ಉತ್ತಮ ಆಡಳಿತ ದಿನ
ಪ್ರತಿ ವರ್ಷ ಡಿಸೆಂಬರ್ 25 ರಂದು ಭಾರತವು ಉತ್ತಮ ಆಡಳಿತ ದಿನ ಅಥವಾ ಸುಶಾಸನ್ ದಿವಸ್ ಅನ್ನು ಆಚರಿಸುತ್ತದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು 2014ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ವಾಜಪೇಯಿಯವರು ತಮ್ಮ ದೂರದೃಷ್ಟಿಯ ನಾಯಕತ್ವದ ಮೂಲಕ, ಆಡಳಿತಕ್ಕೆ ನೀಡಿರುವ ಕೊಡುಗೆ ಅಪಾರ. ಅವರೊಬ್ಬ ಕವಿ, ಹೆಸರಾಂತ ಪತ್ರಕರ್ತ, ಶ್ರೇಷ್ಠ ವಾಗ್ಮಿ, ಚಿಂತಕ, ದಾರ್ಶನಿಕ, ನಿಸ್ವಾರ್ಥ ರಾಜಕಾರಣಿಯಾಗಿ ಜನಮಾನಸದಲ್ಲಿ ಗೌರವಿಸಲ್ಪಟ್ಟವರು.
ಉತ್ತಮ ಆಡಳಿತ ದಿನವನ್ನು ಏಕೆ ಆಚರಿಸಲಾಗುತ್ತದೆ?
2014ರ ಡಿ.23 ರಂದು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಪಂಡಿತ್ ಮದನ್ ಮೋಹನ್ ಮಾಳವೀಯ (ಮರಣೋತ್ತರ) ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಿಸಲಾಯಿತು. ನಂತರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಜಿ ಪ್ರಧಾನಿ ವಾಜಪೇಯಿ ಅವರ ಜನ್ಮದಿನವನ್ನು ಇನ್ನು ಮುಂದೆ ಭಾರತದಲ್ಲಿ ವಾರ್ಷಿಕವಾಗಿ ಉತ್ತಮ ಆಡಳಿತ ದಿನವಾಗಿ ಸ್ಮರಿಸಲಾಗುತ್ತದೆ ಎಂದು ಘೋಷಿಸಿದ್ದರು. ಉತ್ತಮ ಆಡಳಿತ ದಿನದಂದು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸುವುದರ ಮೂಲಕ ಜನರು ಗೌರವ ಸಲ್ಲಿಸುತ್ತಾರೆ. ಈ ದಿನ ಅವರು ಮಾಡಿದ ಕೆಲಸವನ್ನು ಜನರು ನೆನಪಿಸಿಕೊಳ್ಳುತ್ತಾರೆ.
ಅಟಲ್ ಬಿಹಾರಿ ವಾಜಪೇಯಿ ಪರಿಚಯ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 1924 ಡಿಸೆಂಬರ್ 25 ರಂದು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಜನಿಸಿದರು.ಮಧ್ಯಪ್ರದೇಶದಲ್ಲಿ ಆರಂಭಿಕ ಶಿಕ್ಷಣ ಪಡೆದ ಅವರು ಕಾನಪುರ್ ನಲ್ಲಿ ಡಿಎವಿ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಎಂಎ ಮಾಡಿದರು. ಭಾರತದ ರಾಜಕಾರಣ ‘ಭೀಷ್ಮ’ ಎಂದೇ ಅವರನ್ನು ಕರೆಯಲಾಗುತ್ತದೆ.
ರಾಜಕೀಯ ಜೀವನ
ಅಟಲ್ ಬಿಹಾರಿ ವಾಜಪೇಯಿ ಆರ್ಯಸಮಾಜ ಮತ್ತು ಆರ್ ಎಸ್ ಎಸ್ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಆರ್ ಎಸ್ ಎಸ್ ಸ್ವಯಂಸೇವಕರಾಗಿದ್ದ ವಾಜಪೇಯಿ ಸೇರಿದಂತೆ ಹಲವು ಸ್ವಯಂಸೇವಕರು ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು.
1951ರಲ್ಲಿ ಭಾರತೀಯ ಜನಸಂಘ ಸ್ಥಾಪನೆಯಾದಾಗ ವಾಜಪೇಯಿ ಪ್ರಮುಖ ಹುದ್ದೆ ಗಳಿಸಿದರು. 1957ರಲ್ಲಿ ಬಲರಾಮಪುರ್ನಿಂದ ಲೋಕಸಭೆಗೆ ಆಯ್ಕೆಯಾದರು. ಲೋಕಸಭೆಯಲ್ಲಿ ಆಗಲೇ ವಾಜಪೇಯಿ ತಮ್ಮ ಪ್ರಖರ ಭಾಷಣಗಳಿಂದ ಗಮನ ಸೆಳೆದಿದ್ದರು.
ಪ್ರಧಾನಮಂತ್ರಿಯಾಗಿ ಅಟಲ್
ವಾಜಪೇಯಿ ಅವರು ಮೂರು ಬಾರಿ ದೇಶದ ಪ್ರಧಾನಿಯಾದರು. 1996ರಲ್ಲಿ ಮೊದಲ ಬಾರಿಗೆ ದೇಶದ ಪ್ರಧಾನಿಯಾದರು. ಎರಡನೇ ಬಾರಿ 1998-99ರಲ್ಲಿ ಮತ್ತೆ ಪ್ರಧಾನಿಯಾಗಿ ಗದ್ದುಗೆ ಏರಿದರು. ಇದರ ನಂತರ, ಅವರು 1999ರ ಅಕ್ಟೋಬರ್ 13 ರಂದು ಮೂರನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾದರು. ವಾಜಪೇಯಿ ಅವರು ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲ ನಾಯಕರಾಗಿದ್ದಾರೆ.
ಪ್ರಶಸ್ತಿ
1992 ರಲ್ಲಿ, ಪದ್ಮ ವಿಭೂಷಣ.
1994 ರಲ್ಲಿ, ಲೋಕಮಾನ್ಯ ತಿಲಕ್ ಪ್ರಶಸ್ತಿ.
1994 ರಲ್ಲಿ, ಉತ್ತಮ ರಾಜಕೀಯ ಪಟು ಗೌರವ.
1994 ರಲ್ಲಿ, ಪಂಡಿತ್ ಗೋವಿಂದ್ ವಲ್ಲಭ್ ಪಂತ್ ಪ್ರಶಸ್ತಿ.
2015 ರಲ್ಲಿ ಭಾರತ ರತ್ನ ಪ್ರಶಸ್ತಿ,2015 ರಲ್ಲಿ, ಬಾಂಗ್ಲಾ ವಿಮೋಚನಾ ಯುದ್ಧ ಪ್ರಶಸ್ತಿ ಸಿಕ್ಕಿದೆ.
2015ರ ಮಾರ್ಚ್ 27 ರಂದು ಅವರಿಗೆ ‘ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವ ಸಲ್ಲಿಸಲಾಯಿತು. 2018ರ ಆಗಸ್ಟ್ 16ರಂದು ನಿಧನರಾದರು.