ಬೆಂಗಳೂರು: ನಾವು ಯಾವುದೇ ಗುರಿಯನ್ನು ಹೊಂದುವ ಮುನ್ನ, ಗುರಿಯನ್ನು ತಲುಪುತ್ತೇವೆ ಎಂಬ ನಂಬಿಕೆ ಇಟ್ಟುಕೊಂಡು ಮುನ್ನುಗ್ಗಬೇಕು. 2047ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂಬ ಗುರಿ ನಮ್ಮೆಲ್ಲರ ಮುಂದಿದೆ. ಅದನ್ನು ಈಡೇರಿಸುವುದಕ್ಕಾಗಿ ನಾವು ಕಾರ್ಯಪ್ರವೃತ್ತರಾಗಲು ಬೇಕಾದ ಆತ್ಮವಿಶ್ವಾಸ ಪ್ರಸ್ತುತ ರಾಷ್ಟ್ರಾದ್ಯಂತ ಮೂಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ದಿಶಾಭಾರತ್ ಸಂಸ್ಥೆಯ ‘ನನ್ನ ಭಾರತ’ ಅಭಿಯಾನದ ಅಂಗವಾಗಿ ಆಯೋಜಿಸಲಾಗಿರುವ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮದ ಹದಿನಾಲ್ಕನೇ ದಿನ ‘ಅಮೃತಕಾಲದಲ್ಲಿ ಭಾರತ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
1700 ಸಾಮಾನ್ಯ ಶಕ ವರ್ಷದವರೆಗೆ ಭಾರತವು ಜಗತ್ತಿನ ಮೂರನೇ ಒಂದರಷ್ಟು ಒಟ್ಟು ದೇಶೀಯ ಉತ್ಪನ್ನವನ್ನು ಹೊಂದಿದ್ದ ಸಮೃದ್ಧ ರಾಷ್ಟ್ರವಾಗಿತ್ತು ಎನ್ನುವುದನ್ನು ಹಲವು ವಿದೇಶಿ ಇತಿಹಾಸಕಾರರೂ ತಿಳಿಸುತ್ತಾರೆ. ಆದರೆ ನಿರಂತರ ವಿದೇಶಿ ಲೂಟಿಕೋರರ ಆಕ್ರಮಣದ ಕಾರಣಕ್ಕಾಗಿ ಭಾರತ ತನ್ನ ಬೌದ್ಧಿಕ ಮತ್ತು ಭೌತಿಕ ಶ್ರೀಮಂತಿಕೆಯನ್ನು ಕಳೆದುಕೊಂಡು ಸ್ವಾತಂತ್ರ್ಯವನ್ನು ಪಡೆಯಿತು. ಇಂದು ಸರ್ಕಾರದ ಎಲ್ಲಾ ಯೋಜನೆಗಳು ಮತ್ತೊಮ್ಮೆ ಭಾರತವನ್ನು ಬೌದ್ಧಿಕ ದಾಸ್ಯತನದಿಂದ ಮುಕ್ತಿಗೊಳಿಸುವಲ್ಲಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
1947ರಿಂದ ಪ್ರತಿ ಸರ್ಕಾರದ ಯೋಜನೆಯೂ ಸಾಮಾನ್ಯ ಜನರನ್ನು ತಲುಪಬೇಕು ಎನ್ನುವುದನ್ನು ಎಲ್ಲಾ ಪ್ರಧಾನಮಂತ್ರಿಗಳು ಹೇಳಿದ್ದಾರೆ. ಆದರೆ ನರೇಂದ್ರ ಮೋದಿ ಅವರು ಮಾಡಿ ತೋರಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರ ತಂದ ಯೋಜನೆಗಳು ನಮ್ಮಲ್ಲಿ ನಾವು ಆತ್ಮನಿರ್ಭರರಾಗುವ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದೇ ಆತ್ಮವಿಶ್ವಾಸದೊಂದಿಗೆ ಭಾರತದ ಯುವಕರು ಭಾರತದ ಸರ್ವಾಂಗೀಣ ಅಭಿವೃದ್ಧಿಗಾಗಿ ತಮ್ಮ ಮುಂದಿನ 25 ವರ್ಷಗಳನ್ನು ಅತ್ಯಂತ ಕ್ರಿಯಾಶೀಲರಾಗಿ ಶ್ರಮವಹಿಸುವುದಕ್ಕೆ ಪ್ರೇರಣೆ ನೀಡುತ್ತದೆ ಎಂದು ನುಡಿದರು.
ಆತ್ಮನಿರ್ಭರ ಭಾರತಕ್ಕಾಗಿ 11 ಕೋಟಿ ಯುವಕರಿಗೆ ಪಿಎಂ ಕೌಶಲ್ ಯೋಜನಾ ವತಿಯಿಂದ ಕೌಶಲ್ಯ ತರಬೇತಿ ನೀಡಲಾಗಿದೆ. ನೂತನ 390 ವಿಶ್ವವಿದ್ಯಾನಿಲಯಗಳ ಆರಂಭಿಸಲಾಗಿದೆ. ಪಿಎಂ ಶ್ರೀ ಯೋಜನೆ ಮೂಲಕ 27360 ಕೋಟಿ ರೂಪಾಯಿಯನ್ನು ಗುಣಮಟ್ಟದ ಶಾಲೆಗಳ ನಿರ್ಮಾಣಕ್ಕೆ ನೀಡಲಾಗಿದೆ. 2700 ಕೋಟಿ ಐಐಟಿಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪ್ರೋತ್ಸಾಹಿಸಲಾಗಿದೆ. ಡಿಬಿಟಿ ವ್ಯವಸ್ಥೆಯನ್ನೊಳಗೊಂಡ ಯೋಜನೆಗಳನ್ನು ಹೆಚ್ಚುಗೊಳಿಸಿದ ಕಾರಣ 2.73 ಲಕ್ಷ ಕೋಟಿ ಹಣದ ಸೋರಿಕೆಯನ್ನು ತಡೆದು, ತೆರಿಗೆ ಕಟ್ಟುವವರ ಹಣ ಉಳಿತಾಯವಾಗುತ್ತಿದೆ ಎಂದರು.
ಭಾರತ ಆತ್ಮನಿರ್ಭರಗೊಳ್ಳಲು ಮೂಲಭೂತ ಸೌಕರ್ಯ ಅನಿವಾರ್ಯ ಎನ್ನುವುದನ್ನರಿತ ಕೇಂದ್ರ ಸರ್ಕಾರ 11.72 ಕೋಟಿ ಶೌಚಾಲಯವನ್ನು ಸ್ವಚ್ಚಭಾರತ ಅಭಿಯಾನದ ಭಾಗವಾಗಿ ನಿರ್ಮಿಸಲಾಗಿದೆ. 39.76 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಲೋನ್ ಲಭಿಸಿದೆ. 7351 ಕೋಟಿ ಹಣ ಎಸ್ ಸಿ ಎಸ್ ಟಿ ಮತ್ತು ಮಹಿಳೆಯರ ಸ್ವಾವಲಂಬಿತ್ವಕ್ಕಾಗಿ ಸ್ಟ್ಯಾಂಡ್ ಅಪ್ ಇಂಡಿಯಾ ಮೂಲಕ ನೀಡಲಾಗಿದೆ. ಪಿಎಂ ಆವಾಸ್ ಯೋಜನೆಯಡಿ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. 2.86 ಕೋಟಿ ಮನೆಗಳಿಗೆ ವಿದ್ಯತ್ ಸಂಪರ್ಕ ಒದಗಿಸಲಾಗಿದೆ. ಅಷ್ಟೇ ಅಲ್ಲದೇ 9.76 ಕೋಟಿ ಸಿಲಿಂಡರ್ ಗಳನ್ನು ಉಜ್ವಲ ಯೋಜನೆ ಮೂಲಕ ವಿತರಿಸಲಾಗಿದೆ ಎಂದು ತಿಳಿಸಿದರು.
ಭಾರತದ 80 ಕೋಟಿ ಮಂದಿ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಮಾಡಿಕೊಟ್ಟ ಅನುಕೂಲತೆಯಿಂದಾಗಿ ತಂತ್ರಜ್ಞಾನದ ಬಳಕೆ ಜನಸಾಮಾನ್ಯರ ಒಳಿತಿಗಾಗಿ ರೂಪುಗೊಂಡ ಪರಿಯನ್ನು ಜಗತ್ತು ಶ್ಲಾಘಿಸುತ್ತಿದೆ. ಈ ಕ್ಷೇತ್ರದಲ್ಲಿ ಭಾರತೀಯ ಯುವಕರು ಹೆಚ್ಚು ಕೊಡುಗೆ ನೀಡುತ್ತಿದ್ದಾರೆ. ಸರ್ಕಾರದ ಈ ಎಲ್ಲಾ ಯೋಜನೆಗಳ ಅನುಷ್ಠಾನದ ಕುರಿತು ಪ್ರಗತಿ ಆನ್ ಲೈನ್ ಕಾನ್ಫರೆನ್ಸ್ ಮೂಲಕ ಪ್ರತಿ ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳ ಜೊತೆಗೆ ಯೋಜನೆಗಳ ಕುರಿತು ಪ್ರಧಾನಮಂತ್ರಿಗಳು ಸ್ವತಃ ಚರ್ಚಿಸುತ್ತಾರೆ. ಸಬ್ ಕಾ ಸಾಥ್ ಸಬ್ಕಾ ವಿಕಾಸ್ ಎಲ್ಲಾ ಸಾಮಾನ್ಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದೆ. ಇದರ ಜೊತೆಗೆ ಪ್ರತಿ ಭಾರತೀಯನು ರಾಷ್ಟ್ರಕ್ಕಾಗಿ ಶ್ರಮವಹಿಸಿದರೆ ಭಾರತದ ಅಮೃತಕಾಲ ಸಮೃದ್ಧವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.