ಬೆಂಗಳೂರು: ಹಿಂದುತ್ವ, ಸನಾತನ ಸಂಸ್ಕೃತಿ, ಭಾರತೀಯತೆ ಎಲ್ಲವೂ ಒಂದೇ. ವೈಯಕ್ತಿಕ ದೃಷ್ಟಿಯಿಂದ ನಾವೆಲ್ಲರೂ ಹಿಂದೂಗಳು. ಸಮಷ್ಟಿಯಿಂದ ನಾವು ಪಾಲಿಸುವ ತತ್ತ್ವ ಹಿಂದುತ್ವವೆನಿಸಿದೆ. ನಮ್ಮ ದೇಶದ ಸಾಂಸ್ಕೃತಿಕ ಅಸ್ಮಿತೆಗಳಿಗೆ ಆತಂಕಗಳು ಎದುರಾದಾಗ ನಮ್ಮತನವನ್ನು ಉಳಿಸಿಕೊಳ್ಳುವುದಕ್ಕೆ ರಚನಾತ್ಮಕವಾದ ಆಲೋಚನೆಗಳಿಂದ ಹುಟ್ಟಿಕೊಂಡಿದ್ದು ಎಂದು ವಿಸ್ತಾರ ನ್ಯೂಸ್ ನ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಹೇಳಿದರು.
ಬೆಂಗಳೂರಿನ ಜಯನಗರದ ಮಂಥನ – ವೈಚಾರಿಕ ವೇದಿಕೆಯ ವತಿಯಿಂದ ರಾಷ್ಟ್ರೋತ್ಥಾನ ಯೋಗ ಮತ್ತು ಶಾರೀರಿಕ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ‘ಬಹುತ್ವ ಮತ್ತು ಹಿಂದುತ್ವ’ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಭಾನುವಾರ ಮಾತನಾಡಿದರು.
ಭಾರತ ಎಂದರೆ ಬಹುತ್ವ. ಹಿಂದುತ್ವವನ್ನು ಬಿಟ್ಟು ಬಹುತ್ವವಿಲ್ಲ ಎನ್ನುವ ಸ್ಪಷ್ಟ ನಿಲುವು ಸನಾತನ ಸಂಸ್ಕೃತಿಯ ಭಾಗವಾದ ನಮಗೆಲ್ಲ ತಿಳಿದಿದೆ. ಆದರೆ ಇತ್ತೀಚೆಗೆ ‘ನಾನು ಹಿಂದು, ಆದರೆ ಹಿಂದುತ್ವವನ್ನು ಒಪ್ಪುವುದಿಲ್ಲ’ ಎನ್ನುವ ಅಪವ್ಯಾಖ್ಯಾನಗಳಿಂದ ಗೊಂದಲವನ್ನುಂಟು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜದ ರಚನೆಯಲ್ಲಿರುವ ವಿವಿಧತೆಯೇ ಭಾರತದ ಶಕ್ತಿ ಎನ್ನುವುದನ್ನು ತಿಳಿಯಬೇಕು.
ಹಿಂದುತ್ವದ ಕುರಿತು ಆಯಾ ಕಾಲಘಟ್ಟಕ್ಕೆ ತಕ್ಕಂತೆ ಸಹಸ್ರಾರು ಮಂದಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಸಾಂಕೇತಿಕವಾಗಿ ಸ್ವಾಮಿ ವಿವೇಕಾನಂದರು, ಯೋಗಿ ಅರವಿಂದರು, ವೀರ ಸಾವರ್ಕರರ ಹಿಂದು ಚಿಂತನೆಗಳನ್ನು ಗಮನಿಸುವುದಾದರೆ ಹಿಂದುತ್ವದ ಕುರಿತು ಇವರುಗಳು ಪ್ರಸ್ತಾಪಿಸಿದ ರೀತಿ ಮತ್ತು ಕಾಲಘಟ್ಟ ಬೇರೆ ಬೇರೆಯಾದರೂ ಅವರು ಹೇಳಿದ ಸಂಗತಿಗಳ ಮೂಲ ಒಂದೇ ಆಗಿತ್ತು ಎಂದು ಅಭಿಪ್ರಾಯಪಟ್ಟರು.
ಸಾವರ್ಕರ್ ಅವರು ಪ್ರಥಮ ಬಾರಿಗೆ ಇಸ್ಲಾಂನ ಆಕ್ರಮಣ ನೀತಿಯ ವಿರುದ್ಧ ಬಹಿರಂಗವಾಗಿ ಮಾತನಾಡಿ ನಮ್ಮತನವನ್ನು ಭವಿಷ್ಯಕ್ಕಾಗಿ ಉಳಿಸಿಕೊಳ್ಳಬೇಕಾದರೆ ಆಕ್ರಮಣಕ್ಕೆ ಪ್ರತಿ ಆಕ್ರಮಣದ ಚಿಂತನೆಗಳನ್ನು ನೀಡಿದರು. ಯೋಗಿ ಅರವಿಂದರು ಅಂತರ್ಮುಖಿಯಾದ, ಯೋಗ ಪ್ರಧಾನವಾದ ಹಿಂದುತ್ವವನ್ನು ತಿಳಿಸಿಕೊಟ್ಟರು. ಹಿಂದುತ್ವದ ವೈಶ್ವಿಕ ದೃಷ್ಟಿಯನ್ನು ಸ್ವಾಮಿ ವಿವೇಕಾನಂದರು ಸಾರಿದರು ಎಂದು ತಿಳಿಸಿದರು.
ಈ ಮೂವರು ಚಿಂತಕರಲ್ಲಿ ಸಾವರ್ಕರರು ಮಾತ್ರ ವಿವಾದದ ವಸ್ತು ಆಗುತ್ತಾರೆ. ಏಕೆಂದರೆ ಇಸ್ಲಾಂ ಆಕ್ರಮಣ ನೀತಿಯ ವಿರುದ್ಧ, ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಆತಂಕಗಳನ್ನು ತಡೆಯುವುದಕ್ಕಾಗಿ ಸಾವರ್ಕರರು ನೀಡಿದಂತಹ ಪ್ರಖರ ಚಿಂತನೆಗಳು ಭವಿಷ್ಯದಲ್ಲಿ ತಲೆ ಎತ್ತಬಾರದು ಎಂಬುದು ಇದರ ಹಿಂದಿರುವ ಹುನ್ನಾರ ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಸಂದರ್ಭದಲ್ಲಿ ತಮಗೆ ಬೇಕಾದ ಸಂವಿಧಾನದ ಆಯ್ದ ಆಶಯಗಳನ್ನು ಚರ್ಚಿಸಲಾಗುತ್ತದೆ. ಆದರೆ ಸಂವಿಧಾನದ ಆಶಯಗಳಿಗೂ, ಹಿಂದುತ್ವಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಸುಪ್ರೀಂ ಕೋರ್ಟ್ ಕೂಡ ಹಿಂದುತ್ವ, ಹಿಂದೂ ಧರ್ಮದ ಕುರಿತು ವ್ಯಾಖ್ಯಾನ ನೀಡಿದೆ. ಕಾಲಾನುಕ್ರಮದಲ್ಲಿ ಹಿಂದೂ ಸಮಾಜದಲ್ಲಿನ ಪಿಡುಗುಗಳನ್ನು ಸಾಂಘಿಕ ಶ್ರಮದಿಂದ ತೆಗೆದು ಹಾಕಲಾಗಿದೆ. ಸಂವಿಧಾನವೂ ಸರ್ವರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಇಂದು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿರುವ ಸಂಸ್ಕೃತಿಗಳನ್ನು ಗಮನಿಸಿದಾಗ ಹಿಂದುತ್ವ ಏಕೆ ಉಳಿಯಬೇಕು? ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಚಿಂತಕರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.