ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಪ್ರತಿವರ್ಷ ನಡೆಯುವ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್ ಈ ವರ್ಷ ನವೆಂಬರ್ 5 ರಿಂದ 7 ನೇ ತಾರೀಖಿನ ವರೆಗೆ ಗುಜರಾತಿನ ಕಚ್ಛ್ ಕ್ಷೇತ್ರದ ಭುಜ್ ನಲ್ಲಿ ನಡೆಯಲಿದೆ.
ಬೈಠಕ್ ನಲ್ಲಿ ಸಂಘದ 45 ಪ್ರಾಂತಗಳ ಪ್ರಾಂತ ಸಂಘಚಾಲಕರು, ಕಾರ್ಯವಾಹರು, ಪ್ರಾಂತ ಪ್ರಚಾರಕರು ಮತ್ತು ಪ್ರಾಂತ ಸಹ ಸಂಘಚಾಲಕರು, ಸಹ ಕಾರ್ಯವಾಹರು, ಸಹ ಪ್ರಾಂತ ಪ್ರಚಾರಕರು ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹಾಗೂ ಸಹ ಸರಕಾರ್ಯವಾಹರುಗಳಾದ ಡಾ.ಕೃಷ್ಣಗೋಪಾಲ್, ಡಾ. ಮನಮೋಹನ್ ವೈದ್ಯ, ಸಿ. ಆರ್. ಮುಕುಂದ, ಅರುಣ್ ಕುಮಾರ್, ರಾಮದತ್ತ ಚಕ್ರಧರ ಮತ್ತು ಎಲ್ಲಾ ಅಖಿಲ ಭಾರತೀಯ ಪದಾಧಿಕಾರಿಗಳ ಜೊತೆಗೆ ಎಲ್ಲಾ ಕಾರ್ಯಕಾರಿ ಸದಸ್ಯರು ಉಪಸ್ಥಿತರಿರಲಿದ್ದಾರೆ.
ಬೈಠಕ್ ನ ಕುರಿತು ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್, ಬೈಠಕ್ ನಲ್ಲಿ ಸಂಘದ ಸಂಘಟನಾ ಕಾರ್ಯದ ಸಮೀಕ್ಷೆಯ ಜೊತೆಗೆ ಸೆಪ್ಟೆಂಬರ್ ತಿಂಗಳಲ್ಲಿ ಪುಣೆಯ ಸಮಾಲ್ಖಾದಲ್ಲಿ ನಡೆದ ಅಖಿಲ ಭಾರತೀಯ ಸಮನ್ವಯ ಬೈಠಕ್ ಮತ್ತು ವಿಜಯದಶಮಿಯ ನಿಮಿತ್ತ ನಡೆದ ಸರಸಂಘಚಾಲಕರ ಭಾಷಣದಲ್ಲಿ ಉಲ್ಲೇಖಿಸಲಾದ ವಿಷಯಗಳ ಆಧಾರಿತವಾಗಿ ಅನುಸರಣೆಯ ರೂಪದಲ್ಲಿ ಮಾಡಬಹುದಾದ ವಿಭಿನ್ನ ವಿಷಯಗಳ ಕುರಿತು ಚೆರ್ಚೆ ನಡೆಯಲಿದೆ. ಸಮಾಜದಲ್ಲಿ ಸಂದರ್ಭಕ್ಕನುಗುಣವಾಗಿ ಆಗಬೇಕಾದ ಬದಲಾವಣೆಯ ಕುರಿತು ಚರ್ಚಿಸಲಾಗುತ್ತದೆ. ಹಾಗೆಯೇ ಸಂಘದ ಒಳಗೂ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ಸಂಘ ಶಿಕ್ಷಾ ವರ್ಗದ ಪಠ್ಯಕ್ರಮವನ್ನು ಬದಲಾಯಿಸಬೇಕೆಂಬ ಅಪೇಕ್ಷಿತ ಬದಲಾವಣೆಗಳ ಕುರಿತು ಚರ್ಚಿಸಲಾಗುತ್ತದೆ. 2024ರಲ್ಲಿ ನಡೆಯುವ ಸಂಘ ಶಿಕ್ಷಾ ವರ್ಗಗಳಿಗೆ ಹೊಸ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದರು.
ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ಶ್ರೀರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭದ ಪ್ರಯುಕ್ತ ದೇಶವ್ಯಾಪಿಯಾಗಿ ನಡೆಯಬೇಕಿರುವ ಕಾರ್ಯಕ್ರಮಗಳ ಕುರಿತು ಬೈಠಕ್ ನಲ್ಲಿ ಚರ್ಚೆಯಾಗಲಿದೆ. ರಾಷ್ಟ್ರವ್ಯಾಪಿಯಾಗಿ ಪ್ರತಿಯೊಂದು ನಗರ, ಗ್ರಾಮಗಳಲ್ಲೂ ಇರುವ ಪ್ರತಿ ದೇವಾಲಯಗಳಲ್ಲಿ ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಮಾಡಲು ಆಹ್ವಾನಿಸಲಾಗಿದೆ. ಇಂತಹ ಮಹತ್ವಪೂರ್ಣ ಕಾರ್ಯದ ಸಂದರ್ಭದಲ್ಲಿ ಸಂಘದ ಸಹಭಾಗಿತ್ವ ಹೇಗಿರಬೇಕೆಂಬುದರ ಕುರಿತು ಚರ್ಚೆಯಾಗಲಿದೆ. ಎಲ್ಲಾ ಸ್ವಯಂಸೇವಕರಿಗೂ ಹಾಗೂ ಕಾರ್ಯಕ್ರಮಗಳನ್ನು ಮಾಡಲು ಆಹ್ವಾನಿಸಲಾದ ಸಮಾಜದ ಬಾಂಧವರಿಗೂ ಈ ಬೈಠಕ್ ನ ನಂತರ ಸೂಚನೆಗಳನ್ನು ನೀಡಲಾಗುತ್ತದೆ.
2025ರಲ್ಲಿ ಸಂಘಕಾರ್ಯ ಪ್ರಾರಂಭಗೊಂಡು 100 ವರ್ಷಗಳಾಗುತ್ತವೆ. 1925 ರಲ್ಲಿ ಡಾ.ಕೇಶವ ಬಲಿರಾಮ್ ಹೆಡಗೇವಾರ್ ಸಂಘ ಕಾರ್ಯವನ್ನು ಪ್ರಾರಂಭಿಸಿದರು. 98 ವರ್ಷಗಳಿಂದ ನಿರಂತರವಾಗಿ ಕೆಲಸ ನಡೆಯುತ್ತಿದೆ. 2025ರಲ್ಲಿ ಸಂಘಕಾರ್ಯಕ್ಕೆ 100 ವರ್ಷಗಳಾಗುವುದರಿಂದ ಕಾರ್ಯ ವಿಸ್ತಾರದ ಯೋಜನೆಯ ಆಧಾರದ ಮೇಲೆ ಕೆಲಸಗಳಾಗುತ್ತಿವೆ. ಅನೇಕ ಮಂದಿ ತಮ್ಮ ಸಮಯವನ್ನು ನೀಡಿದ್ದಾರೆ. ಶತಾಬ್ದಿ ವಿಸ್ತಾರಕರಾಗಿಯೂ ಹೊರಟಿದ್ದಾರೆ. ಈ ದೃಷ್ಟಿಯಿಂದ ಈ ಸಂದರ್ಭದಲ್ಲಿ ಕೆಲವು ಗುರಿಗಳನ್ನು ಇಟ್ಟುಕೊಳ್ಳಲಾಗಿದೆ. ಶಾಖಾ ಕಾರ್ಯದ ವಿಸ್ತಾರದ ವಿಷಯವಾಗಿ ಪ್ರತಿ ಆರು ತಿಂಗಳಿಗೊಮ್ಮೆ ಈ ಬೈಠಕ್ ನಡೆಯುತ್ತದೆ. ಈ ಬೈಠಕ್ ನಲ್ಲಿ ಹಾಕಿಕೊಂಡಿದ್ದ ಗುರಿಗಳನ್ನು ಪೂರ್ಣಗೊಳಿಸುವ ಕುರಿತು ಸಮೀಕ್ಷೆ ನಡೆಯುತ್ತದೆ. ಮುಂದಿನ ಒಂದೂವರೆ ವರ್ಷಗಳಲ್ಲಿ ನಮ್ಮ ಗುರಿಯನ್ನು ನಾವು ಹೇಗೆ ತಲುಪಬಹುದು? ಇಲ್ಲಿವರೆಗೂ ಆದ ಕೆಲಸಗಳ ಸಮೀಕ್ಷೆಯ ಜೊತೆಗೆ ಮುಂದಿನ ಕೆಲಸಗಳಿಗೆ ಹೇಗೆ ವೇಗವನ್ನು ನೀಡಬಹುದು ಎನ್ನುವುದರ ಕುರಿತು ವಿಚಾರ, ವಿಮರ್ಶೆ ಆಗುತ್ತದೆ. ಶತಾಬ್ದಿ ಸಂಪೂರ್ಣಗೊಳ್ಳುವ ಈ ಸಂದರ್ಭದಲ್ಲಿ ಮುಂಬರುವ ದಿನಗಳಲ್ಲಿ ಸಮಾಜಕ್ಕೆ ಇನ್ನೂ ಹತ್ತಿರವಾಗುವುದು ಹೇಗೆ? ಎನ್ನುವುದರ ಕುರಿತು ಚರ್ಚೆಯಾಗುತ್ತದೆ. ವಿಜಯದಶಮಿಯ ಭಾಷಣದಲ್ಲಿ ಸರಸಂಘಚಾಲಕರು ಶಾಖೆಯ ಸುತ್ತ ಮುತ್ತಲಿನ ಸ್ಥಳಗಳಲ್ಲಿ ಸಾಮಾಜಿಕ ಪರಿವರ್ತನೆಗಾಗಿ ನಿರಂತರ ಪ್ರಯತ್ನವಾಗಬೇಕು ಎಂದಿದ್ದರು. ಸಮರಸತೆಗಾಗಿ ಪ್ರಯತ್ನ, ಪರಿಸರಕ್ಕೆ ಪೂರಕವಾಗಿ ನಮ್ಮ ಜೀವನಶೈಲಿ ಹೇಗಿರಬೇಕು? ಜಲ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸುವುದು ಮತ್ತು ಸುಖಿ ಪರಿವಾರದ ಜೊತೆಗೆ ಸಮಾಜದ ದೃಷ್ಟಿಯಿಂದ ಒಳ್ಳೆಯ ಕೆಲಸ ಮಾಡುವಂತಹ ಪರಿವಾರವನ್ನು ಹೇಗೆ ರಚಿಸುವುದು? ಸ್ವದೇಶಿ ಹಾಗೂ ನಾಗರಿಕ ಕರ್ತವ್ಯಗಳ ಸಮೇತ ಐದು ವಿಷಯಗಳನ್ನು ನೀಡಿದ್ದರು. ಇವುಗಳನ್ನು ರೂಢಿಸಿಕೊಂಡು, ಸಮಾಜವನ್ನು ಜೊತೆಗೆ ಕರೆದುಕೊಂಡು ಸ್ವಯಂಸೇವಕರು ಮುನ್ನುಗ್ಗಬೇಕು. ಈ ಎಲ್ಲಾ ಕಾರ್ಯಗಳಿಗೂ ವೇಗ ನೀಡುವ ಕುರಿತು ವಿಚಾರ, ವಿಮರ್ಶೆ ಬೈಠಕ್ ನಲ್ಲಿ ನಡೆಯಲಿದೆ.
ದೇಶದಾದ್ಯಂತದಿಂದ 381 ಮಂದಿ ಕಾರ್ಯಕರ್ತರು ಬೈಠಕ್ ಗೆ ಆಗಮಿಸಿದ್ದಾರೆ. ಕಾರ್ಯಕಾರಿ ಮಂಡಳಿ ಬೈಠಕ್ ನಲ್ಲಿ ಪೂರ್ಣ ದೇಶದ ಪ್ರತಿನಿಧಿತ್ವ ಇರುತ್ತದೆ. ರಾಷ್ಟ್ರದಲ್ಲಿ ಸಂಘಕಾರ್ಯದ ಕುರಿತು ಆಗುತ್ತಿರುವ ಚರ್ಚೆಗಳ ಕುರಿತೂ ಚರ್ಚೆಯಾಗುತ್ತದೆ. ನವೆಂಬರ್ 5 ರಂದು ಬೆಳಗ್ಗೆ 9:00 ಗಂಟೆಗೆ ಬೈಠಕ್ ಪ್ರಾರಂಭವಾಗುತ್ತದೆ. ನವೆಂಬರ್ 7ರಂದು ಸಂಜೆ 6:00 ಕ್ಕೆ ಮುಕ್ತಾಯವಾಗಲಿದೆ.