1 ಏಪ್ರಿಲ್ 2019, ಬೆಂಗಳೂರು: ‘ಸಂಸ್ಕೃತ ಭಾರತಿ’ ಕಾರ್ಯಾಲಯವಾದ ‘ಅಕ್ಷರಂ’ ನ ಹಿರಿಯ ಕಾರ್ಯಕರ್ತರಾದ ಶ್ರೀ ಸುಬ್ರಹ್ಮಣ್ಯರು ನಿನ್ನೆ ರಾತ್ರಿ 11ಕ್ಕೆ ನಿಧನರಾದರು.
ಅಗಲಿದ ಶ್ರೀ ಸುಬ್ರಹ್ಮಣ್ಯಂ (ಬೇಯರ್ ಸುಬ್ಬಣ್ಣ)ನವರ ಬಗ್ಗೆ ಎರಡು ಮಾತು:
ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು. ‘ಬೇಯರ್’ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಅಧಿಕಾರಿಯಾಗಿದ್ದವರು. ‘ಇವರು ಆರೆಸ್ಸೆಸ್’ ಎಂದು ಯಾರೋ ಕಂಪ್ಲೇಂಟ್ ಮಾಡಿದಾಗ ಕಂಪೆನಿಯಲ್ಲಿ, “ಹಿಂದೆಯೂ, ಇಂದಿಗೂ, ಎಂದೆಂದಿಗೂ ನಾನು ಆರೆಸ್ಸೆಸ್!” ಎಂದು ತಮ್ಮನ್ನು ಸಮರ್ಥಿಸಿಕೊಂಡ ಸ್ವಾಭಿಮಾನಿ ಶ್ರೀ ಸುಬ್ರಹ್ಮಣ್ಯರು. ಮುಂದೆ ಬೇಯರ್ ಸಂಸ್ಥೆಯಲ್ಲಿ ಮುಂಬಡ್ತಿಯನ್ನೂ ಪಡೆದರು.
ಹಿಂದು ಸೇವಾ ಪ್ರತಿಷ್ಠಾನದ ಸಂಸ್ಕೃತ ಆಂದೋಲನದಲ್ಲಿ ಪ್ರಾರಂಭದಿಂದಲೂ ತಮ್ಮನ್ನು ತೊಡಗಿಸಿಕೊಂಡವರು. ಪುತ್ರ ವಿಜಿ, ಪುತ್ರಿ ಸಂಧ್ಯಾ -ಇಬ್ಬರಿಗೂ ಸಂಸ್ಕೃತ ಕಾರ್ಯ ಮಾಡಲು ಪ್ರೋತ್ಸಾಹಿಸಿದರು.
ಮುಂದೆ ‘ಅಕ್ಷರಂ'(ಸಂಸ್ಕೃತಭಾರತಿ ಕಾರ್ಯಾಲಯದಲ್ಲಿ)ದಲ್ಲಿ ಜವಾಬ್ದಾರಿ ತೆಗೆದುಕೊಂಡರು. ಪತ್ರಾಲಯ ಸಂಸ್ಕೃತ ಶಿಕ್ಷಣ, ‘ಸಂಭಾಷಣ ಸಂದೇಶ’ ಪತ್ರಿಕೆ -ಇತ್ಯಾದಿಗಳ ದಾಯಿತ್ವ ನಿಭಾಯಿಸುವುದಕ್ಕಾಗಿ ಬೇಯರ್ ಕಂಪೆನಿಯ ದೊಡ್ಡ ಹುದ್ದೆಗೆ ರಾಜೀನಾಮೆ ನೀಡಿದರು; ಸ್ವೇಚ್ಛಾ ನಿವೃತ್ತಿ ಪಡೆದರು. ಮೂರು ದಶಕಗಳ ಕಾಲ ಅಕ್ಷರಂನಲ್ಲಿ ಪ್ರತಿದಿನವೂ ಬಂದು ಜವಾಬ್ದಾರಿ ನಿರ್ವಹಿಸಿದರು. ಯದ್ಯಪಿ ಅಕ್ಷರಂನ ಪ್ರಮುಖ ದಾಯಿತ್ವದಲ್ಲಿದ್ದರೂ ಉಳಿದವರೇ ಪ್ರಮುಖರು, ‘ನಾನೊಬ್ಬ ಸಾಮಾನ್ಯ ಕಾರ್ಯಕರ್ತ’ನೆಂಬ ಭಾವ ಅವರ ಮಾತು-ಕೃತಿಗಳಲ್ಲಿ ಪ್ರತಿಕ್ಷಣವೂ ವ್ಯಕ್ತವಾಗುತ್ತಿತ್ತು. ಕೊನೆಯ ದಿನಗಳಲ್ಲೂ ಎಂದಿನಂತೆ ತಾವೇ ಸ್ವಯಂ ಕಾರ್ ನಡೆಸಿಕೊಂಡು ವಾರಕ್ಕೊಮ್ಮೆ ಬಂದು ಎಲ್ಲರ ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದರು! ಹತ್ತುದಿನಗಳ ಹಿಂದೆಯೂ ಬಂದು ಎಲ್ಲರನ್ನೂ ಮಾತಾಡಿಸಿ ಹೋಗಿದ್ದರು! ಹಿರಿಕಿರಿಯರೆಲ್ಲರಿಗೂ ಆತ್ಮೀಯರಾದ, ಸುಂದರ ವಸ್ತ್ರದಲ್ಲೇ ಸದಾ ಕಾಣಿಸಿಕೊಂಡ, ಅತ್ಯಂತ ಸರಳ ಸ್ವಭಾವದ, ‘ವಿನಾ ದೈನ್ಯೇನ ಜೀವನಂ’ ನಡೆಸಿದ ಶಿಸ್ತಿನ ಸಿಪಾಯಿ, ನೈಜ ಸ್ವಯಂಸೇವಕ, ನಗುಮೊಗದ ನಮ್ಮೆಲ್ಲರ ಪ್ರೀತಿಯ ‘ಸುಬ್ಬಣ್ಣ’ ಇಂದು ನಮ್ಮೊಂದಿಗಿಲ್ಲ.