ಬೆಂಗಳೂರು: ಸಂಘ ಎಂದರೆ ಸಮಾಜದಲ್ಲಿ ಅನೇಕ ಉತ್ತಮ ವಿಚಾರಗಳಿಗೆ ಬ್ರ್ಯಾಂಡ್ ಆಗಿದ್ದು, ಇನ್ನಷ್ಟು ಉತ್ತಮ ವಿಚಾರಗಳಿಗೆ ಬ್ರ್ಯಾಂಡ್ ಆಗಬೇಕಿದೆ ಎಂದು ಹಿಂದೂ ಸೇವಾ ಪ್ರತಿಷ್ಠಾನದ ಸಂಚಾಲಕ ಸುಧಾಕರ ಅವರು ತಿಳಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ಉತ್ತರ ವಿಭಾಗದ ವತಿಯಿಂದ ಮಲ್ಲೇಶ್ವರದ 18ನೇ ಕ್ರಾಸ್ ಮೈದಾನದಲ್ಲಿ ಆಯೋಜಿಸಿದ್ದ ಯುಗಾದಿ ಉತ್ಸವದಲ್ಲಿ ಮಾತನಾಡಿದರು.

ಸಂಘ ಎಂದರೆ ಶಿಸ್ತು, ಸಮಯಪಾಲನೆ, ಸನ್ನಡತೆ, ದೇಶಭಕ್ತಿಯಂತಹ ಅನೇಕ ವಿಚಾರಗಳಲ್ಲಿ ಸಮಾಜವು ಗುರುತಿಸುತ್ತದೆ. ಇದೀಗ ಸಂಘ ಸ್ಥಾಪನೆಯಾಗಿ ನೂರನೇ ವರ್ಷದ ಸಂದರ್ಭದಲ್ಲಿ ಪಂಚಪರಿವರ್ತನೆಯ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ.
ಕುಟುಂಬ ಪ್ರಬೋಧನ, ಸ್ವದೇಶಿ ಜೀವನಶೈಲಿ, ಪರಿಸರ ಸಂರಕ್ಷಣೆ, ನಾಗರಿಕ ಶಿಷ್ಟಾಚಾರ ಹಾಗೂ ಸಾಮಾಜಿಕ ಸಾಮರಸ್ಯದ ವಿಚಾರಗಳಲ್ಲಿ ಸಮಾಜ ಜಾಗೃತ ಆಗಬೇಕಿದೆ. ಸಮಾಜದಲ್ಲಿರುವ ಅಸ್ಪೃಶ್ಯತೆಯನ್ನು ತೊಲಗಿಸಲು ಎಲ್ಲರೂ ಮುಂದಾಗಬೇಕು. ಇಂದಿನ ಆಧುನಿಕ ಸಮಾಜದ ಸವಾಲುಗಳನ್ನು ಎದುರಿಸಲು ಕುಟುಂಬದ ಸದಸ್ಯರಲ್ಲಿ ಭಾವನಾತ್ಮಕತೆಯನ್ನು ಬೆಳೆಸಬೇಕು. ಸ್ವದೇಶಿ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಇಂತಹ ವಿಚಾರಗಳಲ್ಲಿ ಸಂಘವು ಬ್ರ್ಯಾಂಡ್ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಯಾವುದೇ ಪ್ರಚಾರವನ್ನು ಬಯಸದೆ ಸಮಾಜದ ಕಾರ್ಯವನ್ನು ಹೇಗೆ ಮಾಡಬೇಕು ಎನ್ನುವುದಕ್ಕೆ ಸಂಘದ ಸ್ಥಾಪಕರಾದ ಡಾ.ಕೇಶವ ಬಲಿರಾಂ ಹೆಡಗೆವಾರರು ಪ್ರೇರಣೆಯಾಗಿದ್ದಾರೆ. ಎಲ್ಲ ಉತ್ತಮ ಅಂಶಗಳನ್ನು ವೈಯಕ್ತಿಕವಾಗಿ, ಕುಟುಂಬದಲ್ಲಿ ಅಳವಡಿಸಿಕೊಂಡು ಸಮಾಜದಲ್ಲೂ ಅವುಗಳನ್ನು ಮೂಡಿಸುವ ಮೂಲಕ ಭಾರತ ಮತ್ತೊಮ್ಮೆ ವಿಶ್ವಗುರುವಾಗುವಲ್ಲಿ ಎಲ್ಲರೂ ಕೊಡುಗೆ ನೀಡೋಣ. ಪಂಚಪರಿವರ್ತನೆಯು ಸಮಾಜದ ನಡವಳಿಕೆಯಾಗಲಿ ಎಂದರು.
ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಉಮಾಪತಿ, ಬೆಂಗಳೂರು ಉತ್ತರ ಸಂಘಚಾಲಕ ದ್ವಾರಕಾನಾಥ್ ಉಪಸ್ಥಿತರಿದ್ದರು.
