ಕನ್ನಡದ ನಾಡು ನುಡಿಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಆಲೂರು ವೆಂಕಟರಾಯರು ಪ್ರತಿಕೋದ್ಯಮ, ಸಾಹಿತ್ಯ, ಸಂಸ್ಕೃತಿಗೆ ನೀಡಿದ ಕೊಡುಗೆ ಅಪಾರ. ಕರ್ನಾಟಕ ಏಕೀಕರಣದ ನೆಲೆಯಲ್ಲಿ ಅವರು ಮಾಡಿದ ಕೆಲಸ ಅವಿಸ್ಮರಣೀಯ. ಈ ಕಾರಣಕ್ಕಾಗಿಯೇ ಅವರನ್ನು ಕನ್ನಡದ ‘ಕುಲಪುರೋಹಿತ’ ಎಂಬ ಹೆಸರಿನಿಂದ ಕರೆಯಲಾಗಿದೆ. ಇಂದು ಅವರ ಪುಣ್ಯಸ್ಮರಣೆ
ಪರಿಚಯ
ಆಲೂರು ವೆಂಕಟರಾಯರು ಜುಲೈ 12, 1880 ರಂದು ಉತ್ತರ ಕರ್ನಾಟಕದ ವಿಜಯಪುರದಲ್ಲಿ ಜನಿಸಿದರು. ಇವರ ತಂದೆ ಭೀಮರಾವ್ ಮತ್ತು ತಾಯಿ ಭಾಗೀರಥಿಬಾಯಿ. ಇವರು ಪ್ರಾಥಮಿಕ ಶಿಕ್ಷಣವನ್ನು ನವಲಗುಂದಲ್ಲಿ ಮುಗಿಸಿದರು.ನಂತರ 1897ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಳಿಕ ಪುಣೆಯ ಫರ್ಗುನ್ಸನ್ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದು, ನಂತರ ಮುಂಬೈನಲ್ಲಿ ಎಲ್ ಎಲ್ ಬಿ ಪದವಿ ಪಡೆದರು. ಬಳಿಕ ಧಾರವಾಡಕ್ಕೆ ಹಿಂದಿರುಗಿದರು. ಆಲೂರು ವೆಂಕಟರಾಯರು ಸ್ವದೇಶಿ ಚಳುವಳಿ ಮತ್ತು ಕಾಯಿದೆಭಂಗ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.ಸ್ವರಾಜ್ಯ ಪುಸ್ತಕಮಾಲೆಯನ್ನು ಆರಂಭಿಸಿ ನ್ಯಾಯಾಲಯದಲ್ಲಿ ಬಿಡುವು ಸಿಕ್ಕಾಗ ಸ್ವರಾಜ್ಯ ಸರ್ಕಾರದ ಬಗ್ಗೆ ಕಿರುಹೊತ್ತಿಗೆಗಳನ್ನು ಬರೆದು ಪ್ರಕಟಿಸುತ್ತಿದ್ದರು.
ಸಾಹಿತ್ಯ ಕ್ಷೇತ್ರದ ಕೊಡುಗೆ
ಆಲೂರು ವೆಂಕಟರಾಯರು ಅವರು ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ದಿಗ್ಗಜರೆನಿಸಿದ ಕುವೆಂಪು, ಶಂ.ಬಾ. ಜೋಶಿ, ಶ್ರೀರಂಗ, ಬೆಟಗೇರಿ ಕೃಷ್ಣಶರ್ಮ, ಶಿವರಾಮ ಕಾರಂತ, ಅ.ನ.ಕೃಷ್ಣರಾಯ ಮೊದಲಾದವರಿಗೆ ಕನ್ನಡದಲ್ಲಿ ಸಾಹಿತ್ಯ ನಿರ್ಮಿಸಲು ಪ್ರೇರಣೆ ನೀಡಿದರು. ದ.ರಾ. ಬೇಂದ್ರೆ ಅವರನ್ನು ಸಾರ್ವಜನಿಕವಾಗಿ ಮೊದಲು ಪರಿಚಯಿಸಿದ ಕೀರ್ತಿ ಆಲೂರು ವೆಂಕಟರಾಯರಿಗೆ ಸಲ್ಲುತ್ತದೆ.
1906 ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪತ್ರಿಕೆಯಾದ ವಾಗ್ಭೂಷಣ ಪತ್ರಿಕೆ ಆರಂಭವಾಯಿತು. ಇದರ ಸಂಪಾದಕರಾಗಿ ಆಲೂರು ವೆಂಕಟರಾಯರು ನಿಯುಕ್ತರಾದರು.
ಮುಂಬಯಿ ಪ್ರಾಂತ್ಯದಲ್ಲಿ ಕನ್ನಡ ಪುಸ್ತಕಗಳ ಕೊರತೆ ತೀವ್ರವಾಗಿತ್ತು. ಅದರಲ್ಲಿಯೂ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಒದಗಿಸುವ ಸವಾಲು ಲೇಖಕರ ಮೇಲಿತ್ತು. ಈ ಹಿನ್ನೆಲೆಯಲ್ಲಿ 1907ರಲ್ಲಿ ಧಾರವಾಡದಲ್ಲಿ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನವನ್ನು ಸಂಘಟಿಸಿದರು. ಇದರ ಮುಂದುವರಿದ ಭಾಗವಾಗಿ 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದೆ ಎಂಬುದು ಈಗ ಇತಿಹಾಸವಾಗಿದೆ. 1907 ರಿಂದ 1911 ರವರೆಗೆ ಕರ್ನಾಟಕ ಪತ್ರ, ಕರ್ನಾಟಕ ವೃತ್ತ ಮತ್ತು ಕನ್ನಡ ಕೇಸರಿ ಪತ್ರಿಕೆಗಳಿಗೆ ಸಂಪಾದಕೀಯ ಲೇಖನಗಳನ್ನು ಬರೆಯುವುದರ ಮೂಲಕ ಕರ್ನಾಟಕತ್ವವನ್ನು ಜಾಗೃತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಪತ್ರಿಕೆಗಳಲ್ಲಿ ಇವರು ಬರೆಯುತ್ತಿದ್ದ ಲೇಖನಗಳು ಬ್ರಿಟಿಷ್ ಸರಕಾರಕ್ಕೆ ಅಪಥ್ಯವಾಗಿತ್ತು.
1921ರಲ್ಲಿ ಧಾರವಾಡದಲ್ಲಿ ಸತ್ಯಾಗ್ರಹಿಗಳ ಮೇಲೆ ನಡೆದ ಗೋಲಿಬಾರ್ ಘಟನೆಯನ್ನು ಖಂಡಿಸಿ ಕರ್ಮವೀರದಲ್ಲಿ ಅನಾಮಧೇಯನ ಹೆಸರಿನಲ್ಲಿ ಲೇಖನವನ್ನು ಪ್ರಕಟಿಸಿದರು. ಇದರ ಪರಿಣಾಮವಾಗಿ ಪತ್ರಿಕೆಯ ಸಂಪಾದಕ ರಂಗರಾವ್ ದಿವಾಕರ ಹಾಗೂ ಪ್ರಕಾಶಕ ರಾಮರಾವ್ ಹುಕ್ಕೇರಿಕರ ಇಬ್ಬರಿಗೂ ಸೆರೆಮನೆ ಶಿಕ್ಷೆಯಾಯಿತು. 1931ರಲ್ಲಿ ಪೊಲೀಸ್ ಅಧಿಕಾರಿಗಳು ಆಲೂರ ಅವರನ್ನು ಸೆರೆಹಿಡಿದು ಕಲಘಟಗಿಯಲ್ಲಿ ರಾಜಕೀಯ ದಿಗ್ಬಂಧನದಲ್ಲಿ ಇರಿಸಿದರು.
ಆಲೂರು ವೆಂಕಟರಾಯರು ಕೆಲಸ ಮಾಡಿದ ಇನ್ನೊಂದು ಪತ್ರಿಕೆ ‘ಜಯಕರ್ನಾಟಕ. 1922ರಲ್ಲಿ ಆರಂಭವಾದ ಈ ಪತ್ರಿಕೆ ಕನ್ನಡ ನಾಡು, ನುಡಿಗೆ ಸಂಬಂಧಿಸಿ ಚರ್ಚಿಸಲು ಗಂಭೀರ ವೇದಿಕೆಯೊಂದನ್ನು ಕಲ್ಪಿಸಿತು. ಕನ್ನಡ ನವೋದಯ ಸಾಹಿತ್ಯ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತು. ರಾಷ್ಟ್ರೀಯತ್ವದ ವಿಕಾಸ, ಕರ್ನಾಟಕತ್ವದ ಪ್ರಜ್ಞೆ, ಸ್ವದೇಶಿ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಜಯಕರ್ನಾಟಕ ಪತ್ರಿಕೆಯ ಉದ್ದೇಶವಾಗಿತ್ತು. ನಾಡಿನ ಎಲ್ಲ ಕಡೆಯಿಂದಲೂ ಲೇಖಕರು ಜಯಕರ್ನಾಟಕ ಪತ್ರಿಕೆಗೆ ಬರೆಯುತ್ತಿದ್ದರು.
ಲೇಖನಗಳನ್ನು ಪ್ರಕಟಿಸುವುದಕ್ಕಾಗಿ ‘ಪ್ರಾಚೀನ ಕರ್ನಾಟಕ’ ಎಂಬ ಪತ್ರಿಕೆಯನ್ನು ಆರಂಭಿಸಿದರು. 1914ರಲ್ಲಿ ಧಾರವಾಡದಲ್ಲಿ ಕರ್ನಾಟಕ ಇತಿಹಾಸ ಸಂಶೋಧನ ಮಂಡಲವನ್ನು ಸ್ಥಾಪಿಸಿ ಅದರ ಮೊದಲ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದರು. 1917ರಲ್ಲಿ ‘ಕರ್ನಾಟಕ ಗತವೈಭವ’ ಗ್ರಂಥವನ್ನು ಪ್ರಕಟಿಸಿದರು. 1930ರಲ್ಲಿ ಮೈಸೂರಿನಲ್ಲಿ ನಡೆದ 16ನೇ ಕರ್ನಾಟಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ತಿಲಕ್ ಅವರ ಗೀತಾರಹಸ್ಯವನ್ನು ಆಲೂರು ಕನ್ನಡಕ್ಕೆ ಅನುವಾದಿಸಿದರು. ಇದರೊಂದಿಗೆ ಗೀತಾಪ್ರಕಾಶ, ಗೀತಾ ಪರಿಮಳ, ಗೀತಾ ಸಂದೇಶ ಕೃತಿಗಳನ್ನು ಪ್ರಕಟಿಸಿದರು.
ಕರ್ನಾಟಕ ಏಕೀಕರಣ
1956ರಂದು ಕರ್ನಾಟಕದ ಏಕೀಕರಣವಾಗಿ ಕನ್ನಡ ನಾಡಿನ ಉದಯವಾದಾಗ ಆಲೂರರು ಮೈಸೂರು ರಾಜ್ಯ ಎಂಬುದರ ಬದಲು ಕರ್ನಾಟಕ ರಾಜ್ಯವೆಂದು ಕರೆದರು. ಕರ್ನಾಟಕದ ಏಕೀಕರಣವಾದರೆ ಸಾಲದು, ಸಾಂಸ್ಕೃತಿಕ ಏಕೀಕರಣವಾಗಬೇಕು ಎಂದು ಪ್ರತಿಪಾದಿಸಿದರು.
ಆಲೂರು ವೆಂಕಟರಾಯರು ಧಾರವಾಡದಲ್ಲಿ ಫೆಬ್ರವರಿ 25, 1964 ರಲ್ಲಿ ನಿಧನರಾದರು.