ಕಾವೂರು: ಇಂದು ಭಾರತ ಇಡೀ ವಿಶ್ವದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮುಂಚೂಣಿಯಲ್ಲಿದೆ. ಜಗತ್ತು ಭಾರತದ ಸ್ನೇಹವನ್ನು ಬಯಸುತ್ತಾ, ಇಲ್ಲಿನ ಸಂಸ್ಕೃತಿಯನ್ನು ಗೌರವಿಸುತ್ತಿರುವ ಸಂದರ್ಭದಲ್ಲಿ ಭಾರತೀಯರಾದ ನಾವು ಸಂಕುಚಿತ ಮನೋಭಾವದಿಂದ ಹೊರಬಂದು ಸಾಮರಸ್ಯದ ಕಡೆಗೆ ತೆರೆದುಕೊಳ್ಳುವ ಅವಶ್ಯಕತೆ ತುಂಬಾ ಇದೆ ಎಂದು ಸಾಮಾಜಿಕ ಕಾರ್ಯಕರ್ತರು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ಟೋಳಿ ಸದಸ್ಯ ಸುರೇಶ್ ಪರ್ಕಳ ಹೇಳಿದರು.

ಕಾವೂರಿನ ಸೊಸೈಟಿ ಹಾಲ್ ನಲ್ಲಿ ನಡೆದ ಕಾವೂರು ನಗರದ ‘ಮಂಥನ’ ಘಟಕದ ಆರನೇ ಆವೃತ್ತಿಯ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಪರಂಪರೆಯಲ್ಲಿ ಗಂಗಾ ನದಿಗೆ ವಿಶೇಷವಾದ ಸ್ಥಾನ ಇದ್ದು ಗಂಗೆ ಪವಿತ್ರಾತಿ ಪವಿತ್ರ ಜಲ ಎನಿಸಿಕೊಂಡಿದ್ದರೂ ಸಹ ಅದು ಮಾನವ ಕುಲದ ಅತಿರೇಕದ ವರ್ತನೆಯಿಂದ ರೋಗ ರುಜಿನ ತರುವ ಮಲಿನ ನೀರಾಗಿದೆ. ಆದರೂ ಉಗಮಸ್ಥಾನದ ಗಂಗೆ ಇಂದಿಗೂ ಪವಿತ್ರವಾಗಿಯೇ ಇದೆ. ಅದೇ ರೀತಿ ಮೂಲ ಹಿಂದುತ್ವದಲ್ಲಿ ಯಾವುದೇ ರೀತಿಯ ಹುಳುಕು ಇರದಿದ್ದರೂ ಸಹ ಮನುಷ್ಯನ ಸ್ವಾರ್ಥಕ್ಕೋ ಅಥವಾ ರಾಜಕೀಯ ಪಿತೂರಿಯಿಂದಲೋ ಜಾತಿಯ ಆಧಾರದಲ್ಲಿ ಅಸ್ಪ್ರಶ್ಯತೆಯಂತ ಕೀಳು ಪದ್ಧತಿಗಳು ಹಿಂದುತ್ವದ ಜೊತೆ ಥಳಕು ಹಾಕಿಕೊಂಡಿದೆ.

ಕೆಲವು ಸಾಹಿತಿಗಳು, ಬುದ್ಧಿಜೀವಿಗಳು ಇದೇ ಕಾರಣಕ್ಕೆ ತಮಗೆ ಹಿಂದುತ್ವ ಬೇಕಿಲ್ಲ ಎನ್ನುವ ವಿಘಟಕ ಧೋರಣೆಯನ್ನು ಪ್ರಚಾರಪಡಿಸಿ ಸಮಾಜದಲ್ಲಿ ಜಾತಿಯ ಕಂದಕ ಇನ್ನಷ್ಟು ಜಟಿಲವಾಗುವಂತೆ ಮಾಡುತ್ತಿದ್ದಾರೆ. ಹುಟ್ಟಿದ ಜಾತಿ ಯಾವುದೇ ಆಗಿದ್ದರೂ, ಸಮಾಜದ ನೊಂದ ಮನಸ್ಸುಗಳನ್ನು ಸಂತೈಸಿ ಅವರನ್ನು ಮುಖ್ಯವಾಹಿನಿಗೆ ತರಲು ಜೀವನವನ್ನೇ ಮುಡಿಪಾಗಿಟ್ಟ ಶ್ರೀ ನಾರಾಯಣ ಗುರುಗಳು, ಡಾ. ಬಿ.ಆರ್.ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಹೀಗೆ ಅನೇಕ ಮಹನೀಯರು ನಮಗೆ ಸ್ಪೂರ್ತಿಯಾಗಿದ್ದಾರೆ ಎಂದು ಸುರೇಶ್ ಅವರು ಹೇಳಿದರು.


ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಯಾವುದೇ ಜಾತಿ ಭೇದವಿಲ್ಲದೆ ಮುಕ್ತವಾಗಿ ಕುಡಿಯಲು ನೀರು, ಆರಾಧನೆಗಾಗಿ ದೇವಸ್ಥಾನ ಪ್ರವೇಶ ಮತ್ತು ಮರಣಾನಂತರ ಸ್ಮಶಾನದ ವ್ಯವಸ್ಥೆ ಸಿಗುವವರೆಗೂ ಮೀಸಲಾತಿಯ ಅವಶ್ಯಕತೆ ಇದೆ. ‘ಜಾತಿ ಪದ್ಧತಿ’ ಬಹಳ ಸೂಕ್ಷ್ಮ ವಿಚಾರವಾಗಿದ್ದು, ದೊಡ್ಡ ಹೋರಾಟಗಳಿಂದ ಅಥವಾ ಪೌರುಷದಿಂದ ಆಗಬಹುದಾದ ಬದಲಾವಣೆ ಅಲ್ಲ. ನೂರಾರು ವರ್ಷಗಳಿಂದ ನಮ್ಮ ಸಮಾಜದಲ್ಲಿ ಬೇರುಬಿಟ್ಟ ಇಂಥಹ ಆಚರಣೆಯನ್ನು ತೊಲಗಿಸಲು ಮೊದಲು ನಮ್ಮ ಮನಸ್ಸುಗಳನ್ನು ಬದಲಾಯಿಸಿಕೊಂಡು ಯಾವುದೇ ರೀತಿಯ ಪ್ರಚಾರವಿಲ್ಲದೇ ಸಮಾಜದಲ್ಲಿ ಗುಪ್ತಗಾಮಿನಿಯಂತೆ ಕೆಲಸ ಮಾಡುವ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯರು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾನ್ಯ ಸಂಘಚಾಲಕ್ ಬಿ.ಕೆ.ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.