-ಪಂಚಮಿ ಬಾಕಿಲಪದವು
ದ್ವಿತೀಯ ಬಿ.ಎ, ಪತ್ರಿಕೋದ್ಯಮ ವಿಭಾಗ
ಅಂಬಿಕಾ ಮಹಾವಿದ್ಯಾಲಯ, ಬಪ್ಪಳಿಗೆ, ಪುತ್ತೂರು
ಮಗುವಿನ ಆಂತರ್ಯದಲ್ಲಿ ಸಂಸ್ಕಾರ ರೂಪದಲ್ಲಿದ್ದ ಜ್ಞಾನವನ್ನು ಹೊರತೆಗೆದು ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ಸದೃಢರನ್ನಾಗಿ ಮಾಡಿ, ಸಮಾಜದ ಹಿತಕ್ಕಾಗಿ ಶ್ರಮಿಸುವಂತೆ ವ್ಯಕ್ತಿತ್ವವನ್ನು ಸರ್ವತೋಮುಖವಾಗಿ ವಿಕಸನಗೊಳಿಸುವುದು ಶಿಕ್ಷಣ. ವೇದಗಳ ಕಾಲದಲ್ಲಿ ಸ್ತ್ರೀಯರಿಗೂ ವಿದ್ಯಾರ್ಜನೆ ಮಾಡುವ ಹಾಗೂ ತನಗೆ ಬೇಕಾದ ಜೀವನಕ್ರಮವನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವಿತ್ತು. ಆದರೆ ಕಾಲಾಂತರದಲ್ಲಿ ಮಹಿಳಾ ಸಮಾನತೆ ಮತ್ತು ಶಿಕ್ಷಣ ಹ್ರಾಸವಾಗುತ್ತಾ ಹೋಯಿತು. ಮಹಿಳೆಯರ ಜೀವನವು ಅಸ್ವತಂತ್ರವಾಯಿತು; ಕುಟುಂಬದ, ಸಂಪ್ರದಾಯಗಳ ಅನೇಕ ಸಾಮಾಜಿಕ ಕಟ್ಟಳೆಗಳಿಗೆ ಒಳಪಟ್ಟಿತು. ಹೀಗೆ ಶಿಕ್ಷಣದಿಂದ ವಂಚಿತರಾಗಿದ್ದ ಸ್ತ್ರೀ ವರ್ಗವನ್ನು ಅಕ್ಷರದ ಬೆಳಕಿನೆಡೆಗೆ ಕೊಂಡೊಯ್ಯುವ ಕ್ರಾಂತಿಯನ್ನು ಮಾಡಿ ಸಾಮಾಜಿಕ ಪರಿವರ್ತನೆಯನ್ನು ಉಂಟು ಮಾಡಿದವರಲ್ಲಿ ಸಾವಿತ್ರಿಭಾಯಿ ಫುಲೆ ಪ್ರಮುಖರು.
ಸಾವಿತ್ರಿಭಾಯಿ ಫುಲೆ ಅವರು 1831ರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನೈಗಾಂವ್ ಎಂಬಲ್ಲಿ ಜನಿಸಿದರು. ಪೇಶ್ವೆಗಳ ಆಡಳಿತದ ಅವಧಿಯಲ್ಲಿ ಹೂವನ್ನು ಮಾರುತ್ತಿದ್ದುದರಿಂದ ಇವರ ಕುಟುಂಬಕ್ಕೆ ಫುಲೆ ಎಂಬ ಹೆಸರು ಬಂದಿತೆಂದು ಹೇಳಲಾಗಿದೆ. ಸಾವಿತ್ರಿ ಭಾಯಿ ಫುಲೆಯವರಿಗೆ ಎಂಟನೆಯ ವಯಸ್ಸಿನಲ್ಲಿಯೇ ಹದಿಮೂರು ವರ್ಷ ಪ್ರಾಯದ ಜ್ಯೋತಿಭಾ ಫುಲೆಯವರೊಂದಿಗೆ ವಿವಾಹ ಮಾಡಲಾಯಿತು. ವಿವಾಹದ ನಂತರ ಸಾವಿತ್ರಿ ಬಾಯಿ ಫುಲೆಯವರ ಬದುಕಿನ ಗತಿಯೇ ಬದಲಾಯಿತು. ಜ್ಯೋತಿಭಾ ಪುಲೆ ಅವರು ತಮ್ಮ ಪತ್ನಿಗೆ ಅಕ್ಷರಾಭ್ಯಾಸ ಮಾಡಿಸಿದರು. ಅವರು ಕೆಳವರ್ಗದ ಜನರಿಗಾಗಿ ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗಾಗಿ ಶ್ರೀ ಭಿಡೆ ಅವರ ಮನೆಯಲ್ಲಿ ಶಾಲೆಯೊಂದನ್ನು ಪ್ರಾರಂಭಿಸಿದರು. ಸಮಾಜದಲ್ಲಿ ಯಾರೂ ಕೆಳವರ್ಗದ ಶಾಲೆಯಲ್ಲಿ ಶಿಕ್ಷಕರಾಗಲು ಆಸಕ್ತಿ ವಹಿಸಲಿಲ್ಲ. ಜ್ಯೋತಿಭಾ ಫುಲೆಯವರು ಸಮಾಜದ ಕಟ್ಟುಪಾಡುಗಳಿಗೆ ಅಂಜದೆ, ಮಡದಿ ಸಾವಿತ್ರಿಭಾಯಿ ಫುಲೆಯನ್ನು ತಮ್ಮ ಶಾಲೆಯಲ್ಲಿ ಪ್ರಧಾನ ಶಿಕ್ಷಕಿಯನ್ನಾಗಿ ನೇಮಕಗೊಳಿಸಿದರು.
ಸಾವಿತ್ರಿಭಾಯಿ ಫುಲೆಯವರು ಶಿಕ್ಷಕಿಯಾಗಿ ಸೇವೆ ಸಲ್ಲಿಸುವುದನ್ನು ಸಂಪ್ರದಾಯ ಸಮಾಜ ಸಹಿಸಲ್ಲಿಲ್ಲ. ಅವರು ಶಾಲೆಗೆ ಹೋಗುವಾಗ ಜನರು ಅವರನ್ನು ನೋಡಿ ಅಪಹಾಸ್ಯ ಮಾಡುತ್ತಿದ್ದರು, ಕೇಕೆಹಾಕಿ ನಗುತ್ತಿದ್ದರು. ಅವರ ಮೈಮೇಲೆ ಸಗಣಿ, ತೊಪ್ಪೆ, ಕೆಸರು, ಕಲ್ಲುಗಳನ್ನು ಎಸೆಯುತ್ತಿದ್ದರು. ಇದ್ಯಾವುದಕ್ಕೂ ಕುಗ್ಗದೆ, “ಧೈರ್ಯಂ ಸರ್ವತ್ರ ಸಾಧನಂ” ಎಂಬ ಮಾತಿನಂತೆ ಮುಂದೆ ಸಾಗುತ್ತಿದ್ದರು. ಜನರೆಸಗುತ್ತಿದ್ದ ಕಾರ್ಯಗಳಿಗೆ ಪರ್ಯಾಯವಾಗಿ ಅವರು ತಮ್ಮ ಬ್ಯಾಗಿನಲ್ಲಿ ಯಾವಾಗಲೂ ಇನ್ನೊಂದು ಹೆಚ್ಚುವರಿ ಸೀರೆಯನ್ನು ಇಟ್ಟುಕೊಳ್ಳುತ್ತಿದ್ದರು. ಶಾಲೆಗೆ ಬರುವಾಗ ಅಲ್ಲಿನ ಜನರ ಉಪಟಳಗಳಿಂದ ಅವರು ಧರಿಸಿದ್ದ ಸೀರೆ ಗಲೀಜಾದರೆ ಶಾಲೆಗೆ ತಲುಪುತ್ತಲೇ ಇನ್ನೊಂದು ಸೀರೆಯನ್ನು ಧರಿಸಿ ಬಂದು ನಗುನಗುತ್ತಲೇ ಮಕ್ಕಳಿಗೆ ಪಾಠ ಮಾಡುತ್ತಿದ್ದರು.
ಮಕ್ಕಳ ಸರ್ವತೋಮುಖ ಅಭಿವೃದ್ಧಿಯೇ ಫುಲೆ ದಂಪತಿಗಳ ಶಿಕ್ಷಣದ ಗುರಿಯಾಗಿತ್ತು. ವಿಶ್ವ ಭ್ರಾತೃತ್ವ, ವಸ್ತುನಿಷ್ಠವಾದ ತತ್ತ್ವಗಳು ಮತ್ತು ಸಾಮಾಜಿಕ ಸುಧಾರಣೆಯಂತಹ ವಿಚಾರಗಳನ್ನು ಪಠ್ಯದಲ್ಲಿ ನೀಡಲಾಗಿತ್ತು. ಮಕ್ಕಳಲ್ಲಿ ಹುದುಗಿದ್ದ ಕಲೆಯನ್ನು ಅಭಿವ್ಯಕ್ತಗೊಳಿಸಲು ಪ್ರೋತ್ಸಾಹಿಸುತ್ತಿದ್ದರು ಮತ್ತು ಕಲೆಯನ್ನು ಬೆಳೆಸಲು ಸರ್ವ ರೀತಿಯಲ್ಲೂ ಮಾರ್ಗದರ್ಶನ ನೀಡುತ್ತಿದ್ದರು. ಇವರ ಶಾಲೆಗೆ ಬರುವ ಹೆಣ್ಣುಮಕ್ಕಳನ್ನು ಸಮಾಜ ಬಹಿಷ್ಕರಿಸುವ ಬೆದರಿಕೆ ಹಾಕಿದಾಗ ಸಾವಿತ್ರಿಭಾಯಿವರು ಮನೆ ಮನೆಗೆ ತೆರಳಿ ಪೋಷಕರ ಮನವೊಲಿಸಿ, ಶಿಕ್ಷಣದ ಔನ್ನತ್ಯವನ್ನು ಮನವರಿಕೆ ಮಾಡಿ ಮಕ್ಕಳನ್ನು ಪುನಃ ಶಾಲೆಗೆ ಕರೆತಂದು ಶಿಕ್ಷಣ ನೀಡಿದ್ದರು. ಸಮಾಜದ ಮಾತುಗಳಿಗೆ ಕಿವಿಕೊಡದೆ ದಿಟ್ಟತನದಿಂದ ಬದುಕಿ ಆದರ್ಶಪ್ರಾಯರಾದರು. “ಏಳಿ, ಎದ್ದೇಳಿ ಮತ್ತು ಶಿಕ್ಷಿತರಾಗಿ, ಸಂಪ್ರದಾಯ ಮರಿಯಿರಿ, ಮುಕ್ತಿಯನ್ನು ಹೊಂದಿರಿ” ಇದು ಸಾವಿತ್ರಿಭಾಯಿ ಫುಲೆಯವರು 1854ರಲ್ಲಿ ಪ್ರಕಟ ಪಡಿಸಿದ “ಕಾವ್ಯಪುಲೆ” ಕವನ ಸಂಕಲನದ ಸಾಲುಗಳು. ಅವರು ಶಿಕ್ಷಣಕ್ಕೆ ಯಾವ ರೀತಿಯ ಮಹತ್ವವನ್ನು ನೀಡುತ್ತಿದ್ದರು ಎಂಬುದಕ್ಕಿದು ಜಲ್ವಂತ ನಿದರ್ಶನ!
ಫುಲೆ ದಂಪತಿಗಳು ಸಮಾಜದ ಉನ್ನತಿಗೋಸ್ಕರ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ವರದಕ್ಷಿಣೆ ಅಥವಾ ಬಹಿರಂಗ ವೆಚ್ಚಗಳಿಲ್ಲದೆ ಮದುವೆಯನ್ನು ಮಾಡಲು ಪ್ರಾರಂಭಿಸಿದರು. ಬಾಲ್ಯವಿವಾಹ, ಸತಿಸಹಗಮನ ಪದ್ಧತಿ, ಕೇಶಮುಂಡನೆ ಮುಂತಾದ ಅನಿಷ್ಟ ಪದ್ಧತಿಗಳ ವಿರುದ್ದ ಹೋರಾಟ ಮಾಡಿ, ಮಹಿಳೆಯರಿಗೆ ನೆಮ್ಮದಿಯ ಹಾಗೂ ಭದ್ರತೆಯ ಜೀವನವನ್ನು ಒದಗಿಸಿಕೊಟ್ಟರು. ಅತ್ಯಾಚಾರಕ್ಕೆ ಒಳಗಾದ ಮಹಿಳೆಯರಿಗೆ ಮತ್ತು ಅವರಿಗೆ ಹುಟ್ಟುವ ಮಕ್ಕಳಿಗಾಗಿ ‘ಬಾಲಹತ್ಯಾ ಪ್ರತಿಬಂಧಕ ಗೃಹ’ಗಳನ್ನು ತೆರೆದರು. 1863ರಲ್ಲಿ ಅನಾಥ ವಿಧವೆಯರ ಸುರಕ್ಷಿತ ಹೆರಿಗೆಗಾಗಿ ‘ಗುಪ್ತಪ್ರಸೂತಿ ಗೃಹ’ಗಳನ್ನೂ ಸ್ಥಾಪಿಸಿದರು. ಹೀಗೆ ನೂರಾರು ಮಹಿಳೆಯರ ಮತ್ತು ಮಕ್ಕಳ ಬದುಕಿಗೊಂದು ನೆಲೆ ಕೊಟ್ಟರು. ಮಾತ್ರವಲ್ಲದೆ ಮುಂದೆ ಅದೆಷ್ಟೋ ಕ್ರಾಂತಿಗಳಿಗೆ ಮುನ್ನುಡಿಯಾದರು; ಮತ್ತದೆಷ್ಟೋ ಸಾಮಾಜಿಕ ಪರಿವರ್ತನೆಗಳಿಗೆ ಇಂದಿಗೂ ಪ್ರೇರಕ ಶಕ್ತಿಯಾಗಿದ್ದಾರೆ.
ಸಾವಿತ್ರಿಭಾಯಿ ಫುಲೆಯವರ ಸಾಮಾಜಿಕ ಚಳವಳಿಯಿಂದ ಪ್ರೇರಿತರಾಗಿದ್ದ ಶ್ರೀ ವಾಳ್ವೆಕರ್ ಎಂಬುವವರು ‘ಗೃಹಿಣಿ’ ಎಂಬ ನಿಯತಕಾಲಿಕೆಯನ್ನು ಪ್ರಾರಂಭಿಸಿದ್ದರು. ಸಾವಿತ್ರಿಭಾಯಿಯವರು ಈ ನಿಯತಕಾಲಿಕೆಗೆ ಲೇಖನಗಳನ್ನು ಬರೆಯುತ್ತಿದ್ದರು. ಅವರ ಬರೆವಣಿಗೆಗಳು ಶಿಕ್ಷಣ, ಜಾತಿ ವಿನಾಶ, ಮಕ್ಕಳ ಕಲ್ಯಾಣ ಮತ್ತು ಸಾಮಾಜಿಕ ಸುಧಾರಣೆಯಂಥ ಮಹತ್ವದ ವಿಷಯಗಳನ್ನು ಒಳಗೊಂಡಿತ್ತು. ಪ್ರಕೃತಿಯ ವರ್ಣನೆಯುಳ್ಳ ‘ಜೈಚಿ ಕಲಿ’ ಮತ್ತು ‘ಗುಲಾಬಚೆ ಫೂಲ್’ನಂತಹ ಸುಂದರ ಕವನಗಳುಳ್ಳ ಮತ್ತೊಂದು ಕವನ ಸಂಕಲನವನ್ನು ಅವರು ಪ್ರಕಟಿಸಿದ್ದರು. ಈ ಸಂಕಲನವು ಜ್ಯೋತಿಭಾ ಫುಲೆಯವರ ನಿಧನದ ನಂತರ 1892ರ ನವಂಬರ್ 7ರಂದು ಪ್ರಕಟವಾಗಿತ್ತು.
1897ರಲ್ಲಿ ಪ್ಲೇಗ್ ರೋಗದಿಂದಾಗಿ ಹಲವು ಜನರು ಸಂಕಷ್ಟಕ್ಕೀಡಾದರು. ಆ ಸಂದರ್ಭದಲ್ಲಿ ಸಾವಿತ್ರಿಭಾಯಿಯವರು ಮಾಡಿದ ನಿಸ್ವಾರ್ಥ ಸೇವೆ ನಿಜಕ್ಕೂ ಶ್ರೇಷ್ಠವಾದುದು. ತಮ್ಮ ದತ್ತು ಪುತ್ರ ಯಶವಂತರೊಂದಿಗೆ ಕೂಡಿ, ಪ್ಲೇಗ್ ರೋಗಿಗಳಿಗಾಗಿ ಆಸ್ಪತ್ರೆಯನ್ನೂ; ನಿರ್ಗತಿಕರಿಗಾಗಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿದರು. ಹೀಗೆ ಪರರ ಸೇವೆ ಮಾಡುತ್ತಾ ಕೊನೆಗೆ ತಾನೂ ಪ್ಲೇಗ್ ರೋಗಕ್ಕೆ ತುತ್ತಾಗಿ ಮಾರ್ಚ್ 10, 1897 ರಂದು ಇಹಲೋಕ ತ್ಯಜಿಸಿದರು. ಸಾವಿತ್ರಿಭಾಯಿ ಫುಲೆಯವರು ಅಸ್ತಂಗತರಾಗಿ ಶತಕಗಳು ಉರುಳಿದರೂ, ಮನದಾಳದಲ್ಲಿ ಅಚ್ಚಳಿಯುವ ವ್ಯಕ್ತಿತ್ವ ಅವರದು! ಎಂದೆಂದಿಗೂ ಅವರು ಜನಮಾನಸದಲ್ಲಿ ನಿತ್ಯ ಸ್ಮರಣೀಯರು!