ಹಾಲಿಗೆ ಹುಳಿ ಹಿಂಡುವುದು ನಿಲ್ಲಿಸಲಿ!
ಲೇಖಕರು : ಪ್ರವೀಣ್ ಪಟವರ್ಧನ್
(೧೮ ಫೆಬ್ರವರಿ ೨೦೨೧ ‘ಹೊಸ ದಿಗಂತ’ ಪತ್ರಿಕೆಯಲ್ಲಿ ಪ್ರಕಟಿತ)
ಮಹಾನ್ ಸಂಘಟನಕಾರನೊಬ್ಬ ತಾವು ನಿರ್ಮಿಸಹೊರಟಿದ್ದ ವಿದ್ಯಾ ಸಂಸ್ಥೆಗೆ ದೇಣಿಗೆ ಕೇಳಲು ಇಡಿಯ ದೇಶ ತಿರುಗುತ್ತಿದ್ದರು. ಅಭೂತಪೂರ್ವ ಪ್ರತಿಕ್ರಿಯೆ ಅವರಿಗೆ ದೊರೆಯಲು ಆರಂಭಿಸಿತು. ರಾಜನ ದೇಣಿಗೆ ದೊರೆತರೆ ತನ್ನ ಕಾರ್ಯಕ್ಕೆ ಸಿಂಹಬಲ ದೊರೆತಂತೆ ಎಂದು ಅಂದಾಜಿಸಿ ರಾಜನ ಬಳಿ ಹೋದರು. ಆ ರಾಜ ಜಿಪುಣನಷ್ಟೇ ಅಲ್ಲದೆ ಮತಾಂಧನೂ ಆಗಿದ್ದ. ಆತ ಆ ಸಂಘಟನಾಕಾರನಿಗೆ ತನ್ನ ಚಪ್ಪಲಿಯನ್ನು ಎಸೆದು ಇದೆ ತನ್ನ ದೇಣಿಗೆ ಎಂದನು. ಸಂಘಟನಾಕಾರ ಆ ಚಪ್ಪಲಿಯನ್ನು ಮಾರುಕಟ್ಟೆಯಲ್ಲಿ ಹರಾಜಿಗಿಟ್ಟು ಹಣ ಗಳಿಸಿದರಂತೆ. ಇದನ್ನು ತಿಳಿದ ರಾಜ, ತನ್ನ ಚಪ್ಪಲಿ ಜನಸಾಮಾನ್ಯನೊಬ್ಬ ಬಳಸಿದರೆ ತನ್ನ ಘನತೆಗೆ ಧಕ್ಕೆ ಬಂದಂತೆ ಎಂದು ದುಪ್ಪಟ್ಟು ಹಣ ನೀಡಿ ತನ್ನ ಚಪ್ಪಲಿಯನ್ನು ವಾಪಸ್ಸು ಪಡೆದನಂತೆ. ತನ್ನ ಕನಸನ್ನು ನನಸಾಗಿಸುವ, ಅತ್ಯುತ್ತಮ ವಿದ್ಯಾ ಸಂಸ್ಥೆಯ ನಿರ್ಮಾಣಕ್ಕೆ ಬೇಕಿದ್ದು ಜನರ ಆಶೀರ್ವಾದದ ಜೊತೆಗೆ ಅಪಾರ ಮೊತ್ತದ ಹಣ. ಆ ಹಣವನ್ನು ಹೊಂದಿಸಲು ರಾಜನ ಸಹಾಯ ಸಿಗದಿದ್ದಾಗ, ಆ ಸಂಘಟನಕಾರ ಸಿಕ್ಕ ಅವಕಾಶವನ್ನು ಬಳಸಿಕೊಂಡದ್ದು ಹೀಗೆ. ಈ ಕಥೆಯಲ್ಲಿ ಸಂಘಟನಾಕಾರರು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪಿಸಿದ ಮದನ್ ಮೋಹನ್ ಮಾಳವಿಯ ಎಂದೂ ಆ ಜಿಪುಣ ಮತಾಂಧ ರಾಜ ಹೈದರಾಬಾದಿನ ನಿಜಾಮನೆಂದೂ ಹೇಳುವುದುಂಟು. ಈ ಘಟನೆ ನಿಜವೇ ಆಗಿದ್ದರೆ ಮಾಳವೀಯರಿಗೆ ಭಾರತ ರತ್ನ ದೊರೆತಿದೆ ಹಾಗೂ ದೇಶದಿಂದ ತಪ್ಪಿಸಿಕೊಂಡು ಹೊರಟಿದ್ದ ನಿಜಾಮನನ್ನು ಪೊಲೀಸ್ ಆಕ್ಷನ್, ಆಪರೇಷನ್ ಪೋಲೊ ಮೂಲಕ ಹಿಡಿದಿಟ್ಟುಕೊಳ್ಳಬೇಕಾಯಿತು ಎಂಬುದನ್ನು ಸ್ಮರಿಸಲೇ ಬೇಕು.
ಅಯೋಧ್ಯೆಯಲ್ಲಿ ಬಾಬರನು ನಿರ್ಮಿಸಿದ ಮಸೀದಿಯು, ಹೊಡೆದುರುಳಿಸಿದ ಮಂದಿರದ ಮೇಲಿತ್ತೆಂಬ ಸಾಕ್ಷ್ಯಗಳನ್ನು ಪರಿಗಣಿಸಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನಿಂದಾಗಿ, ಅಲ್ಲದೆ ಸರ್ಕಾರಕ್ಕೆ ನೀಡಿದ ನಿರ್ದೇಶನದಿಂದಾಗಿಯೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆರಂಭವಾಗಿ ಇನ್ನೇನು ಕೆಲ ವರ್ಷಗಳಲ್ಲಿ ಭವ್ಯ ರಾಮ ಮಂದಿರವನ್ನು ನೋಡಲು ಸಾಧ್ಯವೆನಿಸುತ್ತದೆ. ಈ ಮಂದಿರ ಸರ್ಕಾರದಿಂದ ಹಣ ದೊರೆತು ನಿರ್ಮಿಸಬೇಕೋ, ಜನರೆಲ್ಲರೂ ಸೇರಿ ನಿರ್ಮಿಸಬೇಕೋ ಎಂಬ ಪ್ರಶ್ನೆಯೇ ಅಪ್ರಸ್ತುತ. ಅನಾದಿಕಾಲದಿಂದಲೂ ಹಳ್ಳಿಗಳಲ್ಲಿ ತಮಗೆ ಬೇಕಿದ್ದ ಶಾಲೆ, ದೇವಸ್ಥಾನಗಳು, ನಿರ್ಮಾಣವಾಗಿರುವುದು ಸ್ಥಳೀಯರ ಸಮಯ, ಹಣದ ದೇಣಿಗೆ, ಪರಿಶ್ರಮದಿಂದ. ಇನ್ನು ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವುದು ಭಾರತದ ಅಸ್ಮಿತೆ ಪ್ರಭು ಶ್ರೀರಾಮನ ಮಂದಿರ. ಹಾಗಾಗಿ ಇಡಿಯ ದೇಶವೇ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಸರ್ಕಾರದಿಂದ ರಚಿತವಾದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಮೂಲಕ ಭಾರತದ ಎಲ್ಲಾ ರಾಜ್ಯಗಳಲ್ಲಿ ಕೋಟ್ಯಂತರ ಜನರನ್ನು ಸಂಪರ್ಕಿಸಿ ಹಣ ಸಂಗ್ರಹ ಮಾಡುತ್ತಿದೆ. ಈ ಕಾರ್ಯದಲ್ಲಿ ವಿಹಿಂಪ ಕೂಡ ಕೈಜೋಡಿಸಿದೆ. ಹಾಗೆಂದು ವಿಹಿಂಪ ಆಗಲಿ ಟ್ರಸ್ಟ್ ಜೊತೆ ಸಂಗ್ರಹಣೆಗೆ ಸೇರಿರುವ ಸಂಸ್ಥೆಗಳಾಗಲಿ ಯಾರಿಗೂ ಇಷ್ಟೇ ಹಣ ನೀಡಬೇಕು ಎಂದು ತಾಕೀತು ಮಾಡುತ್ತಿಲ್ಲ. ೧೦, ೧೦೦, ೧೦೦೦ ರುಪಾಯಿಯ ವೋಚರ್ ಇರುವುದಾಗಿ ಹಿಂದೆಯೂ ಹೇಳಲಾಗಿತ್ತು. ಅಂತೆಯೇ ಹಣ ಸಂಗ್ರಹವೂ ನಡೆದಿದೆ. ಇನ್ನು ಹೆಚ್ಚು ಹಣ ನೀಡಬಯಸುವವರಿಗೂ ಅವಕಾಶ ಕಲ್ಪಿಸಲಾಗಿದೆ. ಶ್ರೇಷ್ಠ ಕಾರ್ಯಕ್ಕಾಗಿ ನೀಡುತ್ತಿರುವ ದೇಣಿಗೆಗೆ ಭಕ್ತಿ, ಶ್ರದ್ಧೆಗಳು ಮುಖ್ಯವಾಗಿವೆ.
ಇತ್ತೀಚಿಗೆ ಸಚಿವರಾದ ಸುಧಾಕರ್ ಒಂದು ಟ್ವಿಟ್ ಮಾಡಿದ್ದರು. ನಿರ್ಗತಿಕನೊಬ್ಬ ತನ್ನ ಹರಕು ಚೀಲದಲ್ಲಿ ಭದ್ರವಾಗಿ ಇರಿಸಿದ್ದ ಹಣವನ್ನು ತೆಗೆದು ಶ್ರೀರಾಮ ನಿಧಿ ಸಮರ್ಪಣಾ ಕಾರ್ಯಕರ್ತನೊಬ್ಬನಿಗೆ ಕೊಡುವ ದೃಶ್ಯವು ಮನಕಲಕುವಂಥದ್ದು. ತನಗೇನೂ ಇಲ್ಲದಿದ್ದರೂ ಮಂದಿರದ ಕನಸು ಆ ನಿರ್ಗತಿಕನಲ್ಲಿತ್ತು ಎಂಬುದು ಸ್ಪಷ್ಟ. ಅಲ್ಲದೆ ಶಾಲಾ ಮಕ್ಕಳು ತಮಗೆ ಸಿಗುವ ಪಾಕೆಟ್ ಮನಿಯನ್ನು, ವರ್ಷಗಳಿಂದ ಕೂಡಿಟ್ಟಿದ್ದ ಗೋಲಕವನ್ನು ಒಡೆದು ಶ್ರೀರಾಮ ಮಂದಿರದ ನಿರ್ಮಾಣಕ್ಕೆ ದೇಣಿಗೆ ನೀಡಿರುವ ಕಥೆಗಳನ್ನು ಈಗಾಗಲೇ ಸಾಕಷ್ಟು ಕೇಳಿದ್ದೇವೆ. ತಾವು ಒಂದು ವರ್ಷ ಆಟಿಕೆ ಕೇಳುವುದಿಲ್ಲ. ಅದಕ್ಕೆ ಬೇಕಿದ್ದ ಹಣವನ್ನು ಮಂದಿರ ನಿರ್ಮಾಣಕ್ಕೆ ಅರ್ಪಿಸಿದ ಮಕ್ಕಳ ಕಥೆ ಕೇಳಿದ್ದೇವೆ. ಚಿಕ್ಕ ಮಕ್ಕಳಾಗಿದ್ದರೂ ಸಹ ತಮಗೆ ವಿಹಿಂಪ ಪರಿಚಯವಿಲ್ಲದಿದ್ದರೂ ಈ ದೇಶದ ಕೆಲಸಕ್ಕಾಗಿ ಸಮಯ ನೀಡುತ್ತೇವೆಂದು ಹೊರಟಿರುವ ಉದಾಹರಣೆಗಳು ಅಸಂಖ್ಯ. ನಡೆಸುತ್ತಿದ್ದ ಭಜನೆಯಿಂದ ಬಂದ ಹಣ, ತಮ್ಮ ಒಂದು ತಿಂಗಳ ಸಂಬಳ, ತಮಗೆ ಸಂದ ಆದಾಯದ ಒಂದು ಭಾಗ, ನಿವೃತ್ತಿಯ ಬಳಿಕದ ಅಷ್ಟೂ ಹಣ ಹೀಗೆ ಎಲ್ಲರೂ ಭಾಗವಹಿಸುತ್ತಿರುವುದು, ನಮ್ಮ ಮನೆಗೆ ಇನ್ನೂ ಯಾರೂ ಬಂದಿಲ್ಲವೆಂದು ಕಾರ್ಯಕರ್ತರನ್ನು ಸಂಪರ್ಕಿಸಿ ಕರೆಸಿಕೊಳ್ಳುತ್ತಿರುವುದು, ಕೆಲ ಕಡೆಗಳಲ್ಲಿ ಕಾರ್ಯಕರ್ತರು ಮನೆಗಳಿಗೆ ಧನ ಸಂಗ್ರಹಕ್ಕೆ ಹೋದಾಗ, ಮಾಧ್ಯಮಗಳಲ್ಲಿ ನೀವು ಬರುವ ವಿಷಯ ತಿಳಿದಿತ್ತು. ಆದರೆ ಏಕಿಷ್ಟು ತಡ ಮಾಡಿದಿರಿ ಎಂದು “ವಿಚಾರಿಸಿ”ಕೊಳ್ಳುವಷ್ಟು ಉತ್ಸಾಹ ಜನರು ತೋರಿದ್ದಾರೆ.
ಹಿಂದೊಮ್ಮೆ ಕನ್ಯಾಕುಮಾರಿಯಲ್ಲಿ ಸ್ವಾಮೀ ವಿವೇಕಾನಂದ ಸ್ಮಾರಕದ ನಿರ್ಮಾಣ ಸಮಯದಲ್ಲಿಯೂ ಇಂತಹ ಹಣ ಸಂಗ್ರಹಣೆ ನಡೆದಿತ್ತು ಅದರಲ್ಲಿ ತಾವು ಭಾಗವಹಿಸಿದ್ದ ಬಗ್ಗೆ ನೆನೆಪಿಸಿಕೊಳ್ಳುವ ಅಜ್ಜ-ಅಜ್ಜಿಯರು, ಇಂದಿನ ತಮ್ಮ ಮೊಮ್ಮಕ್ಕಳಿಗೆ, ಮರಿ ಮಕ್ಕಳಿಗೆ ಶ್ರೀ ರಾಮ ಮಂದಿರಕ್ಕೆ ಧನ ಸಹಾಯ ಮಾಡಬೇಕು ಎಂದು ಪ್ರೇರೇಪಿಸುವುದು, ಮುಂದೊಂದು ದಿನ ಈ ಮರಿಮಕ್ಕಳು ತಮ್ಮ ಮೊಮ್ಮಕ್ಕಳಿಗೆ ಈ ಕಥೆಯನ್ನು ಮುಂದುವರೆಸುವುದು ಹಾಗೂ ದೇಶದ ಕಾರ್ಯದಲ್ಲಿ ಭಾಗವಹಿಸುವ ಆಸಕ್ತಿ ತೋರುವುದು ಎಷ್ಟು ಸ್ಪಷ್ಟವಾಗಿ ಕಾಣುತ್ತದಲ್ಲವೇ? ತನ್ನ ಜೀವಿತಾವಧಿಯಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರ ನೋಡಬೇಕೆಂದೂ ಅದಕ್ಕಾಗಿ ತನ್ನ ಕೈಲಾದ ಸಹಾಯ ಮಾಡುತ್ತೇನೆಂದೂ ಮುಂದೆ ಬರುತ್ತಿರುವ ಜನರು ಒಂದು ಕಡೆಯಾದರೆ, ಅಭಿಯಾನ ಮುಗಿಯುವ ಹಂತದಲ್ಲಿ ಕೊಂಕಿನ ಮಾತುಗಳು ಬಂದದ್ದು ಮತ್ತೊಂದು ಕಡೆ.
ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿಯವರು ಈ ಅಭಿಯಾನದ ಹೆಸರಿನಲ್ಲಿ ಮನೆಗಳನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. “ರಾಮಮಂದಿರಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿರುವುದು ತಿಳಿಯಿತು. ಯಾತಕ್ಕೆ ಹೀಗೆ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ. ಹಿಟ್ಲರ್ ಕಾಲದಲ್ಲಿ ನಾಜಿ-ಯಹೂದಿಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಎಲ್ಲಿ ತಲುಪುತ್ತದೆ ಗೊತ್ತಿಲ್ಲ” ಎಂದು ಟ್ವಿಟ್ ಮಾಡಿದ್ದಾರೆ. ಇಂತಹ ಬೇಜವಾಬ್ದಾರಿ ಹೇಳಿಕೆ, ಸಾಕ್ಷ್ಯಗಳಿಲ್ಲದೆ ಮಾತನಾಡುವುದು ರಾಜಕೀಯವಾಗಿ ಕುಮಾರಸ್ವಾಮಿಯವರಿಗೆ ಸರಿಹೊಂದಬಹುದು. ಆದರೆ ಅವರೊಬ್ಬ ಮಾಜಿ ಮುಖ್ಯಮಂತ್ರಿಯಾಗಿದ್ದರು ಎಂಬುದನ್ನು ಸ್ಮೃತಿಯಿಂದ ಕಿತ್ತೆಸೆದು ಮಾತನಾಡಿದರೆ ಎಂಬ ಪ್ರಶ್ನೆ ಕಾಡಲಾರಂಭಿಸುತ್ತದೆ. ರಾಜ್ಯದಲ್ಲಿ ಆರೆಸ್ಸೆಸ್ ಬಗ್ಗೆ ತಿಳಿಯದವರೂ ಸಂಘದ ಜೊತೆ ಕೆಲಸ ಮಾಡಬೇಕು ಎಂಬ ಉತ್ಸುಕತೆ ತೋರುತ್ತಿದ್ದಾರೆ, ಸ್ವ ಇಚ್ಛೆಯಿಂದ ಹಣವನ್ನು ಮಂದಿರ ನಿರ್ಮಾಣಕ್ಕೆ ನೀಡುತ್ತಿದ್ದಾರೆ. ಅಲ್ಲಿರುವ ನಂಬಿಕೆ, ಶ್ರದ್ಧೆಗಳ ಮುಂದೆ ಮಾಜಿ ಮುಖ್ಯಮಂತ್ರಿಗಳು ಕುಬ್ಜರಾಗಿ ಕಾಣುತ್ತಿದ್ದಾರೆ. ಶ್ರೀ ರಾಮನ ಹೆಸರಿನಲ್ಲಿ, ಮನೆಗಳನ್ನು ಗುರುತಿಸುತ್ತಾರೆಂದು ನಾಜಿಗಳನ್ನು ಎಳೆತಂದದ್ದು ಅಕ್ಷಮ್ಯ . ಈ ದೇಶದ ವ್ಯವಸ್ಥೆಯ ಬಗ್ಗೆ ನಂಬಿಕೆಯಿಲ್ಲದವರಷ್ಟೇ ಹೀಗೆ ಮಾತನಾಡಲು ಸಾಧ್ಯ. ವಿಪರ್ಯಾಸವೆಂದರೆ ಈ ಮಾತುಗಳು ಅದೇ ವ್ಯವಸ್ಥೆಯ ಭಾಗವಾಗಿ ರಾಜ್ಯದ ಅತ್ಯುನ್ನತ ಸ್ಥಾನದಲ್ಲಿದ್ದವರೊಬ್ಬ ಮಾತನಾಡಿರುವುದು. ಬಂಗಾಳದ ತೃಣಮೂಲ ಕಾಂಗ್ರೆಸ್ ನಡೆಸುವ ರಾಜಕೀಯ ಹಿಂಸಾಚಾರ ತಿಳಿದೂ ಸಹ ಆಕೆಯ ಜೊತೆ ಕೈಜೋಡಿಸಲು ಮುಂದಾದ ಕುಮಾರಸ್ವಾಮಿ, ತಮ್ಮ ಅಧಿಕಾರಾವಧಿಯಲ್ಲಿ ಪತ್ರಕರ್ತರ ಮೇಲೆ ಸುಳ್ಳು ಕೇಸುಗಳನ್ನು ಹೇರುವ ಕೆಲಸ ಮಾಡಿದ್ದು ನಾಜಿಗಳು ನಡೆದುಕೊಂಡ ರೀತಿಯದ್ದೇ ಎಂದು ಸಾಮಾನ್ಯರೂ ವಿಶ್ಲೇಷಿಸಿದ್ದಾರೆ.
ಇನ್ನು ಸಿದ್ದರಾಮಯ್ಯನವರು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮಂದಿರ ಒಂದು ವಿವಾದಿತ ಪ್ರದೇಶವೆನ್ನುವಷ್ಟು ಕೆಳ ಮಟ್ಟಕ್ಕೆ ಈ ವಕೀಲರೂ, ಮಾಜಿ ಮುಖ್ಯಮಂತ್ರಿಗಳೂ ಆಗಿರುವವರು ಇಳಿಯುತ್ತಾರೆಂದರೆ ಎಂಥಹ ವಿಪರ್ಯಾಸ. ಸರ್ವೋಚ್ಚ ನ್ಯಾಯಾಲಯದ ತೀರ್ಪು ತಮ್ಮ ಪರವಾಗಿದ್ದರೆ ಮಾತ್ರ ಒಪ್ಪುವುದು ಎನ್ನುವ ದೋರಣೆಯಿಂದ ಸಿದ್ದರಾಮಯ್ಯ ಹೊರಬರುವುದನ್ನು ಅಪೇಕ್ಷೆ ಪಡುವಂತೆಯೇ ಇಲ್ಲ. ಸಿದ್ದರಾಮಯ್ಯನವರ ದೃಷ್ಟಿ ನೇರಾನೇರ ರಾಜಕೀಯ ಲಾಭ ಎಂಬುದು ಈಗಾಗಲೇ ರಾಜ್ಯದ ಜನರು ನೋಡಿದ್ದಾರೆ. ಇವರ ಅಧಿಕಾರಾವಧಿಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಕೊಲೆಯ ಕಲೆಗಳು, ಆಗ ಮುಖ್ಯಮಂತ್ರಿಯಾಗಿದ್ದು ನಡೆದುಕೊಂಡ ರೀತಿಯನ್ನು ಜನರು ಮರೆಯುವುದಿಲ್ಲ. ಟಿಪ್ಪು ಜಯಂತಿಯನ್ನು ಆಚರಿಸಲೇಬೇಕೆಂಬ ಹಠಕ್ಕೆ ಇಳಿದು ರಾಜ್ಯ ಹಿಂಸಾಚಾರ ನೋಡಬೇಕಾದ್ದು ಇವರ ಅಧಿಕಾರಾವಧಿಯಲ್ಲೇ. ನಮ್ಮ ರಾಜ್ಯದಲ್ಲಿ ನೆರೆ, ಬರ ಬಂದರೆ ಮಾತ್ರ ಸಹಾಯ ಮಾಡುತ್ತೇನೆ, ಹೊರರಾಜ್ಯಕ್ಕೆ ನನಗೂ ಸಂಬಂಧವಿಲ್ಲ ಎಂಬ ಧೋರಣೆ ಮಾಜಿ ಮುಖ್ಯಮಂತ್ರಿಗಳಿಗೆ ಸರಿಹೊಂದುವುದೇ?
ಇವರಿಬ್ಬರೂ ಆಡಿರುವ ಮಾತುಗಳು ಸಮಾಜವನ್ನು ಒಡೆಯುವ ಕೆಲಸದ್ದಾಗಿದೆ. ಮನೆಗಳನ್ನು ಗುರುತಿಸುವ ಹಾಗೂ ವಿವಾದಿತ ಪ್ರದೇಶ ಎಂದು ಹೇಳಿರುವುದು ಮುಸ್ಲಿಮರು, ಕ್ರಿಶ್ಚಿಯನ್ನರು, ಹಿಂದೂಗಳು ಎಂಬ ಭೇದವನ್ನು ಇನ್ನಷ್ಟು ತೀವ್ರಗೊಳಿಸಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದು ಇವರಿಬ್ಬರ ಉದ್ದೇಶ ಎಂಬುದು ಯಾರಿಗಾದರೂ ಸಹಜವಾಗಿಯೇ ತಿಳಿಯುತ್ತದೆ. ಆದರೆ ಇವರಿಬ್ಬರಿಗೂ ನಿಲುಕದ ಸತ್ಯವೆಂದರೆ ಯಾವುದೇ ಭಯವಿಲ್ಲದೇ, ಶ್ರೀರಾಮ ಮಂದಿರಕ್ಕೆ ಮುಸಲ್ಮಾನರೂ, ಕ್ರಿಶ್ಚಿಯನ್ನರು ತಮ್ಮ ದೇಣಿಗೆ ನೀಡಿದ್ದಾರೆಂಬುದು. ನಮ್ಮ ದೇಶದಲ್ಲಿ ಯಾವುದೋ ದೊಡ್ಡ ಕೆಲಸ ನಡೆಯುತ್ತಿರುವಾಗ ಅದರಿಂದ ದೂರ ಉಳಿಯುವುದಾದರೂ ಹೇಗೆ ಎಂಬ ಭಾವನೆ, ಶ್ರೀ ರಾಮ ಕೇವಲ ಹಿಂದೂಗಳ ದೇವರಲ್ಲ ಆತನು ಬದುಕಿದ ರೀತಿಯಲ್ಲಿ ನಾನೂ ಬದುಕಬೇಕು, ಆತನೇ ನಮ್ಮೆಲ್ಲರ ಆದರ್ಶವಾಗಬೇಕು ಎಂದು ಯೋಚಿಸುವ ಮುಸಲ್ಮಾನ, ಕ್ರಿಶ್ಚಿಯನ್ನರು ನಮ್ಮ ಮಧ್ಯದಲ್ಲಿರುವುದೇ ಈ ಮಾಜಿಗಳಿಗೆ ನುಂಗಲಾರದ ತುತ್ತಾಗಿರುವುದು. ಅಸಲಿಗೆ ಮುಸಲ್ಮಾನ, ಕ್ರಿಶ್ಚಿಯನ್ನರು ದೇಣಿಗೆ ನೀಡಿದರು ಎಂದು ಪ್ರತ್ಯೇಕಿಸಿ ಹೇಳುವುದಕ್ಕೆ ಸಂಕಟವಾಗುವ ಈ ರಾಷ್ಟ್ರಕಾರ್ಯದ ಸಂದರ್ಭದಲ್ಲಿ ಮಾಜಿ ಮುಖ್ಯ ಮಂತ್ರಿಗಳು ಆಡಿರುವ ಮಾತುಗಳಿಗೆ ಉತ್ತರವಾಗಿ ಪ್ರತ್ಯೇಕಿಸಬೇಕಾಯಿತು. ಅಲ್ಲದೆ ಸಿದ್ದರಾಮಯ್ಯನವರ ಮಾತು ಕನ್ನಡ ಹೋರಾಟಗಾರರಿಗೂ, ಪ್ರತ್ಯೇಕತೆಯನ್ನು ಭಜಿಸುವವರಿಗೂ ಒಂದು ಸ್ಫೂರ್ತಿ. ಆದರೆ ದೇಶದ ವಿಷಯ ಬಂದಾಗ ಸ್ಥಾನೀಯ, ವಿಷಯಗಳನ್ನು ಉಲ್ಲೇಖಿಸಬಾರದು ಎಂದು ಯೋಚಿಸದವರು ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು ಎಂಬುದನ್ನು ನೆನಪಿಸಿಕೊಳ್ಳೋಣ.
ಶ್ರೀ ರಾಮ ಮಂದಿರ ನಿರ್ಮಾಣದಿಂದ ಯಾವ ಪಕ್ಷಕ್ಕೆ ಲಾಭವಾಗುತ್ತೆ ಎಂದು ಲೆಕ್ಕಿಸದೆ ಪಕ್ಷಾತೀತವಾಗಿ ದೇಣಿಗೆ ನೀಡುತ್ತಿರುವ ದಾನಿಗಳು ಒಂದೆಡೆಯಾದರೆ, ಈ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ನಡೆದುಕೊಂಡ ರೀತಿ ಆತಂಕ ಹುಟ್ಟಿಸುವಂಥದ್ದು. ತಮಗೆ ರಾಜಕೀಯವೇ ಮುಖ್ಯ, ದೇಶದ ಜನರ ಜೊತೆ ಸ್ಪಂದಿಸಿಯೂ ರಾಜಕೀಯದಲ್ಲಿ ಸಾಧಿಸುತ್ತೇನೆಂಬ ಭಾವ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರಿಗೆ ಇಲ್ಲದೇ ಹೋದದ್ದು ವಿಪರ್ಯಾಸ. ಹಾಗೆಂದು ಇವರಿಬ್ಬರೂ ಹಣ ನೀಡಲಿಲ್ಲವೆಂದು ರಾಮ ಮಂದಿರದ ನಿರ್ಮಾಣ ಸ್ಥಗಿತಗೊಳ್ಳುವುದಿಲ್ಲ. ಆಡಿದ ಕೊಳಕು ಮಾತುಗಳು ಹೆಚ್ಚು ದಿನ ಉಳಿಯಲಿಕ್ಕಿಲ್ಲ. ಆದರೆ ಮುಂದೊಂದು ದಿನ ಮಂದಿರ ನಿರ್ಮಾಣವಾದಾಗ, ನಾನಿದಕ್ಕೆ ಹಣ ನೀಡಲಿಲ್ಲ ಎಂಬ ಶೂನ್ಯ ಭಾವ ಇವರಿಬ್ಬರನ್ನೂ ಕಾಡದೇ ಇರುವುದಿಲ್ಲ. ಮಂದಿರ ನಿರ್ಮಾಣವಾದ ಬಳಿಕ, ಅಪಾರ ದೈವ ಭಕ್ತಿ ಹೊಂದಿರುವ ಕುಮಾರಸ್ವಾಮಿಯವರು ಅಯೋಧ್ಯೆಗೇ ತೆರಳಿ ನಿರ್ಮಾಣದ ಹಂತದಲ್ಲಿ ಹಣ ನೀಡಲಾಗಲಿಲ್ಲ ಎಂದು ಲೇಖನದ ಪ್ರಾರಂಭದಲ್ಲಿ ಉಲ್ಲೇಖಿಸಿದ ರಾಜನಂತೆ ದುಪ್ಪಟ್ಟು ತಪ್ಪು ಕಾಣಿಕೆ ಹಾಕಿಯಾರು. ಸಿದ್ದರಾಮಯ್ಯನವರು ತಾವೊಬ್ಬ ದೇವರನ್ನು ನಂಬದವ ಎಂಬ ಸೋಗಿನಲ್ಲಿಯೇ, ಮುಂದೊಂದು ದಿನ ಅಯೋಧ್ಯೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ತೆರಳಿದಾಗ ತಮ್ಮ ಪ್ರಚಾರವನ್ನು ರಾಮ ಮಂದಿರದಿಂದಲೇ ಆರಂಭಿಸಿ ತಮ್ಮ ದೇಣಿಗೆಯನ್ನು ಕೊಟ್ಟಾರು. ಒಟ್ಟಿನಲ್ಲಿ ಇಬ್ಬರೂ ಈ ಮಹತ್ಕಾರ್ಯದಲ್ಲಿ ಮುಂದೊಂದು ದಿನ ತೊಡಗಿಕೊಳ್ಳುವವರೇ. ಆದರೆ ಎಷ್ಟು ಸಾಧ್ಯವೋ ಅಷ್ಟು ಸಮಾಜದಲ್ಲಿನ ಹಾಲಿಗೆ ಹುಲಿ ಹಿಂಡುವ ಕೆಲಸ ಎಂಥಹ ನಾಯಕರುಗಳಿಂದ ನಡೆಯುತ್ತಿರುತ್ತದೆ. ನಾವೆಲ್ಲರೂ ನೋಡಿ ನಗಬೇಕಷ್ಟೆ.
– ಪ್ರವೀಣ್ ಪಟವರ್ಧನ್