ಬೆಂಗಳೂರು, ಫೆ .3, 2024: ಕಲೆ ಒಂದು ವಿದ್ಯೆಯಾಗಿದ್ದು ಅಂತ್ಯದಲ್ಲಿ ನಮ್ಮ ಮುಕ್ತಿಗೂ ಕಾರಣವಾಗುತ್ತದೆ. ನಮ್ಮ ವಿಕಾರಗಳಿಂದ ನಮ್ಮನ್ನು ಮೇಲಕ್ಕೆತ್ತಿ ಸಂಪೂರ್ಣ ಸಮಾಜದ ವಿಚಾರ, ಸಂವೇದನೆಯನ್ನು ಅರ್ಥಮಾಡಿಸಿ ಸಮರ್ಥರನ್ನಾಗಿಸುತ್ತದೆ. ಭಾರತದ ‘ಸ್ವ’ ಅನ್ನು ಉಳಿಸುವ ಕೆಲಸವನ್ನು ಕಲೆ ಮತ್ತು ಕಲಾವಿದರು ಮಾಡುತ್ತಿದ್ದಾರೆ. ಹಾಗಾಗಿ ಕಲೆ ಮತ್ತು ಕಲಾವಿದರನ್ನು ಗೌರವಿಸಬೇಕು. ಭಾರತೀಯ ‘ಸ್ವ’ ಅನ್ನು ಪೋಷಿಸುವ ಕಲಾವಿದರ ಸಂಖ್ಯೆ ಹೆಚ್ಚಾಗಬೇಕು. ಜಗತ್ತಿನ ಎಲ್ಲಾ ಕಲೆಗಳು ಮನುಷ್ಯನನ್ನು ಮನುಷ್ಯನನ್ನಾಗಿಸುವ ದಿಕ್ಕಿನೆಡೆಗೆ ಸಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು.
ಸಂಸ್ಕಾರ ಭಾರತಿ ವತಿಯಿಂದ ಫೆಬ್ರವರಿ 1 ರಿಂದ 4 ರವರೆಗೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿ ಜರುಗುತ್ತಿರುವ ಅಖಿಲ ಭಾರತೀಯ ಕಲಾಸಾಧಕ ಸಂಗಮದಲ್ಲಿ, ಮೂರನೇ ದಿನ ನಡೆದ ‘ಭರತ ಮುನಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಪೂರ್ಣ ಸಮಾಜವನ್ನು ಜೋಡಿಸುವುದಕ್ಕಾಗಿ ಇರುವ ಸತ್ಯವನ್ನು ದರ್ಶಿಸಲು, ಸಂವೇದನೆಯನ್ನು ಉಂಟುಮಾಡಲು ನಿತ್ಯ ನಿರಂತರವಾಗಿ ಸಹಕರಿಸುವ ವೃತ್ತಿಯು ಮುಕ್ತಿಯೆಡೆಗೆ ಕೊಂಡೊಯ್ಯುವ ಕಲೆಯಾಗಿದೆ. ಆ ಕಲೆ ವಿಶ್ವವನ್ನು ಸುಸಂಸ್ಕೃತಗೊಳಿಸುತ್ತದೆ. ಆದ್ದರಿಂದ ಅಂತಹ ಕಲೆಯ ರಕ್ಷಣೆ ಮತ್ತು ಸಂಸ್ಕೃತಿಯ ರಕ್ಷಣೆ ಬೇರೆಯಲ್ಲ ಎಂದು ನುಡಿದರು.
ಭಾರತೀಯರನ್ನು ಗುರುತಿಸುವುದು ಭಾರತೀಯತೆಯ ಸ್ವಭಾವದ ಮೂಲಕವೇ ಹೊರತು ಭೌಗೋಳಿಕ ಗಡಿಯ ಚೌಕಟ್ಟಿನ ಮೂಲಕವಲ್ಲ. ಭಾರತೀಯರ ವಿಶೇಷತೆ ಅವರ ಸ್ವಭಾವ. ಮನುಷ್ಯರ ಸ್ವಭಾವ ಸಂಸ್ಕೃತಿ ಎನಿಸಿಕೊಂಡು ಸಮಾಜದ ಸ್ವಭಾವವಾಗುತ್ತದೆ. ಸಂಸ್ಕೃತಿ ಎನ್ನುವುದು ಮೌಲ್ಯಯುತ ಆಚರಣೆ. ಅದನ್ನು ಆಚರಿಸುವ ಕ್ಷಮತೆ ಮನುಷ್ಯನಲ್ಲಿದೆ. ಸಂಸ್ಕೃತಿಯನ್ನು ಆಚರಿಸದವರಿಗೆ ಕಲಿಸಬೇಕಾಗುತ್ತದೆ. ಆ ಸಂಸ್ಕೃತಿಯನ್ನು ಕಲಿಸಿ ಉಳಿಸಿರುವುದು ಕಲೆಯಾಗಿದೆ. ಬೌದ್ಧಿಕ ಕ್ಷಮತೆ ಇರುವವರು, ವಿಚಾರಗಳನ್ನು ಅರ್ಥೈಸುವ ಕ್ಷಮತೆ ಇರುವವರು ಓದಿ ಕೇಳಿ ತಿಳಿದು ಸಂಸ್ಕಾರವನ್ನು ಪಡೆಯುತ್ತಾರೆ. ಆದರೆ ಸಾಮಾನ್ಯ ನಾಗರಿಕರಿಗೆ ಸಂಸ್ಕೃತಿಯನ್ನು ಕಲಿಸುವುದು ಕಲೆಯೇ ಆಗಿದೆ. ಆದ್ದರಿಂದ ಕಲಾವಿದರಿಗೆ ಗೌರವ ನೀಡುವುದು ಎಂದು ನುಡಿದರು.
ನಮ್ಮ ನಾಡಿನಲ್ಲಿ ರಾಜನ ಕೆಲಸ ಧರ್ಮರಕ್ಷಣೆ. ಧರ್ಮ ಎನ್ನುವುದು ಸಮಾಜದ ಧಾರಣ ಆಗಿದೆ. ಸಮಾಜದ ಧಾರಣವನ್ನು ರಕ್ಷಿಸುವುದೆಂದರೆ ಸಮಾಜದ ಸಂಸ್ಕಾರದ ರಕ್ಷಿಸುವುದೆಂದರ್ಥ. ಸಂಸ್ಕಾರವನ್ನು ರಕ್ಷಿಸುವುದೆಂದರೆ ಸಂಸ್ಕಾರವನ್ನು ಕಲಿಸುವ ಜನರ ರಕ್ಷಣೆ. ಅವರಲ್ಲಿ ಕಲಾವಿದರೂ ಪ್ರಮುಖರು. ಆದ್ದರಿಂದಲೇ ಕಾರ್ಮಿಕರಿಗಾಗಿ ಮಜ್ದೂರ್ ಸಂಘ, ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ಪರಿಷತ್, ಕ್ರೀಡಾ ಕ್ಷೇತ್ರಕ್ಕಾಗಿ ಕ್ರೀಡಾಭಾರತಿ ಎಂದು ಕರೆದರೆ, ಕಲೆಯನ್ನು ಒಳಗೊಂಡ ಸಂಘಟನೆಯನ್ನು ಕಲಾಭಾರತಿ ಎನ್ನದೆ ಅದನ್ನು ಸಂಸ್ಕಾರ ಭಾರತಿ ಎಂದು ಕರೆಯಲಾಯಿತು ಎಂದು ಅಭಿಪ್ರಾಯಪಟ್ಟರು.
ರಾಮಜನ್ಮಭೂಮಿಯ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ರಾಮಲಲಾನ ಆಗಮನದ ಮೂಲಕ ಭಾರತದ ‘ಸ್ವ’ ಮರಳಿದೆ ಎಂದು ತಿಳಿಸಿದ್ದೆ. ಅಂದಿನ ಕಾರ್ಯಕ್ರಮದ ನಂತರ ಭಾರತದ ‘ಸ್ವ’ ಪ್ರಕಟೀಕರಣದ ಪ್ರಥಮ ಕಾರ್ಯಕ್ರಮ ಸಂಸ್ಕಾರ ಭಾರತಿಯ ಮೂಲಕ ನಡೆದಿದೆ. ಸಂಸ್ಕಾರ ಭಾರತಿಯ ಕಾರ್ಯಸ್ಥಾಪನೆ ಮಾಡುವುದರ ಹಿಂದೆ ವ್ಯಾಪಕವಾದ ದೃಷ್ಟಿ ಇದೆ. ಆ ದೃಷ್ಟಿಯಲ್ಲಿ ಕಲಾಸಾಧಕ ಸಂಗಮದಂತಹ ಪ್ರಯೋಗವೂ ಒಂದು. ಈ ಹಿಂದೆಯೂ ಅನೇಕ ಕಲಾವಿದರಿಗೆ ಅವಕಾಶಗಳ ವೇದಿಕೆಯನ್ನು ಒದಗಿಸಿ ಪ್ರೋತ್ಸಾಹವನ್ನು ನೀಡುವ ಕಾರ್ಯವನ್ನು ಸಂಸ್ಕಾರ ಭಾರತಿ ಮಾಡಿದೆ. ಇಂತಹ ಕಾರ್ಯಗಳು ಒಂದು ಸಾಮಾಜಿಕ ಅವಶ್ಯಕತೆಯಾದ್ದರಿಂದ ನಿರಂತರವಾಗಿ ಆಗಬೇಕು. ಈ ಕಾರ್ಯಕ್ರಮ ಕಲಾವಿದರಿಗೆ ಧನ್ಯವಾದ ಸಲ್ಲಿಸುವುದಕ್ಕಾಗಿ ಆಯೋಜಿಸಲಾಗಿದೆ. ಏಕೆಂದರೆ ಅವರು ತಮ್ಮ ನಿರಂತರ ಕಾರ್ಯದ ಮೂಲಕ ಸಮಾಜಕ್ಕೆ ಉಪಕಾರಿಯಾಗಿದ್ದರು. ಅವರ ಉಪಕಾರ ಮುಂದಿನ ಪೀಳಿಗೆಯ ಜೀವನ ಚೆನ್ನಾಗಿರಲು ಉಪಯುಕ್ತವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಖ್ಯಾತ ಜಾನಪದ ಕಲಾವಿದರಾದ ಗಣಪತ್ ಸಖಾರಾಮ್ ಮಸಗೆ ಮತ್ತು ಚಿತ್ರಕಾರರಾದ ವಿಜಯ ದಶರಥ್ ಆಚ್ರೆಕರ್ ಅವರಿಗೆ ಪ್ರಥಮ ವರ್ಷದ ‘ಭರತ ಮುನಿ’ ಪ್ರಶಸ್ತಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಸಂಸ್ಕಾರ ಭಾರತಿಯ ಅಖಿಲ ಭಾರತೀಯ ಅಧ್ಯಕ್ಷ ವಾಸುದೇವ ಕಾಮತ್, ಭರತ ಮುನಿ ಪ್ರಶಸ್ತಿ ಪ್ರದಾನ ಸಮಾರಂಭದ ಸಂಚಾಲಕ ಹಾಗೂ ಸಂಸ್ಕಾರ ಭಾರತಿಯ ಅಖಿಲ ಭಾರತೀಯ ಸಹ ಕೋಶಾಧ್ಯಕ್ಷ ಸುಬೋಧ್ ಶರ್ಮಾ, ಕ್ಷೇತ್ರೀಯ ಪ್ರಚಾರಕ್ ಸುಧೀರ್ ಉಪಸ್ಥಿತರಿದ್ದರು.