
RSS Sarasanghachalak Mohan Bhagwat offered floral tributes to Dr Ambedkar statue at Hombegoudanagar Slum at Bengaluru on Friday November 14, 2014
ಬೆಂಗಳೂರು ನವೆಂಬರ್ 14: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಬೆಂಗಳೂರಿನ ವಿಲ್ಸನ್ ಗಾರ್ಡನ್ ಬಳಿಯ ಹೊಂಬೇಗೌಡನಗರದ ಸ್ಲಂ (ಸೇವಾ ಬಸ್ತಿ) ಗೆ ಭೇಟಿ ನೀಡಿ ನಂತರ ಅಲ್ಲಿನ ನಿವಾಸಿಗಳು- ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

- ಶುಕ್ರವಾರ ಸಂಜೆ 5.20 ಕ್ಕೆ ಸ್ಲಂ ಗೆ ಆಗಮಿಸಿದ ಭಾಗವತ್ ರನ್ನು ಸ್ಥಳೀಯ ಡಾ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಶ್ರೀ ಪಾಂಡ್ಯನ್ ಸ್ವಾಗತಿಸಿದರು. ಅಲ್ಲಿನ ಮಾತೆಯರು ಆರತಿ ಬೆಳಗಿ, ಭಾಗವತ್ ರ ಹಣೆಗೆ ತಿಲಕವಿಟ್ಟು ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತ ಕೋರಿದರು.
- ಮೋಹನ್ ಭಾಗವತ್ ರು ಅಲ್ಲಿನ ಡಾ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನಗಳನ್ನು ಸಲ್ಲಿಸಿ ಸ್ಲಂ ನಿವಾಸಿ ಶ್ರೀಮತಿ ಮುನಿಯಮ್ಮ ಎಂಬವರ ಮನೆಗೆ ಭೇಟಿಯಿತ್ತರು. ಅಲ್ಲಿ ಪಾನೀಯ ಸ್ವೀಕರಿಸಿ ಬಳಿಕ ಅಲ್ಲಿನ ಕಲ್ಲುಮಾರಿಯಮ್ಮ ಗುಡಿಯಲ್ಲಿ ಪೂಜೆ ಸಲ್ಲಿಸಿದರು.
- ಬಳಿಕ ಡಾ ಅಂಬೇಡ್ಕರ್ ಅಂಗನವಾಡಿ ಕೇಂದ್ರದಲ್ಲಿ ನಡೆದ ಕಿರುಸಂವಾದ ಕಾರ್ಯಕ್ರಮದಲ್ಲಿ ಸ್ಲಂನ ಮಕ್ಕಳು, ಪಾಲಕರೊಂದಿಗೆ ಮಾತನಾಡಿದರು. ಇದಕ್ಕೂ ಮುನ್ನ ವಿದ್ಯಾರ್ಥಿಗಳು ಗಾಯತ್ರಿ ಮಂತ್ರ, ಶ್ಲೋಕ-ವಚನಗಳನ್ನು ಪಠಿಸಿದರು. ದೇಶ ಭಕ್ತಿಗೀತೆ ಹಾಡಿದರು.
- ಮಕ್ಕಳೊಂದಿಗೆ ಮಾತನಾಡುತ್ತಾ “ಸೂರ್ಯನ ಅನುಪಸ್ಥಿತಿಯಲ್ಲಿ ಬೆಳಕು ಕೊಡುವ ಶಕ್ತಿ ಪುಟ್ಟ ಹಣತೆಗಿದೆ. ಅದರಲ್ಲಿ ತೈಲ ಇರುವಷ್ಟು ಸಮಯ ಬೆಳಕನ್ನು ಕೊಡುವ ಶ್ರೇಷ್ಠ ಕಾರ್ಯವನ್ನು ಸಾಮಾನ್ಯ ಹಣತೆಯೊಂದು ಮಾಡುತ್ತದೆ. ಅಂತೆಯೇ ಜನಸಾಮಾನ್ಯರಾದ ನಾವು ಹಣತೆಯಂತೆ ನಮ್ಮ ಸುತ್ತಲಿನ ಪ್ರದೇಶವನ್ನು ಬೆಳಗುವ ಶಕ್ತಿ ಹೊಂದಬೇಕು ” ಎಂದರು ಮೋಹನ್ ಭಾಗವತ್.
- ಆರೆಸ್ಸೆಸ್ ಕ್ಷೇತ್ರೀಯ ಕಾರ್ಯವಾಹ ರಾಮಕೃಷ್ಣ ರಾವ್, ಕ್ಷೇತ್ರೀಯ ಪ್ರಚಾರಕ ಮಂಗೇಶ್ ಭೇಂಡೆ, ಪ್ರಾಂತ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ಪ್ರಾಂತ ಸಹ ಕಾರ್ಯವಾಹ ಬಿ ವಿ ಶ್ರೀಧರಸ್ವಾಮಿ, ಪ್ರಾಂತ ಪ್ರಚಾರಕ್ ಮುಕುಂದ, ರಾಷ್ಟ್ರೋತ್ಥಾನ ಪರಿಷತ್ ನ ದಿನೇಶ್ ಹೆಗ್ಡೆ, ಜಾಗರಣ ಪ್ರಕಲ್ಪದ ಎಜಿಕೆ ನಾಯಕ್ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಇಂತಹ ಸೇವಾಬಸ್ತಿಗಳಲ್ಲಿ ವ್ಯಾಸಂಗ ಕೇಂದ್ರ, ಶಿಶುಮಂದಿರ, ಬಾಲಗೋಕುಲ, ಕಂಪ್ಯೂಟರ್, ಹೊಲಿಗೆ ತರಬೇತಿ, ಆರೋಗ್ಯ ತಪಾಸಣೆ, ಭಜನಾ ಕೇಂದ್ರ, ಜೋಳಿಗೆ ಪುಸ್ತಕಾಲಯ ಸೇರಿದಂತೆ ಬಹುಮುಖದ ಚಟುವಟಿಕೆಗಳನ್ನು ನಡೆಸುತ್ತಿದೆ.
ರಾಷ್ಟ್ರೋತ್ಥಾನ ಪರಿಷತ್ ಅಲ್ಲದೇ ಆರೆಸ್ಸೆಸ್ ಪ್ರೇರಿತ ಸೇವಾ ಸಂಸ್ಥೆಗಳಾದ ಹಿಂದೂ ಸೇವಾ ಪ್ರತಿಷ್ಠಾನ, ಕೇಶವ ಸೇವಾ ಸಮಿತಿ ತಲಾ 80 ಸೇವಾಬಸ್ತಿಗಳಲ್ಲಿ ಹಾಗೂ ಅಭ್ಯುದಯ, ಸ್ನೇಹ ಸೇವಾ ಸಮಿತಿ 45 ಸೇವಾಬಸ್ತಿಗಳಲ್ಲಿ ಇಂತಹ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿವೆ.
ಸೇವಾಬಸ್ತಿಗಳಲ್ಲಿನ ಅವಕಾಶ ವಂಚಿತ ಮಕ್ಕಳ ಶಿಕ್ಷಣ, ಸಂಸ್ಕಾರ ಹಾಗೂ ಆ ಪ್ರದೇಶದ ಮಹಿಳೆಯರ ಆರೋಗ್ಯ, ಸ್ವಾವಲಂಬನೆಗೆ ಒತ್ತು ನೀಡಲಾಗುತ್ತಿದೆ.
ಸೇವಾಬಸ್ತಿಗಳಲ್ಲಿ ಬಂದ ನೂರಾರು ವಿದ್ಯಾವಂತ ಯುವತಿಯರು ತರಬೇತಿ ಪಡೆದು ಶಿಕ್ಷಕರಾಗಿ, ಆರೋಗ್ಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆ.
ಸೇವಾಬಸ್ತಿಗಳಲ್ಲಿ ಕೆಲಸ ಮಾಡುವಾಗ ಸಿಕ್ಕ ಅನಾಥ ಮಕ್ಕಳು, ಅವಕಾಶವಂಚಿತ ಮಕ್ಕಳು, ಚಿಂದಿ ಆಯುವ ಮಕ್ಕಳು, ಬಾಲಕಾರ್ಮಿಕರಾಗಿದ್ದ ಮಕ್ಕಳು, ಮನೆಬಿಟ್ಟು ಓಡಿಹೋಗಿದ್ದ ಮಕ್ಕಳ ಪುನರ್‌ವಸತಿಗಾಗಿ 7 ಕಡೆಗಳಲ್ಲಿ ನೆಲೆ, ನಂದಗೋಕುಲದಂತಹ ವಿಶಿಷ್ಟ ಹಾಸ್ಟೆಲ್‌ಗಳನ್ನು ತೆರೆಯಲಾಗಿದ್ದು, 287 ಮಕ್ಕಳು ಆಶ್ರಯ ಪಡೆದಿದ್ದಾರೆ.
ಸೇವಾಬಸ್ತಿಗಳಲ್ಲಿನ ಬೆಳೆಯುತ್ತಿರುವ ಮಕ್ಕಳ ಕೌಶಲ್ಯ ವಿಕಾಸಕ್ಕಾಗಿ ಕಂಪ್ಯೂಟರ್ ಕಲಿಕೆ ಸೇರಿದಂತೆ ಅನೇಕ ತರಹದ ತರಬೇತಿ ನೀಡಲಾಗುತ್ತಿದೆ. ಕೌಶಲ್ಯ ವಿಕಾಸದ ತರಬೇತಿಯ ಪ್ರಕ್ರಿಯೆಯಲ್ಲಿ ಅನೇಕ ಉದ್ಯಮ ಸಂಸ್ಥೆಗಳು ಕೈಜೋಡಿಸಿವೆ.
ಮಹಿಳೆಯರ ಆರೋಗ್ಯ, ಸ್ವಾವಲಂಬನೆ ಮೂಡಿಸುವ ಪ್ರಯತ್ನದಲ್ಲಿ ಲಯನ್ಸ್, ರೋಟರಿ ಸಂಸ್ಥೆಗಳು ಸಹಯೋಗ ನೀಡಿವೆ.