ಬೆಂಗಳೂರು: ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಕರ್ನಾಟಕ ಪ್ರಾಂತ ಸುವರ್ಣ ಮಹೋತ್ಸವ ವರ್ಷದ ಸಮಾರೋಪ ಕಾರ್ಯಕ್ರಮ, ಬೆಂಗಳೂರಿನ ಯಾದವಸ್ಮೃತಿಯಲ್ಲಿ ಅಕ್ಟೋಬರ್ 13, 2024 ರಂದು ಜರುಗಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ವ್ಯವಸ್ಥಾ ಪ್ರಮುಖ್ ಹಾಗೂ ಎ ಬಿ ಜಿ ಪಿ ಸಂಪರ್ಕ ಅಧಿಕಾರಿ ಕಾಶಮ್ ಶ್ರೀಧರ್ ಮಾತನಾಡಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಗ್ರಾಹಕರ ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸಲು ಗ್ರಾಹಕ ಪಂಚಾಯತ್ ಸಂಘಟನೆಯ ಅವಶ್ಯಕತೆ ಇದೆ. ಪಂಚಾಯತ್ ನ ಕಾರ್ಯವ್ಯಾಪ್ತಿ ಅಪಾರವಾಗಿದೆ. ಎಲ್ಲರ ಸಹಯೋಗದೊಂದಿಗೆ ಜಿಲ್ಲಾ, ತಾಲೂಕು, ಹೋಬಳಿ, ನಗರ ಲೇಔಟ್ ಗಳಲ್ಲಿ ಸ್ವಯಂಸೇವಕ ಕಾರ್ಯಕರ್ತರನ್ನು ಗುರುತಿಸಿ ಗ್ರಾಹಕ ಕ್ಷೇತ್ರದಲ್ಲಿ ಬೆಳೆಸಬೇಕಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ನಿವೃತ್ತ ಐಎಎಸ್ ಅಧಿಕಾರಿ ಡಾ.ಸೋಮಶೇಖರ್ ಅವರು ಮಾತನಾಡಿ ಸಮಾಜದಲ್ಲಿ ಗ್ರಾಹಕ ಪಂಚಾಯತಿನ ಅವಶ್ಯಕತೆ ಹೆಚ್ಚಿದೆ. ಸಮಾಜದ ಎಲ್ಲಾ ವರ್ಗದ ಮಹನೀಯರು ಎಲ್ಲರ ಒಳಿತಿಗಾಗಿ ಗ್ರಾಹಕ ಪಂಚಾಯತ್ ಅನ್ನು ಬೆಂಬಲಿಸಬೇಕಾಗಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆ ಅಡಿ ಗ್ರಾಹಕ ಆಯೋಗಕ್ಕೆ ಮತ್ತು ಗ್ರಾಹಕರಿಗೆ ಕೊಂಡಿಯಾಗಿ ಗ್ರಾಹಕ ಪಂಚಾಯತ್ ಕಾರ್ಯನಿರ್ವಹಿಸುತ್ತಿದೆ. ಶೋಷಣೆಮುಕ್ತ ಸಮಾಜಕ್ಕಾಗಿ ಗ್ರಾಹಕ ಪಂಚಾಯತಿನ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಸಂಘಟನೆಯ ಕಾರ್ಯ ಚಟುವಟಿಕೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರೋತ್ಸಾಹಿಸಬೇಕು. ಗ್ರಾಹಕ ಪಂಚಾಯತ್ ನಲ್ಲಿ ಯುವ ಗ್ರಾಹಕ ಶಕ್ತಿಯನ್ನು ಮುಂದೆ ತರಲು ಪ್ರಯತ್ನ ಆಗಬೇಕಿದೆ ಎಂದು ಆಶಿಸಿದರು.
ಗ್ರಾಹಕ ಪಂಚಾಯತ್ ಕ್ಷೇತ್ರೀಯ ಸಂಘಟನಾ ಮಂತ್ರಿ ದತ್ತಾತ್ರೇಯ ನಾಡಿಗ್ ಅವರು ಮಾತನಾಡುತ್ತಾ ಗ್ರಾಹಕ ಪಂಚಾಯತ್ ಕೇಂದ್ರದಲ್ಲಿ ಯೋಜನೆಯಾಗಿರುವ ವಿಷಯಗಳಲ್ಲಿ ಮುಖ್ಯವಾಗಿ ಎಂ ಆರ್ ಪಿ, ಜಿಲ್ಲಾ ಗ್ರಾಹಕ ಆಯೋಗಗಳಲ್ಲಿ ಬಡ್ತಿ, ಜಿಲ್ಲಾ ಹಾಲಿನ ಗುಣಮಟ್ಟ, ಶೋಧನಾ ಕೇಂದ್ರಗಳ ಅವಶ್ಯಕತೆ, ಆನ್ಲೈನ್ ಗೇಮ್, ಓ.ಟಿ.ಟಿ ಜಾಲತಾಣಗಳಲ್ಲಿ ಹತೋಟಿ, ರೈಲ್ವೆ ನಿಲ್ದಾಣದ ಸಮಸ್ಯೆಗಳ ಪರಿಹಾರ, ದಾರಿ ತಪ್ಪಿಸುವ ಜಾಹೀರಾತುಗಳ ಮೇಲೆ ಕ್ರಮ ಮುಂತಾದವುಗಳ ಬಗ್ಗೆ ಪ್ರಾಂತ ಹಾಗೂ ಜಿಲ್ಲಾಮಟ್ಟಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಅದಕ್ಕೆ ಸಾರ್ವಜನಿಕರ ಬೆಂಬಲ ಹೆಚ್ಚಾಗಬೇಕಿದೆ ಎಂದು ಕೋರಿದರು.
ಎಬಿಜಿಪಿ ಕರ್ನಾಟಕ ಪ್ರಾಂತ ಅಧ್ಯಕ್ಷ ನರಸಿಂಹ ನಕ್ಷತ್ರೀಯವರು ಚರ್ಚಾಗೋಷ್ಠಿ ಯನ್ನು ನಡೆಸಿಕೊಟ್ಟರು. ಚರ್ಚೆಯಲ್ಲಿ ಆಹಾರ, ಆರೋಗ್ಯ, ವಸತಿ, ಬ್ಯಾಂಕಿಂಗ್, ಸೈಬರ್ ಮುಂತಾದ ಹಲವಾರು ಕ್ಷೇತ್ರಗಳ ತಜ್ಞರು ಭಾಗವಹಿಸಿ ಗ್ರಾಹಕರಿಗೆ ಆಗುತ್ತಿರುವ ಅನ್ಯಾಯಗಳನ್ನು ಎತ್ತಿ ಹಿಡಿದರು. ಆಯಾ ಕ್ಷೇತ್ರಗಳಲ್ಲಿ ಸುಧಾರಣೆ ತರಲು ಗ್ರಾಹಕ ಪಂಚಾಯತ್ ನೊಂದಿಗೆ ಅವರು ಕಾರ್ಯ ಚಟುವಟಿಕೆಗಳಲ್ಲಿ ಕೈಜೋಡಿಸುವುದಾಗಿ ತಿಳಿಸಿದರು.
ಸ್ವರ್ಣ ಜಯಂತಿ ವರ್ಷದ ವರದಿಯನ್ನು ಸಂಕ್ಷಿಪ್ತವಾಗಿ ಪ್ರಾಂತ ಕಾರ್ಯದರ್ಶಿ ಗಾಯಿತ್ರಿಯವರು ತಿಳಿಸಿದರು. ಗ್ರಾಹಕ ಕ್ಷೇತ್ರದ ಹಿರಿಯ ಮುತ್ಸದ್ದಿ ಸೋಮಶೇಖರ್ ಅವರು ಪಾಲ್ಗೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡರು. ಸ್ವಾಗತ ಸಮಿತಿಯ ಉಪಾಧ್ಯಕ್ಷೆ ವಿಜಯ ವಿಷ್ಣು ಭಟ್ ಅವರು ಮಹಿಳಾ ಗ್ರಾಹಕ ಜಾಗೃತಿಯ ಅವಶ್ಯಕತೆಯನ್ನು ಹಾಗೂ ಅದಕ್ಕಾಗಿ ಹೆಚ್ಚು ಗ್ರಾಹಕ ಮಹಿಳಾ ಜಾಗೃತಿ ಕಾರ್ಯಕ್ರಮಗಳನ್ನು ಅಗತ್ಯತೆಯನ್ನು ತಿಳಿಸಿದರು.
ಹಿರಿಯ ವಕೀಲ, ಅಧಿವಕ್ತಾ ಪರಿಷತ್ ಕ್ಷೇತ್ರಿಯ ಸಂಯೋಜಕ ಎಲ್.ಎನ್. ಹೆಗ್ಡೆ ಯವರು ಗ್ರಾಹಕರಲ್ಲಿ ಕಾನೂನಿನ ಅರಿವಿನ ಅವಶ್ಯಕತೆ ಹಾಗೂ ಗ್ರಾಹಕ ಪಂಚಾಯತ್ ರಾಜ್ಯದಲ್ಲಿ ಅವಶ್ಯಕವಾದ ಹಾಗೂ ಜನರ ಸಮಸ್ಯೆಯನ್ನು ಸಮರ್ಪಕವಾಗಿ ಬಗೆಹರಿಸಲು ಸಹಾಯವಾಗುವ ಯೋಜನೆ ಮಾಡಬೇಕಾಗಿ ತಿಳಿಸಿದರು.
ಪ್ರಾಂತದ ಕೋಶಾಧ್ಯಕ್ಷೆ ಶ್ರೀಲಕ್ಷ್ಮಿ, ಪ್ರಚಾರ ಪ್ರಸಾರ ಪ್ರಮುಖ್ ವಿಜಯಲಕ್ಷ್ಮಿ, ನ್ಯಾಯವಾದಿ ಗಣೇಶ್ ಮತ್ತಿತರರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಶ್ರೀಮತಿ ಸಂಹಿತಾ ರವರನ್ನು ಪ್ರಾಂತ ಸಹ ಮಹಿಳಾ ಪ್ರಮುಖರಾಗಿ ಹಾಗೂ ಶ್ರೀಯುತ ಪವನ್ ಕುಲಕರ್ಣಿ ಅವರನ್ನು ಬೆಂಗಳೂರು ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಆಗಿ ಜವಾಬ್ದಾರಿ ಘೋಷಣೆ ಮಾಡಲಾಯಿತು.