ಇಂದು ಅವರ ಜಯಂತಿ
ಬಾಬು ರಾಜೇಂದ್ರ ಪ್ರಸಾದ್ ಅವರು ಒಬ್ಬ ಭಾರತೀಯ ರಾಜಕಾರಣಿ, ವಕೀಲ, ಪತ್ರಕರ್ತ ಮತ್ತು ವಿದ್ವಾಂಸರಾಗಿದ್ದರು. ಭಾರತೀಯ ಸ್ವಾತಂತ್ರ್ಯ ಚಳವಳಿ ಸಮಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ರಾಜೇಂದ್ರ ಪ್ರಸಾದ್ ಅವರು ರಾಜಕೀಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಭಾರತದ ಮೊದಲ ಸಂವಿಧಾನ ಸಭೆಯ ಅಧ್ಯಕ್ಷರಾಗಿದವರು.ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿಗಳಾಗಿಯೂ ಸೇವೆ ಸಲ್ಲಿಸಿದರು.ಇಂದು ಅವರ ಜಯಂತಿ.
ಪರಿಚಯ
ಬಾಬು ರಾಜೇಂದ್ರ ಪ್ರಸಾದ್ ಅವರು ಡಿಸೆಂಬರ್ 3,1884 ರಂದು ಬಿಹಾರದ ಜಿರಾಡಿಯಲ್ಲಿ ಜನಿಸಿದರು. ಇವರ ತಂದೆ ಮಹಾದೇವ್ ಸಹಾಯ್ ಹಾಗೂ ತಾಯಿ ಕಮಲೇಶ್ವರಿ ದೇವಿ. ಬಾಬು ರಾಜೇಂದ್ರ ಪ್ರಸಾದ್ ಛಾಪ್ರಾ ಎಂಬ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ಕೊಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಷ್ಟೇ ಅಲ್ಲದೆ ಅವರು ಕೊಲ್ಕತ್ತಾ ಕಾನೂನು ಕಾಲೇಜಿನಲ್ಲಿ ಕಾನೂನು ಅಧ್ಯಯನ ನಡೆಸಿದರು.ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ಅಭ್ಯಾಸ ಮುಗಿಸಿದ ನಂತರ ಪಾಟ್ನಾ ಹೈಕೋರ್ಟ್‌ನಲ್ಲಿ ತಮ್ಮ ವಕೀಲರಾಗಿ ಕಾರ್ಯಾರಂಭ ಮಾಡಿದರು.
ವರ್ಗಾವಣೆಗೊಳಿಸಲಾಯಿತು. ಅಲ್ಲಿ ಅವರು ಬಿಹಾರ ಕಾನೂನು ವಾರಪತ್ರಿಕೆಯನ್ನು ಸ್ಥಾಪಿಸಿದರು. ಅವರು ಪಾಟ್ನಾ ವಿಶ್ವವಿದ್ಯಾಲಯದ ಸೆನೆಟ್ ಮತ್ತು ಸಿಂಡಿಕೇಟ್‌ನ ಮೊದಲ ಸದಸ್ಯರಾಗಿಯೂ ಆಯ್ಕೆಯಾದರು.
ಬಾಬು ರಾಜೇಂದ್ರ ಪ್ರಸಾದ್ ಅವರು 1920ರಲ್ಲಿ ಸ್ವಾತಂತ್ರ್ಯ ಚಳವಳಿಗೆ ಸೇರುವ ಸಲುವಾಗಿ ತಮ್ಮ ವಕೀಲ ವೃತ್ತಿಯನ್ನು ತ್ಯಜಿಸಿದರು. ನಂತರ ಅವರು ಗಾಂಧಿಯವರನ್ನು ಭೇಟಿ ಮಾಡಿ,ಅವರಿಂದ ಹೆಚ್ಚು ಪ್ರೇರಿತರಾದರು. 1931ರಲ್ಲಿ ಗಾಂಧಿಜೀಯವರ ಉಪ್ಪಿನ ಸತ್ಯಾಗ್ರಹ ಮತ್ತು 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರಿಂದ ಸೆರೆವಾಸವನ್ನು ಅನುಭವಿಸಿದರು. 942ರಲ್ಲಿ ಬಂಧಿತರಾಗಿ ಸುಮಾರು ಮೂರು ವರ್ಷಗಳ ನಂತರ ಜೈಲಿನಿಂದ ಹೊರಗೆ ಬಂದರು.
ರಾಜಕೀಯ ಜೀವನ
ಬಾಬು ರಾಜೇಂದ್ರ ಪ್ರಸಾದ್ ಅವರು 1934ರಲ್ಲಿ ಅವರು ಬಾಂಬೆ ಅಧಿವೇಶನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು.1939ರಲ್ಲಿ ಸುಭಾಷ್ ಚಂದ್ರ ಬೋಸ್ ರಾಜೀನಾಮೆ ನೀಡಿದಾಗ, ಅವರು ಮತ್ತೆ ಮೂರು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದರು. ಸೆಪ್ಟೆಂಬರ್ 2,1946 ರಂದು ಜವಾಹರಲಾಲ್ ನೆಹರು ನೇತೃತ್ವದ 12 ನಾಮನಿರ್ದೇಶಿತ ಮಂತ್ರಿಗಳ ಮಧ್ಯಂತರ ಸರ್ಕಾರವನ್ನು ಸ್ಥಾಪಿಸಿದ ನಂತರ ಅವರಿಗೆ ಆಹಾರ ಮತ್ತು ಕೃಷಿ ಇಲಾಖೆಗೆ ಅವರನ್ನು ನಿಯೋಜಿಸಲಾಯಿತು.
ಬಾಬು ರಾಜೇಂದ್ರ ಪ್ರಸಾದ್ ಅವರು ಬಿಹಾರ ಪ್ರಾಂತ್ಯದಿಂದ ಸಂವಿಧಾನ ಸಭೆಯ ಸದಸ್ಯರಾಗಿ ಆಯ್ಕೆಯಾದರು. ಅಲ್ಲಿ ಅವರು 1946 ರಿಂದ 1950ರವರೆಗೆ ಸಂವಿಧಾನ ಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಈ ಸಮಯದಲ್ಲಿ ಅವರು ನಾಲ್ಕು ಸಮಿತಿಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.
ಜನವರಿ 26,1950 ರಂದು ಭಾರತವು ಗಣರಾಜ್ಯವಾದಾಗ ಸ್ವತಂತ್ರ ಭಾರತದ ಮೊಟ್ಟ ಮೊದಲ ರಾಷ್ಟ್ರಪತಿಯಾಗಿ ರಾಜೇಂದ್ರ ಪ್ರಸಾದ್ ಅವರು ಪ್ರಮಾಣವಚನ ಸ್ವೀಕರಿಸಿದರು. 1952 ಮತ್ತು 1957ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದ ನಂತರವೂ ಇವರೇ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಒಟ್ಟು 12 ವರ್ಷಗಳ ಕಾಲ ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದ್ದರು. 1962ರಲ್ಲಿ ರಾಷ್ಟ್ರಪತಿ ಸ್ಥಾನದಿಂದ ನಿವೃತ್ತರಾಗಿ, ತಾವೇ ಪಾಟ್ನಾದಲ್ಲಿ ಸ್ಥಾಪಿಸಿದ ಸದಾಕತ್ ಆಶ್ರಮದಲ್ಲಿ ತಮ್ಮ ಜೀವನ ಕಳೆದರು.
ಸಾಹಿತ್ಯ ಕ್ಷೇತ್ರ
ಬಾಬು ರಾಜೇಂದ್ರ ಪ್ರಸಾದ್ ಅವರು ರಾಜಕೀಯ ಕ್ಷೇತ್ರ ಮಾತ್ರವಲ್ಲದೆ ಸಾಹಿತ್ಯದಲ್ಲೂ ಸಹ ಆಸಕ್ತಿ ಹೊಂದಿದ್ದರು. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಜೀವನಾಧರಿತ ಕುರಿತ ಬರೆದ ಆತ್ಮಕಥಾ ಹಾಗೂ ಇಂಡಿಯಾ ಡಿವೈಡೆಡ್ ಎಂಬ ಎರಡು ಕೃತಿಗಳು ಹೆಚ್ಚು ಜನಪ್ರಿಯತೆಗೊಂಡಿದೆ.
ಪ್ರಶಸ್ತಿ
ರಾಜೇಂದ್ರ ಪ್ರಸಾದ್ ಅವರಿಗೆ 1962ರಲ್ಲಿ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನವನ್ನು ನೀಡಿ ಗೌರವಿಸಲಾಗಿದೆ.
ರಾಜೇಂದ್ರ ಪ್ರಸಾದ್ ಅವರು ಫೆಬ್ರವರಿ 28, 1963 ರಂದು ತಮ್ಮ 78ನೇ ವಯಸ್ಸಿನಲ್ಲಿ ಪಾಟ್ನಾದಲ್ಲಿ ನಿಧನರಾದರು.