
ಬೆಂಗಳೂರು ಫೆ.25, 2024: ಸ್ವಾಮಿ ವಿವೇಕಾನಂದರು ಯುವಕರಿಗೆ ಆದರ್ಶ. ನಮ್ಮ ದೇಶಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ನಾಯಕ. ಸ್ವಾಮಿ ವಿವೇಕಾನಂದವರ ಪ್ರೇರಣೆಯಿಂದಲೇ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಜಯಕರ್ ಶೆಟ್ಟಿ ಹೇಳಿದರು.

ಬೆಂಗಳೂರಿನ ರಂಗರಾವ್ ರಸ್ತೆಯಲ್ಲಿರುವ ಉತ್ತುಂಗ ಸಭಾಂಗಣದಲ್ಲಿ ಸಮರ್ಥ ಭಾರತ ಸಂಸ್ಥೆಯು 10ನೇ ವರ್ಷದ ಬಿ ಗುಡ್ ಡು ಗುಡ್ ಅಭಿಯಾನದ ಪ್ರಯುಕ್ತ ದಿ ಮಿಥಿಕ್ ಸೊಸೈಟಿಯ ಸಹಭಾಗಿತ್ವದೊಂದಿಗೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಸಾಕಷ್ಟು ಬದಲಾವಣೆ ಕಂಡಿದೆ. ದೇಶಕ್ಕೆ ಒಳ್ಳೆಯ ಶಿಕ್ಷಣ ಸಂಸ್ಥೆಗಳಿಂದ ಉತ್ತಮ ವಿದ್ಯಾರ್ಥಿಗಳು ಹೊರಗೆ ಬರುತ್ತಿರುವವರಿಂದ ಮುಂದಿನ ದಿನಗಳಲ್ಲಿ ನಮ್ಮ ದೇಶಕ್ಕೆ ಉಜ್ವಲವಾದ ಭವಿಷ್ಯವಿದೆ. ದೇಶದಲ್ಲಿ ಪ್ರತಿವರ್ಷ ಸುಮಾರು 4.5 ಕೋಟಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗವನ್ನು ಪಡೆದು ಹೊರಬರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ 15-16ಲಕ್ಷ ವಿದ್ಯಾರ್ಥಿಗಳು ಬೇರೆ ದೇಶಕ್ಕೆ ಹೋಗಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಇವೆರಡರಿಂದಲೂ ಇಂದಿನ ದಿನದಲ್ಲಿ ಗುಣಮಟ್ಟದ ಶಿಕ್ಷಣ ಹೆಚ್ಚಾಗುತ್ತಿದೆ. ನಮ್ಮಲ್ಲಿ ಉದ್ಯೋಗದ ಕೊರತೆಯಿಲ್ಲ, ವಿದ್ಯಾರ್ಥಿಗಳಲ್ಲಿ ಕೌಶಲ್ಯದ ಕೊರತೆ ಇದೆ ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಇರುತ್ತದೆ. ಅವರಿಗೆ ಸೂಕ್ತ ಕೌಶಲ್ಯ ಮತ್ತು ಮಾರ್ಗರ್ಶನ ನೀಡುವ ಕಾರ್ಯ ವಿಶ್ವವಿದ್ಯಾನಿಲಯಗಳಿಂದ ಆಗಬೇಕು. 21ನೇ ಶತಮಾನದ ಮಕ್ಕಳಿಗೆ ಉತ್ತಮ ಕೌಶ್ಯಲ ಅಭಿವೃದ್ಧಿ ಪಡಿಸುವ ಕೆಲಸ ನಮ್ಮಿಂದಾಗಬೇಕು. ಮುಂದಿನ ಪೀಳಿಗೆಗೆ ಈ ಕೌಶಲ್ಯಗಳು ರಕ್ತಗತವಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮಿಥಿಕ್ ಸೊಸೈಟಿ ಆಡಳಿತ ಮಂಡಳಿಯ ಸದಸ್ಯ ಮಾಧವ ಕೆ. ಹೆಬ್ಬಾರ್ ಮಾತನಾಡಿ, ವಿವೇಕಾನಂದರ ಜೀವನಘಟ್ಟಗಳನ್ನು ಈಗಿನ ಮಕ್ಕಳಿಗೆ ಹೇಳಿದರೆ ಅವರ ಭವಿಷ್ಯಕ್ಕೆ ಸೂಕ್ತ ಗುರಿಯನ್ನು ಹೊಂದಲು ಸಾಧ್ಯ. ವಿವೇಕಾನಂದರು ಸಾರಿದ ಸಂದೇಶಗಳು ಇಂದಿಗೂ ಪ್ರಚಲಿತವಾಗಿದೆ ಎಂದು ನುಡಿದರು.

ಸಮರ್ಥ ಭಾರತ ಟ್ರಸ್ಟಿ ರಾಜೇಶ್ ಪದ್ಮಾರ್ ಮಾತನಾಡಿ, ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಇಂದಿನ ಪ್ರತಿಯೊಬ್ಬ ಯುವಕರು ರೂಢಿಸಿಕೊಳ್ಳಬೇಕು. 2047 ರಲ್ಲಿ ವಿಕಸಿತಗೊಂಡ ಭಾರತದಲ್ಲಿ ಇಂದಿನ ಮಕ್ಕಳು ಯಾವುದಾದರೂ ಒಂದು ಕ್ಷೇತ್ರದಲ್ಲಿ ನಾಯಕತ್ವವನ್ನು ವಹಿಸಿಕೊಳ್ಳಬೇಕೆಂದರೆ, ಬೇಕಾದ ಕ್ಷಮತೆ ಕೌಶಲ್ಯ ಹೊಂದುವ ದಾರಿಯಲ್ಲಿ ಹೋಗಬೇಕು. ಹೀಗಾಗಿ ನಾವು ನಿತ್ಯ ಪರಿಶ್ರಮ ಪಟ್ಟರೆ ಮಾತ್ರ ಭವಿಷ್ಯದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರು
ಪ್ರಥಮ ಬಹುಮಾನವನ್ನು ಮಂಗಳೂರಿನ ರಿಶಲ್ ಬ್ರೆಟ್ನಿ ಫರ್ನಾಂಡಿಸ್, ದ್ವಿತೀಯ ಬಹುಮಾನ ಬೆಂಗಳೂರಿನ ರೇಖಾ ಹೆಚ್ ಎಸ್, ತೃತೀಯ ಬಹುಮಾನವನ್ನು ಚಿತ್ರದುರ್ಗದ ರಕ್ಷಾ ಕೆ.ಎಂ ಪಡೆದುಕೊಂಡರು. 20 ಸಮಾಧಾನಕರ ಬಹುಮಾನಗಳನ್ನು ನೀಡಲಾಗಿದ್ದು ದಿನೇಶ್ ಎಂ, ರಶ್ಮಿ ಉಡುಪ, ಅಮೃತ ಡಿ.ಎಸ್, ಕಾವ್ಯ ಎಂ ಡಿ, ಕುಸುಮ ಸಿ.ಎಂ, ಪನ್ನಗ ಪಿ. ರಾಯ್ಕರ್, ಕಾವೇರಿ ಎನ್ ಜವೂರ್, ಅಕ್ಕಮಹಾದೇವಿ ಶಿವಕುಮಾರ್, ದರ್ಶನ್ ಎಸ್. ಎನ್, ನಾಗೇಂದ್ರಬಾಬು ಎಂ, ಜಯಂತ್ ಆರ್, ಸ್ಪಂದನ ಸಿ. ಆರ್, ಶುಭಶ್ರೀ, ಅಶ್ವಿನಿ ಗಜಾನನ ಹೆಗಡೆ, ಮಾಳಿಂಗರಾಯ ನಿಂಗಪ್ಪ ಪೂಜಾರಿ, ಸುನೀಲ್ ಎಂ.ಎನ್, ಗೀತಾ ಪುಂಡಲೀಕ ಕಂಬಾರ, ಕಿರಣ್ ಬೇಬಿ ಎಂ.ಕೆ, ಕಾವೇರಿ ಮುತ್ಯಪ್ಪ ಹೆಗಡೆ, ಸುಮಾ ಬಿ.ಜೆ ಪ್ರಶಸ್ತಿಗಳನ್ನು ಸ್ವೀಕರಿಸಿದರು.






