
-ಸುಲಕ್ಷಣಾ ಶರ್ಮಾ, ಪತ್ರಿಕೋದ್ಯಮ ವಿದ್ಯಾರ್ಥಿ, ಪುತ್ತೂರು
ಜಗತ್ತಿನ ಇನ್ನಾವುದೇ ರಾಷ್ಟ್ರ ಎದುರಿಸದಷ್ಟು ಪರಕೀಯರ ದಾಳಿಗೆ ತುತ್ತಾಗಿದ್ದರೂ ಸಹ ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದು ನಮ್ಮ ದೇಶವು ತನ್ನ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದೆ. "ಭಾರತಮಾತೆಗೆ ಕನಿಷ್ಠ ಪಕ್ಷ ಒಂದು ಸಾವಿರ ಯುವಕರ ಬಲಿಯಾದರೂ ಬೇಕು, ಯುವಕರೇ , ನನ್ನ ಭರವಸೆಯೆಲ್ಲಾ ನಿಮ್ಮ ಮೇಲಿದೆ. ನಿಮ್ಮ ದೇಶದ ಕರೆಗೆ ಕಿವಿಗೊಡುವಿರೇನು?" ಸ್ವಾಮಿ ವಿವೇಕಾನಂದರು ತಮ್ಮ ಮಾತುಗಳ ಮೂಲಕ ಯುವಜನತೆಯನ್ನು ಜಾಗೃತಗೊಳಿಸಿದ್ದು ಸ್ಮರಣಾರ್ಹ. ಮೇರೆಯ ಆಚೆಗಿರುವ ಶತ್ರುಗಳಿಂದ ಸಾವಿರಾರು ವರ್ಷಗಳ ದಾಸ್ಯವನ್ನು ಅನುಭವಿಸಿ , ಬಡಕಲಾದ ತಾಯಿ ಭಾರತಿಯನ್ನು ದಾಸ್ಯ ಶೃಂಖಲೆಯಿಂದ ಮುಕ್ತಿಗೊಳಿಸಲು ಅನೇಕ ಸ್ವಾತಂತ್ರ್ಯ ಸಮರ ಸೇನಾನಿಗಳು ಜನರ ವೈವಿಧ್ಯತೆಯನ್ನು ಅರ್ಥ ಮಾಡಿಕೊಂಡು ಅವರಲ್ಲಿ ಏಕತಾನತೆಯನ್ನು ತರಲು ಮಾಡಿದ ಪ್ರಯತ್ನವು ಧನಾತ್ಮಕವಾಗಿ ಪರಿಣಮಿಸಿತು. ಭಾರತೀಯ ಸಮಾಜದಲ್ಲಿ ನೆಲೆ ನಿಂತಿದ್ದ ಹಲವು ಅನಾಚಾರಗಳನ್ನು ಪ್ರಶ್ನಿಸಿ , ಜನರ ಮನದಲ್ಲಿ ಭ್ರಾತೃತ್ವದ ಮಹತ್ವವೇನೆಂದು ಅರಿವು ಮೂಡಿಸುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಸಮಾಜ ಸುಧಾರಕರಿಗೆ ದೊಡ್ಡ ಸವಾಲಾಗಿತ್ತು. ಹಾಗಿದ್ದರೂ ಹೋರಾಟಗಾರರು ನಮ್ಮ ದೇಶದ ವೀರರನ್ನು ವಿವೇಕದಿಂದ ವರ್ತಿಸುವಂತೆ ಮತ್ತು ಬಡಿದೆಬ್ಬಿಸುವ ಕೆಲಸವನ್ನು ಮಾಡಿದರು. 'ಏಳಿ, ಎದ್ದೇಳಿ . ಗುರಿ ಮುಟ್ಟುವ ತನಕ ವಿರಮಿಸದಿರಿ' ಎಂಬ ವಿವೇಕವಾಣಿಯು ಯುವಶಕ್ತಿಯನ್ನು ದೇಶಸೇವೆ ಮಾಡಲು ಪ್ರೇರೇಪಿಸಿತು. 'ದೇಶಕ್ಕಾಗಿ ಆತ್ಮ ಬಲಿದಾನದ ವ್ರತವನ್ನು ನಾವು ಸ್ವೀಕರಿಸಿದ್ದೇವೆ' ಎಂಬ ವೀರ ಸಾವರ್ಕರರ ಮಾತು ಪೆನ್ನು -ಗನ್ನುಗಳಲ್ಲೂ ದೇಶಭಕ್ತಿ ಮೂಡುವಂತೆ ಮಾಡಿತು ಮತ್ತು ಅನೇಕ ಕ್ರಾಂತಿಕಾರಿಗಳನ್ನು ಹುಟ್ಟು ಹಾಕಿತು.
‘ಭಾರತ ರಾಷ್ಟ್ರದ ಕಲ್ಪನೆಯಲ್ಲಿ ಜಾತಿಮತಭೇದ ಉಚಿತವಲ್ಲ ಮತ್ತು ಭಾರತೀಯರು ಪೂಜಿಸಬೇಕಾದುದು ಮಾತೃಭೂಮಿಯನ್ನು, ಪಾಲಿಸಬೇಕಾದುದು ಭಾರತೀಯ ಸಂಸ್ಕೃತಿಯನ್ನು’ ಎಂದು ಜನರಿಗೆ ತಿಳಿ ಹೇಳಿದ ಅಪ್ರತಿಮ ದೇಶಭಕ್ತರಲ್ಲಿ ವೀರ ಸಾವರ್ಕರರು ಅಗ್ರ ಗಣ್ಯರಾಗಿ ನಿಲ್ಲುತ್ತಾರೆ. ತಾಯಿ ಭಾರತಿಯ ಕುರಿತಾಗಿ ಅದೆಷ್ಟು ಬರೆದರೂ ಸವೆಯದ ಅವರ ಲೇಖನಿ, ಅದೆಷ್ಟು ಹೊಗಳಿದರೂ ಸುಸ್ತು ಕಾಣದ ಮುಖ, ಆರದ ದೇಶಭಕ್ತಿಯ ಜ್ಯೋತಿ ನವಭಾರತದ ಯುವಶಕ್ತಿಗೆ ದೇಶಸೇವೆಗೈಯಲು ಪ್ರೇರಣಾದಾಯಕವಾಗಿದೆ.
ಸಾವರ್ಕರರು ನಡೆದು ಬಂದ ಹಾದಿ..
ತನ್ನ ಯೌವನದ ಕಾಲದಲ್ಲಿ ರಾಷ್ಟ್ರೋತ್ಥಾನಕ್ಕೆ ಶ್ರಮಿಸಿದ ವಿನಾಯಕ ದಾಮೋದರ ಸಾವರ್ಕರರು ದೇಶ ಕಂಡ ಅಪ್ರತಿಮ ದೇಶಭಕ್ತರಲ್ಲಿ ಒಬ್ಬರು. ಬಾಲ್ಯದಲ್ಲಿ ಶಿವಾಜಿ ಮಹಾರಾಜರ ಕಥೆಗಳನ್ನು ಕೇಳಿ ಬೆಳೆದ ವೀರ ಸಾವರ್ಕರರಿಗೆ ಸ್ವರಾಜ್ಯ ಮತ್ತು ಸ್ವಧರ್ಮದ ಬಗ್ಗೆ ಆಸಕ್ತಿ ತಾನಾಗಿಯೇ ಬಂದಿತ್ತು. ಒಂದು ದೇಶದ ಪ್ರಗತಿಯಲ್ಲಿ ಯುವಶಕ್ತಿಯ ಪಾತ್ರ ಏನೆಂದು ಜನರಿಗೆ ತಿಳಿ ಹೇಳಿದ ವೀರ ಸಾವರ್ಕರರು ಬರಿಯೇ ಸ್ವಾತಂತ್ರ್ಯ ಸಮರ ಸೇನಾನಿ ಮಾತ್ರವಲ್ಲದೆ ರಾಷ್ಟ್ರೀಯ ಏಕತೆಗೆ ಶ್ರಮಿಸಿದ ಸಮಾಜ ಸುಧಾರಕರೂ ಆಗಿದ್ದರು. ಯುವಜನರಲ್ಲಿ ದೇಶಭಕ್ತಿ ಮೂಡಿದರೆ ಪರಕೀಯರು ಹೇಗೆ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂಬುದನ್ನು ಯುವ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಆಜಾದ್, ರಾಜ್ ಗುರು ಮುಂತಾದ ಯುವ ಕ್ರಾಂತಿಕಾರಿಗಳ ಮೂಲಕ ಸಾವರ್ಕರರು ಸಂದೇಶವನ್ನು ಕೊಡುತ್ತಾರೆ. ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳಿರುವ, ಜಾತಿ- ಮತಗಳ ಆಧಾರದಲ್ಲಿ ಭೇದ ಭಾವ ಇರದ, ಅಲ್ಪ ಸಂಖ್ಯಾತರ ಸಂಸ್ಕೃತಿಗೆ ಪೂರಕವಾಗಿರುವ ಮತ್ತು ಬಹು ಸಂಖ್ಯಾತರಿಗೆ ಶಾಸನ ಬದ್ಧ ಅಧಿಕಾರಕ್ಕೆ ಅವಕಾಶ ಇರುವ ಅಖಂಡ ಭಾರತದ ಕಲ್ಪನೆಯು ಸಾವರ್ಕರರ ಮನಸ್ಸಿನಲ್ಲಿತ್ತು. ಸಿಂಧೂ ಉಗಮಸ್ಥಾನದಿಂದ ದಕ್ಷಿಣ ಸಾಗರದವರೆಗಿನ ಭಾರತ ಭೂಮಿಯನ್ನು ಪುಣ್ಯ ಭೂಮಿ ಎಂದು ಕಾಣುವವನೇ ಹಿಂದೂ ಎಂದು ಬಲವಾಗಿ ನಂಬಿದ್ದ ಸಾವರ್ಕರರು ಜಾತಿ ಪದ್ಧತಿಯನ್ನು ವಿರೋಧಿಸುತ್ತಿದ್ದರು.
ಒಂದು ರಾಷ್ಟ್ರದ ಮುನ್ನಡೆಯಲ್ಲಿ ಅದರ ಇತಿಹಾಸದ ಸರಿಯಾದ ಗ್ರಹಿಕೆಯ ಅಗತ್ಯ ಇದೆ ಎಂದು ತಿಳಿದು ಸಾವರ್ಕರರು ಬರೆದ ‘೧೮೫೭ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ’ ಎಂಬ ಪುಸ್ತಕ ಪ್ರಕಟಣೆಗೆ ಮುಂಚೆ ಎರಡು ದೇಶಗಳಲ್ಲಿ ನಿಷೇಧಕ್ಕೆ ಒಳಗಾಗಿತ್ತು. ಸಾವರ್ಕರರ ಲೇಖನಿಯೇ ಹಾಗೆ! ಕತ್ತಿಯಂತೆ ಹರಿತ! ಮಾತು ಬೆಂಕಿಯ ಕಿಡಿಗಳನ್ನು ಸ್ಫುರಿಸುವಂತಹವುಗಳು… ಆಂಗ್ಲರ ದಬ್ಬಾಳಿಕೆಗೆ ಪ್ರತ್ಯುತ್ತರವಾಗಿ ಅನೇಕ ದೇಶಭಕ್ತರನ್ನು ಹುಟ್ಟು ಹಾಕಿರುವ ಸ್ಪೂರ್ತಿದಾಯಕ ಮಾತುಗಳು.
೧೯೦೧ರಲ್ಲಿ ವಿಕ್ಟೋರಿಯಾ ರಾಣಿ ಮರಣವನ್ನಪ್ಪಿದ ಸಂದರ್ಭದಲ್ಲಿ ಸಾವರ್ಕರರು ಲಕ್ಷಾಂತರ ಭಾರತೀಯರ ರಕ್ತಪಾತಕ್ಕೆ ಕಾರಣಳಾದ ಅವಳ ಸಾವಿಗೆ ನಾವು ಶೋಕಾಚರಣೆ ಮಾಡುವ ಅಗತ್ಯ ಇಲ್ಲ ಎಂದು ಜನರಿಗೆ ಅರ್ಥವಾಗುವಂತೆ ಹೇಳುತ್ತಾರೆ. ‘ಆಂಗ್ಲರು ಮಹಾಸಾಗರವನ್ನು ದಾಟಿ , ನಮ್ಮ ನೆಲದಲ್ಲಿ ಬಂದು ಇಲ್ಲಿನ ಹವೆಗೆ ಒಗ್ಗಿಸಿಕೊಂಡು ಆಡಳಿತವನ್ನು ಕಿತ್ತುಕೊಂಡಿದ್ದಾರೆ ಎಂದಾದರೆ ಅವರ ನೆಲದಲ್ಲಿ ಹೋಗಿ ನಾನೇಕೆ ನನ್ನ ಜನ್ಮಭೂಮಿಯ ಶ್ರೇಷ್ಠತೆಯ ಬಗ್ಗೆ ಹೇಳಬಾರದು?’ ಎಂಬ ಆಲೋಚನೆ ಬಂದೊಡನೆ ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನವನ್ನು ಈ ಸ್ವಾತಂತ್ರ್ಯ ವೀರ ಮಾಡುತ್ತಾರೆ. ಸಾವರ್ಕರರ ನೀತಿಯೇ ಹಾಗೆ. ಮನಸ್ಸಿನಲ್ಲಿ ಹೊಸ ಯೋಜನೆ ಬಂತು ಎಂದಾದರೆ ಅದನ್ನು ಶೀಘ್ರದಲ್ಲೇ ಜಾರಿಗೆ ತರಬೇಕು. “ದಿನದಲ್ಲಿ ಒಂದು ಬಾರಿಯಾದರೂ ನಿಮ್ಮೊಂದಿಗೆ ನೀವು ಮಾತನಾಡಿ, ಇಲ್ಲವಾದರೆ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ”, ಸ್ವಾಮಿ ವಿವೇಕಾನಂದರ ಈ ಮಾತು ಅಕ್ಷರಶಃ ನಿಜ. ಸಾವರ್ಕರರು ತಮ್ಮ ಮನಸ್ಸಿನ ಮಾತುಗಳನ್ನು ಕೇಳದೆ ಇರುತ್ತಿದ್ದರೆ ಅನೇಕ ಭಾರತೀಯರಲ್ಲಿ , ಬಿಸಿ ನೆತ್ತರ ತರುಣರಲ್ಲಿ ರಾಷ್ಟ್ರಭಕ್ತಿ ಅರಳುವುದು ಕಷ್ಟವಾಗುತ್ತಿತ್ತು. ದೇಶಸೇವೆಗೆ ವೀರ ಸಾವರ್ಕರರಿಗೆ ಸಮಯದ ಅಭಾವವಿಲ್ಲ, ಭಾರತಾಂಬೆಯ ಗುಣಗಾನ ಮಾಡುವುದಕ್ಕೆ ಲೇಖನಿಯ ಶಾಯಿ ಖಾಲಿಯಾಗುವುದಿಲ್ಲ, ಪರಕೀಯರ ವಿರುದ್ಧ ಮಾತನಾಡಲು ಗಂಟಲ ಪಸೆ ಆರುವುದಿಲ್ಲ.
ಬಂಗಾಳ ವಿಭಜನೆಯ ಸಮಯದಲ್ಲಿ ವಿದೇಶಿ ಉತ್ಪನ್ನಗಳ ಬಹಿಷ್ಕಾರ ಮಾಡಬೇಕೆಂದು ಯುವಶಕ್ತಿಗೆ ಕರೆ ನೀಡಿದ ಸಾವರ್ಕರರು ವಿದೇಶಿ ವಸ್ತ್ರಗಳಿಗೆ ಬೆಂಕಿ ಹಚ್ಚಿದಾಗ ಅವರಲ್ಲಿ ದೇಶಭಕ್ತರನ್ನು ಹುಟ್ಟು ಹಾಕುವ ದೂರಾಲೋಚನೆ ಇತ್ತು. ಚಾಫೇಕರ್ ಸಹೋದರರ , ಮಂಗಲ್ ಪಾಂಡೆಯಂಥ ವೀರರು ಅನುಸರಿಸಿದ ಮಾರ್ಗದಲ್ಲಿ ನಡೆದರೆ ಮಾತ್ರವೇ ಆಂಗ್ಲರು ನಮ್ಮ ದೇಶ ಬಿಟ್ಟು ತೊಲಗುತ್ತಾರೆ ಎಂಬ ವಾಸ್ತವವನ್ನು ಲಂಡನ್ ನಲ್ಲಿರುವ ಭಾರತೀಯರಿಗೆ ಸ್ಪಷ್ಟಪಡಿಸಲು ಸಾವರ್ಕರರು ಪ್ರಯತ್ನವನ್ನು ಮಾಡುವಾಗ ಅವರ ಸಂಪರ್ಕಕ್ಕೆ ಬಂದ ಮದನ್ ಲಾಲ್ ಧಿಂಗ್ರಾ ಅಪ್ರತಿಮ ದೇಶಭಕ್ತನಾಗಿ ಬದಲಾದನು. ಭಾರತದಲ್ಲಿ ದಬ್ಬಾಳಿಕೆ ನಡೆಸಿ, ಜನರಿಗೆ ಶೋಷಣೆ ಕೊಟ್ಟಿದ್ದ ಕರ್ಜನ್ ವಾಯಿಲಿಯನ್ನು ಮುಗಿಸಿ ನಿಶ್ಚಿಂತೆಯಿಂದ ನೇಣುಗಂಬವೇರಿದ ಧಿಂಗ್ರಾ ಯುವಜನರಲ್ಲಿ ಸ್ಫೂರ್ತಿ ತುಂಬಿದ್ದ. ಕ್ರಾಂತಿಕಾರಿಗಳ ಜೊತೆ ಕ್ರೂರವಾಗಿ ನಡೆದು ಕೊಂಡಿದ್ದ ಜಾಕ್ಸನ್ ಎಂಬಾತನು ಲಕ್ಷ್ಮಣ್ ಕಾನ್ಹೇರಿ ಎಂಬ ಹದಿನೆಂಟರ ದೇಶಭಕ್ತನಿಂದ ಪರಲೋಕ ಸೇರಿದ್ದ. ಇದೇ ಕಾರಣಗಳನ್ನು ಇಟ್ಟುಕೊಂಡು ಸರ್ಕಾರವು ಸಾವರ್ಕರರ ಮನೆಯನ್ನು ಜಪ್ತಿ ಮಾಡುತ್ತದೆ. ಈ ಅಪ್ರತಿಮ ದೇಶಭಕ್ತರಿಗೆ ಕಾಲಾಪಾನಿ ಎಂಬ ಆಜೀವ ಪರ್ಯಂತ ಶಿಕ್ಷೆಯನ್ನು ವಿಧಿಸಿ ಮಾನಸಿಕವಾಗಿ ಕುಗ್ಗಿಸಲು ಪ್ರಯತ್ನಿಸುತ್ತದೆ. ಹೀಗೆ ತಮ್ಮದೆಲ್ಲವನ್ನೂ ಭಾರತಾಂಬೆಗೆ ಅರ್ಪಿಸಿದ್ದ ಈ ಸ್ವಾತಂತ್ರ್ಯ ವೀರ ಅನೇಕರಿಗೆ ದೇಶಸೇವೆ ಮಾಡಲು ಪ್ರೇರಣೆಯಾಗುತ್ತಾರೆ.
ಕಾಲಾಪಾನಿಯ ಸಂದರ್ಭದಲ್ಲಿ..
‘ದೇಶಭಕ್ತಿ ‘ ಎಂಬ ಮಹಾಪರಾಧಕ್ಕಾಗಿ ಬ್ರಿಟಿಷ್ ಸರಕಾರವು ವೀರ ಸಾವರ್ಕರರಿಗೆ ಕಾಲಾಪಾನಿ ಶಿಕ್ಷೆಯನ್ನು ವಿಧಿಸುತ್ತದೆ. ಭಾರತದ ಯುವ ಕ್ರಾಂತಿಕಾರಿಗಳನ್ನು ಸಂಘಟಿಸಿ ಆಂಗ್ಲರಿಗೆ ಹೊಸ ಭಯ ಸೃಷ್ಟಿಸಿದ ಸಾವರ್ಕರರ ಕಾರ್ಯಗತಿಗೆ ಕಡಿವಾಣ ಹಾಕುವ ಉದ್ದೇಶದಿಂದ ಎರಡೆರಡು ಕರಿನೀರಿನ ಶಿಕ್ಷೆ ವಿಧಿಸಿದ ಸರಕಾರಕ್ಕೆ ಅವರು ಜೈಲಿನಲ್ಲಿದ್ದರೂ ಅವರ ದೇಶದ ಕಾಯಕಕ್ಕೆ ತಡೆಯೊಡ್ಡಲು ಸಾಧ್ಯವಾಗಲಿಲ್ಲ.
ಅಂಡಮಾನ್ ನಲ್ಲಿ ರಾಜಕೀಯ ಕೈದಿಗಳಿಗೆ ಇದ್ದ ಗಾಣದಿಂದ ಎಣ್ಣೆ ತೆಗೆಯುವ ಕೆಲಸ ಮತ್ತು ಹಗ್ಗ ಹೊಸೆಯುವ ಕೆಲಸವನ್ನು ಮಾಡಬೇಕಿತ್ತು. ಎತ್ತಿನ ಬದಲಿಗೆ ಮನುಷ್ಯನನ್ನು ಗಾಣಕ್ಕೆ ಕಟ್ಟಿ ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಪ್ರಮಾಣದ ಎಣ್ಣೆಯನ್ನು ತೆಗೆಯಬೇಕು, ಇಲ್ಲದಿದ್ದರೆ ಕಠಿಣ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಆರೋಗ್ಯ ಹದೆಗಟ್ಟರೂ ಕೇಳುವವರಾರೂ ಇಲ್ಲ. ಜೈಲಿನಲ್ಲಿ ಲೇಖನಿ- ಕಾಗದ ಕೊಡಲಿಲ್ಲ ಎಂಬ ಮಾತ್ರಕ್ಕೆ ಸಾವರ್ಕರರು ಬರೆಯುವುದನ್ನು ನಿಲ್ಲಿಸಲಿಲ್ಲ. ಬದಲಿಗೆ ಒಂದು ಮೊಳೆಯಿಂದ ಗೋಡೆ ಮೇಲೆ ದೇಶಭಕ್ತಿ ಗೀತೆಗಳನ್ನು ಬರೆದರು. ತಮ್ಮ ಅಮ್ಮನ ಕುರಿತಾಗಿ ಬರೆಯುವಾಗ ಕೈಗಳಲ್ಲಿದ್ದ ಕೋಳಗಳು ಭಾರವೆನಿಸಲಿಲ್ಲ, ದೇಹಕ್ಕೆ ಆಯಾಸವಾಗಲಿಲ್ಲ. ಜೈಲಿನಲ್ಲಿ ಹಿಂದೂ ಕೈದಿಗಳಿಗೆ ಆಗುತ್ತಿದ್ದ ಶೋಷಣೆಯನ್ನು , ನಿರಂತರವಾಗಿ ನಡೆಯುತ್ತಿದ್ದ ಮತಾಂತರವನ್ನು ಸಾವರ್ಕರರು ತಡೆಯುತ್ತಾರೆ , ‘ಘರ್ ವಾಪಸಿ’ ಗೆ ಅವಕಾಶ ಕೊಡುತ್ತಾರೆ.
ಸಮಾಜ ಸುಧಾರಣೆಯ ಮೂಲಕ ದೇಶಸೇವೆ..
೧೯೨೧ ರಲ್ಲಿ ಜೈಲಿನಿಂದ ಬಿಡುಗಡೆಯಾದ ಸಾವರ್ಕರರು ಅಸ್ಪೃಶ್ಯತೆಯನ್ನು ತೊಡೆದು ಹಾಕವುದಕ್ಕಾಗಿ ಕೆಳಜಾತಿಯೆಂದು ಪರಿಗಣಿಸಿಲ್ಪಟ್ಟವರಿಗೆ ದೇವಾಲಯ ಪ್ರವೇಶ, ಸಹಭೋಜನಗಳನ್ನು ಏರ್ಪಡಿಸಿದರು. ‘ದೇಶಕ್ಕೆ ಅಗತ್ಯ ಬಿದ್ದಾಗ ಪೆನ್ನು ಚೆಲ್ಲಿ ಗನ್ನು ಹಿಡಿಯುವವರು ಬೇಕು’ ಎಂದು ಯುವಶಕ್ತಿಗೆ ಕರೆ ನೀಡಿದ ಅವರು ಪ್ರಾಯೋಗಿಕ ಚಿಂತನೆ ಇಲ್ಲದೆ ಯಾವುದೇ ಕೆಲಸಕ್ಕೆ ಕೈ ಹಾಕುತ್ತಿರಲಿಲ್ಲ. ಮತಾಂತರದಿಂದ ರಾಷ್ಟ್ರಾಂತರವಾಗುವುದೆಂಬ ವಾಸ್ತವವನ್ನು ಅರ್ಥೈಸಿಕೊಂಡಿದ್ದ ಅವರು ಶುದ್ದಿ ಚಳುವಳಿ ಮಾಡುತ್ತಿದ್ದರು.
೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ
ಅಖಂಡ ಭಾರತದ ಕನಸು ಈಡೇರಲಿಲ್ಲ ಎಂಬ ಕೊರಗು ಅವರಲ್ಲಿತ್ತು. ಭಾರತ ವಿಭಜಿಸಲ್ಪಟ್ಟಾಗ ಲಕ್ಷಾಂತರ ಅಮಾಯಕ ಜನರ ಕಗ್ಗೊಲೆ, ಅತ್ಯಾಚಾರಗಳಾದವು. ದೇಶದ ವಿಭಜನೆಯ ಈ ದುರಂತಕ್ಕೆ ಕಾರಣರಾದ ಅನೇಕರು ಈ ಹಿಂಸಾಚಾರದ ಸಂದರ್ಭದಲ್ಲಿ ಮೂಕರಾಗಿದ್ದರು.
ಸಾವರ್ಕರರು ಮತ್ತು ನವಭಾರತ..
ಸಾವರ್ಕರರು ಬೀಜ ಬಿತ್ತಿ ಬೆಳೆಸಿದ ಸಂಘಟನೆಯಾದ ಅಭಿನವ ಭಾರತದಲ್ಲಿದ್ದ ತರುಣರು ಜನರಲ್ಲಿ ರಾಷ್ಟ್ರೀಯ ಚಿಂತನೆಗಳನ್ನು ತರಲು ಪ್ರಯತ್ನ ಮಾಡುತ್ತಲೇ ಇದ್ದರು. ತಾಯ್ನಾಡಿನಿಂದ ಬಹಳಷ್ಟು ದೂರದಲ್ಲಿದ್ದರೂ ಶಿವಾಜಿ ಜಯಂತಿಯನ್ನು ಆಚರಿಸಿದ ಅಭಿನವ ಭಾರತವು ಲಂಡನ್ ನಲ್ಲಿ ಬ್ರಿಟಿಷರಿಗೆ ಅಸೂಯೆಯಾಗುವ ರೀತಿಯಲ್ಲಿ ಬೆಳೆದು ನಿಂತಿತ್ತು. ಸಶಸ್ತ್ರ ಕ್ರಾಂತಿಯ ಅಗತ್ಯ ಏನೆಂದು ಮನಗಂಡು ಅನೇಕ ಭಾರತೀಯರು ದೇಶಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಲು ಸಿದ್ಧರಾಗಿ ಮುಂದೆ ಬರುತ್ತಿದ್ದರು.ಸುಖ್ ದೇವ್ , ರಾಜ್ ಗುರು, ಆಜಾದ್, ಭಗತ್ ಸಿಂಗ್ ಮುಂತಾದ ಕ್ರಾಂತಿಕಾರಿಗಳನ್ನು ಸೃಷ್ಟಿಸಿ ಸ್ವತಂತ್ರ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಿದ ವೀರ ಸಾವರ್ಕರರು ನಿಜಕ್ಕೂ ಆದರ್ಶ ಪ್ರಾಯರು! ಶಾಂತಿಯ ಜೊತೆ ಜೊತೆಯಲ್ಲಿ ಕ್ರಾಂತಿ ಇದ್ದ ಕಾರಣಕ್ಕೆ ಸಾವಿರದ ಒಂಬೈನೂರ ನಲ್ವತ್ತೇಳರಲ್ಲಿ ಪರಕೀಯರು ಭಾರತ ಬಿಟ್ಟು ತೆರಳಿದರು. ದೇಶಸೇವೆಗಾಗಿ ಕರೆ ಬಂದರೆ ಸದಾ ಸಿದ್ಧರಾಗಿರಬೇಕೆಂಬ ಸಂದೇಶವನ್ನು ಇಂದಿನ ಯುವಶಕ್ತಿಗೆ ಈ ಸ್ವಾತಂತ್ರ್ಯ ವೀರ ನೀಡುತ್ತಾರೆ.
ಸಾಮಾಜಿಕ ಸಾಮರಸ್ಯ ಕಾಪಾಡುವುದರಲ್ಲಿಯೂ ಸಾವರ್ಕರರದು ಮುಖ್ಯ ಪಾತ್ರವಿದೆ. ರತ್ನಾಗಿರಿಯಲ್ಲಿ ಇವರು ಕಟ್ಟಿಸಿದ ಪತಿತ ಪಾವನ ಮಂದಿರದಲ್ಲಿ ಎಲ್ಲಾ ಜಾತಿಯವರಿಗೂ ಪ್ರವೇಶ ಕಲ್ಪಿಸಿ , ಅಸ್ಪೃಶ್ಯತೆಯು ರೂಢಿಯಲ್ಲಿ ಬಂದ ಮೂಢನಂಬಿಕೆ ಎಂದು ಜನರಿಗೆ ಮನವರಿಕೆ ಮಾಡಿ ಕೊಟ್ಟರು. ಸ್ವತಃ ಅಂಬೇಡ್ಕರರೇ ತಮ್ಮ ಪತ್ರಿಕೆಯಲ್ಲಿ ಸಾವರ್ಕರರನ್ನು ಹೊಗಳಿದ್ದುದೂ ಇದೆ. ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆ ಎಂಬ ತತ್ವಗಳನ್ನು ಪುನರುಚ್ಚರಿಸಿದ ಸಾವರ್ಕರರಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಚಿಂತನೆ ಇತ್ತು ಎಂಬುದು ಗಮನಾರ್ಹ ಸಂಗತಿ. ಭಾರತದ ಸಂಸ್ಕೃತಿಯ ಉಳಿವಿಗಾಗಿ, ಸನಾತನ ಧರ್ಮದ ರಕ್ಷಣೆಗಾಗಿ ಶುದ್ಧಿ ಚಳುವಳಿಯನ್ನು ಪ್ರಾರಂಭಿಸಿದ ಸಾವರ್ಕರರಿಗೆ ಮತಾಂತರದಿಂದಾಗಿ ಆಗುವ ಅಪಾಯದ ಅರಿವು ಇತ್ತು .
ಸ್ವದೇಶಿ ಉತ್ಪನ್ನಗಳ ಬಳಕೆಗೆ ಒತ್ತು ಕೊಟ್ಟ ಇವರು ನಮ್ಮ ದೇಶದಲ್ಲಿ ಉತ್ಪಾದಿಸಲ್ಪಟ್ಟ ದಿನೋಪಯೋಗಿ ವಸ್ತುಗಳ ಪರವಾಗಿ ಪ್ರಚಾರ ಮಾಡಿದ್ದರು.ಸ್ವದೇಶಿ ಭಾಷೆಗಳಲ್ಲಿ ಸೇರಿ ಹೋಗಿದ್ದ ಅನೇಕ ಪರದೇಶಿ ಭಾಷಾ ಶಬ್ದಗಳಿಗೆ ಇದ್ದ ಪರ್ಯಾಯವಾದ ಶಬ್ದಗಳನ್ನು ನೆನಪಿಸಿ ಭಾಷೆಗಳ ಶುದ್ಧೀಕರಣವನ್ನೂ ಮಾಡುತ್ತಾರೆ. ಹೀಗೆ ಭಾರತದ ಆತ್ಮ ನಿರ್ಭರತೆಯ ಅಗತ್ಯತೆಯನ್ನು ಸ್ವಾತಂತ್ರ್ಯ ಪೂರ್ವದಲ್ಲೇ ಅರಿತುಕೊಂಡಿದ್ದರು.
ಸುಭಾಷ್ ಚಂದ್ರ ಬೋಸರ ಮಾರ್ಗದರ್ಶನದಲ್ಲಿ ಮುಂದುವರೆದ ಇಂಡಿಯನ್ ನ್ಯಾಷನಲ್ ಆರ್ಮಿಯ ಸ್ಥಾಪನೆಗೆ ಸಾವರ್ಕರರು ಪರೋಕ್ಷವಾಗಿ ಕಾರಣರಾಗಿದ್ದರು. ‘ಶತ್ರುವಿನ ಶತ್ರು ನಮಗೆ ಮಿತ್ರ’ ಎಂಬ ಶಿವಾಜಿಯ ಸಿದ್ಧಾಂತವನ್ನು ನಂಬಿದ್ದ ಸಾವರ್ಕರರ ದೂರದರ್ಶಿ ಚಿಂತನೆಗೆ ಇದೇ ಸಾಕ್ಷಿ.
ಸಾವರ್ಕರರ ಚಿಂತನೆಗಳು ಗಹನವಾದ ಅರ್ಥವಿರುವ ಮತ್ತು ಭಾರತದ ಸುಂದರ ನಾಳೆಗಳತ್ತ ಮುಖ ಮಾಡಿದವುಗಳಾಗಿದ್ದವು. ಭಾರತವು ಜಗದ್ಗುರುವಾಗಬೇಕಾದರೆ ಯುವಶಕ್ತಿ ಸಂಘಟಿತವಾಗಿಬೇಕೆಂದು ಬೋಧಿಸುತ್ತಿದ್ದರು.
ಸ್ವಾತಂತ್ರ್ಯ ವೀರ ನಮಗೇಕೆ ಆದರ್ಶ?
“ದೇಶಕ್ಕಾಗಿ ಸರ್ವಸ್ವವನ್ನು ತೊರೆದುಕ್ಕೊಳ್ಳುತ್ತೇವೆ ಎಂದುಕ್ಕೊಳ್ಳುವವರು ಜನಪ್ರಿಯತೆಯನ್ನೂ ಸಹ ತ್ಯಜಿಸಬೇಕು. ಸೇವೆಯನ್ನು ಮಾಡುವಾಗ ಜನಹಿತಕ್ಕಾಗಿ ಮಾಡಬೇಕು ಹೊರತು ಜನಸ್ತುತಿಗಾಗಿ ಅಲ್ಲ” – ವೀರ ಸಾವರ್ಕರರು ಇಂತಹ ಧೋರಣೆಯು ಅವರ ಔನ್ನತ್ಯವನ್ನು ತಿಳಿಸುವುದು. ಬೆನ್ನ ಹಿಂದೆ ಚಾಫೇಕರ್ ಸಹೋದರರನ್ನು ಗುರುವೆಂದು ಪರಿಗಣಿಸಿ, ಎದುರಿಗೆ ಸಧೃಡ ಭಾರತದ ಗುರಿ ಇಟ್ಟುಕೊಂಡಿದ್ದ ವೀರ ಸಾವರ್ಕರರ ಜೀವನಗಾಥೆ ಯುವಮನಸ್ಸುಗಳಲ್ಲಿ ಹೊಸ ಸಂಚಲನವನ್ನು ಸೃಷ್ಟಿಸುತ್ತದೆ. ಸುಖ , ಆಡಂಬರಗಳನ್ನು ಬಯಸುವ ಈ ಕಾಲದಲ್ಲಿ ಯಾವುದೇ ಸ್ವಂತ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಕ್ಕಾಗಿ ಬದುಕುವುದು ಎಂದರೆ ದೊಡ್ಡ ಸವಾಲಿನಂತೆ ಕಾಣಿಸುತ್ತದೆ. ಮಾನಸಿಕ ಚಿತ್ರಹಿಂಸೆ ಮತ್ತು ದೈಹಿಕ ಶಿಕ್ಷೆಗಳನ್ನು ಅನುಭವಿಸುವಾಗ ಸಾಮಾನ್ಯನಾದವನು ಆ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುವನೇ ಹೊರತು ಅವನಿಗೆ ದೇಶಸೇವೆ ಮಾಡುವ ಚಿಂತನೆ ಬಾರದು. ಆದರೆ ಸಾವರ್ಕರರು ಅಸಾಮಾನ್ಯ ವ್ಯಕ್ತಿ , ಎಂತಹ ಪರಿಸ್ಥಿತಿ ಬಂದರೂ ಮನಸ್ಥಿತಿಯನ್ನು ಬದಲು ಮಾಡದೆ, ಭಾರತ ಮಾತೆಯ ಸೇವೆ ಮಾಡುವ ಪಣ ತೊಟ್ಟ ನೈಜ ದೇಶಭಕ್ತರು.
ಮೇರೆಯಿಲ್ಲದ ದೇಶಭಕ್ತಿ, ವಿರಾಮವಿಲ್ಲದ ಜನಸೇವೆ ಎಂಬಿವುಗಳಲ್ಲಿ ಸಾವರ್ಕರರು ಭಾರತೀಯರಿಗೆ ಆದರ್ಶವೆನಿಸುತ್ತಾರೆ. ಹೊತ್ತು- ಹೊತ್ತಿಗೆ ಹೊಟ್ಟೆಗೆ ಹಿಟ್ಟು ಹಾಕಿ , ಹಾಯಾಗಿ ನಿದ್ರಿಸುವ ಅನೇಕ ಸ್ವಯಂ ಘೋಷಿತ ಸಮಾಜ ಸೇವಕರಿರುವ ಈ ಕಾಲಘಟ್ಟದಲ್ಲಿ ಸಾವರ್ಕರರ ಆದರ್ಶಗಳನ್ನು ಪಾಲಿಸಿಕೊಂಡು ಹೋಗುವುದು ವಿರಳ. ಆದರೆ ಅವರು ದೇಶಕ್ಕಾಗಿ ಮಾಡಿದ ತ್ಯಾಗವನ್ನು ಪ್ರಶ್ನಿಸುವುದು ಸೂಕ್ತವಲ್ಲ. ಅಭಿನವ ಭಾರತದ ರೂವಾರಿ ನವಭಾರತಕ್ಕೆ ಕೊಟ್ಟ ಕೊಡುಗೆ ಅನನ್ಯವಾದುದು. ನಮ್ಮ ದೇಶವು ವಿಶ್ವಗುರು ಆಗಬೇಕೆಂದರೆ ಯುವಜನತೆ ಸಾವರ್ಕರರ ಹಾದಿಯಲ್ಲಿ ನಡೆಯಬೇಕಿದೆ.