ಇಂದು  ಜಯಂತಿ

ಅಹಲ್ಯಾಬಾಯಿ ಹೋಳ್ಕರ್ ಅವರು ಮರಾಠರ ಸಂಸ್ಥಾನ ಮಾಲ್ವಾವನ್ನು ಆಳಿದ ಹೋಳ್ಕರ್ ವಂಶದ ರಾಣಿ. ಇವರು ಆಧುನಿಕ ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಮಹಿಳೆಯರಲ್ಲಿ ಒಬ್ಬರು. ಅಹಲ್ಯಾಬಾಯಿ ಹೋಳ್ಕರ್‌ ಅವರು ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಿಗೆ ನೀಡಿರುವ ಕೊಡಗೆ ಅಪಾರ. ಹಿಂದೂ ದೇವಾಲಯಗಳ ಪುನರುಜ್ಜೀವನ ಹಾಗೂ ಧರ್ಮ ಶಾಲೆಗಳ ನಿರ್ಮಾಣ ಕಾರ್ಯಕ್ಕಾಗಿ ಪ್ರಸಿದ್ಧರಾದವರು.ಇಂದು ಅವರ ಜಯಂತಿ.


ಪರಿಚಯ
ಅಹಲ್ಯಾಬಾಯಿ ಹೋಳ್ಕರ್‌ ಅವರು ಮೇ 31, 1725 ರಂದು ಮಹಾರಾಷ್ಟ್ರದ ಚೌಂಡಿ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಮಂಕೋಜಿ ಶಿಂಧೆ ಮತ್ತು ತಾಯಿ ಸುಶೀಲಾ ಶಿಂಧೆ. ಅಹಲ್ಯಾಬಾಯಿ ಅವರಿಗೆ ಅವರ ತಂದೆ ಮನೆಯಲ್ಲಿಯೇ ಓದಲು ಮತ್ತು ಬರೆಯಲು ಕಲಿಸಿದರು. ಮಾಳ್ವಾ ಪ್ರಾಂತ್ಯದ ಮಹಾರಾಜ ಮಲ್ಹಾರ್ ರಾವ್ ಹೋಳ್ಕರ್, ಪುಣೆಗೆ ಪ್ರಯಾಣಿಸುವಾಗ ಚೌಂಡಿಯಲ್ಲಿನ ದೇವಾಲಯದಲ್ಲಿ ಬಡವರಿಗೆ ಊಟ ನೀಡುತ್ತಿರುವ ಅಹಲ್ಯಾಬಾಯಿಯನ್ನು ಗುರುತಿಸಿದರು. ಆಕೆಯ ಸೇವೆಯ ಗುಣವನ್ನು ಕಂಡು ಮನಸೋತ ಖಂಡೇರಾವ್‌ ಹೋಳ್ಕರ್‌ ಅವರು 1733 ರಲ್ಲಿ ವಿವಾಹ ಮಾಡಿಕೊಂಡರು. ಆ ಸಮಯದಲ್ಲಿ ಅಹಲ್ಯಾಬಾಯಿ ಅವರಿಗೆ ಕೇವಲ 8 ವರ್ಷ ವಯಸ್ಸಾಗಿತ್ತು. 1754 ರಲ್ಲಿ ಕುಂಭೇರ್ ಯುದ್ಧದಲ್ಲಿ ಖಂಡೆರಾವ್ ಮರಣಹೊಂದಿದ್ದರಿಂದ ತನ್ನ 29 ನೇ ವಯಸ್ಸಿನಲ್ಲಿ ವಿಧವೆಯಾಗಬೇಕಾಯಿತು. ಅಹಲ್ಯಾಬಾಯಿ ಸತಿಸಹಗಮನ ಪದ್ಧತಿಗೆ ಬಲಿಯಾಗಬೇಕಾದ ಸಂದರ್ಭದಲ್ಲಿ ಅವಳ ಮಾವ ಮಲ್ಹರ್ ರಾವ್ ಅವಳನ್ನು ರಕ್ಷಿಸಿದರು. ಅಹಲ್ಯಾಬಾಯಿ ಹೋಳ್ಕರ್ ‌ ಅವರು ತನ್ನ ಮಗನ ಮರಣದ ನಂತರ ಪೇಶ್ವೆಯವರಿಗೆ ವಹಿಸಿದ್ದ ಆಡಳಿತವನ್ನು ಮರಳಿ ಪಡೆದರು.1767 ರಲ್ಲಿ ಇಂದೋರ್‌ನ ಸಿಂಹಾಸನವೇರಿ ಮಹಾರಾಣಿಯಾದರು. ತನ್ನ ಆಳ್ವಿಕೆಯ ಪ್ರಥಮ ವರ್ಷದಲ್ಲಿಯೇ ಧೈರ್ಯಶಾಲಿ ಹೋಳ್ಕರ್ ರಾಣಿಯು ತನ್ನ ರಾಜ್ಯವನ್ನು ರಕ್ಷಣೆಗಾಗಿ ವೀರಾಗ್ರಣಿಯಂತೆ ನಿಂತಳು. ಹೋಳ್ಕರ್ ಸೈನ್ಯದ ನಾಯಕಿಯಾಗಿ ಯುದ್ಧಭೂಮಿಯಲ್ಲಿ ಹೋರಾಡಿದಳು.


ಆಡಳಿತ ಸುಧಾರಣೆ :
ಅಹಲ್ಯಾಬಾಯಿ ಅವರು ಆಡಳಿತ ಸುಧಾರಣೆಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರು ತಮ್ಮ ಅವಧಿಯಲ್ಲಿ ನ್ಯಾಯಯುತ ಮತ್ತು ಸಮರ್ಥ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಿದರು. ಸಂಪನ್ಮೂಲಗಳ ಸಮಾನ ಹಂಚಿಕೆ, ವ್ಯಾಪಾರ ಮತ್ತು ವಾಣಿಜ್ಯವನ್ನು ಉತ್ತೇಜಿಸುವುದು ಮತ್ತು ತನ್ನ ಜನರಿಗೆ ಮೂಲಸೌಕರ್ಯವನ್ನು ಒದಗಿಸಿದರು. ನೀರಿನ ನಿರ್ವಹಣೆ, ಬಾವಿಗಳು, ಟ್ಯಾಂಕ್‌ಗಳು ಮತ್ತು ನೀರಾವರಿ ಕಾಲುವೆಗಳನ್ನು ನಿರ್ಮಿಸಲು ಅವರು ಸೂಕ್ಷ್ಮವಾಗಿ ಗಮನ ಹರಿಸಿದರು. ಅಹಲ್ಯಾಬಾಯಿ ಅವರು ಇಂದೋರ್‌ ನಲ್ಲಿ 30 ವರ್ಷಗಳ ಆಳ್ವಿಕೆ ನಡೆಸಿದ್ದರು. ಈ ಅವಧಿಯಲ್ಲಿ ಇಂದೋರ್‌ ಸಾಕಷ್ಟು ಅಭಿವೃದ್ಧಿ ಹೊಂದಿತು. ಮಾಲ್ವಾದಲ್ಲಿ ಹಲವಾರು ಕೋಟೆಗಳು ಮತ್ತು ರಸ್ತೆಗಳನ್ನು ನಿರ್ಮಿಸಿದರು.

ದೇವಾಲಯಗಳ ಪುನರುಜ್ಜೀವನ:
ಹಬ್ಬಗಳನ್ನು ಪ್ರಾಯೋಜಿಸುವುದರ ಮೂಲಕ ಮತ್ತು ಅನೇಕ ಹಿಂದೂ ದೇವಾಲಯಗಳಿಗೆ ದೇಣಿಗೆ ನೀಡುವ ಮೂಲಕ ಅವರು ಪ್ರಸಿದ್ಧರಾಗಿದ್ದರು. ಹೋಳ್ಕರ್ ರಾಣಿಯು ಕಾಶಿ, ಗಯಾ, ಸೋಮನಾಥ, ಅಯೋಧ್ಯೆ, ಮಥುರಾ, ಹರಿದ್ವಾರ, ಕಂಚಿ, ಅವಂತಿ, ದ್ವಾರಕಾ, ಬದರಿನಾರಾಯಣ, ರಾಮೇಶ್ವರ ಮತ್ತು ಜಗನಾಥಪುರಿ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳು ವೈಭಯುತವಾಗಿ ಇರುವಂತೆ ಪುನರುಜ್ಜೀವನಗೊಳಿಸಿದರು.

ಅಹಲ್ಯಾಬಾಯಿ ಅವರು ಆಗಸ್ಟ್ 13 , 1795 ರಂದು ತಮ್ಮ 70 ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.