ಧಾರವಾಡ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಸಂಯುಕ್ತಾಶ್ರಯದಲ್ಲಿ ಕೃಷಿ ವಿಶ್ವವಿದ್ಯಾನಿಲಯದ Farmers Knowledge Centre ಸಭಾಂಗಣದಲ್ಲಿ ಆಯೋಜಿಸಲಾಗಿರುವ “ಅಗ್ರಿ ವಿಷನ್ – ೨೦೨೩” ಕಾರ್ಯಕ್ರಮವನ್ನು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಗ್ರಿವಿಷನ್ನ ರಾಷ್ಟ್ರೀಯ ಸಂಯೋಜಕ ಶುಭಂ ಸಿಂಗ್ ಪಟೇಲ್ ಉಪಸ್ಥಿತರಿದ್ದರು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯಗಳಿಂದ ಸುಮಾರು ೧೨ ವಿಶ್ವವಿದ್ಯಾನಿಲಯಗಳ ೧೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು.
ಹೈನುಗಾರಿಕೆ, ಪಶುವೈದ್ಯಕೀಯ, ಗೃಹ ವಿಜ್ಞಾನ, ತೋಟಗಾರಿಕೆ, ರೇಷ್ಮೆ ಕೃಷಿ, ಎಂಜಿನಿಯರಿಂಗ್ ಮತ್ತು ಇತರ ಸಂಬಂಧಿತ ವಿಜ್ಞಾನಗಳು ಸೇರಿದಂತೆ ಕೃಷಿ ವಿಜ್ಞಾನದ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಮತ್ತು ಉದ್ಯೋಗಾವಕಾಶವನ್ನು ಒದಗಿಸುವ ಉದ್ದೇಶದಿಂದ ೨೦೧೫ ರಲ್ಲಿ ಅಗ್ರಿವಿಷನ್ ಅನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಆಯಾಮವಾಗಿ ರಚಿಸಲಾಯಿತು. ಇದು ರೈತ ಸಮುದಾಯದ ಉನ್ನತ ಜೀವನಮಟ್ಟಕ್ಕೆ ಹಾಗೂ ಕೃಷಿಗೆ ಸಂಬಂಧಿಸಿದ ಇತರ ಪಾಲುದಾರರಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಕಾರಣವಾಗುವ ಉದ್ದೇಶವನ್ನು ಹೊಂದಿದೆ. ಈ ಬಾರಿಯ ಅಗ್ರಿವಿಷನ್ ನೈಸರ್ಗಿಕ ಕೃಷಿ, ಆಧುನಿಕ ತಂತ್ರಜ್ಞಾನ, ಸಮನ್ವಯ ಮತ್ತು ಅನುಷ್ಠಾನ ಈ ವಿಷಯಗಳನ್ನು ಮುಖ್ಯ ಭೂಮಿಕೆಯನ್ನಾಗಿಸಿಕೊಂಡು ಮಾರ್ಚ್ 11 ಮತ್ತು 12 ಎರಡು ದಿನಗಳ ಕಾಲ ನಡೆಯಲಿದೆ.