ಕೆಲವೇ ದಿನಗಳ ಹಿಂದೆ ರಕ್ಷಣಾ ಮಂತ್ರಿ ಶ್ರೀ ರಾಜನಾಥ ಸಿಂಗ್ ರವರು ಮತ್ತು ಸೇನೆಯ ಮೂರೂ ಅಂಗಗಳ ಮುಖ್ಯಸ್ಥರು ಸೈನ್ಯಕ್ಕೆ ಅತ್ಯಾವಶ್ಯಕವಾಗಿ ಬೇಕಾಗಿರುವ ಮಹತ್ತರ ಸುಧಾರಣೆಗಳಲ್ಲಿ ಒಂದು ಅಂಶವನ್ನು ಬಿಡುಗಡೆ ಮಾಡಿದರು. ಅದೇ ‘ಅಗ್ನಿಪಥ’ ಎನ್ನುವ ಯೋಜನೆ. ಸುಮಾರು ಎರಡು ವರ್ಷಗಳ ಚಿಂತನೆ ನಡೆಸಿ, ಹಲವಾರು ದೇಶಗಳ ಮಾದರಿಗಳ ಅಧ್ಯಯನ ನಡೆಸಿ, ಎಲ್ಲಾ ಸಾಧಕ ಬಾಧಕಗಳನ್ನು ಪರಿಶೀಲಿಸಿ ಸೈನ್ಯಕ್ಕೆ, ಯುವಜನತೆಗೆ ಮತ್ತು ನಮ್ಮ ದೇಶಕ್ಕೆ ಒಳಿತಾಗುವ ಉದ್ದೇಶದಿಂದ ಮಾಡಿದ ಯೋಜನೆ ಇದು.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸೇನಾ ನೇಮಕಾತಿ ಸ್ಥಗಿತಗೊಂಡಿದ್ದು ಸೇನೆಗೆ ತುರ್ತಾಗಿ ಬೇಕಾಗಿರುವ ಸೈನಿಕರ ಅವಶ್ಯಕತೆಯನ್ನು ಪೂರೈಸಲು ಈ ಯೋಜನೆಯಡಿ 46 ಸಾವಿರ ‘ಅಗ್ನಿವೀರ’ ರನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನು ಮೂರೇ ತಿಂಗಳಲ್ಲಿ ಈ ಯೋಜನೆಗೆ ಚಾಲನೆ ಸಿಗಲಿದ್ದು, ಈ ಯೋಜನೆ ಮೂಲಕ ಸೇನೆ ಸೇರುವ ಯುವಕರು ನಾಲ್ಕು ವರ್ಷ ದೇಶದ ಸೇವೆ ಮಾಡುವ ಅವಕಾಶ ಸಿಗಲಿದೆ.
ಅಗ್ನಿಪಥ್ ಯೋಜನೆಯಡಿ ಭಾರತ ಸೇನೆಗೆ ಅಗ್ನಿವೀರರಾಗಿ ಸೇರಲು ಕನಿಷ್ಠ ಹದಿನೇಳೂವರೆ ವರ್ಷ 17.5 ವರ್ಷ ಆಗಿರಬೇಕು ಮತ್ತು ಗರಿಷ್ಠ 23 ವರ್ಷವಾಗಿರಬೇಕು. ಈ ವಯೋಮಿತಿಯೊಳಗಿನ ಯುವಕರು ಮಾತ್ರ ಈ ಯೋಜನೆಯಡಿಯಲ್ಲಿ ಅಗ್ನಿವೀರರಾಗಿ ಸೇವೆ ಸಲ್ಲಿಸಹುದು. ಅಗ್ನಿಪಥ್ ಯೋಜನೆಯ ಮೂಲಕ ಸಶಸ್ತ್ರಪಡೆಗಳಲ್ಲಿನ ಎಲ್ಲಾ ಸೈನಿಕರು, ನಾವಿಕರು ಮತ್ತು ವಾಯು ಸೈನಿಕರ ನೇಮಕ ನಡೆಯಲಿದೆ.
ವೇತನ ಎಷ್ಟಿರುತ್ತದೆ?
ಆರಂಭದಲ್ಲಿ ವಾರ್ಷಿಕ 4.62 ಲಕ್ಷ ರೂ ಪ್ಯಾಕೇಜ್ ವೇತನ ಇರುತ್ತದೆ. ನಾಲ್ಕನೇ ವರ್ಷದ ವೇಳೆಗೆ ವಾರ್ಷಿಕ 6.92 ಲಕ್ಷ ರೂ.ಪ್ಯಾಕೇಜ್ ನೀಡಲಾಗುತ್ತದೆ. ಅಗ್ನಿವೀರರಿಗೆ ಪಿಂಚಣಿ ಸಿಗುವುದಿಲ್ಲ. ಬದಲಿಗೆ ‘ಸೇವಾ ನಿಧಿ’ (ಅಗ್ನಿವೀರ್ ಕಾರ್ಪಸ್ ಫಂಡ್) ಲಾಭ ಸಿಗಲಿದೆ. ಮಾಸಿಕ ವೇತನದ ಶೇ.30ರಷ್ಟನ್ನು ಈ ನಿಧಿಗೆ ಕಡಿತಗೊಳಿಸಲಾಗುತ್ತದೆ. ಅಷ್ಟೇ ಮೊತ್ತವನ್ನು ಕೇಂದ್ರ ಸರಕಾರ ಪ್ರತಿ ತಿಂಗಳು ಠೇವಣಿ ಇಡಲಿದೆ. ನಾಲ್ಕು ವರ್ಷಗಳ ಸೇವೆಯ ನಂತರ, ‘ಸೇವಾ ನಿಧಿ’ಯಲ್ಲಿ ಠೇವಣಿ ಮಾಡಿದ ಮೊತ್ತವನ್ನು ಬಡ್ಡಿಯೊಂದಿಗೆ ಪಾವತಿಸಲಾಗುವುದು. ಅಂದರೆ, 4 ವರ್ಷ ಸೇವೆ ಪೂರೈಸಿದ ನಂತರ ಅಗ್ನಿವೀರರಿಗೆ ಒಂದೇ ಬಾರಿಗೆ ಸುಮಾರು 11 ಲಕ್ಷಕ್ಕೂ ಅಧಿಕ ಮೊತ್ತ ಸಿಗಲಿದೆ. ಇದರೊಂದಿಗೆ ಉಚಿತ ಊಟ ವಸತಿಯ ವ್ಯವಸ್ಥೆ ಇರುತ್ತದೆ.
ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ?
ದೇಶಾದ್ಯಂತ ಏಕರೂಪ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಉತ್ತೀರ್ಣರಾದವರಿಗೆ ಆರು ತಿಂಗಳ ತರಬೇತಿ ನೀಡಿ ಅರ್ಹತೆ ಮೇರೆಗೆ ನೇಮಿಸಿಕೊಳ್ಳಲಾಗುತ್ತದೆ. ತರಬೇತಿ ಸಂದರ್ಭದಲ್ಲಿಯೂ ಸಂಬಳ ನೀಡಲಾಗುತ್ತದೆ. ಅಗ್ನಿವೀರರಿಗೆ ಹೆಚ್ಚು ತಾಂತ್ರಿಕ ವಾತಾವರಣದಲ್ಲಿ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿ ಸೇರಿದಂತೆ ಅವರ ಒಟ್ಟು ಸೇವೆಯು ನಾಲ್ಕು ವರ್ಷಗಳಾಗಿರುತ್ತದೆ.
ಸಾಧಕಗಳೇನು?
ವೈಯಕ್ತಿತವಾಗಿ ಈ ಯೋಜನೆ ವಿಷೇಶವಾಗಿ ವಿದ್ಯಾಭ್ಯಾಸ ಮುಂದುವರೆಸಲಾಗದ ಬಡ ಕುಟುಂಬದ, ಗ್ರಾಮೀಣ ಪ್ರದೇಶದ ಯುವಕರಿಗೆ ವರದಾನವಾಗಿ ಪರಿಣಮಿಸಲಾಗುವುದು. ಸೈನ್ಯದ ಶಿಸ್ತಿನ ತರಬೇತಿ ಮತ್ತು ಅಲ್ಲಿನ ಜೀವನ ಶೈಲಿ ಈ ಮುಗ್ದ ಬಾಲಕರನ್ನು ಹೋರಾಟದ ಗಂಡುಗಲಿಗಳನ್ನಾಗಿ ಪರಿವರ್ತಿಸಲಿದೆ. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕಾಲೇಜುಗಳಲ್ಲಿ ಓದುತ್ತಿರುವ ಅವರ ಮಿತ್ರರಿಗಿಂತ ಸದೃಢವಾಗಿರುತ್ತದೆ. ದೇಶ ಸುತ್ತುವ ಕೋಶ ಓದುವ ಮುಕ್ತ ಅವಕಾಶ ಇವರಿಗೆ ಸಿಗಲಿದೆ. ದೇಶದಲ್ಲಿರುವ ಹಲವಾರು ಮುಕ್ತ ವಿಶ್ವವಿದ್ಯಾಲಯಗಳ ಮೂಲಕ ಇವರು ವ್ಯಾಸಂಗವನ್ನೂ ಮುಂದುವರೆಸಬಹುದು. ನಾಲ್ಕು ವರ್ಷಗಳಲ್ಲಿ ಇವರು ಪಡೆಯುವ ಅನುಭವ. ವೃತ್ತಿ ಪರಿಣಿತಿ ಮತ್ತು ಸಂದಿಗ್ಧ ಪರಿಸ್ಥಿತಿಗಳ ನಿರ್ವಹಣೆ ಇವರನ್ನು ಎಂಥಹ ಕಠಿಣ ಪರಿಸ್ಥಿತಿಯನ್ನಾದರೂ ಎದುರಿಸಿ ಜಯಿಸುವ ಮನೋಭಾವವನ್ನು ಬೆಳಸಿಕೊಳ್ಳುವುದನ್ನು ಕಲಿಸಿಕೊಡುತ್ತದೆ. ಈಗಿನ ಕೆಲವು ವಿಶ್ವವಿದ್ಯಾಲಯಗಳಲ್ಲಿ ಕಾಣಸಿಗುವ ಟುಕ್ಡೇ ಟುಕ್ಡೇ ಗ್ಯಾಂಗುಗಳಲ್ಲಾಗಲೀ, ಅಥವಾ ರಸ್ತೆಗಳನ್ನು ಅಡ್ಡಗಟ್ಟಿ ಟೈರುಗಳು ಬಸ್ಸುಗಳನ್ನು ಸುಡುವ ದುಷ್ಕೃತ್ಯ ಮನೋಭಾವದ ಗುಂಪಿನಿಂದ ಇವರು ದೂರ ಉಳಿಯುತ್ತಾರೆ. ಸೈನ್ಯದ ವಾತಾವರಣದಲ್ಲಿ ಬೆಳಸಿಕೊಂಡ ವಿಕಸಿತ ಮನೋಭಾವ ಮತ್ತು ರಾಷ್ಟ್ರಪ್ರೇಮ ಇವರನ್ನು ಉತ್ತಮ ಪ್ರಜೆಗಳ ಗುಂಪಿಗೆ ಸೇರಿಸುತ್ತದೆ. ಇದೊಂದು ಪೂರ್ಣಾವಧಿಯ ವೃತ್ತಿಯಲ್ಲದಿದ್ದರೂ ಭವಿಷ್ಯದಲ್ಲಿ ಒಂದು ಸಮರ್ಥ, ಸಮೃದ್ಧ ಜೀವನವನ್ನು ರೂಪಿಸಿಕೊಳ್ಳುವುದರಲ್ಲಿ ಖಂಡಿತಾ ನೆರವಾಗುವ ಒಂದು spring board ಆಗಲಿದೆ.
ಈ ಯೋಜನೆ ಸೈನ್ಯದ ಸರಾಸರಿ ವಯಸ್ಸು ಈಗಿರುವ ೩೨ ರಿಂದ ಮುಂಬರುವ ವರ್ಷಗಳಲ್ಲಿ ಗಮನೀಯವಾಗಿ ಕಡಿಮೆಯಾಗಲಿದ್ದು ಒಂದು ಉತ್ಸಾಹಭರಿತ ಯುವ ಸೈನ್ಯವನ್ನು ರಚಿಸುವಲ್ಲಿ ಯಶಸ್ವಿಯಾಗಲಿದೆ. ಭವಿಷ್ಯತ್ತಿನ ಯುದ್ಧತಂತ್ರಕ್ಕೆ ಅತ್ಯಾವಶ್ಕಕವಾದ ತಾಂತ್ರಿಕ ಜ್ಞಾನವನ್ನು ಈ ಯುವ ಸೈನ್ಯ ಬಹುಬೇಗ ಅಳವಡಿಸಿಕೊಳ್ಳುವ ನಿರೀಕ್ಷೆ ಇದೆ.
ರಕ್ಷಣಾವಲಯದಲ್ಲೂ ಆತ್ಮನಿರ್ಭರತೆಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವು ಕಹಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಇದನ್ನು ವಿವರಿಸಲು ಕೆಲವು ಅಂಕಿಅಂಶಗಳ ಸಹಾಯ ಬೇಕಾಗುತ್ತದೆ.
ಈ ವರ್ಷದ ರಕ್ಷಣಾ ಬಜೆಟ್ ಅಂದಾಜು 5.25 ಲಕ್ಷ ಕೋಟಿ ರೂಪಾಯಿಗಳು. ಇದರಲ್ಲಿ ಸುಮಾರು 4.05 ಲಕ್ಷ ಕೋಟಿ ರೂಪಾಯಿಗಳು ಸೈನ್ಯದ ಎಲ್ಲಾ ಅಂಗಗಳ ನಿರ್ವಹಣೆಗೆ ವೆಚ್ಚವಾಗುತ್ತದೆ. ಯುದ್ಧ ಸಾಮಗ್ರಿಗಳನ್ನು ಖರೀದಿಸಲು 1.38 ಲಕ್ಷ ಕೋಟಿ ರೂಪಾಯಿಗಳನ್ನು ಕೊಡಲಾಗಿದೆ. ನಿವೃತ್ತ ಸೈನಿಕರ ಪಿಂಚಣಿಯ ವೆಚ್ಚಕ್ಕೆಂದು ಸುಮಾರು 1.20 ಲಕ್ಷ ಕೋಟಿ ರೂಪಾಯಿಗಳು ಅಂದರೆ ರಕ್ಷಣಾ ಬಜೆಟ್ಟಿನ ಸುಮಾರು 23% ಪಿಂಚಣಿಗೇ ಹೋಗಿಬಿಡುತ್ತದೆ. 2012-2013 ಬಜೆಟ್ಟಿನಲ್ಲಿ ಪಿಂಚಣಿ ಸುಮಾರು 19% ಇದ್ದದ್ದು ಈಗ 23% ಆಗಿದೆ. ನಾವು ಆಮದು ಮಾಡಿಕೊಳ್ಳುತ್ತಿರುವ ಬೃಹತ್ ಮೊತ್ತದ ಯುದ್ಧಸಾಮಗ್ರಿಗಳನ್ನು ಕ್ರಮೇಣ ಕಡಿಮೆ ಮಾಡಿ ಮತ್ತು ಸೈನ್ಯಕ್ಕೆ ಬೇಕಾಗಿರುವ ಸಾಮಗ್ರಿಗಳನ್ನು ನಮ್ಮ ದೇಶದಲ್ಲೇ ತಯಾರಿಸಲು ಸಂಶೋಧನಾ ಮತ್ತು ಅಭಿವೃದ್ಧಿ (R&D) ಅತ್ಯಾವಶ್ಯಕ ಮತ್ತು ಇದಕ್ಕೆ ಮುಕ್ತವಾಗಿ ದೇಣಿಗೆ ನೀಡಬೇಕಾಗುತ್ತದೆ. ಸದ್ಯಕ್ಕೆ ಯುದ್ಧ ಸಾಮಗ್ರಿಗಳನ್ನು ಖರೀದಿಸಲು ಕೊಟ್ಟಿರುವ 1.38 ಲಕ್ಷ ಕೋಟಿಯಲ್ಲಿ 25% ಮಾತ್ರ ಸಂಶೋಧನಾ ಮತ್ತು ಅಭಿವೃದ್ಧಿಗೆ ಮೀಸಲಿಡಲಾಗಿದೆ, ಈ ಮೊತ್ತವನ್ನು ಇನ್ನೂ ಹೆಚ್ಚಿಸಬೇಕಾಗಿದೆ. ಇದು ವರ್ಷಗಳ ಹಿಂದೆಯೇ ನಡೆಯಬೇಕಾಗಿತ್ತು ಆದರೆ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಸಾಮಗ್ರಿಗಳಲ್ಲಿ ಸಿಗುತ್ತಿದ್ದ ಕಮಿಷನ್ನಿನ ದುರಾಸೆಗೆ ಜೋತು ಬಿದ್ದು ದೇಶದ ಸ್ವಾವಲಂಬನೆಯನ್ನೆ ಬಲಿಕೊಟ್ಟರು ಭ್ರಷ್ಟರು. ಮುಂಬರುವ ವರ್ಷಗಳಲ್ಲಾದರೂ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಈಗಿನ ಸರ್ಕಾರ ಪ್ರಯತ್ನಿಸುತ್ತಿದೆ. ಪ್ರತಿ ವರ್ಷ ಹೆಚ್ಚಾಗುತ್ತಿರುವ ಪಿಂಚಣಿ ಬಜೆಟ್ಟನ್ನು ಕಡಿಮೆಗೊಳಿಸಿ ಈ ಮೊತ್ತವನ್ನು ರಕ್ಷಣಾವಲಯದಲ್ಲಿ ಆತ್ಮನಿರ್ಭರತೆಯನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಅಗ್ನಿಪಥ್ ಯೋಜನೆ ಸಹಾಯವಾಗಲಿದೆ.
ಸದ್ಯಕ್ಕೆ ನಮ್ಮ ದೇಶದ ನಿರುದ್ಯೋಗ ಸಮಸ್ಯೆ ಸುಮಾರು 8% ನಷ್ಟಿದೆ ಆದರೆ ಹರ್ಯಾಣ, ಬಿಹಾರ, ಯುಪಿ ಮತ್ತು ರಾಜಾಸ್ಥಾನದಲ್ಲಿ ಇದು 34.5% ನಿಂದ 21% ವರೆಗೂ ಇದೆ. ಈ ಪ್ರದೇಶಗಳು ಅಸಲಿಗೆ ಅಗ್ನಿಪಥ್ ಅಂತಹ ಯೋಜನೆಯನ್ನು ಸ್ವಾಗತಿಸಬೇಕಿತ್ತು.ಆದರೆ, ಇಲ್ಲಿಯವರು ಇದನ್ನು ವಿರೋಧಿಸಿ ದಂಗೆ ಎದ್ದು ರೈಲು ಬೋಗಿಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ ಮೊಟ್ಟ ಮೊದಲನೆಯದಾಗಿ ಇಂತಹ ದುಷ್ಕರ್ಮಿಗಳು ಸೈನ್ಯಕ್ಕೆ ಸೇರಲು ಅನರ್ಹರು ಆಮೇಲೆ ಇವರಿಗೆ ಪಿಂಚಣಿ ಸಿಗುವ ಖಾಯಂ ಕೆಲಸಗಳು ಬೇಕು. ಇನ್ನೊಂದು ಗಮನಾರ್ಹ ವಿಷಯವೆಂದರೆ ಈ ರಾಜ್ಯಗಳಲ್ಲಿ ಸಾಕ್ಷರತೆ ದೇಶದ ಸರಾಸರಿಗಿಂತ ಕಡಿಮೆ ಹಾಗಾಗಿ ಅಗ್ನಿಪಥ್ ನಲ್ಲಿ ನಡೆಯುವ ಪರೀಕ್ಷೆಗಳು ದೇಶಮಟ್ಟದ ಏಕಮುಖ ಪರೀಕ್ಷೆಗಳಲ್ಲಿ ಸೋತುಹೋಗುವ ಭಯವೂ ಇರಬಹುದೇನೋ.
ದಿವಂಗತ ಜನರಲ್ ಬಿಪಿನ್ ರಾವತ್ ಹೇಳುತ್ತಿದ್ದರು.. ಸೈನ್ಯವೆಂದರೆ ಉದ್ಯೋಗ ವಿನಿಮಯ ಕೇಂದ್ರವಲ್ಲಾ, MNREGA ಸ್ಕೀಮುಗಳಲ್ಲಾ. ದೇಶದ ಸುರಕ್ಷತೆಗೆ ಬೇಕಾದ ದೂರದೃಷ್ಟಿಯ ವ್ಯವಸ್ಥೆಯನ್ನು ರೂಪಿಸಿಕೊಳ್ಳುವ ಸ್ವಾತಂತ್ರವಿಟ್ಟುಕೊಂಡಿರುತ್ತದೆ, ಅದು ಇಷ್ಟವಾಗದವರು They can go and climb a tree…
ಶ್ರೀ ಅಶೋಕ್ ಗೌಡ,ಚಿಂತಕರು