ಇಂದು ಜಯಂತಿ
ಭಗತ್‌ ಸಿಂಗ್‌ ಅವರು ಭಾರತದ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿರುವ ಕ್ರಾಂತಿಕಾರಿ ನಾಯಕ. 23 ವರ್ಷಗಳ ಜೀವಿತಾವಧಿಯಲ್ಲಿ ತಲೆಮಾರುಗಳಿಗೆ ಪ್ರೇರಣೆ ತುಂಬುವಂತಹ ಬದುಕನ್ನು ನಡೆಸಿದ ವೀರ ಸೇನಾನಿ. ಭಾರತದ ಸ್ವಾತಂತ್ರ್ಯಕ್ಕಾಗಿ ಅವರು ನೀಡಿರುವ ತ್ಯಾಗ ಅವಿಸ್ಮರಣೀಯ.  ಇಂದು ಅವರ ಜಯಂತಿ.


ಪರಿಚಯ
ಭಗತ್ ಸಿಂಗ್ ಅವರು ಸೆಪ್ಟೆಂಬರ್ 28, 1907ರಲ್ಲಿ ಪಂಜಾಬ್ ಪ್ರಾಂತದ ಫೈಸಲಾಬಾದ್‌ ಜಿಲ್ಲೆಯ ಬಾಂಗಾ ಗ್ರಾಮದಲ್ಲಿ ಜನಿಸಿದರು. ಭಗತ್‌ ಸಿಂಗ್‌ರ ತಂದೆ ಕಿಶನ್‌ ಸಿಂಗ್‌ ಹಾಗೂ ತಾಯಿ ವಿದ್ಯಾವತಿ. ತಂದೆ ಕಿಶನ್ ಸಿಂಗ್ ಜೀವ ವಿಮಾ ಕಂಪನಿಯೊಂದರಲ್ಲಿ ಏಜೆಂಟ್‌ರಾಗಿ ಕೆಲಸ ನಿರ್ವಹಿಸಿದ್ದರು.
ಭಗತ್‌ ಸಿಂಗ್‌ ತಂದೆ ಹಾಗೂ ಅವರ ಚಿಕ್ಕಪ್ಪರಾ ಅಜಿತ್‌ ಸಿಂಗ್‌ ಹಾಗೂ ಸ್ವರಣ್‌ ಸಿಂಗ್‌ ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದ್ದರು. ಭಗತ್ ಸಿಂಗ್ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಾಂಗಾದಲ್ಲಿ ಮುಗಿಸಿದರು. ನಂತರ ಅವರು ಲಾಹೋರ್‌ನ ದಯಾನಂದ ಆಂಗ್ಲೋ-ವೇದಿಕ್ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಗಿಸಿದರು. ಹೀಗಾಗಿ ಆರ್ಯ ಸಮಾಜದ ತತ್ವಗಳು ಭಗತ್ ಸಿಂಗ್ ಜೀವನದ ಮೇಲೆ ಪರಿಣಾಮ ಬೀರಿದ್ದವು. ಅವರು ಲಾಹೋರ್‌ ನ ಕಾಲೇಜಿನಲ್ಲಿ ಪದವಿ ಪಡೆದರು. 1926ರಲ್ಲಿ ಲಾಹೋರ್‌ ನಲ್ಲಿ ನಡೆದ ಬಾಂಬ್‌ ದಾಳಿಯಲ್ಲಿ ಭಗತ್‌ ಸಿಂಗ್‌ ಭಾಗವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕಾರಣಕ್ಕಾಗಿ ಇವರನ್ನು 1927ರಲ್ಲಿ ಬಂಧಿಸಿದರು. ಕೆಲವು ಸಮಯಗಳ ನಂತರ ಶ್ಯೂರಿಟಿಯ ಆಧಾರದ ಮೇಲೆ ಅವರನ್ನು ಬಿಡುಗಡೆಗೊಳಿಸಲಾಯಿತು.


ಕಾಂತ್ರಿಕಾರಿ ಚಟುವಟಿಕೆಗಳು
ಜಾನ್ ಸ್ಯಾಂಡರ್ಸ್ ಹತ್ಯೆ
1928ರಲ್ಲಿ ಭಾರತದ ರಾಜಕೀಯ ಪರಿಸ್ಥಿತಿ ಕುರಿತು ವರದಿ ಮಾಡುವ ಸಲುವಾಗಿ ಬ್ರಿಟಿಷ್‌ ಸರ್ಕಾರವು ಸೈಮನ್‌ ಆಯೋಗವನ್ನು ಸ್ಥಾಪಿಸಿತು. ಆದರೆ ಇದನ್ನು ಕೆಲವು ಭಾರತೀಯ ರಾಜಕೀಯ ಪಕ್ಷಗಳು ಬಹಿಷ್ಕರಿಸಿದರು. ಏಕೆಂದರೆ ಅವರು ಸ್ಥಾಪಿಸಿದಂತಹ ಆಯೋಗದಲ್ಲಿ ಯಾವುದೇ ಭಾರತೀಯರು ಸದಸ್ಯತ್ವವನ್ನು ಪಡೆದಿರಲಿಲ್ಲ. ಹೀಗಾಗಿ ಈ ಆಯೋಗ ಕುರಿತು ದೇಶಾದ್ಯಂತ ಪ್ರತಿಭಟನೆಗಳು ನಡೆಸಿದರು. ನಂತರ ಅಕ್ಟೋಬರ್‌ 30, 1928ರಲ್ಲಿ ಆಯೋಗವು ಲಾಹೋರ್‌ ಗೆ ಭೇಟಿ ನೀಡಿತು. 1928ರ ಸೈಮನ್ ಕಮಿಷನ್ ವಿರುದ್ಧದ ಪ್ರತಿಭಟನೆಯಲ್ಲಿ ನಿರತರಾಗಿದ್ದ ಲಾಲಾ ಲಜಪತ್ ರಾಯರ ಮೇಲೆ ಸ್ಕಾಟ್ ಎಂಬ ಅಧಿಕಾರಿ ಮಾರಣಾಂತಿಕ ಹಲ್ಲೆ ಮಾಡಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡ ಲಾಲಾಜಿ ಕೆಲವು ದಿನಗಳ ನಂತರ ಮರಣ ಹೊಂದಿದರು. ಇದರ ಸೇಡನ್ನು ತೀರಿಸಿಕೊಳ್ಳಲು ಆಜಾದ್ ಮತ್ತವರ ತಂಡ ಸಿದ್ಧವಾಯಿತು. ಸ್ಕಾಟ್ ಹತ್ಯೆಗೆ ಸಂಚು ರೂಪಿಸಲಾಯಿತು. ಆದರೆ ದುರದೃಷ್ಟವಶಾತ್ ಸ್ಕಾಟ್ ಬದಲು ಮತ್ತೋರ್ವ ಅಧಿಕಾರಿ ಸ್ಯಾಂಡರ್ಸ್ ಬಲಿಯಾದನು. ಸ್ಯಾಂಡರ್ಸ್ ಗೆ ಗುಂಡಿಕ್ಕಿ ಹೊರಟ ಭಗತ್ ಸಿಂಗ್ ಮತ್ತು ರಾಜಗುರು ಅವರನ್ನು ಬೆನ್ನತ್ತಿದ ಚನ್ನನ್ ಸಿಂಗ್ ಎಂಬ ಅಧಿಕಾರಿಯನ್ನು ಆಜಾದ್ ಗುಂಡಿಟ್ಟು ಹೊಡೆದುರುಳಿಸಿದರು.
ಚಂದ್ರಶೇಖರ್‌ ಆಜಾದ್‌ ತಮ್ಮ ಒಂದಿಲ್ಲೊಂದು ಕ್ರಾಂತಿಕಾರಿ ಚಟುವಟಿಕೆಯಿಂದ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಹೀಗಾಗಿ ಅವರನ್ನು ಹಿಡಿಯಲು ಮಾಹಿತಿದಾರರನ್ನು ನೇಮಕ ಮಾಡಲಾಗಿತ್ತು. 1931 ಫೆಬ್ರವರಿ 27ರಂದು ಅಲಹಬಾದ್‌ನ ಆಲ್‌ಫ್ರೆಡ್‌ ಪಾರ್ಕ್‌ನಲ್ಲಿ ತಮ್ಮ ಸಂಗಡಿಗರ ಭೇಟಿಗೆ ಬಂದಾಗ ಬ್ರಿಟಿಷ್ ಪೊಲೀಸರು ಪಾರ್ಕ್‌ನ್ನು ಸುತ್ತುವರಿದು ಶರಣಾಗುವಂತೆ ಆಜಾದ್‌ಗೆ ಆದೇಶಿಸಿದ್ದರು. ಆದರೆ ಬ್ರಿಟೀಷರ ಎಚ್ಚರಿಕೆಗೆ ಮಣಿಯದ ಆಜಾದ್‌ ವೀರನಂತೆ ಹೋರಾಡಿದರು. ತನ್ನ ಬಾಲ್ಯದ ಶಪಥದಂತೆ ಬ್ರಿಟಿಷರಿಗೆ ಸಿಗದೆ ತಾನೇ ಗುಂಡು ಹಾರಿಸಿಕೊಂಡು ಪ್ರಾಣಬಿಟ್ಟರು.


ಅಸ್ಲೆಂಬಿ ಮೇಲೆ ಬಾಂಬ್‌ ಎಸೆತ
ಕ್ರಾಂತಿಕಾರಿಗಳ ಉದಯವನ್ನು ನಿಗ್ರಹಿಸಲು ಬ್ರಿಟಿಷ್‌ ಸರ್ಕಾರವು ಭಾರತದ ರಕ್ಷಣಾ ಕಾಯಿದೆಯನ್ನು ಜಾರಿಗೆ ತರಲು ನಿರ್ಧರಿಸಿತು. ಇದೇ ಸಂದರ್ಭದಲ್ಲಿ ಭಗತ್ ಸಿಂಗ್ ಸೆಂಟ್ರಲ್‌ ಲೆಜಿಸ್ಲೇಟಿವ್‌ ಅಸೆಂಬ್ಲಿಯೊಳಗೆ ಬಾಂಬ್‌ ಸ್ಪೋಟಿಸುವ ಯೋಜನೆಯನ್ನು ಹೆಚ್‌ ಎಸ್‌ ಆರ್‌ ಎ (ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್) ಪ್ರಸ್ತಾಪಿಸಿತು. ಏಪ್ರಿಲ್‌ 8, 1929ರಂದು ಭಗತ್ ಸಿಂಗ್‌ ಮತ್ತು ಬಟುಕೇಶ್ವರ ದತ್‌ ವಿಸಿಟರ್ಸ್‌ ಗ್ಯಾಲರಿಯಿಂದ ಧಾವಿಸಿ ಅಸೆಂಬ್ಲಿಯೊಳಗೆ ಎರಡು ಬಾಂಬ್‌ ಗಳನ್ನು ಎಸೆದರು. ಲಾಲಾ ಲಜಪತ್‌ ರಾಯ್‌ ಅವರ ಮರಣವನ್ನು ವಿರೋಧಿಸಲು ಈ ನಿರ್ಧಾರ ಮಾಡಲಾಗಿತ್ತು. ಈ ಕೃತ್ಯವೆಸಗಿರುವ ಭಗತ್‌ ಸಿಂಗ್‌ ಮತ್ತು ಬಟುಕೇಶ್ವರ ದತ್‌ ಅವರನ್ನು ಬಂಧಿಸಲಾಯಿತು.


ಭಗತ್‌ ಸಿಂಗ್‌ ಮತ್ತು ಸುಖದೇವ್‌ ಥಾಪರ್‌ ಜೊತೆಗೆ ಸೆಂಟ್ರಲ್‌ ಅಸೆಂಬ್ಲಿ ಬಾಂಬ್‌ ಪ್ರಕರಣದಲ್ಲಿ ದತ್ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ನಂತರ ದೆಹಲಿಯ ನ್ಯಾಯಾಧೀಶರು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 307 ಮತ್ತು ಸ್ಫೋಟಕ ವಸ್ತುಗಳ ಕಾಯಿದೆಯ ಸೆಕ್ಷನ್‌ 4ರ ಅಡಿಯಲ್ಲಿ ಶಿಕ್ಷೆಗೆ ಗುರಿಯಾದರು. ಅವರನ್ನು ಸೆಲ್ಯುಲಾರ್‌ ಜೈಲಿಗೆ ಸ್ಥಳಾಂತರಿಸಲಾಯಿತು. ಬಟುಕೇಶ್ವರ್‌ ದತ್‌ ಅವರು ಜೈಲಿನಿಂದ ಬಿಡುಗಡೆಗೊಂಡ ನಂತರ ಕ್ಷಯರೋಗಕ್ಕೆ ತುತ್ತಾದರು. ಆವರಿಗೆ ಅನಾರೋಗ್ಯವಿದ್ದರೂ ಸಹ ಮಹಾತ್ಮಾ ಗಾಂಧಿಯವರ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರು. ಈ ಕಾರಣಕ್ಕಾಗಿ ಅವರು ಮತ್ತೆ ನಾಲ್ಕು ವರ್ಷಗಳ ಕಾಲ ಜೈಲು ಸೇರಬೇಕಾಯಿತು.ನಂತರ ಬಟುಕೇಶ್ವರ್‌ ದತ್‌ ಅವರು ನಿಧನರಾದರು.


ಭಗತ್‌ ಸಿಂಗ್‌ ಅವರ ಸಹಚರರಾದ ಹನ್ಸ್‌ ರಾಜ್‌ ವೋಹ್ರಾ ಮತ್ತು ಜೈ ಗೋಪಾಲ್‌ ಅವರ ಹೇಳಿಕೆ ಆಧಾರ ಮೇಲೆ ಸಾಂಡರ್ಸ್‌ ಮತ್ತು ಚನನ್‌ ಸಿಂಗ್‌ ಅವರನ್ನು ಹತ್ಯೆಗೈದಿದ್ದಕ್ಕಾಗಿ ಪುನ: ಅವರನ್ನು ಬಂಧಿಸಲಾಯಿತು. ಅವರನ್ನು ದೆಹಲಿ ಜೈಲಿನಿಂದ ಸೆಂಟ್ರಲ್ ಜೈಲು ಮಿಯಾನ್‌ವಾಲಿಗೆ ಕಳುಹಿಸಲಾಯಿತು.
ಲಾಹೋರ್ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಜೆ.ಪಿ.ಸ್ಯಾಂಡರ್ಸ್ ಅವರ ಹತ್ಯೆಯ ನಂತರ ಭಗತ್ ಸಿಂಗ್ ಮತ್ತು ದಾಸ್ ಸೇರಿದಂತೆ ಅನೇಕ ಯುವ ಕ್ರಾಂತಿಕಾರಿಗಳನ್ನು ಬಂಧಿಸಲಾಯಿತು.
ಲಾಹೋರ್ ಜೈಲಿನಲ್ಲಿ ಕ್ರಾಂತಿಕಾರಿಗಳಿಗೆ ಉತ್ತಮ ಚಿಕಿತ್ಸೆಗಾಗಿ ಜತೀಂದ್ರನಾಥ್‌ ದಾಸ್‌ ಅವರು ಇತರ ಕ್ರಾಂತಿಕಾರಿ ಹೋರಾಟಗಾರರೊಂದಿಗೆ ಮತ್ತೊಂದು ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಯುರೋಪಿನ ಕೈದಿಗಳೊಂದಿಗೆ ಭಾರತೀಯ ರಾಜಕೀಯ ಕೈದಿಗಳಿಗೆ ಸಮಾನತೆ ಕುರಿತು ಒತ್ತು ಹೇಳಿದರು. ಭಾರತೀಯ ಕೈದಿಗಳಿಗೆ ಪತ್ರಿಕೆಗಳು ಅಥವಾ ಬರೆಯಲು ಕಾಗದದಂತಹ ಯಾವುದೇ ಓದುವ ಸಾಮಗ್ರಿಗಳನ್ನು ಒದಗಿಸಿರಲಿಲ್ಲ. ಆದರೆ ಅದೇ ಜೈಲಿನಲ್ಲಿದ್ದ ಬ್ರಿಟಿಷ್ ಕೈದಿಗಳ ಸ್ಥಿತಿಯೇ ಬೇರೆಯಾಗಿತ್ತು. ಜತೀಂದ್ರ ದಾಸ್‌ ಅವರ ಉಪವಾಸ ಸತ್ಯಾಗ್ರಹವು ಜುಲೈ 13, 1929 ರಂದು ಪ್ರಾರಂಭವಾಯಿತು. ಈ ಸತ್ಯಾಗ್ರಹವು ಸರಿ ಸುಮಾರು 63 ದಿನಗಳ ಕಾಲ ನಡೆಯಿತು. ಜೈಲು ಪ್ರಾಧಿಕಾರವು ಅವರ ಬೇಷರತ್ ಬಿಡುಗಡೆಗೆ ಶಿಫಾರಸು ಮಾಡಿತು, ಆದರೆ ಸರ್ಕಾರವು ಸಲಹೆಯನ್ನು ತಿರಸ್ಕರಿಸಿತು ಮತ್ತು ಜಾಮೀನಿನ ಮೇಲೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಆದರೆ ಉಪವಾಸದ 63ನೇ ದಿನವಾದ ಸೆಪ್ಟೆಂಬರ್ 13, 1929 ರಂದು ಜತೀಂದ್ರನಾಥ್‌ ದಾಸ್‌ ಅವರು ನಿಧನರಾದರು.
ಬ್ರಿಟಿಷ್ ಪೊಲೀಸ್ ಅಧಿಕಾರಿಗೆ ಗುಂಡಿಕ್ಕಿದ ಆರೋಪದ ಮೇಲೆ ಭಗತ್‌ ಸಿಂಗ್‌, ರಾಜಗುರು ಮತ್ತು ಸುಖದೇವ್ ಅವರಿಗೆ ನೇಣು ಶಿಕ್ಷೆ ವಿಧಿಸಲಾಗಿತ್ತು. ಮಾರ್ಚ್ 24, 1931 ರಂದು ಅವರನ್ನು ನೇಣಿಗೇರಿಸುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಭಗತ್ ಸಿಂಗ್ ಅವರಿಗೆ ವಿಧಿಸಿರುವ ಶಿಕ್ಷೆಯನ್ನು ರದ್ದು ಮಾಡಬೇಕೆಂದು ಲಾಹೋರ್ ಸೆಂಟ್ರಲ್ ಜೈಲಿನ ಎದರು ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಇದನ್ನು ಅರಿತ ಬ್ರಿಟೀಷರು ನೇಣಿಗೆರಿಸುವ ಸಮಯವನ್ನು 11 ಗಂಟೆ ಹಿಂದೂಡಿ ಮಾರ್ಚ್ 23, 1931, 7.30 ಕ್ಕೆ ಗಲ್ಲಿಗೇರಿಸಲಾಯಿತು.

Leave a Reply

Your email address will not be published.

This site uses Akismet to reduce spam. Learn how your comment data is processed.