
ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ನೀಡುವ 2024ನೇ ಸಾಲಿನ ‘ಆದಿಕವಿ’ ಪುರಸ್ಕಾರಕ್ಕೆ ವೇದಬ್ರಹ್ಮ ಶ್ರೀ ವಿಷ್ಣು ಭಟ್ ಡೋಂಗ್ರೆ ಹಾಗೂ ‘ವಾಗ್ದೇವಿ’ ಪುರಸ್ಕಾರಕ್ಕೆ, ಸಾಹಿತಿಗಳು ಹಾಗೂ ಇತಿಹಾಸಕಾರರಾದ ಡಾ. ಜಿ.ಬಿ. ಹರೀಶ್ ಅವರು ಭಾಜನರಾಗಿದ್ದಾರೆ.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕದ ವತಿಯಿಂದ ಸಾಮಾಜಿಕ ಕಳಕಳಿ ಹಾಗೂ ರಾಷ್ಟ್ರೀಯ ದೃಷ್ಟಿಕೋನವುಳ್ಳ ಹಿರಿಯ ಸಾಹಿತ್ಯಸಾಧಕರಿಗೆ ‘ಆದಿಕವಿ’ ಪುರಸ್ಕಾರವನ್ನೂ, ಕಿರಿಯ ಸಾಹಿತ್ಯ ಸಾಧಕರಿಗೆ ‘ವಾಗ್ದೇವಿ’ ಪುರಸ್ಕಾರವನ್ನೂ ಪ್ರತಿ ವರ್ಷವೂ ನೀಡಲಾಗುತ್ತಿದೆ. ಪ್ರಶಸ್ತಿಗಳು ತಲಾ 1 ಲಕ್ಷ ರೂಪಾಯಿಗಳ ನಗದು ಹಾಗೂ ಪಲಕವನ್ನು ಒಳಗೊಂಡಿದೆ. ಶ್ರೀ ಎಸ್. ಜಯರಾಮ, ಉದ್ಯಮಿಗಳು, ಜೆ.ಕೆ. ಗ್ರೂಪ್ ಬೆಂಗಳೂರು (ಆದಿಕವಿ ಪುರಸ್ಕಾರ) ಹಾಗೂ ನಿವೃತ್ತ ಇಸ್ರೋ ವಿಜ್ಞಾನಿಗಳು ಹಾಗೂ ವಾಗ್ರೇವಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀ ಕೆ. ಹರೀಶ್ (‘ವಾಗ್ರೇವಿ’ ಪುರಸ್ಕಾರ) ಅವರು ಪ್ರಾಯೋಜಿಸಿದ್ದಾರೆ.
ಪುರಸ್ಕಾರ ಪ್ರದಾನ ಕಾರ್ಯಕ್ರಮವು ಚಿಂತಾಮಣಿ ತಾಲೂಕಿನ ಶ್ರೀಕ್ಷೇತ್ರ ಕೈವಾರದಲ್ಲಿ ಇದೇ ನವೆಂಬರ್ 24, 2024 ಭಾನುವಾರ ನಡೆಯಲಿದೆ.

ಪ್ರಶಸ್ತಿ ಪುರಸ್ಕೃತರ ಪರಿಚಯ:
ವೇದಬ್ರಹ್ಮ ಶ್ರೀ ವಿಷ್ಣು ಭಟ್ ಡೋಂಗ್ರೆ

ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮುಂಡಾಜೆಯವರು. ವೃತ್ತಿಯಲ್ಲಿ ಹಿಂದಿ ಅಧ್ಯಾಪಕರು. ಶ್ರೀಯುತರ ಮೂರು ಮಹಾಕಾವ್ಯಗಳು, ನಾಲ್ಕು ಖಂಡಕಾವ್ಯಗಳು, ಎರಡು ನಾಟಕಗಳು, ಹನ್ನೆರಡು ಸಾಮಾಜಿಕ ಕಾದಂಬರಿಗಳು, ಒಂದು ಕವಿತಾ ಸಂಕಲನ, ಎರಡು ಧಾರ್ಮಿಕ ಪ್ರಬಂಧ ಕಾವ್ಯಗಳು ಮತ್ತು ಹದಿನೇಳು ಪ್ರಬಂಧ ಗ್ರಂಥಗಳು ಪ್ರಕಟಗೊಂಡಿವೆ. ಇವುಗಳಲ್ಲಿ ಹಲವು ಬರೆಹಗಳು ಪ್ರಜಾವಾಣಿ, ಕನ್ನಡಪ್ರಭ ಸೇರಿದಂತೆ ನಾಡಿನ ಹಲವು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಧಾರಾವಾಹಿಗಳಾಗಿ ಪ್ರಕಟವಾಗಿವೆ.
ಅಪಾರ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಶ್ರೀಯುತರ ಸಮಸ್ತ ಸಾಹಿತ್ಯ ಕೃತಿಗಳು ಸಮಾಜಮುಖಿಯಾಗಿವೆ. ಇಂದಿಗೂ ವೇದಗಳ ದಿವ್ಯ ಸಂದೇಶಗಳ ಪ್ರಸಾರಕ್ಕಾಗಿ ಹಲವು ರೀತಿಯ ವಿಶಿಷ್ಟ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ವೇದ ಸಂಶೋಧನೆಗಾಗಿ ಕಾಂತಾವರದ ಕನ್ನಡ ಸಂಘವು ಇವರಿಗೆ “ಸಂಶೋಧನಾ ಮಹೋಪಾಧ್ಯಾಯ” ಪ್ರಶಸ್ತಿ, ರಾಜ್ಯ ಸರ್ಕಾರದ ‘ಉತ್ತಮ ಪ್ರಾಧ್ಯಾಪಕ ಪ್ರಶಸ್ತಿ’ (1997) ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಇವರ ವಿದ್ವತ್ತನ್ನು ಗೌರವಿಸಿ ಪುರಸ್ಕರಿಸಿದ್ದಾರೆ. ಶ್ರೀ ವಿಷ್ಣು ಭಟ್ಟ ಅವರು ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ಮತ್ತು ವಿರಾಜಪೇಟೆ ತಾಲೂಕುಗಳ ಸಾಹಿತ್ಯ ಸಮ್ಮೇಳನ ಹಾಗೂ ಕೊಡಗು ಜಿಲ್ಲೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಪ್ರತಿಮ ಸೇವೆಯನ್ನು ಸಲ್ಲಿಸಿದ್ದಾರೆ.
ಡಾ. ಜಿ.ಬಿ. ಹರೀಶ

ಮೂಲತಃ ಹಾಸನದವರು, ತುಮಕೂರು ವಿ.ವಿ. ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಕರ್ನಾಟಕ ಜ್ಞಾನ ಆಯೋಗದ ‘ಕಣಜ’ದ ಸಂಶೋಧನಾಧಿಕಾರಿಯಾಗಿ, ‘ಪ್ರಜಾವಾಣಿ’ಯ ಮುಖ್ಯ ಉಪಸಂಪಾದಕರಾಗಿ, ‘ವಿಜಯವಾಣಿ’ಯ ಸಂಪಾದಕೀಯ ಸಲಹೆಗಾರರಾಗಿ ಸೇವೆ. ಮೂರು ವರ್ಷ ವಿಯೆಟ್ನಾಂನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರ ಜವಾಬ್ದಾರಿ, ಸಾಹಿತ್ಯ, ಕಲೆ ಮತ್ತು ತತ್ತ್ವಶಾಸ್ತ್ರ – ಇವರ ಆಸಕ್ತಿಯ ಕ್ಷೇತ್ರಗಳು. ವಿಮರ್ಶೆ, ಸಂಶೋಧನೆ, ಅನುವಾದ, ಸಂಪಾದನೆ, ಜೀವನಚರಿತ್ರೆ ಸೇರಿದಂತೆ 90ಕ್ಕೂ ಹೆಚ್ಚು ಪುಸ್ತಕಗಳ ಲೇಖಕರು. ಸಾಹಿತ್ಯ ಅಕಾಡೆಮಿಯ ‘ಪುಸ್ತಕ ಬಹುಮಾನ’ ಪಡೆದಿದ್ದಾರೆ. ರಾಷ್ಟ್ರಾಧ್ಯಕ್ಷರು ನೀಡುವ ‘ಬಾದರಾಯಣ ವ್ಯಾಸಸಂಮಾನ್’ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.