ಇಂದು ಜಯಂತಿ
ಬಿಎಂಶ್ರೀ ಎಂದೇ ಖ್ಯಾತರಾಗಿದ್ದ ಬಿ. ಎಂ ಶ್ರೀಕಂಠಯ್ಯ ಅವರು ʼಆಧುನಿಕ ಕನ್ನಡದ ಪಿತಾಮಹʼ ಎಂದು ಜನಪ್ರಿಯತೆ ಗಳಿಸಿದವರು. ʼಕನ್ನಡದ ಕಣ್ವʼ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿದ್ದ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಅವರು ಸಾಹಿತಿಯಾಗಿ, ನಾಟಕಕಾರರಾಗಿ , ಕನ್ನಡನಾಡಿನ ಭಾಷಾ ಸೊಗಡನ್ನು ತಮ್ಮ ಮಾತು ಹಾಗೂ ಕೃತಿಗಳ ಮೂಲಕ ಪರಿಚಯಿಸಿದವರು. ಇಂದು ಅವರ ಜಯಂತಿ .
ಪರಿಚಯ
ಬಿ. ಎಂ ಶ್ರೀಕಂಠಯ್ಯ ಅವರು ಜನವರಿ 3 , 1884ರಲ್ಲಿ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಸಂಪಿಗೆಯಲ್ಲಿ ಜನಿಸಿದರು. ತಂದೆ ಮೈಲಾರಯ್ಯ, ತಾಯಿ ಭಾಗೀರಥಮ್ಮ. ತಂದೆಯಿಂದಲೇ ಶ್ರೀಕಂಠಯ್ಯ ಅವರು ಹೆಚ್ಚು ಪ್ರಭಾವಿತರಾಗಿದ್ದರು. ಆರಂಭಿಕ ಶಿಕ್ಷಣವನ್ನು ಬೆಳ್ಳೂರಿನಲ್ಲಿ ಕಲಿತರು. ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ, ಎಂ.ಎ ಪದವಿಯನ್ನು ಪಡೆದರು.
ವೃತ್ತಿ ಜೀವನ
ಮೈಸೂರು ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಇವರು, ನಾಲ್ಕು ವರ್ಷಗಳ ಕಾಲ ಕುಲಸಚಿವರೂ ಆಗಿದ್ದರು. 1934-1942ರವರೆಗೆ ಕನ್ನಡ ಸಾಹಿತ್ಯ ಪರಿಷತ್ ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 1944ರಲ್ಲಿ ಧಾರವಾಡದ ಕೆ.ಇ ಬೋರ್ಡ್ ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ನಂತರ ಶ್ರೀಕಂಠಯ್ಯ ಅವರು ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಹಗಲಿರುಳು ದುಡಿದವರು.
ಸಾಹಿತ್ಯ ಕ್ಷೇತ್ರದ ಸಾಧನೆ
ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಲ್ಲಿ ಹೊಸಶಕೆಯನ್ನು ಡಿ.ವಿ.ಜಿ ಆರಂಭಿಸಿದರು. ನಂತರ ಅದನ್ನು ಬಿ.ಎಂ ಶ್ರೀಕಂಠಯ್ಯ ಅವರು ನವಚೈತನ್ಯದ ನವೀನ ಎಂಬ ಕಾರ್ಯಕ್ರಮಗಳ ಯೋಜನೆಗಳನ್ನು ಶುರು ಮಾಡಿದರು. ಇದರಿಂದಾಗಿ ಪರಿಷತ್ತಿಗೆ ಒಂದು ಹೊಸಕಳೆಯನ್ನು ತಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಕನ್ನಡ ಜನತೆಯಲ್ಲಿ ಆಸಕ್ತಿ ಅಭಿಮಾನ ಮೂಡುವಂತೆ ಮಾಡಿದರು. ಜೊತೆಗೆ ಬಿ ಎಂ ಶ್ರೀಕಂಠಯ್ಯ ಅವರು ಪುಸ್ತಕ ಹಾಗೂ ಕವನಗಳನ್ನು ಬರೆದು ಜನಪ್ರಿಯತೆಗೊಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿಗೆ ಕೊಡುಗೆ
ಶ್ರೀಕಂಠಯ್ಯ ರಚಿಸಿದ ʼಗದಾಯುದ್ಧʼ, ʼಅಶ್ವತ್ಥಾಮʼ, ʼಪಾರಸಿಕರುʼ ನಾಟಕಗಳು ಬಹಳ ಪ್ರಸಿದ್ಧವಾದವು. ʼಕನ್ನಡ ಛಂದಸ್ಸಿನ ಚರಿತ್ರೆ, ಕನ್ನಡ ಸಾಹಿತ್ಯ ಚರಿತ್ರೆʼ,ʼ ಕನ್ನಡ ಬಾವುಟʼ ಎಂಬ ಪುಸ್ತಕಗಳಲ್ಲದೆ, ಕೆಲವು ಕವನಗಳನ್ನು ಸೇರಿಸಿ ಹೊಂಗನಸು ಎಂಬ ಕವನ ಸಂಕಲನವನ್ನು ಬರೆದಿದ್ದಾರೆ. ಜೊತೆಗೆ ಅವರು ಕನ್ನಡದಲ್ಲಿ ಬರೆದಂತಹ ಕವಿತೆಗಳು ಇಂದಿಗೂ ಹೆಚ್ಚು ಪ್ರಚಲಿತ ಪಡೆದಿದೆ. ಅದರಲ್ಲೂ ಅವರು ನ್ಯೂಮನ್ ಕವಿ ಬರೆದ ʼlead kindly lightʼ ಎಂಬ ಕವಿತೆಯನ್ನು ಕನ್ನಡದಲ್ಲಿ ಅನುವಾದ ಮಾಡಿದ ಕರುಣಾಳು ಬಾ ಬೆಳಕೆ ಎಂಬ ಕವನ ಹೆಚ್ಚು ಜನಮನ್ನಣೆಗಳಿಸಿದೆ. ಹೀಗಾಗಿ ಅವರು ತಮ್ಮ ಸಾಹಿತ್ಯ ಕ್ಷೇತ್ರದ ಜೊತೆಗೆ ಇತರರನ್ನು ಪ್ರೇರೇಪಿಸಿ ಬರವಣಿಗೆಗೆ ಪ್ರೋತ್ಸಾಹಿಸುತ್ತಿದ್ದರು. ಕನ್ನಡವನ್ನು ಜನಪ್ರಿಯ ಮಾಡಲು ಕನ್ನಡದ ಲಿಪಿ ಸುಧಾರಣೆಗೂ ಪ್ರಯತ್ನಿಸಿದರು.
ಅನೇಕ ಪ್ರಮುಖ ಕವಿಗಳಿಗೆ ಮಾರ್ಗದರ್ಶಕರು
ಶ್ರೀಕಂಠಯ್ಯ ಅವರ ವಿದ್ಯಾರ್ಥಿಗಳಾದ ಮಾಸ್ತಿ, ಕುವೆಂಪು, ಎಸ್.ವಿ.ರಂಗಣ್ಣ, ತೀ.ನಂ.ಶ್ರೀಕಂಠಯ್ಯ, ಜೆ.ಪಿ.ರಾಜರತ್ನಂ, ಡಿ.ಎಲ್.ನರಸಿಂಹಚಾರ್ ಸೇರಿದಂತೆ ಮುಂತಾದವರಿಗೆ ಕನ್ನಡದಲ್ಲಿ ಸಾಹಿತ್ಯ ರಚಿಸಲು ಪ್ರೋತ್ಸಾಹಿಸಿದರು. ಹೀಗಾಗಿ ಇವರೆಲ್ಲಾರೂ ಶ್ರೀಕಂಠಯ್ಯ ಅವರಿಂದ ಹೆಚ್ಚು ಪ್ರಭಾವಿತರಾದರು.
ಬಿ.ಎಂ ಶ್ರೀಕಂಠಯ್ಯ ಅವರು 14ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಏಳಿಗೆಗಾಗಿ ಶ್ರಮಿಸಿದರು.ಬಿ.ಎಂ ಶ್ರೀಕಂಠಯ್ಯ ಅವರು ಪರಿಷತ್ತಿನ ಬಗ್ಗೆ ನಿರ್ಧಿಷ್ಟ ಗುರಿಗಳನ್ನು ಇಟ್ಟುಕೊಂಡು ಕೆಲಸ ಮಾಡಿದರು. ಅವರು ಜನರಿಗೆ ತಿಳಿಸಿದಂತಹ ಗುರಿಗಳು ಹೀಗಿವೆ..
- ಕನ್ನಡವನ್ನು ಉಳಿಸಿ-ಬೆಳೆಸಿ, ಕನ್ನಡ ನಾಡಿನಲ್ಲೆಲ್ಲಾ ಒಂದು ರೂಪಕ್ಕೆ ತಂದು ಅದರ ಮೂಲಕ ಕನ್ನಡಿಗರನ್ನೆಲ್ಲ ಒಂದು ಗೂಡಿಸುವ ಗುರಿಯನ್ನು ಜನರಿಗೆ ತಲುಪಿಸಿದವರು.
- ಹಳೆಯ ಸಾಹಿತ್ಯ ಪ್ರಚಾರ, ಹೊಸ ಸಾಹಿತ್ಯದ ಘೋಷಣೆ ವ್ಯಾಸಂಗಗೋಷ್ಠಿ, ಪರೀಕ್ಷೆ, ವಿಮರ್ಶೆ, ಪರಿಶೋಧನೆಗಳ ಗುರಿಗಳನ್ನು ಹೊಂದಿದರು.
- ಸಮ್ಮೇಳನ ವಸಂತೋತ್ಸವ , ಉಪನ್ಯಾಸ, ನಾಟಕ , ಗಮಕ ಕಲೆ , ಜನ ಸಂಸ್ಕೃತಿ, ವಿನೋದ , ಸ್ಪರ್ಧೆ , ಮಕ್ಕಳ ನಲಿವು , ಕನ್ನಡ ಸಂಘಗಳ ಒಕ್ಕೂಟ ಹುರುಪು, ಹೊಸಬಾಳು ಹಬ್ಬ ಇತ್ಯಾದಿ.
- ಅಂದಿನ ಕಾಲದಲ್ಲಿ ಕನ್ನಡಿಗರಿಗೆ ಬೇಕಾದ ತಿಳಿವಳಿಕೆಯನ್ನೆಲ್ಲಾ ಕೊಟ್ಟು ಅದರ ಮೂಲಕ ಕನ್ನಡಿಗರನ್ನೆಲ್ಲಾ ಒಂದುಗೂಡಿಸುವ ಗುರಿಯನ್ನು ಒಳಗೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಭಿವೃದ್ಧಿ ಕಾರ್ಯಗಳು
- ಪರಿಷತ್ತಿನಲ್ಲಿ ಪತ್ರಿಕೆಗಳನ್ನು ಹೊರಗೆ ಅಚ್ಚಿಗೆ ಕೊಡುತ್ತಿದ್ದರಿಂದ ಕಾರ್ಯವಿಳಂಬವಾಗುವುದರ ಜತೆಗೆ ಹೆಚ್ಚು ಖರ್ಚು ಕೂಡ ಉಂಟಾಗುತ್ತಿದ್ದರಿಂದ ಪರಿಷತ್ತಿನಲ್ಲಿಯೇ ಅಚ್ಚುಕೂಟವನ್ನು ಪ್ರಾರಂಭಿಸುವಲ್ಲಿ ಶ್ರೀಕಂಠಯ್ಯ ಅವರ ಪಾತ್ರ ಪ್ರಮುಖವಾಗಿತ್ತು.
- ಸಾಹಿತ್ಯ ಪರಿಷತ್ತು, ಸ್ಥಾಪನೆ ಆಗುವ ಕಾಲಕ್ಕೆ ತಿರುಮಲಾಂಬ ಹಾಗೂ ಡಿ. ಬಿಂದೂಬಾಯಿ ಎಂಬ ಉತ್ಸಾಹೀ ಲೇಖಕಿ ಇಬ್ಬರಿಗೂ ಶ್ರೀಕಂಠಯ್ಯ ಅವರ ನೇತೃತ್ವದಲ್ಲಿ 1938ರಲ್ಲಿ ಮಹಿಳಾ ಶಾಖೆಯನ್ನು ಪ್ರಾರಂಭಿಸಿದವರು.
ಪ್ರಶಸ್ತಿ
ಕನ್ನಡ ಭಾಷೆಯ ಉಳಿವಿಗಾಗಿ ಬಿಎಂಶ್ರೀ ಸಲ್ಲಿಸಿದ ಸೇವೆಗೆ ಮೈಸೂರಿನ ಮಹಾರಾಜರು ʼರಾಜಸೇವಾಸಕ್ತʼ ಎಂಬ ಬಿರುದನ್ನು ನೀಡಿ ಗೌರವಿಸಿದರು.
ಜನವರಿ 5, 1946ರಲ್ಲಿ ಬಿ.ಎಂ ಶ್ರೀಕಂಠಯ್ಯ ಅವರು ನಿಧನರಾದರು.