ಭಾಯಿ ಪರಮಾನಂದರು.. ಭಾರತ ಕಂಡ ಶ್ರೇಷ್ಠ ಕ್ರಾಂತಿಕಾರಿ. ಪಂಜಾಬಿನ ಝೇಲಮ್ಮಿನಲ್ಲಿ ಹುಟ್ಟಿದ ಇವರು, ತಂದೆ ತಾರಾ ಚಂದ್ ಮೋಹ್ಯಾಲರ ಕಾರಣದಿಂದ ಬಹಳ ಕಿರಿಯ ವಯಸ್ಸಿನಲ್ಲೇ ಆರ್ಯ ಸಮಾಜದ ಪ್ರಭಾವಕ್ಕೆ ಒಳಪಡುತ್ತಾರೆ. ಆರ್ಯ ಸಮಾಜದ ಕಾರ್ಯಗಳ ಪ್ರಚಾರಕ್ಕಾಗಿ 1905ರ ನಂತರದಲ್ಲಿ ಆಫ್ರಿಕಾ, ಅಮೇರಿಕಾ ಖಂಡಗಳಲ್ಲೂ ಅನೇಕ ವರ್ಷಗಳ ಕಾಲ ಕೆಲಸ ಮಾಡುತ್ತಾರೆ. ಹಾಗಿರುವಾಗಲೇ ಕೇವಲ ಧಾರ್ಮಿಕ ಸುಧಾರಣೆ ಮಾತ್ರವಲ್ಲ ರಾಷ್ಟ್ರದ ಮುಕ್ತಿಯೂ ಆರ್ಯ ಸಮಾಜದ ಜವಾಬ್ದಾರಿ ಎಂಬುದನ್ನ ಮನಗಂಡ ಪಂಜಾಬಿನ ಆರ್ಯ ಸಮಾಜದ ಅನೇಕ ಮುಖಂಡರುಗಳೂ ಸ್ವತಾಂತ್ರ್ಯಾಂದೋಲನದಲ್ಲಿ ಪ್ರಮುಖವಾಗಿ ಭಾಗವಹಿಸುತ್ತಿದ್ದರು.
ಅದರಲ್ಲೂ ಲಾಲಾ ಲಜಪತರಾಯರಂತಹ ಹಿರಿಯ ಮುತ್ಸದ್ದಿಗಳ ಜೊತೆ ಒಡನಾಟವಿದ್ದುದರಿಂದ ಸಹಜವಾಗಿಯೇ ಪರಮಾನಂದರಿಗೆ ಸ್ವಾತಂತ್ರ್ಯಾಂದೋಲನದಲ್ಲಿ ಆಸಕ್ತಿ ಮೂಡುತ್ತದೆ. ಮುಂದೆ ಆರ್ಯ ಸಮಾಜದ ಕೆಲಸಗಳ ಸಲುವಾಗಿಯೇ ಪ್ರವಾಸ ಮಾಡುತ್ತಾ ಜೊತೆಗೆ ಗದರ್ ಪಾರ್ಟಿಯ ಲಾಲಾ ಹರದಯಾಳರ ಜೊತೆ ದಕ್ಷಿಣ ಅಮೇರಿಕಾದ ಬ್ರಿಟಿಷ್ ವಸಾಹತುಗಳಲ್ಲೂ ಪ್ರವಾಸ ಮಾಡುವ ಇವರು, ಗದರ್ ಚಳುವಳಿಯನ್ನು ಆರಂಭಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಅಲ್ಲದೆ ಗದರ್ ಪಾರ್ಟಿಯ ಪ್ರಮುಖ ಗ್ರಂಥ ತಾರಿಖ್ – ಐ – ಹಿಂದ್ಅನ್ನು ರಚಿಸುತ್ತಾರೆ.
ಮೊದಲನೆಯ ಮಹಾಯುದ್ಧದ ತರುವಾಯು ಗದರ್ ಭಾರತದಲ್ಲಿ ಸಶಸ್ತ್ರ ಕ್ರಾಂತಿಗಾಗಿ ಚಳುವಳಿಯನ್ನು ಹೂಡಿತ್ತು. ಈ ಕುರಿತಾಗಿ ಪೇಶಾವರದ ನಾಯಕತ್ವವನ್ನ ಭಾಯಿ ಪರಮಾನಂದರಿಗೆ ವಹಿಸಲಾಗಿತ್ತು. ಲಾಹೋರ್ ಕಾನ್ಸ್ಪಿರೆಸಿ ಕೇಸಿನಲ್ಲಿ ಬಂಧಿತರಾದ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಬ್ರಿಟಿಷ್ ಸರಕಾರ ಇವರನ್ನು ಅಂಡಮಾನಿನ ಜೈಲಿಗೆ ಗಡಿಪಾರು ಮತ್ತು ಜೀವಾವಧಿ ಶಿಕ್ಷೆಗೆ ಕಳುಹಿಸಿತು. ಅಂಡಮಾನಿನ ಜೈಲಿನಲ್ಲಿ ಸಾವರ್ಕರರ ಸಂಪರ್ಕಕ್ಕೂ ಬರುವ ಭಾಯಿ ಪರಮಾನಂದರು ಅಲ್ಲಿನ ಸೆರೆಮನೆ ವಾಸದಲ್ಲಿ ಖೈದಿಗಳಿಗೆ ನೀಡುತ್ತಿದ್ದ ಚಿತ್ರ ಹಿಂಸೆಯ ವಿರುದ್ಧವಾಗಿ ಸತತ ಎರಡು ತಿಂಗಳುಗಳ ಕಾಲ ಉಪವಾಸದ ಹೋರಾಟವನ್ನು ನಡೆಸುತ್ತಾರೆ.
ಬಡತನದ ನಡುವಿನಲ್ಲೂ ಸ್ವಾತಂತ್ರ್ಯದ ಆಂದೋಲನಕ್ಕಾಗಿ ತಮ್ಮ ಇಡೀ ಬದುಕನ್ನೇ ಮುಡಿಪಿಟ್ಟ ಭಾಯಿ ಪರಮಾನಂದರ ತ್ಯಾಗ ಬಲಿದಾನ ಎಂದಿಗೂ ಸ್ಮರಣೀಯ. ಗಾಂಧೀಜಿಯವರ ಒಡನಾಡಿ ರೆವ್. ಸಿ.ಎಫ್ ಆಂಡ್ರೀವ್ಸ್ ಭಾಯಿ ಪರಮಾನಂದರು ಗಡಿಪಾರಾಗಿ ಅಂಡಮಾನಿನ ಜೈಲಿಗೆ ಹೋದಾಗ ಅವರ ಮನೆಗೆ ಭೇಟಿ ನೀಡುತ್ತಾರೆ.ಗಡಿಪಾರಾಗಿ ಜೈಲು ಸೇರಿದ್ದರಿಂದ ಜೋಪಡಿಯಂತಹ ಕೋಣೆಯಲ್ಲಿ ಗಾಳಿ ಬೆಳಕು ಇಲ್ಲದೆ, ಒಂದು ಅಗುಳು ಧಾನ್ಯವೂ ಇರದೆ, ರೋಗಗ್ರಸ್ತರಾದ ಮಕ್ಕಳನ್ನು ತೊಡೆಯ ಮೇಲೆ ಮಲಗಿಸಿಕೊಂಡ ಅವರ ಹೆಂಡತಿ ಮತ್ತು ಮಕ್ಕಳನ್ನು ಕಂಡು ಅತ್ಯಂತ ಭಾವುಕರಾಗಿ “ ಭಾಯಿ ಪರಮಾನಂದರಾಗುವುದು ಅಷ್ಟು ಸುಲಭವಲ್ಲ” ಎನ್ನುತ್ತಾ ಒದ್ದೆಯಾದ ಕಣ್ಣಂಚು ಒರೆಸಿಕೊಳ್ಳುತ್ತಾರೆ . .
ಅಂಡಮಾನಿನ ಸೆರೆವಾಸದ ನಂತರ ಭಾರತಕ್ಕೆ ಮರಳಿದ ಭಾಯಿ ಪರಮಾನಂದರು ಮದನ್ ಮೋಹನ್ ಮಾಳವೀಯರ ನಂತರ 1930ರ ಹೊತ್ತಿಗೆ ಹಿಂದೂ ಮಹಾಸಭಾದ ನೇತೃತ್ವವನ್ನು ವಹಿಸಿಕೊಳ್ಳುತ್ತಾರೆ. ಹಿಂದೂ ಮಹಾಸಭಾ ಅಲ್ಲಿನವರೆಗೂ ಮಂದಗಾಮಿ ತತ್ವಗಳ ಆಧಾರದ ಮೇಲೆ ನಡೆಯುತ್ತಿತ್ತು. ಆದರೆ ಮಹಾರಾಷ್ಟ್ರದ ಬಿ.ಎಸ್.ಮೂಂಜೆ ಮತ್ತು ಭಾಯಿ ಪರಮಾನಂದರ ನೇತೃತ್ವದಿಂದ ತೀವ್ರಗಾಮಿಯಾದ, ಚಟುವಟಿಕೆಗಳಿಂದ ಕೂಡಿದ ಹಿಂದೂ ಮಹಾಸಭಾವನ್ನುತಮ್ಮ ಹೆಗಲುಗಳ ಮೇಲೆ ಮುನ್ನಡೆಸಿಕೊಂಡು ಬಂದಿದ್ದರು. ಅವರ ಸ್ಮೃತಿ ದಿನದಂದು ನಮ್ಮ ಹೃದಯಪೂರ್ವಕ ನಮನಗಳು.