ಪಾಲಕ್ಕಾಡ್, ಕೇರಳ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಮನ್ವಯ ಬೈಠಕ್ ಆಗಸ್ಟ್ 31 ರಿಂದ ಸೆಪ್ಟೆಂಬರ್ 2ರವರೆಗೆ ಕೇರಳದ ಪಾಲಕ್ಕಾಡಿನಲ್ಲಿ ನಡೆಯಲಿದೆ ಎಂದು ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಹೇಳಿದರು.
ಅಖಿಲ ಭಾರತೀಯ ಸಮನ್ವಯ ಬೈಠಕ್ ಕುರಿತು ಪಾಲಕ್ಕಾಡಿನ ಅಹಲ್ಯ ಕ್ಯಾಂಪಸ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 99 ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ವ್ಯಕ್ತಿ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ಕಾರ್ಯಪ್ರವೃತ್ತವಾಗಿದೆ. ಸಂಘ ಶಾಖೆಯ ಮೂಲಕ ಅನೇಕ ಸ್ವಯಂಸೇವಕರನ್ನು ತಲುಪಿದೆ. ಶಾಖೆಗೆ ಬರುವಂತಹ ಸ್ವಯಂಸೇವಕರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರುಗಳ ಸಹಕಾರದೊಂದಿಗೆ ಸಂಘದಿಂದ ಪ್ರೇರಣೆಯನ್ನು ಪಡೆದುಕೊಂಡು ಕಾಲಾಂತರದಲ್ಲಿ ಅನೇಕ ಸಂಘಟನೆಗಳು ಆರಂಭಗೊಂಡವು. ಪ್ರಸ್ತುತ 32 ಪ್ರಮುಖ ಸಂಘಟನೆಗಳು ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಸಂಘಟನೆಗಳ ಪ್ರಮುಖರನ್ನು ಅಖಿಲ ಭಾರತೀಯ ಸಮನ್ವಯ ಬೈಠಕ್ ಗೆ ಆಹ್ವಾನಿಸಲಾಗಿದೆ. ಎಲ್ಲಾ 32 ಸಂಘಟನೆಗಳ ಪ್ರಮುಖರು ಬೈಠಕ್ ನಲ್ಲಿ ಭಾಗವಹಿಸಲಿದ್ದಾರೆ. ವಿವಿಧ ಸಂಘಟನೆಗಳ 230 ಮಂದಿ ಕಾರ್ಯಕರ್ತರು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ 90 ಮಂದಿ ಕಾರ್ಯಕರ್ತರು ಸೇರಿದಂತೆ ಒಟ್ಟು 320 ಮಂದಿ ಕಾರ್ಯಕರ್ತರು ಬೈಠಕ್ ನಲ್ಲಿ ಭಾಗವಹಿಸಲಿದ್ದಾರೆ.
ವರ್ಷಂಪ್ರತಿ ನಡೆಯುವ ಈ ಸಮನ್ವಯ ಬೈಠಕ್ ಕಳೆದ ವರ್ಷ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿತ್ತು. ಪ್ರಥಮ ಬಾರಿಗೆ ಅಖಿಲ ಭಾರತೀಯ ಸಮನ್ವಯ ಬೈಠಕ್ ಅನ್ನು ಈ ಬಾರಿ ಕೇರಳದಲ್ಲಿ ಆಯೋಜಿಸಲಾಗಿದೆ. ಈ ಸಭೆಗೆ ಆಗಮಿಸುವ ಎಲ್ಲಾ ಸಂಘಟನೆಗಳೂ ಸಂಘಪ್ರೇರಿತವಾಗಿದ್ದರೂ ಅವುಗಳಿಗೆ ಅದರದ್ದೇಯಾದ ಸುದೀರ್ಘ ಇತಿಹಾಸ ಮತ್ತು ಸಾಮಾಜಿಕ ನಿಲುವುಗಳಿವೆ. ಈ ಎಲ್ಲಾ ಸಂಘಟನೆಗಳು ಸಾಮಾಜಿಕ ಪರಿವರ್ತನೆಗೆ ಸಂಬಂಧಿತ ಕ್ಷೇತ್ರಗಳಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿವೆ. ತಮ್ಮ ಆರಂಭಿಕ ದಿನಗಳಲ್ಲಿ ಸಂಘದ ಸ್ವಯಂಸೇವಕರನ್ನು ಈ ಸಂಘಟನೆಗಳಿಗೆ ನೀಡಲಾಗಿತ್ತು. ನಂತರದ ದಿನಗಳಲ್ಲಿ ತಮ್ಮದೇ ಕಾರ್ಯಕರ್ತರ ತಂಡವನ್ನು ಆಯಾ ಸಂಘಟನೆಗಳು ವ್ಯವಸ್ಥಿತವಾಗಿ ರಚಿಸಿಕೊಂಡಿವೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇಂತಹ ಸಂಘಟನೆಗಳ ಅನಿವಾರ್ಯತೆಯೂ ಇದೆ. ಹಾಗಾಗಿ ವರ್ಷಕ್ಕೊಮ್ಮೆ ಈ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಔಪಚಾರಿಕ ಬೈಠಕ್ ಅನ್ನು ಆಯೋಜಿಸಲಾಗುತ್ತದೆ. ವಿಷಯಾಧಾರಿತವಾಗಿ ಇತರೆ ಸಭೆಗಳನ್ನೂ ನಡೆಸಲಾಗುತ್ತದೆ. ಅನೌಪಚಾರಿಕವಾಗಿಯೂ ಪರಸ್ಪರ ಸಹಕಾರ ನಿರಂತರವಾಗಿ ಮುಂದುವರೆಯುತ್ತದೆ.
ಈ ಸಭೆಯಲ್ಲಿ ಎಲ್ಲಾ ಸಂಘಟನೆಗಳು ತಾವು ಕಾರ್ಯಪ್ರವೃತ್ತರಾಗಿರುವ ಕ್ಷೇತ್ರಗಳಲ್ಲಿ ಗಳಿಸಿರುವ ತಮ್ಮ ಅಗಾಧವಾದ ಕ್ಷೇತ್ರಾನುಭವವನ್ನು, ತಾವು ಕೈಗೊಂಡ ಯೋಜನೆಗಳು, ಜನಮಾನಸವನ್ನು ತಲುಪುವುದಕ್ಕೆ ರಚಿಸಿದ ವಿನೂತನ ಉಪಕ್ರಮಗಳ ಕುರಿತು ಹಂಚಿಕೊಳ್ಳುತ್ತವೆ. ರಾಷ್ಟ್ರೀಯ ಪ್ರಾಮುಖ್ಯತೆ, ರಾಷ್ಟ್ರೀಯ ಸುಭದ್ರತೆ, ಸಾಮಾಜಿಕ ಸಮಸ್ಯೆಗಳು, ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಜರುಗುತ್ತಿರುವ ವರ್ತಮಾನದ ಘಟನಾವಳಿಗಳು, ದೇಶದಲ್ಲಾಗುತ್ತಿರುವ ಕೆಲವು ಅತಂಕಕಾರಿ ಬೆಳವಣಿಗೆಗಳ ಕುರಿತು ಚರ್ಚಿಸಲಾಗುತ್ತದೆ. ಈ ಎಲ್ಲಾ ಸಂಘಟನೆಗಳ ಜೊತೆಗೆ ಸಂಘಟನಾತ್ಮಕ ಸಮನ್ವಯವನ್ನು ಹೆಚ್ಚಿಸುವುದರ ಕುರಿತೂ ಚರ್ಚೆ ನಡೆಯುತ್ತದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಶತಾಬ್ದಿ ವರ್ಷದ ಹಿನ್ನೆಲೆಯಲ್ಲಿ ಪಂಚಪರಿವರ್ತನೆಯ ಆಧಾರಿತವಾಗಿ ರಾಷ್ಟ್ರವ್ಯಾಪಿ ಸಾಮಾಜಿಕ ಪರಿವರ್ತನೆಗಾಗಿ ಯೋಜನೆಯನ್ನು ರೂಪಿಸಿಕೊಂಡಿದೆ. ಸಾಮಾಜಿಕ ಸಮರಸತೆ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ಮತ್ತು ನಾಗರಿಕ ಶಿಷ್ಟಾಚಾರದ ಕುರಿತು ಜನಮಾನಸದಲ್ಲಿ ಜಾಗೃತಿ ಮೂಡಿಸುವ ಈ ಉಪಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಮೂರು ದಿನಗಳ ಕಾಲ ನಡೆಯುವ ಈ ಬೈಠಕ್ ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲಾ ಆರು ಮಂದಿ ಸಹಸರಕಾರ್ಯವಾಹರುಗಳು ಮತ್ತು ಎಲ್ಲಾ ಕಾರ್ಯವಿಭಾಗಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇರಳ ಉತ್ತರ ಪ್ರಾಂತದ ಸಂಘಚಾಲಕ ಕೆ.ಕೆ.ಬಲರಾಮ್. ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖ್ ಪ್ರದೀಪ್ ಜೋಶಿ ಉಪಸ್ಥಿತರಿದ್ದರು.