ಬೆಂಗಳೂರು, ಆ. 28: ಲೋಕಮಾತೆ ಅಹಲ್ಯಾದೇವಿ ಹೋಳ್ಕರ್‌ ಅವರು ಮಾಡಿದಂತಹ ಸಮಾಜ ಸುಧಾರಣೆಗಳು ಅವಿಸ್ಮರಣೀಯ. ಅವರ ಸಮಾಜಮುಖಿ ಕಾರ್ಯಗಳನ್ನು ಇಂದು ಪ್ರತಿಯೊಬ್ಬರೂ ಮುಂದುವರಿಸಿಕೊಂಡು ಹೋಗಬೇಕಿದೆ. ಅವರ ಜೀವನ ಯುವಕರಿಗೆ ಹಾಗೂ ಮಹಿಳೆಯರಿಗೆ ಸ್ಫೂರ್ತಿಯಾಗಿದೆ ಎಂದು ಲೋಕಮಾತಾ ಅಹಲ್ಯಾದೇವಿ ಹೋಳ್ಕರ್ 300ನೇ ವರ್ಷದ ಜಯಂತಿ ಸಮಿತಿಯ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಚಾಲಕಿ ಶೋಭಾ ಹೆಚ್.ಜಿ ಹೇಳಿದರು.

ಅಹಲ್ಯಾದೇವಿ ಹೋಳ್ಕರ್‌ ಅವರ 300ನೇ ವರ್ಷದ ಜಯಂತಿ ಪ್ರಯುಕ್ತ  ಕರ್ನಾಟಕ ದಕ್ಷಿಣ ಪ್ರಾಂತದ ಸ್ವಾಗತ ಸಮಿತಿ ವತಿಯಿಂದ ಆಯೋಜಿಸಲಾಗುವ ಕಾರ್ಯಕ್ರಮಗಳ ಕುರಿತು ತಿಳಿಸುವ ಉದ್ದೇಶದಿಂದ ಇಂದು ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‌ ನಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಈ ಸಂದರ್ಭದಲ್ಲಿಮಾತನಾಡಿದ ಅವರು ಕರ್ನಾಟಕ ದಕ್ಷಿಣ ಪ್ರಾಂತವು ಹೋಳ್ಕರ್‌ ಅವರ ತ್ರಿಶತಾಬ್ದಿವರ್ಷ ಆಚರಣೆಯ ಸಂದರ್ಭದಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಲು ನಿರ್ಧರಿಸಿದೆ. ಅದರಂತೆ ಕರ್ನಾಟಕ ದಕ್ಷಿಣ ಪ್ರಾಂತದ ಎಲ್ಲಾ ಜಿಲ್ಲೆ, ತಾಲ್ಲೂಕು, ಹೋಬಳಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಸಮಿತಿ ಮುಂದಾಗಿದೆ.  ಅಹಲ್ಯಾಬಾಯಿ ಅವರು ಆಧ್ಯಾತ್ಮಿಕ, ರಾಜಕೀಯ , ಸಾಮಾಜಿಕ , ಶಿಕ್ಷಣ ಕ್ಷೇತ್ರಗಳಲ್ಲಿ ಮಾಡಿದ ಸೇವೆಗಳನ್ನು ಯುವಕರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ತಿಳಿಸಿಕೊಡವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಶಾಲೆ ವಿದ್ಯಾರ್ಥಿನಿಯರಿಗೆ, ಶಿಕ್ಷಕರಿಗೆ ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಅಹಲ್ಯಾಬಾಯಿ ಹೋಳ್ಕರ್ ಅವರ ಬಗ್ಗೆ ಕಾರ್ಯಕ್ರಮದ ಮೂಲಕ ತಿಳಿಸಲಾಗುತ್ತದೆ. ಅಷ್ಟೇ ಅಲ್ಲದೆ ಸಾರ್ವಜನಿಕರಿಗೆ ಅವರ ಜೀವನವನ್ನು ಪರಿಚಯಿಸುವ ದೃಷ್ಟಿಯಿಂದ ಬೀದಿ ನಾಟಕ, ಲಲಿತ ಸಹಸ್ರನಾಮ ಮತ್ತು ಸೌಂದರ್ಯ ಲಹರಿ ಗುಂಪುಗಳಲ್ಲಿ ಜಾಗೃತಿ, ಮಹಿಳಾ ಕೋ ಅಪರೇಟಿವ್‌ ಸೊಸೈಟಿಗಳಲ್ಲಿ, ಯೋಗಕೇಂದ್ರಗಳಲ್ಲಿ ಕಥೆ, ಚಿತ್ರಕಲೆ, ಪ್ರಬಂಧ ಸ್ಪರ್ಧೆಗಳ ಆಯೋಜನೆ, ಬೈಕ್‌ ರ್ಯಾಲಿ, ಗಿಡ ನಡೆಯುವುದು, ದೇವಸ್ಥಾನಗಳ ಜೀರ್ಣೋದ್ಧಾರ, ಶಿಕ್ಷಕರಿಂದ ಬೇರೆ ಬೇರೆ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಉಪನ್ಯಾಸ ನಡೆಸುವುದು, ಶಿಕ್ಷಣ ಕ್ಷೇತ್ರ ಮತ್ತು ಧಾರ್ಮಿಕ ಕ್ಷೇತ್ರ, ನೇಕಾರರ ಕ್ಷೇತ್ರಗಳಲ್ಲಿನ ಸಾಧಕರಿಗೆ ಅಹಲ್ಯಾದೇವಿ ಹೆಸರಿನಲ್ಲಿ ಗೌರವ ಸಮರ್ಪಣೆ , ಹೆಣ್ಣುಮಕ್ಕಳಿಗೆ ಸ್ಕಾಲರ್‌ ಶಿಪ್‌ ನೀಡುವುದು, ಸ್ವರಕ್ಷಣೆಯ ಬಗ್ಗೆ ಶಾಲೆಗಳಲ್ಲಿ ತರಬೇತಿ ಹಾಗೂ ಅಪಾರ್ಟ್‌ಮೆಂಟ್‌ ಗಳಲ್ಲಿ ಮಕ್ಕಳಿಗೆ, ತಾಯಂದಿರಿಗೆ ಚಿಂತನ ಮಂಥನ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ವಿವರಿಸಿದರು.

ಇದೇ ವೇಳೆ ಲೋಕಮಾತಾ ಅಹಲ್ಯಾದೇವಿ ಹೋಳ್ಕರ್ 300ನೇ ಜಯಂತಿಯ ಸಮಿತಿಯ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಚಾಲಕಿ ಛಾಯಾಪ್ರಭು ಮಾತನಾಡಿ, ಅಹಲ್ಯಾಬಾಯಿ ಅವರು ಶಿಕ್ಷಣದಲ್ಲಿ ಪ್ರತಿಭಾನ್ವಿತೆ, ಸಮಾಜದ ಏಳಿಗೆಗಾಗಿ ಶ್ರಮಿಸಿದವರು. ಹೀಗಾಗಿ ಅವರ ಕುರಿತು ಜನರಿಗೆ ತಿಳಿಸುವ ಕುರಿತು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ‌. ಈ ಕಾರ್ಯಕ್ರಮಗಳು ಸೆಪ್ಟೆಂಬರ್‌ ನಿಂದ ನವೆಂಬರ್‌ ವರೆಗೆ ರಾಜ್ಯದ ವಿವಿಧ ಸ್ಥಳಗಳಲ್ಲಿ ನಡೆಯಲಿದೆ‌. ಈ ಸಂದರ್ಭದಲ್ಲಿ ಕಾರ್ಯಕರ್ತರು ವಿವಿಧ ರೀತಿಯ ಕಾರ್ಯಕ್ರಮಗಳ ಆಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಜನರಿಗೆ ಲೋಕಮಾತಾ ಅಹಲ್ಯಾದೇವಿ ಹೋಳ್ಕರ್ ಅವರ ಕುರಿತು ವಿಷಯ ತಲುಪಿಸಲು ಕಾರ್ಯಪ್ರವೃತ್ತರಾಗಬೇಕಿದೆ ಎಂದರು.


ಸಾಮರಸ್ಯ ವಿಭಾಗದ ಲಕ್ಷ್ಮೀನಾರಾಯಣ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು ಎನ್ನುವುದಕ್ಕೆ ಆದರ್ಶ ಅಹಲ್ಯಾದೇವಿ ಹೋಳ್ಕರ್. ಈಗಾಗಲೇ 30 ಜಿಲ್ಲಾ ಕೇಂದ್ರಗಳಲ್ಲಿ ಹೋಳ್ಕರ್‌ ಅವರು ಮಾಡಿರುವ ಕೆಲಸಗಳನ್ನು ತಿಳಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಸುಮಾರು ಸಾವಿರ ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜಿಸುವ ನಿರ್ಧಾರ ಮಾಡಲಾಗಿದೆ. ಮೈಸೂರು, ಮಂಗಳೂರು, ಶಿವಮೊಗ್ಗ, ಹಾಸನ, ಕೋಲಾರ, ತುಮಕೂರು,  ಬೆಂಗಳೂರು ಉತ್ತರ ಮತ್ತು ದಕ್ಷಿಣ ಎಂಟು ವಿಭಾಗಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.


ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸ್ವಾಗತ ಸಮಿತಿ ಸದಸ್ಯರು ಉಪಸ್ಥಿತಿರಿದ್ದರು.

ಪತ್ರಿಕಾ ಹೇಳಿಕೆ

ಲೋಕಮಾತಾ ಅಹಲ್ಯಾದೇವಿ ಹೋಳ್ಕರ್

ಒಬ್ಬ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹುಡುಗಿ ಅಹಲ್ಯಾ, ಶಿವಭಕ್ತೆ ರಾಜಮಾತೆ ಅಹಲ್ಯಾಬಾಯಿಯಾದ ಬಗ್ಗೆ ನಾವಿಂದು ತಿಳಿಯಬೇಕಿದೆ. ರಾಜಮಾತಾ ಜೀಜಾಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಮಹಾರಾಣಿ ತಾರಾಬಾಯಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮುಂತಾದ ಮಹಿಳೆಯರು ದೇಶಕ್ಕಾಗಿ, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಹೇಗೆ ಹೋರಾಡಿದರೋ ಹಾಗೆಯೇ ತನ್ನ ಚಿಂತನೆಯನ್ನು ಕೃತಿಯ ಮುಖಾಂತರ ಮಾಡಿ ತೋರಿಸಿದ ಅಹಲ್ಯಾಬಾಯಿ, ಶಿಕ್ಷಣದಲ್ಲಿ ಪ್ರತಿಭಾನ್ವಿತೆ, ದೇಶವನ್ನು ಅಖಂಡತೆಯಲ್ಲಿ ಇಡುವುದಕ್ಕಾಗಿ ಹೋರಾಡಿದವಳು. ಅವಳಲ್ಲಿ ನ್ಯಾಯ ವ್ಯವಸ್ಥೆ ಪರಿಪೂರ್ಣವಾಗಿತ್ತು. ಅಹಲ್ಯಾಬಾಯಿಯಲ್ಲಿ ದೇಶದ ಚಿಂತನೆ ವ್ಯವಸ್ಥೆ ಹೇಗಿತ್ತೆಂದರೆ, ಎಲ್ಲ ದೃಷ್ಟಿಕೋನದಿಂದಲೂ ಜಾಗೃತಿ ಮಾಡಿದವಳು. ಸ್ವರಾಜ್ಯ ಕಲ್ಪನೆ, ಸ್ವಧರ್ಮ ಮತ್ತು ಸ್ವಭಾಷೆಯ ಉನ್ನತೀಕರಣ, ಸಂಸ್ಕೃತಿ ರಕ್ಷಣೆ, ಧರ್ಮ ರಕ್ಷಣೆ, ಅವಳ ಆದ್ಯ ಕೆಲಸಗಳಾಗಿತ್ತು. ಆಕೆಯ ಕೆಲಸ ವಿವಾದ ರಹಿತವಾಗಿತ್ತು. ಆಕೆ ಕಟ್ಟಿಸಿದ ದೇವಾಲಯಗಳು, ನದಿಗಳ ಮೇಲಿನ ಘಾಟ್‌ಗಳು, ಧರ್ಮಶಾಲಾ, ನೀರಿನ ತೊಟ್ಟಿಗಳು, ಬಾವಿಗಳು, ವಾರಣಾಸಿ, ದ್ವಾರಕಾ, ಗಯಾ, ಮಾಳವ ಮುಂತಾದ ಯಾತ್ರಾ ಸ್ಥಳಗಳಲ್ಲಿ ನಿರ್ಮಿಸಲಾದ ಆಹಾರ ಮೇಲಾವರಣಗಳಂತಹ (ಘಟಕಗಳು) ಆನೇಕ ಕೆಲಸಗಳನ್ನು ಮಾಡಿದರು. ಇವುಗಳಲ್ಲಿ ಅನೇಕ ರಚನೆಗಳು ಇಂದಿಗೂ ನಮ್ಮ ಶ್ರೇಷ್ಠತೆಗೆ ಸಾಕ್ಷಿಯಾಗಿ ನಿಂತಿವೆ. ಬಡವರು ಮತ್ತು ನಿರ್ಗತಿಕರಿಗೆ ಇಂತಹ ಸೌಲಭ್ಯಗಳನ್ನು ಕಲ್ಪಿಸಲು ಅಹಲ್ಯಾಬಾಯಿ ವಿಶೇಷ ಪ್ರಯತ್ನ ಮಾಡಿದ ಕಾರಣಕ್ಕಾಗಿಯೇ ಸಾಮಾನ್ಯ ಜನರು ಅಹಲ್ಯಾಬಾಯಿಯನ್ನು ರಾಜಮಾತೆ, ಲೋಕಮಾತೆ, ದೇವಿ ಎಂದು ನಾಮಕರಣ ಮಾಡುವ ಮೂಲಕ ಗೌರವವನ್ನು ವ್ಯಕ್ತಪಡಿಸುತ್ತಿದ್ದರು. ಆಕೆಯ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಉಲ್ಲೇಖವಿಲ್ಲ ಎಂಬುದು ವಿಷಾದನೀಯ.

ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡ ಅಹಲ್ಯಾ ಅತ್ತೆ-ಮಾವನ ಆಶ್ರಯದಲ್ಲಿ, ಎಲ್ಲವನ್ನು ಕಲಿತದ್ದಲ್ಲದೇ, ಶಿವಭಕ್ತೆಯಾದ ಅಹಲ್ಯಾಬಾಯಿ ಏನೇ ಮಾಡಿದರೂ ಈಶ್ವರನ ಇಚ್ಛೆಯಂತೆ ಎಂದು ಸದಾ ಹೇಳುತ್ತಿದ್ದಳು. ತನ್ನ ಪ್ರಜೆಗಳನ್ನು ಮಕ್ಕಳಂತೆ ಕಂಡಳು. ಸಮಾಜದಲ್ಲಿ ವಿಧವೆ ಮಹಿಳೆಯರ ಸ್ಥಾನಮಾನದ ಸುಧಾರಣೆಗಾಗಿ, ಮಕ್ಕಳಿಲ್ಲದ ವಿಧವಾ ಮಹಿಳೆಯರ ಆಸ್ತಿಯನ್ನು ರಾಜ್ಯಾಡಳಿತವು ಸ್ವಾಧೀನಪಡಿಸಿಕೊಳ್ಳುವ ಕಾನೂನನ್ನು ತೆಗೆದುಹಾಕಿ ವಿಧವಾ ಮಹಿಳೆಯರಿಗೆ ಅವರ ಆಸ್ತಿಯನ್ನು ಪುನಃ ನೀಡಲಾಯಿತು. ಮತ್ತು ಕಾಲಕಾಲಕ್ಕೆ ಇರುವ ಕಾನೂನುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಮಹಿಳೆಯರಿಗೆ ಶಿಕ್ಷಣದ ಹಕ್ಕನ್ನು ನೀಡಿದಳು. ವಿಧವೆಯರ ಮರು ವಿವಾಹವನ್ನೂ ಪ್ರಾರಂಭಿಸಿದಳು. ಸರ್ವಪ್ರಥಮವಾಗಿ ತನ್ನ ಸ್ನೇಹಿತೆಯಾಗಿದ್ದ ರೇಣುಕಾಳ ಪುನರ್ವಿವಾಹ ಮಾಡಿಸಿದಳು. ಮಹಿಳೆಯರಿಗೆ ಪುರುಷ ಸಮಾನ ಹಕ್ಕುಗಳನ್ನು ನೀಡಲು ತಮ್ಮ ಜೀವನದುದ್ದಕ್ಕೂ ಹೋರಾಡಿದರು.

ಸ್ವದ್ಯೋಗದ ಪರಿಕಲ್ಪನೇ ಅಂದೇ ಇತ್ತು ಎನ್ನುವುದಕ್ಕೆ. ಇಂದಿಗೂ ಚಾಲ್ತಿಯಲ್ಲಿ ಮಾಹೇಶ್ವರಿ ಸೀರೆಯ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಿಸಿದವರು. ಅಹಲ್ಯಾಬಾಯಿ ಸಮಾಜಕ್ಕಾಗಿ ಮಾಡಿದ ಅನೇಕ ಕೆಲಸಗಳು ಅನುಕರಣೀಯ, ಅಹಲ್ಯಾಬಾಯಿ ಬಡ ಮತ್ತು ಅಸಹಾಯಕ ಜನರ ಬಗ್ಗೆ ಸಹಾನುಭೂತಿ ಮತ್ತು ಪರೋಪಕಾರದ ಮನೋಭಾವನೆಯನ್ನು ಹೊಂದಿದ್ದರು. ಸಮಾಜದ ಹಿತಕ್ಕಾಗಿ ಸಮರ್ಪಿತಳಾದ ಅಹಲ್ಯಾಬಾಯಿ ಯಾವಾಗಲೂ ತನ್ನ ಪ್ರಜೆಗಳ ಮತ್ತು ಬಡವರ ಹಿತದ ಬಗ್ಗೆ ಯೋಚಿಸುತ್ತಿದ್ದರು. ಬಡವರಿಗೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತಿದ್ದರು.

ದೇಶದ ಆನೇಕ ತೀರ್ಥಕ್ಷೇತ್ರಗಳಲ್ಲಿ ಮಂದಿರ ಮತ್ತು ಧರ್ಮಶಾಲೆಗಳ ನಿರ್ಮಾಣ, ಶ್ರೀನಗರ, ಹರಿದ್ದಾರೆ, ಕೇದಾರನಾಥ, ಬದರಿನಾಥ, ಪ್ರಯಾಗ, ವಾರಣಾಸಿ, ನೈಮಿಷಾರಣ್ಯ, ಜಗನ್ನಾಥಪುರಿ, ರಾಮೇಶ್ವರಂ, ಸೋಮನಾಥ, ಮಹಾಬಲೇಶ್ವರ, ಪುಣೆ, ಉಡುಪಿ, ಕಾತ್ಕಂಡು ಮುಂತಾದೆಡೆ ದೇವಾಲಯಗಳನ್ನು ನಿರ್ಮಿಸಿದರು. ತೀರ್ಥಕ್ಷೇತ್ರಗಳಲ್ಲಿ ಧರ್ಮಶಾಲಾ ಮತ್ತು ಯಾತ್ರಿ ಗೃಹಗಳನ್ನು ನಿರ್ಮಿಸಿದರು. ಪವಿತ್ರ ನರ್ಮದೆಯ ದಡದಲ್ಲಿರುವ ಮಹೇಶ್ವರದಲ್ಲಿ ತಮ್ಮ ಆಸ್ಥಾನವನ್ನು ನಿರ್ಮಿಸಿದಳು ಮತ್ತು ಅಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪುರಾಣಕಥೆಗಳನ್ನು ಆಯೋಜಿಸಿದರು. ದೇವಪ್ರಯಾಗದಲ್ಲಿ ಬಡವರಿಗಾಗಿ ಭೋಜನಶಾಲೆಯನ್ನು ಸ್ಥಾಪಿಸಿದರು. ವಿವಿಧ ಸ್ಥಳಗಳಲ್ಲಿ ಅನ್ನದಾಸೋಹದ ಕೇಂದ್ರಗಳನ್ನು ತೆರೆದಳು. ಜನರಿಗಾಗಿ ಮೆಟ್ಟಿಲುಬಾವಿ ಮತ್ತು ಕೆರೆಗಳನ್ನು ನಿರ್ಮಿಸಿದರು. ಆಡಳಿತದಲ್ಲಿ ಕಠೋರ ನಿರ್ಣಯ ತೆಗೆದುಕೊಳ್ಳುತ್ತಿದ್ದರು. ಕರ್ತವ್ಯನಿಷ್ಠೆ, ಜಾತ್ಯತೀತ, ಚಾರಿತ್ರ್ಯವಂತ, ನಾಗರಿಕ ಮತ್ತು ನ್ಯಾಯೋಚಿತ ಅಹಲ್ಯಾಬಾಯಿ ಆಗಸ್ಟ್ 13, 1795 ರಂದು ಮಹೇಶ್ವರಿಯಲ್ಲಿ ನಿಧನರಾದರು. ಅಹಲ್ಯಾಬಾಯಿಯ ಸಮಾಧಿಯು ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯ ಕೋಟೆ ಮಹೇಶ್ವರದಲ್ಲಿದೆ.

ದೇಶವನ್ನು ಅಖಂಡತೆಯತ್ತ ಇಡಲು ಶ್ರಮಿಸಿದ, ಶಂಕರಾಚಾರ್ಯರಿಂದ ಹಿಡಿದು, ಸ್ವಾಮಿ ವಿವೇಕಾನಂದರು, ಅಹಲ್ಯಾಬಾಯಿ ಸಮೇತ ಕಾರ್ಯಗತಗೊಳಿಸಿದ ಯೋಜನೆಗಳನ್ನು, ಇಂದಿನವರು ಮುಂದುವರೆಸಬೇಕಿದೆ. ಭರತಖಂಡದ ಉದ್ದಗಲಕ್ಕೂ ನಡೆಸಿದ ದೇವಿ ಅಹಲ್ಯಾಬಾಯಿಯ ಕೆಲಸಗಳು, ಕಣ್ಣು ಮುಂದೆ ಬಂದಾಗ ಈ ಆದರ್ಶಗಳನ್ನು ಮುಂದಿಟ್ಟುಕೊಂಡಾಗ ಏನು ಮಾಡಬಹುದೆಂದು, ಇಂದಿನ ಯುವಜನತೆ ಯೋಚಿಸಿದಾಗ, ಆಕೆಯ ನಾಯಕತ್ವ ಅನುಕರಣೀಯ, ಸ್ವಾಭಿಮಾನ ಮತ್ತು ಹಕ್ಕುಗಳ ಬಗ್ಗೆ ಎಚ್ಚರಗೊಳ್ಳುವುದು, ಸಾಮಾಜಿಕ ಸಮರಸತಾ, ಧಾರ್ಮಿಕ ಚಿಂತನೆ, ದೇಶದ ಉದ್ದಗಲಕ್ಕೂ ನಡೆಯಬೇಕಿದೆ. ಸಮಾಜದಲ್ಲಿ ಎಲ್ಲೆಲ್ಲಿ ಪರಿವರ್ತನೆಯ ಅವಶ್ಯಕತೆಯಿದೆಯೋ ಅಲ್ಲೆಲ್ಲ ಅಹಲ್ಯಾಬಾಯಿಯ ಪ್ರೇರಣೆಯನ್ನು ತೆಗೆದುಕೊಂದು ಪರಿವರ್ತನೆ ಮಾಡಬಹುದು.

ಸ್ವಾಗತ ಸಮಿತಿಯ ಪದಾಧಿಕಾರಿಗಳು

1. ಜಸ್ಟೀಸ್ ಮಂಜುಳಾ ಚೆಲ್ಲೂರು – ಮಾರ್ಗದರ್ಶಕರು
2. ಶ್ರೀಮತಿ ಕೆ. ರತ್ನ ಪ್ರಭಾ, ಭಾ.ಆ.ಸೇ (ನಿವೃತ್ತ) – ಅಧ್ಯಕ್ಷರು
3. ಡಾ.ಗೀತಾ ರಾಮಾನುಜಂ – ಉಪಾಧ್ಯಕ್ಷರು
4. ಡಾ.ವೀಣಾ ಬನ್ನಂಜೆ, – ಉಪಾಧ್ಯಕ್ಷರು

ಸಮಿತಿ ಸದಸ್ಯರುಗಳು

  1. ಕ್ಯಾಪ್ಟನ್‌ ಪುನೀತ್‌ ಭಾರಧ್ವಾಜ್
  2. ಸ್ವಾಮಿನಿ ಜೋತ್ಸ್ನಾಮಯಿ, ಶ್ರೀಮಾತಾ ಶಾರದಾಶ್ರಮ, ಕನಕಪುರ
  3. ಡಾ.ಜ್ಯೋತಿ ಶಂಕರ್, ಮೈಸೂರು
  4. ಡಾ.ಚೈತ್ರ
  5. ಡಾ.ವಿ.ಬಿ.ಆರತಿ
  6. ಶ್ರೀಮತಿ ಪುಣ್ಯವತಿ
  7. ಶ್ರೀಮತಿ ಅಶ್ವಿನಿ ಅಂಗಡಿ
  8. ಶ್ರೀಮತಿ ಕವಿತಾ ರಾಮನಗರ
  9. ಡಾ.ಶಾಲಿನಿ ನಲ್ವಾಡ್
  10. ಶ್ರೀಮತಿ ವೀಣಾ ಶೆಟ್ಟಿ
  11. ಶ್ರೀಮತಿ.ಟಿ.ಎಸ್ ಸತ್ಯವತಿ
  12. ಡಾ.ಎಸ್.ಪಿ.ಉಮಾದೇವಿ, ಮೈಸೂರು.
  13. ಶ್ರೀಮತಿ ಕರುಣಾ ವಿಜಯೇಂದ್ರ
  14. ಶ್ರೀಮತಿ ರೂಪಾ ಅಯ್ಯರ್
  15. ಡಾ. ಅಹಲ್ಯಾ ಶರ್ಮ

Leave a Reply

Your email address will not be published.

This site uses Akismet to reduce spam. Learn how your comment data is processed.