
ಬೆಂಗಳೂರು: ನಮ್ಮ ನಡುವೆ ವೈವಿಧ್ಯತೆಗಳು ಎಷ್ಟೇ ಇದ್ದರೂ ರಾಷ್ಟ್ರದ ಏಕತೆಯ ವಿಷಯ ಬಂದಾಗ ನಾವೆಲ್ಲರೂ ಒಂದಾಗಬೇಕು, ರಾಷ್ಟ್ರಹಿತದ ಪರ ನಿಲ್ಲಬೇಕು ಎಂದು ಸಮರ್ಥ ಭಾರತದ ಟ್ರಸ್ಟಿ ರಾಧಾಕೃಷ್ಣ ಹೊಳ್ಳ ಹೇಳಿದರು.
ಸಮರ್ಥ ಭಾರತದ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿರುವ ‘ಬಿ ಗುಡ್ ಡು ಗುಡ್’ ಅಭಿಯಾನದ ಅಂಗವಾಗಿ ಕಬ್ಬನ್ ಪಾರ್ಕ್ ನಲ್ಲಿ ನಡೆದ ವಾಕಥಾನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಎಲ್ಲರಲ್ಲೂ ದೇವರಿದ್ದಾನೆ ಎಂಬುದನ್ನು ನಂಬುವ ನಾವು, ಆಚರಣೆಯಲ್ಲಿ ಅದನ್ನು ಪರಿಪಾಲಿಸುತ್ತಿಲ್ಲ. ಜಾತಿ, ಹಣ, ಉದ್ಯೋಗ, ವಯಸ್ಸಿನ ಆಧಾರಿತವಾಗಿ ತಾರತಮ್ಯವನ್ನು ಮಾಡುತ್ತೇವೆ. ಈ ಮನಸ್ಥಿತಿಯಿಂದ ಹೊರಬಂದು ಎಲ್ಲರನ್ನೂ ಗೌರವಿಸುವ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದು ನುಡಿದರು.




ಹೊರದೇಶಗಳಿಗೆ ಹೋದಾಗ ನಾವು ಪಾಲಿಸುವ ಶಿಸ್ತಿನ ಜೀವನಶೈಲಿಯನ್ನು ನಮ್ಮ ದೇಶಕ್ಕೆ ಮರಳಿ ಬಂದಾಗ ನಾವು ಪಾಲಿಸುವುದಿಲ್ಲ. ಎಲ್ಲೆಂದರಲ್ಲಿ ಕಸ ಎಸೆಯುವ, ಟ್ರಾಫಿಕ್ ನಿಯಮವನ್ನು ಉಲ್ಲಂಘಿಸುವ ನಾನಾ ನಿದರ್ಶನಗಳನ್ನು ನೋಡುತ್ತೇವೆ. ನಮ್ಮ ದೇಶವನ್ನು ಸಮೃದ್ಧಗೊಳಿಸಬೇಕಾದರೆ ಅದಕ್ಕಾಗಿ ನಾವೇ ಶ್ರಮಿಸಬೇಕು. ದೇಶಹಿತಕ್ಕಾಗಿ ನಮ್ಮ ಜೀವನಶೈಲಿಯನ್ನು ರೂಪಿಸಿಕೊಳ್ಳುವ ಟ್ರೆಂಡ್ ಅನ್ನು ನಾವು ಮಾಡಬೇಕು ಎಂದು ಅಭಿಪ್ರಾಯಪಟ್ಟರು.




ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಪೀಕ್ ಫಾರ್ ಇಂಡಿಯಾ 2022ರ ವಿಜೇತೆ ಸ್ಪೂರ್ತಿ ಮುರಳೀಧರ್ ಅವರು ಸ್ವಾಮಿ ವಿವೇಕಾನಂದರು ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಶಕ್ತಿಶಾಲಿ ಯುವಕರನ್ನು ಬಯಸಿದ್ದರು. ಅಂತಹ ಯುವಕರು ನಾವಾಗಬೇಕಾದರೆ ನಮ್ಮ ಜೀವನಶೈಲಿಯನ್ನು ಚೆನ್ನಾಗಿಟ್ಟುಕೊಳ್ಳಬೇಕು. ಉತ್ತಮ ಆಲೋಚನೆ, ಆರೋಗ್ಯಯುತ ಆಹಾರ ಸೇವನೆ ನಮ್ಮ ಆದ್ಯತೆ ಆಗಬೇಕು ಎಂದರು.

‘ವಾಕಥಾನ್’ ಕಾರ್ಯಕ್ರಮವನ್ನು ಮಕ್ಕಳ ಮೂಲಕ ಚಾಲನೆ ನೀಡಿದ್ದು ವಿಶೇಷವಾಗಿದ್ದು 300ಕ್ಕೂ ಹೆಚ್ಚು ಉತ್ಸಾಹಿ ತರುಣರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.