಹೆಡೆಮುರಿ ಕಟ್ಟುವಲ್ಲಿ ಗೃಹ ಇಲಾಖೆ ಸಂಪೂರ್ಣವಾಗಿ ಸೋತಿದೆ ಎಂದು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಹೇಳಿದರು.
ಕರಾವಳಿಯಲ್ಲಿ ಹುಡುಗಿಯರು ಇನ್ನೊಬ್ಬರಲ್ಲಿ ಮಾತನಾಡಲಾರದ ಸ್ಥಿತಿ ಇದ್ದರೆ ಆಡಳಿತ ವೈಫಲ್ಯವೇ ಅದಕ್ಕೆ ಕಾರಣ. ಸಮಾಜದ ಶಾಂತಿ, ನಿಮ್ಮದಿ, ಸಾಮರಸ್ಯಕ್ಕೆ ಸರಕಾರವೇ ವೇದಿಕೆ ರೂಪಿಸ ಬೇಕು. ನೈತಿಕ ಪೊಲೀಸ್ ಗಿರಿಯ ಕುರಿತು ಮಾತನಾಡುವ ನಾವು ಜನಸಾಮಾನ್ಯರು ನೆಮ್ಮದಿಯಿಂದ ಬದುಕಲು ಅಗತ್ಯವಾದ ವ್ಯವಸ್ಥೆ ರೂಪಿಸುವಲ್ಲಿ ಸೋತಿದ್ದೇವೆ ಎಂದು ಅವರು ಅಭಿಪ್ರಾಯ ಪಟ್ಟರು. ಕರ್ನಾಟಕದಲ್ಲಿ ಹೆಣ್ಮಕ್ಕಳ ಮಿಸ್ಸಿಂಗ್ ಬಗ್ಗೆ ಆಯೋಗ ನೀಡಿರುವ ವರದಿಗೆ ತಾನು ಬದ್ಧಳಾಗಿದ್ದೇನೆ ಮತ್ತು ಆದಿಸೆಯಲ್ಲಿ ಕೈಗೊಳ್ಳುವ ಕಾರ್ಯಕ್ರಮಗಳಿಗೆ ಬೆಂಬಲ ನೀಡುವುದಾಗಿ ಮಂಜುಳಾ ನುಡಿದರು.
ಉದ್ಘಾಟನಾ ಸಮಾರಂಭದಲ್ಲಿ ಎಸ್‌ಡಿಎಂ ವ್ಯವಹಾರಾಡಳಿತ ಕಾಲೇಜಿನ ಪ್ರಾಚಾರ್ಯೆ ಅರುಣಾ ಪಿ.ಕಾಮತ್,ಎಬಿವಿಪಿ ರಾಜ್ಯ ಕಾರ್ಯದರ್ಶಿ ರಮೇಶ್, ನಗರ ಕಾರ್ಯದರ್ಶಿ ಚೇತನ್ ಉಪಸ್ಥಿತರಿದ್ದರು. ರಾಜ್ಯ ಉಪಾಧ್ಯಕ್ಷ ರೋಹಿಣಾಕ್ಷ ಶಿರ್ಲಾಲು ಪ್ರಾಸ್ತಾವಿಕ ಭಾಷಣ ಮಾಡಿದರು. ಕು.ಸುಕನ್ಯಾ ಸ್ವಾಗತಿಸಿದರು. ಕು.ಭಾರತಿ ವಂದಿಸಿದರು. ಬಳಿಕ ಕರಾವಳಿಯಲ್ಲಿನ ಮಹಿಳಾ ನಾಪತ್ತೆ ಪ್ರಕರಣಗಳು, ಕರಾವಳಿಯ ಮಹಿಳೆಯರು ಎಷ್ಟು ಸುರಕ್ಷಿತ? ಮತ್ತು ಮಹಿಳಾ ಸುರಕ್ಷತೆ-ಸಬಲೀಕರಣದಲ್ಲಿ ಸಮಾಜ, ಸರಕಾರಗಳ ಜವಾಬ್ದಾರಿ ಕುರಿತು ವಿಶ್ಲೇಷಣೆ ನಡೆಯಿತು. ಇದರಲ್ಲಿ ವಿವಿಧ ಕ್ಷೇತ್ರಗಳ ತಜ್ಞರು ಪಾಲ್ಗೊಂಡು ಅಭಿಪ್ರಾಯ ಹಂಚಿಕೊಂಡರು.