– ಅಮಿತ್ ಶಾ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರು
ನಮ್ಮ ದೇಶದ ಇತಿಹಾಸದ ಸುದೀರ್ಘ ಮತ್ತು ಸ್ಪೂರ್ತಿದಾಯಕ ಪಯಣದಲ್ಲಿ, ಹಾಡು ಮತ್ತು ಕಲೆ ಚಳುವಳಿಗಳ ಆತ್ಮವಾಗಿ ಮಾರ್ಪಟ್ಟ ಮತ್ತು ಸಾಮೂಹಿಕ ಭಾವನೆಯನ್ನು ಕ್ರಿಯೆಯಾಗಿ ಪರಿವರ್ತಿಸಿದ ಅನೇಕ ನಿರ್ಣಾಯಕ ಕ್ಷಣಗಳು ಘಟಿಸಿವೆ. ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದ ಯುದ್ಧ ಗೀತೆಗಳಾಗಲಿ, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹಾಡಿದ ದೇಶಭಕ್ತಿ ಗೀತೆಗಳಾಗಲಿ ಅಥವಾ ತುರ್ತು ಪರಿಸ್ಥಿತಿಯ ಸಮಯದಲ್ಲಿ ಯುವಕರು ಹಾಡಿದ ಪ್ರತಿರೋಧದ ಗೀತೆಗಳಾಗಲಿ, ಹಾಡುಗಳು ಯಾವಾಗಲೂ ಭಾರತೀಯ ಸಮಾಜದಲ್ಲಿ ಸಾಮೂಹಿಕ ಪ್ರಜ್ಞೆ ಮತ್ತು ಏಕತೆಯನ್ನು ಜಾಗೃತಗೊಳಿಸಿವೆ.
ಅವುಗಳಲ್ಲಿ ಭಾರತದ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಕೂಡ ಒಂದು. ಇದರ ಕಥೆ ಯುದ್ಧಭೂಮಿಯಲ್ಲಿ ಆರಂಭವಾಗದೆ, ವಿದ್ವಾಂಸ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರ ಶಾಂತ ಮತ್ತು ದೃಢನಿಶ್ಚಯದ ಮನಸ್ಸಿನಲ್ಲಿ ಆರಂಭವಾಗುತ್ತದೆ. 1875 ರಲ್ಲಿ, ಜಗದ್ಧಾತ್ರಿ ಪೂಜೆಯ (ಕಾರ್ತಿಕ ಶುಕ್ಲ ನವಮಿ ಅಥವಾ ಅಕ್ಷಯ ನವಮಿ) ಶುಭ ದಿನದಂದು, ಅವರು ರಾಷ್ಟ್ರದ ಸ್ವಾತಂತ್ರ್ಯದ ಅಮರ ಗೀತೆಯಾಗುವ ಸ್ತುತಿಗೀತೆಯನ್ನು ರಚಿಸಿದರು. ಆ ಪವಿತ್ರ ಸಾಲುಗಳಲ್ಲಿ, ಅವರು ಭಾರತದ ಆಳವಾದ ನಾಗರಿಕತೆಯ ಬೇರುಗಳಿಂದ, ಅಥರ್ವ ವೇದದ “ಮಾತಾ ಭೂಮಿಃ ಪುತ್ರೋ ಅಹಂ ಪೃಥಿವ್ಯಾ” (“ಭೂಮಿ ನನ್ನ ತಾಯಿ ಮತ್ತು ನಾನು ಅವಳ ಮಗ”) ಘೋಷಣೆಯಿಂದ ದೇವಿ ಮಹಾತ್ಮ್ಯದ ದೈವಿಕ ತಾಯಿಯ ಪ್ರಾರ್ಥನೆಯವರೆಗೆ ಸ್ಫೂರ್ತಿ ಪಡೆದರು.
ಬಂಕಿಮ್ ಬಾಬು ಅವರ ಮಾತುಗಳು ಪ್ರಾರ್ಥನೆ ಮತ್ತು ಭವಿಷ್ಯವಾಣಿ ಎರಡೂ ಆಗಿದ್ದವು. ‘ವಂದೇ ಮಾತರಂ’ ಕೇವಲ ರಾಷ್ಟ್ರೀಯ ಗೀತೆ ಅಥವಾ ಸ್ವಾತಂತ್ರ್ಯ ಚಳವಳಿಯ ಜೀವಾಳವಾಗಿರಲಿಲ್ಲ. ಅದು ಬಂಕಿಮಚಂದ್ರ ಅವರ ಸಾಂಸ್ಕೃತಿಕ ರಾಷ್ಟ್ರೀಯತೆಯ ಮೊದಲ ಘೋಷಣೆಯಾಗಿತ್ತು. ಭಾರತವು ಕೇವಲ ಭೌಗೋಳಿಕ ಪ್ರದೇಶವಲ್ಲ, ಬದಲಾಗಿ ಭೂ-ಸಾಂಸ್ಕೃತಿಕ ನಾಗರಿಕತೆಯಾಗಿದ್ದು, ನಕ್ಷೆಯ ಗಡಿಗಳಿಂದಲ್ಲ, ಬದಲಾಗಿ ವಿನಿಮಯದ ಸಂಸ್ಕೃತಿ, ನೆನಪು, ತ್ಯಾಗ, ಶೌರ್ಯ ಮತ್ತು ಮಾತೃತ್ವದಿಂದ ಒಗ್ಗೂಡಿದೆ ಎಂದು ಅದು ನಮಗೆ ನೆನಪಿಸಿತು. ಇದು ಕೇವಲ ಭೂಮಿಯಲ್ಲ; ಇದು ತೀರ್ಥಕ್ಷೇತ್ರ, ಭಕ್ತಿ ಮತ್ತು ಕರ್ತವ್ಯದಿಂದ ಪೂಜನೀಯವಾದ ಪವಿತ್ರ ನೆಲ.
ಮಹರ್ಷಿ ಅರಬಿಂದೋ ವಿವರಿಸಿದಂತೆ, ಬಂಕಿಮ್ ಆಧುನಿಕ ಭಾರತದ ಋಷಿಯಾಗಿದ್ದು, ಅವರು ತಮ್ಮ ಮಾತುಗಳ ಮೂಲಕ ರಾಷ್ಟ್ರದ ಆತ್ಮವನ್ನು ಮತ್ತೆ ಜಾಗೃತಗೊಳಿಸಿದರು. ಅವರ ಆನಂದಮಠ ಕೇವಲ ಕಾದಂಬರಿಯಾಗಿರಲಿಲ್ಲ; ಅದು ನಿದ್ರಿಸುತ್ತಿದ್ದ ರಾಷ್ಟ್ರವನ್ನು ತನ್ನ ದೈವಿಕ ಶಕ್ತಿಯನ್ನು ಮರುಶೋಧಿಸಲು ಪ್ರೇರೇಪಿಸಿದ ಗದ್ಯದಲ್ಲಿನ ಮಂತ್ರವಾಗಿತ್ತು. ಬಂಕಿಮ್ ಬಾಬು ತಮ್ಮ ಪತ್ರವೊಂದರಲ್ಲಿ “ನನ್ನ ಎಲ್ಲಾ ಕೃತಿಗಳು ಗಂಗಾ ನದಿಯಲ್ಲಿ ಕಳೆದುಹೋದರೂ ನನಗೆ ಯಾವುದೇ ಆಕ್ಷೇಪವಿಲ್ಲ; ಈ ಒಂದು ಸ್ತುತಿಗೀತೆ ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ಇದು ಒಂದು ಉತ್ತಮ ಹಾಡಾಗಿರುತ್ತದೆ ಮತ್ತು ಜನರ ಹೃದಯಗಳನ್ನು ಗೆಲ್ಲುತ್ತದೆ” ಎಂದು ಬರೆದಿದ್ದಾರೆ. ಇವು ಪ್ರವಾದಿ ಆಡಿದಂತಹ ಮಾತುಗಳಾಗಿದ್ದವು. ವಸಾಹತುಶಾಹಿ ಆಳ್ವಿಕೆಯ ಕರಾಳ ಘಳಿಗೆಗಳಲ್ಲಿ ಬರೆಯಲ್ಪಟ್ಟ ‘ವಂದೇ ಮಾತರಂ’ ಜಾಗೃತಿಯ ಉದಯಗೀತೆಯಾಯಿತು, ಸಾಂಸ್ಕೃತಿಕ ಹೆಮ್ಮೆಯನ್ನು ನಾಗರಿಕ ರಾಷ್ಟ್ರೀಯತೆಯೊಂದಿಗೆ ಬೆಸೆದ ಸ್ತುತಿಗೀತೆಯಾಯಿತು. ಮಾತೃಭೂಮಿಯ ಬಗ್ಗೆ ಅಪಾರ ಭಕ್ತಿಯಿರುವ ವ್ಯಕ್ತಿ ಮಾತ್ರ ಅಂತಹ ಸಾಲುಗಳನ್ನು ಬರೆಯಲು ಸಾಧ್ಯ.
1896 ರಲ್ಲಿ, ರವೀಂದ್ರನಾಥ ಟ್ಯಾಗೋರ್ ಅವರು ‘ವಂದೇ ಮಾತರಂ’ ಗೀತೆಯನ್ನು ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಸುಮಧುರವಾಗಿ ಹಾಡಿದರು, ಈ ಗೀತೆಗೆ ತನ್ನದೇ ಆದ ಧ್ವನಿ ಮತ್ತು ಅಮರತ್ವವನ್ನು ನೀಡಿದರು. ಇದು ಭಾಷೆ ಮತ್ತು ಪ್ರದೇಶಗಳ ಗಡಿಗಳನ್ನು ಮೀರಿ ಭಾರತದಾದ್ಯಂತ ಪ್ರತಿಧ್ವನಿಸಿತು. ತಮಿಳುನಾಡಿನಲ್ಲಿ ಸುಬ್ರಮಣ್ಯ ಭಾರತಿ ಇದನ್ನು ತಮಿಳಿನಲ್ಲಿ ಹಾಡಿದರು ಮತ್ತು ಪಂಜಾಬಿನಲ್ಲಿ ಕ್ರಾಂತಿಕಾರಿಗಳು ಬ್ರಿಟಿಷ್ ಆಳ್ವಿಕೆಯನ್ನು ಧಿಕ್ಕರಿಸಿ ಹಾಡಿದರು.
1905 ರಲ್ಲಿ ಬಂಗಾಳ ವಿಭಜನೆಯ ಸಮಯದಲ್ಲಿ, ಪ್ರಾಂತ್ಯದಾದ್ಯಂತ ದಂಗೆ ಭುಗಿಲೆದ್ದಾಗ, ಬ್ರಿಟಿಷರು “ವಂದೇ ಮಾತರಂ” ಅನ್ನು ಸಾರ್ವಜನಿಕವಾಗಿ ಹಾಡುವುದನ್ನು ನಿಷೇಧಿಸಿದರು. ಆದಾಗ್ಯೂ, ಏಪ್ರಿಲ್ 14, 1906 ರಂದು, ಬಾರಿಸಾಲ್ ನಲ್ಲಿ, ಸಾವಿರಾರು ಜನರು ಈ ಆದೇಶವನ್ನು ಧಿಕ್ಕರಿಸಿದರು. ಪೊಲೀಸರು ಶಾಂತಿಯುತ ಜನಸಮೂಹದ ಮೇಲೆ ದಾಳಿ ಮಾಡಿದಾಗ, ರಕ್ತಸಿಕ್ತ ಪುರುಷರು ಮತ್ತು ಮಹಿಳೆಯರು ಬೀದಿಗಳಲ್ಲಿ ಒಟ್ಟಾಗಿ ನಿಂತು “ವಂದೇ ಮಾತರಂ” ಎಂದು ಕೂಗಿದರು.
ಅಲ್ಲಿಂದ ಈ ಪವಿತ್ರ ಘೋಷಣೆಯು ಗದರ್ ಪಕ್ಷದ ಕ್ರಾಂತಿಕಾರಿಗಳೊಂದಿಗೆ ಕ್ಯಾಲಿಫೋರ್ನಿಯಾವನ್ನು ತಲುಪಿತು. ನೇತಾಜಿಯವರ ಆಜಾದ್ ಹಿಂದ್ ಫೌಜ್ ಪಡೆಗಳು ಸಿಂಗಾಪುರದಲ್ಲಿ ನಡೆಸಿದ ಪರೇಡ್ ನಲ್ಲಿ ಅದು ಪ್ರತಿಧ್ವನಿಸಿತು. 1946 ರ ರಾಯಲ್ ಇಂಡಿಯನ್ ನೇವಿ ದಂಗೆಯ ಸಮಯದಲ್ಲಿ, ಭಾರತೀಯ ನಾವಿಕರು ಬ್ರಿಟಿಷ್ ಯುದ್ಧನೌಕೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದಾಗಲೂ ಇದು ಪ್ರತಿಧ್ವನಿಸಿತು.
ಖುದಿರಾಮ್ ಬೋಸ್ ಅವರಿಂದ ಅಶ್ಫಾಕುಲ್ಲಾ ಖಾನ್ ವರೆಗೆ, ಚಂದ್ರಶೇಖರ್ ಆಜಾದ್ ಅವರಿಂದ ತಿರುಪ್ಪೂರು ಕುಮಾರನ್ ವರೆಗೆ, ಈ ಘೋಷಣೆಯು ಒಂದೇ ರೀತಿಯಲ್ಲಿ ಪ್ರತಿಧ್ವನಿಸಿತು. ಅದು ಇನ್ನು ಮುಂದೆ ಕೇವಲ ಹಾಡಾಗಿ ಉಳಿಯಲಿಲ್ಲ; ಅದು ಭಾರತದ ಆತ್ಮದ ಸಾಮೂಹಿಕ ಧ್ವನಿಯಾಗಿ ಮಾರ್ಪಟ್ಟಿತ್ತು. ‘ವಂದೇ ಮಾತರಂ’ “ಅತ್ಯಂತ ಸುಪ್ತ ರಕ್ತವನ್ನೂ ಕಲಕುವ ಮಾಂತ್ರಿಕ ಶಕ್ತಿಯನ್ನು” ಹೊಂದಿದೆ ಎಂದು ಮಹಾತ್ಮ ಗಾಂಧಿಯವರು ಸ್ವತಃ ಒಪ್ಪಿಕೊಂಡರು. ಅದು ಉದಾರವಾದಿಗಳು ಮತ್ತು ಕ್ರಾಂತಿಕಾರಿಗಳು, ವಿದ್ವಾಂಸರು ಮತ್ತು ಸೈನಿಕರನ್ನು ಒಗ್ಗೂಡಿಸಿತು. ಮಹರ್ಷಿ ಅರಬಿಂದೋ ಅವರು ಘೋಷಿಸಿದಂತೆ, ಅದು “ಭಾರತದ ಪುನರ್ಜನ್ಮದ ಮಂತ್ರ”ವಾಗಿತ್ತು.
ಅಕ್ಟೋಬರ್ 26 ರಂದು ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಂದೇ ಮಾತರಂನ ಅದ್ಭುತ ಪರಂಪರೆಯನ್ನು ರಾಷ್ಟ್ರಕ್ಕೆ ನೆನಪಿಸಿದರು. ಈ ಅಮರ ಗೀತೆಯ 150 ನೇ ವಾರ್ಷಿಕೋತ್ಸವದ ಸ್ಮರಣಾರ್ಥ, ಭಾರತ ಸರ್ಕಾರವು ನವೆಂಬರ್ 7 ರಿಂದ ಒಂದು ವರ್ಷದವರೆಗೆ ರಾಷ್ಟ್ರವ್ಯಾಪಿ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದೆ. ಈ ಆಚರಣೆಗಳ ಮೂಲಕ, ‘ವಂದೇ ಮಾತರಂ’ ನ ಪೂರ್ಣ ಆವೃತ್ತಿಯು ಮತ್ತೊಮ್ಮೆ ದೇಶಾದ್ಯಂತ ಪ್ರತಿಧ್ವನಿಸುತ್ತದೆ ಮತ್ತು ಯುವಜನರು ‘ಸಾಂಸ್ಕೃತಿಕ ರಾಷ್ಟ್ರೀಯತೆಯ’ ಕಲ್ಪನೆಯನ್ನು ಸ್ವೀಕರಿಸಲು ಪ್ರೇರೇಪಿಸುತ್ತದೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯಂದು ನಾವು ಭಾರತ ಪರ್ವವನ್ನು ಆಚರಿಸುವಾಗ ಮತ್ತು ಅವರಿಗೆ ಗೌರವ ಸಲ್ಲಿಸುವಾಗ, ಸರ್ದಾರ್ ಪಟೇಲ್ ಅವರ ಭಾರತದ ಏಕೀಕರಣವು ‘ವಂದೇ ಮಾತರಂ’ ನ ಚೈತನ್ಯದ ಸಾಕಾರವಾಗಿತ್ತು ಎಂಬುದನ್ನು ನಾವು ನೆನಪಿಸಿಕೊಳ್ಳುತ್ತೇವೆ. ಈ ಹಾಡು ಭೂತಕಾಲದ ಸ್ಮರಣೆ ಮಾತ್ರವಲ್ಲದೆ ಭವಿಷ್ಯದ ಕರೆಯೂ ಆಗಿದೆ. ಇಂದಿಗೂ, ವಂದೇ ಮಾತರಂ ಆತ್ಮವಿಶ್ವಾಸದ, ಸ್ವಾವಲಂಬಿಯಾದ ಮತ್ತು ಪುನರುತ್ಥಾನಗೊಂಡ 2047 ರ ವಿಕಸಿತ ಭಾರತದ ನಮ್ಮ ದೃಷ್ಟಿಕೋನವನ್ನು ಪ್ರೇರೇಪಿಸುತ್ತದೆ. ಇದು ನಮ್ಮ ನಾಗರಿಕತೆಯ ಆತ್ಮ ವಿಶ್ವಾಸದ ಗೀತೆಯಾಗಿದೆ ಮತ್ತು ಈಗ ಆ ಚೈತನ್ಯವನ್ನು ಕಾರ್ಯರೂಪಕ್ಕೆ ತರುವುದು ನಮ್ಮ ಜವಾಬ್ದಾರಿಯಾಗಿದೆ.
“ವಂದೇ ಮಾತರಂ” ಸ್ವಾತಂತ್ರ್ಯದ ಹಾಡು, ಅಚಲವಾದ ಸಂಕಲ್ಪದ ಚೈತನ್ಯ ಮತ್ತು ಭಾರತದ ಜಾಗೃತಿಯ ಮೊದಲ ಮಂತ್ರ. ಒಂದು ರಾಷ್ಟ್ರದ ಆತ್ಮದಿಂದ ಹುಟ್ಟಿದ ಪದಗಳು ಅವು ಎಂದಿಗೂ ನಾಶವಾಗುವುದಿಲ್ಲ; ಅವು ಯುಗಯುಗಾಂತರಗಳವರೆಗೂ ಬದುಕುತ್ತವೆ ಮತ್ತು ಪ್ರತಿಧ್ವನಿಸುತ್ತವೆ. ಈ ಪವಿತ್ರ ಮಂತ್ರವು ಶಾಶ್ವತವಾಗಿ ಪ್ರತಿಧ್ವನಿಸುತ್ತದೆ, ನಮ್ಮ ಇತಿಹಾಸ, ನಮ್ಮ ಸಂಸ್ಕೃತಿ, ನಮ್ಮ ಮೌಲ್ಯಗಳು ಮತ್ತು ನಮ್ಮ ಸಂಪ್ರದಾಯಗಳನ್ನು ಭಾರತೀಯತೆಯ ಮಸೂರದ ಮೂಲಕ ನೋಡಲು ನಮಗೆ ನೆನಪಿಸುತ್ತದೆ.
ವಂದೇ ಮಾತರಂ!