೮ ನವೆಂಬರ್ ೨೦೧೯, ಬೆಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಇಂದು ನಗರದ ರಾಷ್ಟ್ರೊತ್ಥಾನ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿಯನ್ನು ಕರೆದು ತಾವು ಕೊಡಬಯಸುವ ಎರಡು ಪುರಸ್ಕಾರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿತು.
“ಭಾರತದ ಭಾಷಾ ಸಮೃದ್ಧಿ, ಸಾಹಿತ್ಯ ಸಂಪತ್ತು ಅತ್ಯಂತ ವಿಶಿಷ್ಟವಾದುದು. ಭಾರತದ ನೆಲದಲ್ಲಿ ಬೆಳೆದ ಸಂಸ್ಕೃತಿಯಂತೂ ಬಹು ವೈವಿಧ್ಯಮಯವಾಗಿ,ವರ್ಣರಂಜಿತವಾಗಿದೆ. ನುಡಿಯ ಆಂತರ್ಯವನ್ನು ಸಾಹಿತ್ಯದ ಸಾಧ್ಯತೆಗಳನ್ನು ಕಂಡುಕೊಳ್ಳುವಲ್ಲಿ ನಿರಂತರ ಪ್ರಯತ್ನಶೀಲವಾಗಿರುವ ಭಾರತೀಯ ಶಬ್ದ ಸತ್ತ್ವ, ಹೊಸ ಹೊಸ ಆಯಾಮಗಳನ್ನು ಶೋಧಿಸಿದೆ. ಇದರ ಫಲವಾಗಿಯೆ ಮಾತು ಮಂತ್ರವಾಗುವುದಿದ್ದರೆ ಅದು ಭಾರತದಲ್ಲಿ ಎನ್ನುವಷ್ಟರ ಮಟ್ಟಿಗೆ ಮಾಗಿದೆ. ಈ ಶೋಧಬೋಧದಲ್ಲಿ ಸಾಧಕರನ್ನು ಕೈ ಹಿಡಿದದ್ದು ಭಾಷೆ. ಭಾರತೀಯ ಬಾಷೆಗಳಲ್ಲಿಯ ಸಾಹಿತ್ಯ ಶ್ರೀಮಂತಿಕೆಯ ಪರಿಚಯ, ಪೋಷಣೆ ಮತ್ತು ರಕ್ಷಣೆ ಮಾಡುವ ಸ್ತುತ್ಯ ಕಾರ್ಯವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕೈಗೊಂಡಿದೆ. ದೇಶವೊಂದು ಪ್ರಬುದ್ಧವಾಗಲು ಎಲ್ಲ ವಲಯಗಳಲ್ಲೂ ಸ್ವಂತಿಕೆಯನ್ನು ಕಂಡುಕೊಳ್ಳಬೇಕು. ಸಾಹಿತ್ಯ ಕ್ಷೇತ್ರ ಇದಕ್ಕೆ ಹೊರತಾಗಿಲ್ಲ. ಭಾರತೀಯ ದೃಷ್ಟಿ ಸೃಷ್ಟಿಗಳನ್ನು ಪುನ:ಸ್ಥಾಪಿಸುವ, ಅದರೊಂದಿಗೆ ದೇಶದ ಬೌದ್ಧಿಕ ವಾತಾವರಣವನ್ನು ಬೆಸೆಯುವ ದೊಡ್ಡ ಗುರಿಯೊಂದಿಗೆ ಪರಿಷತ್ತು ಸ್ಥಾಪಿತವಾಗಿದೆ.
1966ರಲ್ಲಿ ಹುಟ್ಟಿದ ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ), ಕರ್ನಾಟಕದಲ್ಲಿ 2015ರಿಂದ ಬಹುಮುಖವಾದ ಚಟುವಟಿಕೆಗಳಲ್ಲಿ ತೊಡಗಿದೆ. ರಾಜ್ಯ ಸಮ್ಮೇಳನ, ದಕ್ಷಿಣ ಭಾರತ ಮಟ್ಟದ ಬೃಹತ್ ಭಾಷಾ ಕವಿಗೋಷ್ಠಿ, ಮಹಾಮಹೋಪಾಧ್ಯಾಯ ದಿವಂಗತ ರಂಗನಾಥ ಶರ್ಮರ ಜನ್ಮಶತಮಾನೋತ್ಸವ ಮುಂತಾದವು ಮುಖ್ಯವಾಗಿವೆ. ಪರಿಷತ್ತಿನ ಸಂಘಟನೆ ಇಡೀ ಕರ್ನಾಟಕದಲ್ಲಿ ವ್ಯಾಪಕವಾಗಿ ಹಬ್ಬಿದೆ. ರಾಜ್ಯದ ಎಲ್ಲ ಜಿಲ್ಲೆಗಳನ್ನೊಳಗೊಂಡ ಬರಹಗಾರರ/ಮಾತುಗಾರರ, ವಿಷಯತಜ್ಞರ ತಂಡ ಕಟ್ಟುವ ಗುರಿ ಪರಿಷತ್ತಿಗಿದೆ. ಸಮರ್ಥರನ್ನು ಗುರುತಿಸಿ, ಪುರಸ್ಕರಿಸುವ ಸಾರ್ಥಕ ಕಾರ್ಯಕ್ಕೂ ಪರಿಷತ್ತು ಮುಂದಾಗಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ), ಕರ್ನಾಟಕ ಈ ವರ್ಷದಿಂದ ಎರಡು ಪುರಸ್ಕಾರಗಳನ್ನು ಪರಿಷತ್ತು ನೀಡಬಯಸುತ್ತದೆ” ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
1. ಆದಿಕವಿ ಪುರಸ್ಕಾರ.
ವಾಲ್ಮೀಕಿ ಮಹರ್ಷಿಯನ್ನು ಆದಿಕವಿ ಎಂದು ಜಗತ್ತೇ ಕೊಂಡಾಡುತ್ತಿದೆ. ನಮ್ಮ ದೇಶದಲ್ಲಿ ಇದುವರೆಗೆಆದಿಕವಿಯ ಹೆಸರಿನಲ್ಲಿ ಯಾವ ಪ್ರಶಸ್ತಿಯೂ ಇಲ್ಲ.ಆದ್ದರಿಂದ ಆದಿಕವಿಯ ಹೆಸರಿನಲ್ಲಿ ಪ್ರಶಸ್ತಿ ನೀಡಲುನಿರ್ಧರಿಸಲಾಗಿದೆ.
ಸಾಹಿತ್ಯಾಸಕ್ತರೂ, ಸಮಾಜ ಸೇವಕರೂ, ಉದ್ಯಮಿಗಳೂ, ಸಜ್ಜನರೂ ಆದ ಶ್ರೀಮತಿ ವೀಣಾ ಮತ್ತು ಶ್ರೀ ಜಯರಾಮ್ ದಂಪತಿಗಳು ಈ ಪುರಸ್ಕಾರದ ದಾನಿಗಳು. ಈಗಾಗಲೆ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿ
ಪ್ರಸಿದ್ಧರಾಗಿರುವ ಹಿರಿಯ ವಿದ್ವಾಂಸರಿಗೆ ಆದಿಕವಿ ಪುರಸ್ಕಾರ ನೀಡಬೇಕೆಂದು ಪರಿಷತ್ತು ನಿರ್ಣಯಿಸಿದೆ. ಈ ವರ್ಷ ಆದಿಕವಿ ಪುರಸ್ಕಾರವನ್ನು ನಾಡಿನ ಹಿರಿಯ ಸಾಹಿತಿ ಪ್ರೊ|| ಕೆ.ಎಸ್. ನಾರಾಯಣಾಚಾರ್ಯ ಅವರಿಗೆ ನೀಡಿ ಗೌರವಿಸಲು ನಿಶ್ಚಯಿಸಿದೆ.’
2. ವಾಗ್ದೇವಿ ಪುರಸ್ಕಾರ.
ತಮ್ಮ ಬರವಣಿಗೆಯಿಂದ ಭರವಸೆ ಮೂಡಿಸುತ್ತ ಸಾಹಿತ್ಯ ಸೇವೆಯಲ್ಲಿ ನಿರತರಾಗಿರುವ ಕಿರಿಯ ವಯಸ್ಕರಿಗೆ ಈ ಪ್ರಶಸ್ತಿಯನ್ನು ಕೊಡ ಮಾಡಬೇಕೆಂದು ಪರಿಷತ್ತು ಅಪೇಕ್ಷಿಸುತ್ತದೆ. ಇಸ್ರೋದ ಮಾಜಿ ವಿಜ್ಞಾನಿಗಳೂ, ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರೂ, ಸ್ವತ: ಕವಿಗಳೂ, ಉತ್ಸಾಹಿಗಳೂ ಆದ ಶ್ರೀ ಕೆ. ಹರೀಶ್ ಅವರು ಈಪ್ರಶಸ್ತಿಯ ದಾನಿಗಳು. ಈ ವರ್ಷ ವಾಗ್ದೇವಿ ಪುರಸ್ಕಾರವನ್ನು ಡಾ. ರೋಹಿಣಾಕ್ಷ ಶಿರ್ಲಾಲು, ಪುತ್ತೂರು, ದ.ಕ ಅವರಿಗೆ ನೀಡಿ ಗೌರವಿಸಲು ನಿಶ್ಚಯಿಸಿದೆ.