ಇಂದು ಜಯಂತಿ
ಬಾಳಾಸಾಹೇಬ್ ದೇವರಸ್ ಎಂದೇ ಗುರುತಿಸಿಕೊಂಡಿದ್ದ ಮಧುಕರ್ ದತ್ತಾತ್ರೇಯ ದೇವರಸ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರನೆಯ ಸರಸಂಘಚಾಲಕರಾಗಿದ್ದವರು. ಇವರು ತಮ್ಮ ಜೀವನವಿಡೀ ಆರ್‌ ಎಸ್‌ ಎಸ್‌ ಸಂಘಕ್ಕೆ ಹಗಲಿರಳು ಶ್ರಮಿಸಿದರು. ಬಾಳಾ ಸಾಹೇಬ್‌ ಅವರು ಐತಿಹಾಸಿಕ ರಾಮಜನ್ಮಭೂಮಿ ಆಂದೋಲನಕ್ಕೆ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಂದು ಅವರ ಜಯಂತಿ.


ಪರಿಚಯ
ಬಾಳಾ ಸಾಹೇಬ್‌ ದೇವಸರ್‌ ಅವರು ಡಿಸೆಂಬರ್‌ 11, 1915 ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದರು. ಇವರ ತಂದೆ ದತ್ತಾತ್ರೇಯ ಕೃಷ್ಣರಾವ್ ದೇವರಸ್ ಹಾಗೂ ತಾಯಿ ಪಾರ್ವತಿಬಾಯಿ. ಅವರ ಸಹೋದರ ಭೌರಾವ್ ದೇವರಸ್ ಕೂಡ ಆರ್‌ಎಸ್‌ಎಸ್‌ನ ಪ್ರಚಾರಕ್ ಮತ್ತು ಹಿರಿಯ ಕಾರ್ಯಕಾರಿಯಾಗಿದ್ದರು. ಬಾಳಾಸಾಹೇಬರು ನ್ಯೂ ಇಂಗ್ಲಿಷ್ ಹೈಸ್ಕೂಲಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪಡೆದರು. ಅವರು 1931ರಲ್ಲಿ ಸೆಂಟ್ರಲ್ ಪ್ರಾವಿನ್ಸ್‌ನ ಬೇರಾರ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ನಿಂದ ಮೆಟ್ರಿಕ್ಯುಲೇಷನ್ ಮಾಡಿದರು. ನಂತರ ಅವರು ಮೋರಿಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು. ನಾಗ್ಪುರ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ಎಲ್.ಎಲ್.ಬಿ ಪದವಿಯನ್ನು ಮುಗಿಸಿದರು. ಅವರು ಓದುತ್ತಿದ್ದಾಗಲೇ ಆರ್‌ ಎಸ್‌ ಎಸ್‌ ಸಂಸ್ಥಾಪಕರಾದ ಕೇಶವ ಬಲಿರಾಮ ಹೆಡಗೇವಾರ್ ಅವರಿಂದ ಸ್ಫೂರ್ತಿ ಪಡೆದರು.‌ ಹೀಗಾಗಿ ಇವರು ಮೊದಲಿನಿಂದಲೂ ಆರ್‌ ಎಸ್‌ ಎಸ್‌ ನೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಸಾಧ್ಯವಾಯಿತು.


ಆರ್‌ ಎಸ್‌ ಎಸ್‌ನೊಂದಗಿನ ಒಡನಾಟ
ಬಾಲ್ಯದಿಂದಲೇ ಸಂಘದ ಸ್ವಯಂಸೇವಕರಾಗಿದ್ದ ಬಾಳಾಸಾಹೇಬ್‌ ಅವರು ಕುಶ ಪಥಕ ಎಂಬ ಬಾಲಕರ ಗುಂಪಿನ ಸದಸ್ಯರಾಗಿದ್ದರು. ಈ ವೇಳೆ ಅವರು ತಮ್ಮ ವಯಸ್ಸಿನ ಹಲವು ಬಾಲಕರನ್ನು ಸಂಘದ ಶಾಖೆಗೆ ಕರೆತಂದರು. ನಂತರ ಅವರು ಕೇಶವ ಬಲಿರಾಮ ಹೆಡಗೇವಾರ್ ಅವರ ಮಾರ್ಗದರ್ಶನದಿಂದ ಕುಶ ಪಥಕದ ಎಲ್ಲಾ ಬಾಲಕರು ಮುಂದೆ ಸಂಘದ ಪ್ರಚಾರಕರಾಗಿ ತಮ್ಮ ಜೀವನವನ್ನೇ ಸಂಘ ಕಾರ್ಯಕ್ಕೆ ಮುಡಿಪಾಗಿಡುವಂತೆ ಮಾಡಿದರು. ಬಾಳಾಸಾಹೇಬರು ಬಂಗಾಲ ಪ್ರಾಂತದ ಮೊದಲ ಸಂಘ ಪ್ರಚಾರಕರಾಗಿದ್ದರು. ನಂತರ ನಾಗಪುರದಲ್ಲಿನ ಮರಾಠಿ ಪತ್ರಿಕೆ ತರುಣ್ ಭಾರತ್ ಮತ್ತು ಹಿಂದಿ ದಿನಪತ್ರಿಕೆಯಾದ ಯುಗಧರ್ಮದ ಪ್ರಕಟಣೆಯ ಜವಾಬ್ದಾರಿ ವಹಿಸಿಕೊಂಡರು. 1965ರಲ್ಲಿ ಬಾಳಾ ಸಾಹೇಬ್‌ ಅವರು ಆರ್‌ಎಸ್‌ಎಸ್‌ನ ಸರಕಾರ್ಯವಾಹರಾಗಿ ಕಾರ್ಯನಿರ್ವಹಿಸಿದರು. ಸಂಘದ ಸರಸಂಘಚಾಲಕರಾದ ಎಂ.ಎಸ್. ಗೋಳ್ವಲ್ಕರ್ ಅವರ ನಿಧನದ ನಂತರ ಬಾಳಾಸಾಹೇಬ್‌ ದೇವರಸ್ 1973ರಲ್ಲಿ ಆರ್‌ಎಸ್‌ಎಸ್‌ನ ಸರಸಂಘಚಾಲಕರಾದರು. ಸೇವಾ ಚಟುವಟಿಕೆ, ಅಸ್ಪೃಶ್ಯತೆ ನಿವಾರಣೆಯಂಥ ಕಾರ್ಯಗಳಲ್ಲಿ ಸ್ವಯಂಸೇವಕರು ಹೆಚ್ಚಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತಿದ್ದರು. ಅಸ್ಪೃಶ್ಯತೆ ಕುರಿತಾಗಿ ಅವರ ಪ್ರಸಿದ್ಧ ಹೇಳಿಕೆ ಹೀಗಿದೆ. “ ಅಸ್ಪೃಶ್ಯತೆ ತಪ್ಪಲ್ಲವಾದರೆ ಇನ್ಯಾವುದೂ ತಪ್ಪಲ್ಲ. ಅದನ್ನು ಗಂಟುಮೂಟೆ ಕಟ್ಟಿ ಎಸೆಯಬೇಕು” ಎಂದು ಹೇಳಿದ್ದರು.


ಅತ್ಯುತ್ತಮ ಸಂಘಟಕರಾಗಿದ್ದ ಅವರು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಹೇರಿದ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟವನ್ನು ನಡೆಸಿದರು.ಈ ವೇಳೆ ಸಂಘದ ಮೇಲೆ ನಿಷೇಧ ಹೇರಲಾಯಿತು. ಜೊತೆಗೆ ಅನೇಕ ಸ್ವಯಂಸೇವಕರನ್ನು ಜೈಲಿಗೆ ಕಳುಹಿಸಲಾಯಿತು. ಬಾಳಾ ಸಾಹೇಬ್‌ ಅವರ ಮಾರ್ಗದರ್ಶನದಿಂದ ಬೃಹತ್‌ ಸತ್ಯಾಗ್ರಹವನ್ನು ಸ್ವಯಂಸೇವಕರು ನಡೆಸಿದ್ದರು. ಇದೇ ಸಂದರ್ಭದಲ್ಲಿ ಜಯಪ್ರಕಾಶ ನಾರಾಯಣರ ನೇತೃತ್ವದ ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯ ಆರ್ ಎಸ್ ಎಸ್‌ ಬೆಂಬಲ ಸೂಚಿಸಿದರು. ಈ ಕಾರಣಕ್ಕಾಗಿ 1977ರಲ್ಲಿ ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಲಾಯಿತು. ಮತ್ತು ಸಂಘದ ಮೇಲೆ ಹೇರಿದ್ದ ನಿಷೇಧವನ್ನು ಮುಕ್ತಗೊಳಿಸಲಾಯಿತು.


ಹಿಂದೂ ಸಮಾಜದ ಪರಿಶಿಷ್ಟ ಜಾತಿಯ ಜನರ ಉನ್ನತಿಗಾಗಿ ಮೀಸಲಾಗಿರುವ ಸೇವಾ ಭಾರತಿ ಅಡಿಯಲ್ಲಿ ಆರ್‌ಎಸ್‌ಎಸ್ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆರ್‌ಎಸ್‌ಎಸ್ ಸ್ವಯಂಸೇವಕರು ಶಾಲೆಗಳನ್ನು ಪ್ರಾರಂಭಿಸಿದ್ದಾರೆ.
ಬಾಳಾ ಸಾಹೇಬ್‌ ದೇವರಸ್‌ ಅವರು ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದರು. ಇವರು ಹಿಂದಿ ಹಾಗೂ ಇಂಗ್ಲೀಷ್‌ ನಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಪಂಜಾಬ್‌, ಪ್ರಾಬ್ಲಮ್‌ ಅಂಡ್‌ ಇಟ್ಸ್‌ ಸೊಲುಷನ್‌, ಸೋಶಿಯಲ್‌ ಇಕ್ವಲಿಟಿ ಅಂಡ್‌ ಹಿಂದೂ ಕನ್ಸಾಲಿಡೇಶನ್‌ ಸೇರಿದಂತೆ ಅನೇಕ ಕೃತಿಯನ್ನು ರಚಿಸಿದ್ದಾರೆ.


ಬಾಳಾ ಸಾಹೇಬ್‌ ದೇವರಸ್‌ ಅವರು ಅನಾರೋಗ್ಯದಿಂದ ಜೂನ್ 17, 1996 ರಂದು ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.