ಭುಜ್, ಗುಜರಾತ್ 2023: ಸಂಘದ ಶತಾಬ್ದಿ ವರ್ಷದ ನಿಮಿತ್ತ ಸಮಾಜ ಪರಿವರ್ತನೆಯ ಐದು ಆಯಾಮಗಳನ್ನು ಆಗ್ರಹಪೂರ್ವಕವಾಗಿ ಸಮಾಜದ ಮುಂದಿಡುವ ಪ್ರಯತ್ನಗಳ ಕುರಿತು ಬೈಠಕ್‌ನಲ್ಲಿ ಚರ್ಚಿಸಲಾಯಿತು. ಸಾಮಾಜಿಕ ಸಮರಸತೆ, ಕುಟುಂಬ ಪ್ರಬೋಧನ್, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ಮತ್ತು ನಾಗರಿಕ ಕರ್ತವ್ಯಗಳ ಕುರಿತು ಚರ್ಚೆಗಳಾದವು. ಇವುಗಳನ್ನು ಸಂಘದ ಸ್ವಯಂಸೇವಕರು ತಮ್ಮ ಕುಟುಂಬದ ಸ್ತರದಲ್ಲಿ, ಶಾಖಾ ಕ್ಷೇತ್ರದಲ್ಲಿ ಮತ್ತು ವ್ಯಾಪಕ ಸಮಾಜದಲ್ಲಿ ಸಂಪರ್ಕದ ಮೂಲಕ ತಿಳಿಸುತ್ತಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.
ಗುಜರಾತ್‌ನ ಕಚ್ಛ್ ಕ್ಷೇತ್ರದ ಭುಜ್‌ನಲ್ಲಿ ನವೆಂಬರ್ 5ರಿಂದ 7, 2023ರವರೆಗೆ ನಡೆದ ಅಖಿಲ ಭಾರತೀಯ ಕಾರ‍್ಯಕಾರಿ ಮಂಡಳಿ ಬೈಠಕ್‌ನ ಕೊನೆಯ ದಿನ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಅಸ್ಮಿತೆಯ ಬಹುದೊಡ್ಡ ಆಂದೋಲನ ಅಯೋಧ್ಯೆಯ ರಾಮಮಂದಿರ ನಿರ್ಮಾಣ ನಮ್ಮ ಜೀವನದಲ್ಲಿ ನಡೆದಿದೆ. ಪ್ರಸ್ತುತ ಮಂದಿರ ನಿರ್ಮಾಣದ ಕಾರ‍್ಯ ಸಂಪನ್ನಗೊಳ್ಳಲ್ಲಿದ್ದು ಜನವರಿ 22, 2024 ರಂದು ಪ್ರಾಣಪ್ರತಿಷ್ಠೆ ನಡೆಯಲಿದೆ. ಶ್ರೀರಾಮ ಜನ್ಮಭೂಮಿ ಟ್ರಸ್ಟ್ ನ ವತಿಯಿಂದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಲಾಗಿದೆ. ಸಂಘದ ಸ್ವಯಂಸೇವಕರು ಪೂರ್ಣ ಆಂದೋಲನದಲ್ಲಿ ಹಿಂದೂ ಸಮಾಜವನ್ನು ಜೋಡಿಸುವ ಕಾರ್ಯ ಮಾಡಲಿದ್ದಾರೆ. ದೇಶದ ಮೂಲೆಮೂಲೆಯ ಜನರು ಇದರಲ್ಲಿ ಜೋಡಿಸಿಕೊಳ್ಳಲಿದ್ದಾರೆ. ಹಾಗಾಗಿ ಬಂದಿರುವ ಐತಿಹಾಸಿಕ ಕ್ಷಣದಲ್ಲಿ ಸಂಘ ಜನವರಿ 1 – 15, 2024ರವರೆಗೆ ವ್ಯಾಪಕ ಜನಸಂಪರ್ಕ ಅಭಿಯಾನ ಮಾಡುವ ಮೂಲಕ ರಾಮಲಲ್ಲಾನ ಭಾವಚಿತ್ರ ಮತ್ತು ಮಂದಿರದ ಅಕ್ಷತೆಯನ್ನು ಪ್ರತಿ ಗ್ರಾಮದ ಮನೆ ಮನೆಗೆ ತಲುಪಿಸಲಾಗುತ್ತದೆ. ಈ ರೀತಿಯಾಗಿ ಈ ಪುಣ್ಯಕಾರ್ಯದಲ್ಲಿ ನಮ್ಮ ಸಹಯೋಗವಿರುತ್ತದೆ ಎಂದರು.
ಕಾರ್ಯಕರ್ತರ ಪ್ರಶಿಕ್ಷಣಕ್ಕಾಗಿರುವ ಸಂಘ ಶಿಕ್ಷಾ ವರ್ಗದ ಕುರಿತು ಬೈಠಕ್‌ನಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ವರ್ತಮಾನದ ಸಂದರ್ಭದಲ್ಲಿ ಸಂಘ ಶಿಕ್ಷಾವರ್ಗದ ಸ್ವರೂಪದಲ್ಲಿ ಕೆಲವು ಸುಧಾರಣೆ ಅಥವಾ ಪರಿವರ್ತನೆಗಳನ್ನು ತರುವುದರ ಕುರಿತು ಯೋಜನೆಯನ್ನು ರೂಪಿಸಲಾಗಿದೆ. ಮೊದಲು ಸಂಪೂರ್ಣ ಶಿಬಿರ ಒಂದು ಸ್ಥಳದಲ್ಲಿ ನಡೆಯುತ್ತಿತ್ತು. ಈಗ ಪ್ರಾಯೋಗಿಕ ತರಬೇತಿ, ವಯಸ್ಸಿನ ಆಧಾರಿತವಾಗಿ ಶಿಬಿರದ ಆಯೋಜನೆ, ಮುಂತಾದ ವಿಷಯಗಳಾಧಾರಿತ ಸಂಘದ ಪ್ರಶಿಕ್ಷಣ ವರ್ಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ರಾಷ್ಟ್ರದ ಸಂಪೂರ್ಣ ಗಡಿ ಪ್ರದೇಶದ ವಿಕಾಸಕ್ಕಾಗಿ ಸಂಘದ ಸ್ವಯಂಸೇವಕರಿರುವ ಸೀಮಾ ಜನಕಲ್ಯಾಣ ಸಮಿತಿ, ಸೀಮಾ ಜನಜಾಗೃತಿ ಸಮತಿ ಎನ್ನುವಂತಹ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ. ಗಡಿ ಪ್ರದೇಶದ ಜನರ ವಿಕಾಸದ ದೃಷ್ಟಿಯಿಂದ ಅಲ್ಲಿನ ಜನರ ಶಿಕ್ಷಣ, ಸ್ವಾಸ್ಥ್ಯ ಮತ್ತು ಸ್ವಾವಲಂಬನೆಯ ಕುರಿತು ವಿಷಯಗಳನ್ನು ತಿಳಿಸಲಾಗುತ್ತದೆ. ಗಡಿ ಸುರಕ್ಷತೆಯ ಕುರಿತು ಅಲ್ಲಿನ ಜನರು ಜಾಗೃತರಾಗಿರಬೇಕು. ಅವರು ಜಾಗೃತರಾಗಿದ್ದರೆ ಪೂರ್ಣ ದೇಶ ಸುರಕ್ಷತೆಯಿಂದಿರುತ್ತದೆ. ದೇಶದ ಗಡಿ ಸುರಕ್ಷತೆಯಲ್ಲಿ ಸೈನಿಕರ ಜೊತೆಗೆ ಅಲ್ಲಿನ ದೇಶಭಕ್ತ ನಾಗರಿಕರೂ ಪ್ರಮುಖ ಪಾತ್ರವಹಿಸುತ್ತಾರೆ. ಕೆಲವೊಮ್ಮೆ ಕಠಿಣ ಪರಿಸ್ಥಿತಿಗಳೆದುರಾದಾಗ ಸಂಪೂರ್ಣ ದೇಶದ ಬೆಂಬಲವು ಅವರಿಗೆ ಬೇಕಾಗುತ್ತದೆ. ಹಾಗಾಗಿ ದೇಶದ ಜಲಗಡಿ ಮತ್ತು ಭೂಗಡಿ ಎರಡನ್ನೂ ದೃಷ್ಟಿಯಲ್ಲಿಟ್ಟುಕೊಂಡು ಗಡಿ ಜನರ ವಿಕಾಸ, ಸುರಕ್ಷತೆಗಾಗಿಯೂ ನಮ್ಮ ಕಾರ್ಯ ಮುಂದುವರೆಯಲಿದೆ ಎಂದು ಹೇಳಿದರು.
ಸಂಘದಲ್ಲಿ ಎರಡು ಪ್ರಕಾರದ ಕಾರ‍್ಯಗಳು ನಡೆಯುತ್ತವೆ. ಶಾಖೆಯ ಆಧಾರಿತ ವ್ಯಕ್ತಿ ನಿರ್ಮಾಣದ ಕಾರ‍್ಯವನ್ನು ಕಳೆದ 98 ವರ್ಷಗಳಿಂದ ಒಂದು ಸಾಧನೆಯ ರೂಪದಲ್ಲಿ ಮಾಡಿಕೊಂಡು ಬರಲಾಗಿದೆ. ಪ್ರತಿ ಗ್ರಾಮ ಮತ್ತು ನಗರಗಳಲ್ಲಿ ದೇಶದ ಕುರಿತಾಗಿ ಯೋಚಿಸುವ ಮತ್ತು ಪ್ರತಿದಿನ ದೇಶಕ್ಕಾಗಿ ಸ್ವಲ್ಪ ಸಮಯವನ್ನು ನೀಡುವ ಕಾರ‍್ಯಕರ್ತರಿಗೆ ಪ್ರಶಿಕ್ಷಣವನ್ನು ನೀಡುವ ಕಾರ‍್ಯವನ್ನು ಸಂಘದ ಶಾಖೆಗಳಲ್ಲಿ ಮಾಡಲಾಗುತ್ತಿದೆ. ಅದರ ಜೊತೆಗೆ ಸಂಘದ ಸೇವಾ ಚಟುವಟಿಕೆಗಳ ಮೂಲಕ ಪರಿಸರ ಸಂರಕ್ಷಣೆ, ಗ್ರಾಮವಿಕಾಸ, ಪ್ರಚಾರ ವಿಭಾಗ, ಗೋಸೇವಾ ಮುಂತಾದವುಗಳಲ್ಲಿ ಜನರು ಭಾಗಿಗಳಾಗುತ್ತಿದ್ದಾರೆ. ಈ ಎರಡು ಕಾರ್ಯಗಳ ಮೂಲಕ ಸಂಘಕಾರ‍್ಯ ಒಂದು ರಾಷ್ಟ್ರೀಯ ಆಂದೋಲನವಾಗಿದೆ ನುಡಿದರು.
ಈ ವಿಚಾರಗಳ ಜೊತೆಗೆ ಪ್ರವಾಸ ಯೋಜನಾ, ಕಾರ್ಯಕ್ರಮ, ಉತ್ಸವಗಳ ಯೋಜನೆ, ವಿಜಯದಶಮಿ ಭಾಷಣದ ಕುರಿತು ಸಮಾಜವನ್ನು ಸೇರಿಸಿಕೊಂಡು ಚರ್ಚೆ ನಡೆಸುವ ಮತ್ತು ಭಾಷಣದಲ್ಲಿ ತಿಳಿಸಲಾದ ವಿಷಯಗಳ ಕುರಿತು ಸ್ಪಷ್ಟತೆ ನೀಡುವ ಕಾರ್ಯಕ್ರಮಗಳನ್ನು ರಾಷ್ಟ್ರವ್ಯಾಪಿಯಾಗಿ ಮಾಡಲಾಗುತ್ತದೆ. ಬೈಠಕ್‌ನಲ್ಲಿ 385 ಮಂದಿ ಅಪೇಕ್ಷಿತರಲ್ಲಿ 357 ಮಂದಿ ಉಪಸ್ಥಿತರಿದ್ದರು ಎಂದು ತಿಳಿಸಿದರು. ಬೈಠಕ್‌ನಲ್ಲಿ 11 ಕ್ಷೇತ್ರಗಳ 45 ಪ್ರಾಂತಗಳ ಸಂಘಚಾಲಕರು, ಕಾರ್ಯವಾಹರು, ಪ್ರಚಾರಕರು, ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರು, ವಿವಿಧ ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಗಳು ಭಾಗವಹಿಸಿದ್ದರು.